ಕನ್ನಡದ ಚಿತ್ರರಂಗಕ್ಕೆ ಪುನೀತ್ ನಿಧನ ಬರಸಿಡಿಲು ಬಡಿದಂತಾಗಿದ್ದು ನಿಜ. ಇಂದಿಗೂ ಅವರಿಲ್ಲ ಅನ್ನುವ ಭಾವನೆ ಯಾರಲ್ಲೂ ಇಲ್ಲ. ಅಂತಹ ನಟನ ಬಗ್ಗೆ ಗುಣಗಾನ ಮಾಡದವರಿಲ್ಲ. ಅವರ ನೆನಪಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಆ ಸಾಲಿಗೆ ಈಗ ಅವರ ಸ್ಮರಣಾರ್ಥ “ನೃತ್ಯ ಸಂಗೀತ ಸಮ್ಮಿಲನ” ಕಾರ್ಯಕ್ರಮ ಆಯೋಜಿಸಲಾಗಿದೆ. ಹೌದು, ವೈಕೆ ಕ್ರಿಯೇಷನ್ಸ್ ಮೂಲಕ ಈ ಕಾರ್ಯಕ್ರಮ ನಡೆಯುತ್ತಿದೆ. ಈ ಹಿಂದೆ ಕೋವಿಡ್ನಿಂದ ಮೃತಪಟ್ಟ ಯಶವಂತ್ ಕುಮಾರ್ ಅವರ ನೆನಪಿಗೂ ಈ ಅಪರೂಪದ ಕಾರ್ಯಕ್ರಮ ನಡೆಯುತ್ತಿದ್ದು, ಅವರ ಕುಟುಂಬದ ಸಹಾಯಾರ್ಥ ನಡೆಸಲಾಗುತ್ತಿದೆ. ಅಂದಹಾಗೆ, ಡಿಸೆಂಬರ್ ೩೦ರಂದು ಸಂಜೆ ೪ ಗಂಟೆಗೆ ಗಾಂಧಿನಗರದ ಗುಬ್ಬಿ ರಂಗಮಂದಿರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಅಂದು ಶಾಸಕ ಭೈರತಿ ಸುರೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅವರೊಂದಿಗೆ ಮಹೇಂದ್ರ ಮನೋತ್, ರೇಖಾ ಎಸ್.ರಾವ್, ಹರೀಶ್ ಕುಮಾರ್, ಶಾಂತಾ ಕೃಷ್ಣಮೂರ್ತಿ, ಗಂಡಸಿ ಸದಾನಂದಸ್ವಾಮಿ ನಟ ಬಾಲರಾಜ್, ನಿರ್ಮಾಪಕರಾದ ಡಾ.ಕೃಷ್ಣ, ಕೆ.ಕೃಷ್ಣಮೂರ್ತಿ ಸೇರಿದಂತೆ ಇನ್ನೂ ಅನೇಕ ಚಿತ್ರರಂಗದ ಗಣ್ಯರು, ಸಮಾಜ ಸೇವಕರು, ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ಯುವ ಪ್ರತಿಭೆ ಯಶ್ವಂತ್ ಕುಮಾರ್
ಅಂದಹಾಗೆ, ಬದುಕಿನ ಬಗ್ಗೆ ನೂರೆಂಟು ಕನಸು ಹೊತ್ತಿದ್ದ ಯುವ ಉತ್ಸಾಹಿ ಫೋಟೋಗ್ರಾಫರ್, ರ್ಯಾಪರ್, ವಿಡಿಯೋ ಎಡಿಟರ್, ಡ್ಯಾನ್ಸರ್, ಲಿರಿಕ್ ರೈಟರ್, ಶಾರ್ಟ್ ಫಿಲ್ಮ್ ಡೈರೆಕ್ಟರ್ ಯಶವಂತ್ಕುಮಾರ್ ಅವರು ಕೋವಿಡ್ನಿಂದಾಗಿ ನಿಧನರಾದರು. ಅವರೀಗ ನೆನಪು ಮಾತ್ರ. ಅವರ ಆಕಾಲಿಕ ಮರಣ ಅವರ ಕುಟುಂಬವನ್ನು ಮಾತ್ರವಲ್ಲ ಆತನ ಅದೆಷ್ಟೋ ಮಂದಿ ಸ್ನೇಹಿತರನ್ನು ದುಃಖ ಸಾಗರದಲ್ಲಿ ಮುಳುಗಿಸಿದೆ. ಅದರಲ್ಲೂ ಮಗನನ್ನು ಅತೀವ ಪ್ರೀತಿಯಿಂದ ಸಾಕಿ ಸಲಹಿದ್ದ ಅವರ ತಾಯಿ ಇಂದಿಗೂ ದುಃಖದಲ್ಲಿದ್ದಾರೆ. ಯುವ ಊತ್ಸಾಹಿ ಪ್ರತಿಭಾವಂತ ಹುಡುಗ ಯಶವಂತ್ ಕುಮಾರ್, ಕನ್ನಡ ಚಿತ್ರರಂಗದ ಪೋಷಕ ನಟಿ ರಾಣಿ ಅವರ ಪುತ್ರ.
ಪುತ್ರ ಯಶ್ವಂತ್ ಜೊತೆ ನಟಿ ರಾಣಿ
ತಾಯಿ ಕಲಾ ಜಗತ್ತಿನಲ್ಲಿದ್ದಾರೆಂಬ ಸೆಳೆತದಿಂದ ಚಿಕ್ಕ ವಯಸ್ಸಿನಲ್ಲಿಯೇ ವಿಡಿಯೋ ಎಡಿಟಿಂಗ್ ಹಾಗೂ ಫೋಟೋಗ್ರಫಿ ಕಲಿತು, ತನ್ನ ಕಾಲ ಮೇಲೆ ತಾನು ನಿಲ್ಲಲು ಹೊರಟಿದ್ದ ಯುವ ಪ್ರತಿಭೆ. ಸಾಕಷ್ಟು ಮಂದಿ ಮಾಡೆಲಿಂಗ್ ಬೆಡಗಿಯರ ಫೋಟೋಗಳನ್ನು ಕ್ಕಿಕ್ಕಿಸಿದ್ದು ಯಶವಂತ್ ಫೋಟೋಗ್ರಫಿಯ ವಿಶೇಷವೇ ಹೌದು. ಡಿಜೆಯಾಗಿಯೂ ಗುರುತಿಸಿಕೊಂಡಿದ್ದ ಯಶವಂತ್, ಸಾಕು ನಾಯಿಗಳ ಮೇಲೆ ಅತೀವ ಪ್ರೀತಿ ಹೊಂದಿದ್ದರು. ವಿದೇಶದ ದುಬಾರಿ ನಾಯಿಗಳನ್ನು ತರಿಸಿ, ಅವುಗಳನ್ನು ಅಷ್ಟೇ ಮುತುವರ್ಜಿಯಿಂದ ಸಾಕುತ್ತಿದ್ದ ಆತನ ಶ್ವಾನ ಪ್ರೀತಿ ಬಣ್ಣಿಸಲಾಗದು. ಮನುಷ್ಯರಷ್ಟೇ ತನ್ನ ಸಾಕು ನಾಯಿಗಳನ್ನು ಪ್ರೀತಿಸುತ್ತಿದ್ದರು. ಆದರೆ, ವಿಧಿಯಾಟ ಆತನನ್ನು ಬಹುಬೇಗ ಸೆಳೆದುಕೊಂಡು ಬಿಟ್ಟಿತು.
ಚಿಕ್ಕ ವಯಸ್ಸಲ್ಲೇ ಅಗಾಧ ಪ್ರತಿಭೆ ಹೊಂದಿದ್ದ ಯಶವಂತ್, ತುಂಬಾ ಮೃದು ಸ್ವಭಾವದ ಹುಡುಗ. ಸದಾ ಏನಾದರೊಂದು ಹೊಸತನ್ನು ಮಾಡುವ ಹಂಬಲ ಅವನಲ್ಲಿತ್ತು. ಜೀವನದಲ್ಲಿ ಸಾಧಿಸಿ ಮುಂದೆ ಬರಬೇಕು ಎಂದು ಹಗಲಿರುಳು ಎಲ್ಲಾ ವಿಭಾಗಗಳಲ್ಲೂ ದುಡಿಯುತ್ತಿದ್ದ ಯಶವಂತ್, ಸಿನಿಲಹರಿ ಕಚೇರಿಯಲ್ಲಿ ವಿಡಿಯೋ ಎಡಿಟರ್ ಆಗಿಯೂ ಕೆಲಸ ಮಾಡುತ್ತಿದ್ದರು. ಸದಾ ಉತ್ಸಾಹದಲ್ಲಿರುತ್ತಿದ್ದ ಯಶವಂತ್ ದೈಹಿಕವಾಗಿ ಇಲ್ಲ. ಆದರೆ ಮಾನಸಿಕವಾಗಿ ಅವರು ಜೊತೆಗಿದ್ದಾರೆ.
ಅಪ್ಪು ಅವರೂ ಸದಾ ನೆನಪಲ್ಲಿರುವ ಜೀವ. ಹಾಗಾಗಿ, ಅವರ ನಟಿ ರಾಣಿ ಅವರು ತಮ್ಮ ಪುತ್ರನ ನೆನಪಿಗಾಗಿ, ಅಪ್ಪು ಅವರ ಮೇಲಿರುವ ಅಭಿಮಾನಕ್ಕಾಗಿಯೇ, ಈ ನೃತ್ಯ ಸಂಗೀತ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿದ್ದಾರೆ. ಅಂದು ಸಿನಿರಂಗದ ಕಲಾವಿದರು, ತಾಂತ್ರಿಕ ವರ್ಗದವರು ಆಗಮಿಸಿ, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.