ನೆನಪಿರಲಿ ಪ್ರೇಮ್ ಅಭಿನಯದ ಸಿನಿಮಾ ಎಂದರೆ ಕಾಲೇಜ್ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು, ಅವರು ಆರಂಭದಿಂದಲೂ ಯೂಥ್ಬೇಸ್ ಲವ್ಸ್ಟೋರಿಗಳನ್ನೇ ಮಾಡಿಕೊಂಡು ಬಂದಿದ್ದಾರೆ. ಈ ಹಿಂದೆ ಬಿಡುಗಡೆಯಾದ ಪ್ರೇಮ್ ಅಭಿನಯದ 25ನೇ ಚಿತ್ರ ಪ್ರೇಮಂ ಪೂಜ್ಯಂನಲ್ಲೂ ಸಹ ಅವರು ಮೆಡಿಕಲ್ ಸ್ಟೂಡೆಂಟ್ ಆಗಿ ಕಾಣಿಸಿಕೊಂಡು ಯುವ ಪ್ರೇಮಿಗಳ ಫೇವರೇಟ್ ಹೀರೋ ಆಗಿದ್ದಾರೆ. ಈ ಚಿತ್ರ ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳನ್ನೇ ಆಕರ್ಷಿಸುತ್ತಿದೆ. ಡಾ.ಬಿ.ಎಸ್. ರಾಘವೇಂದ್ರ ಅವರ ನಿರ್ದೇಶನದ ಪ್ರೇಮಂ ಪೂಜ್ಯಂ ಚಿತ್ರ ಬಿಡುಗಡೆಯಾದ ಕಡೆ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಇದೀಗ ಚಿತ್ರ 50ನೇ ದಿನದತ್ತ ಸಾಗುತ್ತಿದೆ. ನೂರನೇ ದಿನದತ್ತ ದಾಪುಗಾಲು ಹಾಕಿದೆ. ಚಿತ್ರವನ್ನು ವೀಕ್ಷಿಸಿದ ತಮಿಳು, ತೆಲುಗು ನಿರ್ಮಾಪಕರಿಂದ ರೀಮೇಕ್ ಹಕ್ಕಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಅಲ್ಲದೆ ಓಟಿಟಿಯಿಂದಲೂ ಉತ್ತಮ ಆಫರ್ ಬರುತ್ತಿದ್ದು, ನಿರ್ಮಾಪಕರು ಸದ್ಯ ಯಾವುದನ್ನೂ ಒಪ್ಪಿಕೊಳ್ಳದೆ ಚಿತ್ರವು ನೂರು ದಿನಗಳ ಪ್ರದರ್ಶನವಾದ ನಂತರ ಬೇರೆ ಭಾಷೆಗೆ ಕೊಡಬೇಕೆಂಬ ನಿರ್ಧಾರ ಮಾಡಿದ್ದಾರೆ.
ಇದರ ಜೊತೆಗೆ ಈಗಾಗಲೇ ನಿರ್ದೇಶಕ ಡಾ.ಬಿ.ಎಸ್. ರಾಘವೇಂದ್ರ ಅವರು ಚಿತ್ರದ ಮುಂದುವರಿದ ಭಾಗವಾಗಿ ಪ್ರೇಮಂ ಪೂಜ್ಯಂನ ಸೀಕ್ವೇಲ್ ಮಾಡಲು ಮುಂದಾಗಿದ್ದು, ಈಗಾಗಲೇ ಇದಕ್ಕೆ ಚಿತ್ರಕಥೆಯನ್ನೂ ಸಹ ರೆಡಿ ಮಾಡಿಕೊಂಡಿದ್ದಾರೆ. ಮುಂದಿನ ಭಾಗದಲ್ಲಿ ಒಂದಷ್ಟು ಕುತೂಹಲಕರ ಕಥೆಯನ್ನು ಬಿಚ್ಚಿಡಲು ನಿರ್ಧರಿಸಿದ್ದಾರೆ.
ಪ್ರೇಮಿಗಳ ದಿನವಾದ 2022ರ ಫೆಬ್ರವರಿ 14ರಂದು ಪೇಮಂ ಪೂಜ್ಯಂ ಚಿತ್ರದ 2ನೇ ಭಾಗಕ್ಕೆ ಚಾಲನೆ ನೀಡಲು ಚಿತ್ರತಂಡ ನಿರ್ಧರಿಸಿದೆ. ಇನ್ನು ಚಿತ್ರದ ಮೊದಲ ಭಾಗದಲ್ಲಿ ಕೆಲಸ ಮಾಡಿದ್ದ ಬಹುತೇಕ ಕಲಾವಿದ, ತಂತ್ರಜ್ಞರೇ ಈ ಚಿತ್ರದಲ್ಲೂ ಮುಂದುವರಿಯಲಿದ್ದಾರೆ.
ನಾಯಕನ ಪ್ರೀತಿಯ ಕಥೆಯ ವಿವಿಧ ಮಜಲುಗಳನ್ನು ಹೇಳುವ ಕಥೆಯಿರುವ ಈ ಚಿತ್ರದಲ್ಲಿ ನೆನಪಿರಲಿ ಪ್ರೇಮ್, ಬೃಂದಾ ಆಚಾರ್ಯ, ಐಂದ್ರಿತಾರೇ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಪ್ರೇಮಿಗಳು, ತಂದೆ-ತಾಯಿ, ಸ್ನೇಹಿತರು ಈ ಎಲ್ಲ ಸಂಬಂಧಗಳಲ್ಲೂ ಪೂಜ್ಯನೀಯ ಭಾವನೆ ಇರಬೇಕೆಂಬ ಉತ್ತಮ ಸಂದೇಶವಿದೆ, ಡಾ.ರಕ್ಷಿತ್ ಕದಂಬಾಡಿ, ಡಾ. ರಾಜಕುಮಾರ್ ಜಾನಕಿರಾಮನ್, ಮನೋಜ್ ಕೃಷ್ಣನ್ ಹಾಗು ರಾಘವೇಂದ್ರ ಎಸ್. ಸೇರಿ ನಿರ್ಮಿಸಿರುವ ಈ ಚಿತ್ರಕ್ಕೆ ಡಾ.ಮಾಧವಕಿರಣ ಕಾರ್ಯಕಾರಿ ನಿರ್ಮಾಪಕರು.