ಒಂದು ಸಿನಿಮಾ ನಂತರ ಮತ್ತೆ ನಿರ್ದೇಶಕ ಹಾಗು ನಾಯಕ ಸೇರಿ ಮತ್ತೆ ಸಿನಿಮಾ ಮಾಡೋದು ತುಸು ಕಷ್ಟ! ಎಲ್ಲೋ ಒಂದೆರೆಡು ಸಿನಿಮಾಗಳು ಮತ್ತದೇ ನಿರ್ದೇಶಕ, ನಾಯಕರ ಕಾಂಬಿನೇಷನ್ನಲ್ಲಿ ನಡೆದಿರಬಹುದು. ಆದರೆ, ಒಂದಲ್ಲ, ಎರಡಲ್ಲ, ಮೂರೂ ಅಲ್ಲ ನಾಲ್ಕು ಸಿನಿಮಾಗಳು ಒಬ್ಬ ನಿರ್ದೇಶಕ ಮತ್ತು ನಾಯಕರ ಜೊತೆ ಆಗುತ್ತೆ ಅಂದರೆ ವಿಶೇಷ. ಹಾಗಂತ, ಇದು ಹೊಸ ವಿಷಯವೂ ಅಲ್ಲ, ಹಿಂದೆಲ್ಲಾ ನಿರ್ದೇಶಕ ನಾಯಕರ ಕಾಂಬಿನೇಷನ್ನಲ್ಲಿ ಸಾಲು ಸಾಲು ಚಿತ್ರಗಳು ಬಂದಿವೆ. ಆದರೆ, ಈ ಜನರೇಷನ್ ನಿರ್ದೇಶಕರು ಒಬ್ಬ ಸ್ಟಾರ್ ನಾಯಕನ ಜೊತೆ ಸತತವಾಗಿ ನಾಲ್ಕು ಸಿನಿಮಾಗಳನ್ನು ಮಾಡುವುದು ವಿಶೇಷ. ಅಂದಹಾಗೆ, ಅದು ಬೇರಾರೂ ಅಲ್ಲ, ಅದು ಎ.ಹರ್ಷ. ಹೌದು, ಹರ್ಷ ಅಂದಾಕ್ಷಣ, ಮತ್ತೆ ನೆನಪಾಗೋದು ಶಿವರಾಜಕುಮಾರ್. ಇವರಿಬ್ಬರ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಅದು “ವೇದ”. ಈ ಹಿಂದೆ ಶಿವರಾಜಕುಮಾರ್ ಅವರೊಂದಿಗೆ ಹರ್ಷ “ವಜ್ರಕಾಯ” ಸಿನಿಮಾ ಮಾಡಿದರು. ಅದಾದ ಬಳಿಕ, “ಭಜರಂಗಿ” ಮಾಡಿದರು. ಆ ನಂತರ ಪುನಃ “ಭಜರಂಗಿ 2” ಚಿತ್ರ ಮಾಡಿದರು ಈ ಸಿನಿಮಾಗಳ ಯಶಸ್ಸಿನ ಬಳಿಕ ಈಗ “ವೇದ” ಸಿನಿಮಾ ಕೈಗೆತ್ತಿಕೊಂಡಿದ್ದಾರೆ.
ಹೌದು, ಶಿವರಾಜಕುಮಾರ್ ಅವರೊಂದಿಗೆ ನಿರ್ದೇಶಕ ಎ.ಹರ್ಷ ಪುನಃ, ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ “ವೇದ” ಎಂದು ನಾಮಕರಣ ಮಾಡಿದ್ದು, ಈಗಾಗಲೇ ಚಿತ್ರಕ್ಕೆ ಚಾಲನೆಯೂ ಸಿಕ್ಕಿದೆ. ಇದು ಶಿವರಾಜಕುಮಾರ್ ಅವರ 125ನೇ ಚಿತ್ರ. 125ನೇ ಸಿನಿಮಾವನ್ನು ಗೀತ ಶಿವರಾಜಕುಮಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ ಅನ್ನೋದು ವಿಶೇಷ. ಯಾವುದೇ ಹೀರೋಗೆ ಮೊದಲ ಚಿತ್ರ, 25ನೇ ಸಿನಿಮಾ, 50 ನೇ ಚಿತ್ರ, 75ನೇ ಸಿನಿಮಾ ಮತ್ತು 100ನೇ ಚಿತ್ರಗಳು ಮೈಲಿಗಲ್ಲು. ಅಂತೆಯೇ ಶಿವರಾಜಕುಮಾರ್ ಅವರ 125ನೇ ಸಿನಿಮಾ “ವೇದ” ಕೂಡ ವಿಶೇಷತೆ ಹೊಂದಿದೆ. ಈ ಚಿತ್ರದ ಕಥೆ ಬಗ್ಗೆ ಹೇಳುವುದಾದರೆ, ಇದೊಂದು ಹಳ್ಳಿ ಹಿನ್ನೆಲೆಯಲ್ಲಿ ಸಾಗುವ ಚಂದದ ಕಥೆಯಂತೆ. ಈ ಚಿತ್ರದಲ್ಲಿ ಶಿವರಾಜಕುಮಾರ್ ಅವರ ಪಾತ್ರದ ಹೆಸರು ವೇದ. ಅಂದಹಾಗೆ, 1960 ರ ಕಾಲಘಟ್ಟದಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದೆ. ಚಿತ್ರದ ಮುಹೂರ್ತ ನಡೆದು, ಈಗಾಗಲೇ ಚಿತ್ರೀಕರಣವೂ ಜೋರಾಗಿ ನಡೆಯುತ್ತಿದೆ. ಇನನು ಶಿವರಾಜಕುಮಾರ್ ಫಸ್ಟ್ಲುಕ್ ಟೀಸರ್ ಕೂಡ ರಿಲೀಸ್ ಆಗಿದೆ. ಶಿವರಾಜಕುಮಾರ್ ಇದೇ ಮೊದಲ ಬಾರಿಗೆ ವಯಸ್ಸಾದವರ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ರೀತಿಯ ಪಾತ್ರ ನಿರ್ವಹಣೆ ಇದೇ ಮೊದಲೂ ಎಂಬುದು ನಿರ್ದೇಶಕರ ಮಾತು.
ಇದೊಂದು ಫ್ಯಾಂಟಸಿ ಕಥೆ ಹೊಂದಿರುವ ಚಿತ್ರ. ಹಳ್ಳಿಯೊಂದರ ಸುತ್ತಮುತ್ತ ನಡೆಯುವ, ಅಲ್ಲಿರುವ ಒಬ್ಬ ವ್ಯಕ್ತಿಯ ಹಿನ್ನೆಲೆಯಲ್ಲಿ ಸಾಗುವ ಕಥೆ ಹೇಳುವ ಪ್ರಯತ್ನವನ್ನು ಎ.ಹರ್ಷ ಮಾಡುತ್ತಿದ್ದಾರೆ. ದಶಕಗಳ ಹಿಂದಿನ ರಿಯಲಿಸ್ಟಿಕ್ ಕಥೆ ಇದಾಗಿದ್ದು, ಆ ಹಳ್ಳಿಯಲ್ಲಿರುವ ಒಬ್ಬ ವ್ಯಕ್ತಿಯ ಜೀವನದಲ್ಲಿ ಏನೇನೆಲ್ಲ ನಡೆಯುತ್ತೆ ಎನ್ನುವುದು ಸಿನಿಮಾದಲ್ಲಿದೆ. ಚಿತ್ರದಲ್ಲಿ ಎಮೋಷನಲ್, ಆಕ್ಷನ್, ಡ್ರಾಮಾ ಇದೆ. ಇದರೊಂದಿಗೆ ಹಾಸ್ಯವೂ ಇಲ್ಲಿ ಜೋರಾಗಿದೆ. ಶಿವರಾಜಕುಮಾರ್ ಅವರದು ಇಲ್ಲಿ ಖಡಕ್ ಲುಕ್ ಇರಲಿದೆ. ಹೇಗೆಂದರೆ, ಈವರೆಗೆ ಕಾಣಿಸಿಕೊಳ್ಳದೇ ಇರುವಂತಹ ಖಡಕ್ ಲುಕ್ ಇಲ್ಲಿರಲಿದೆ ಎಂಬುದು ನಿರ್ದೇಶಕರ ಮಾತು. ಶಿವಣ್ಣ ಅವರಿಲ್ಲಿ ಎರಡು ಶೇಡ್ ಇರುವಂತಹ ಪಾತ್ರ ನಿಭಾಯಿಸುತ್ತಿದ್ದಾರೆ. ಆ ಪಾತ್ರ ಹೇಗಿರಲಿದೆ ಅನ್ನುವುದಕ್ಕೆ ಸಿನಿಮಾ ಬರುವವರೆಗೆ ಕಾಯಬೇಕು. ಇನ್ನು, ಚಿತ್ರದುದ್ದಕ್ಕೂ ಥ್ರಿಲ್ಲಿಂಗ್ ಆಂಶಗಳು ತುಂಬಿವೆ ಎನ್ನುವ ನಿರ್ದೇಶಕರು, ಈ ಬಾರಿ ಬೇರೆ ರೀತಿಯ ಸಿನಿಮಾ ಕಟ್ಟಿಕೊಡುವ ಪ್ರಯತ್ನದಲ್ಲಿದ್ದೇನೆ ಎಂಬುದು ಎ.ಹರ್ಷ ಅವರ ಮಾತು.
ಶಿವರಾಜಕುಮಾರ್ ಅವರ ಚಿತ್ರ ಅಂದಮೇಲೆ, ಅದರಲ್ಲೂ ಅದು 125ನೇ ಸಿನಿಮಾ ಆಗಿರುವುದರಿಂದ, ಅದು ಎಲ್ಲಾ ವರ್ಗಕ್ಕೂ ರುಚಿಸಬೇಕು. ಎಲ್ಲರನ್ನೂ ಮೆಚ್ಚಿಸಬೇಕು. ಅಂತಹ ಕಂಟೆಂಟ್ ಇಟ್ಟುಕೊಂಡೇ ಸಿನಿಮಾ ಮಾಡಲು ಹೊರಟಿದ್ದೇನೆ. ಪಕ್ಕಾ ಕಮರ್ಷಿಯಲ್ ಸಿನಿಮಾ ಇದಾಗಿದ್ದು, ಈ ಹಿಂದಿನ ಕಮರ್ಷಿಯಲ್ ಸಿನಿಮಾಗಳಂತೆ ಈ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲೇ ತಯಾರಾಗಲಿದೆ. ಶಿವಣ್ಣ ಕಥೆಯ ಎಳೆ ಕೇಳುತ್ತಿದ್ದಂತೆಯೇ ಇಷ್ಟಪಟ್ಟು, ಮಾಡಲು ಮುಂದಾದರು.
ಗೀತಕ್ಕ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಆ ಕಾಲಘಟ್ಟದ ಕಥೆ ಆಗಿರುವುದರಿಂದ ಬೆಂಗಳೂರಲ್ಲೇ ಸೆಟ್ ಹಾಕಿ ಸಿನಿಮಾದ ಚಿತ್ರೀಕರಣ ಮಾಡಲಾಗುವುದು ಎನ್ನುತ್ತಾರೆ ನಿರ್ದೇಶಕರು. ಸದ್ಯ 16 ದಿನಗಳ ಮೊದಲ ಹಂತದ ಚಿತ್ರೀಕರಣ ನಡೆಯುತ್ತಿದೆ. ಚಿತ್ರಕ್ಕೆ ರವಿ ಸಂತೆ ಹೈಕ್ಳು ಕಲಾ ನಿರ್ದೇಶನವಿದೆ. ಸ್ವಾಮಿ ಜೆ, ಕ್ಯಾಮೆರಾ ಹಿಡಿದರೆ, ಅರ್ಜುನ್ ಜನ್ಯ ಸಂಗೀತವಿದೆ. ಕೆ.ಕಲ್ಯಾಣ್, ನಾಗೇಂದ್ರ ಪ್ರಸಾದ್ ಗೀತೆಗಳಿವೆ.