25 ಕೋಟಿ ರೂ ಕೊಟ್ಟು RRR ಆಡಿಯೋ ಹಕ್ಕು ಖರೀದಿಸಿದವರನ್ನೇ ಸ್ಟೇಜ್ ಮೇಲೆ ಕರಿಲಿಲ್ಲಾ ಅಂದ್ರೆ…… ! ?

ಬೆಂಗಳೂರಿನ ಒರಾಯನ್‌ ಮಾಲ್‌ ನಲ್ಲಿ ಶುಕ್ರವಾರ ಗ್ರಾಂಡ್‌ ಆಗಿ ನಡೆದ ʼಆರ್‌ಆರ್‌ಆರ್‌ʼ ಚಿತ್ರದ ಥೀಮ್‌ ಲಾಂಚ್‌ ಕಾರ್ಯಕ್ರಮ ಎರಡು ಕಾರಣಕ್ಕೆ ಸುದ್ದಿ ಆಗುತ್ತಿದೆ. ಅದರಲ್ಲೂ ಈವೆಂಟ್‌ ಆಯೋಜಿಸಿದ್ದ ಕೆವಿಎನ್‌ ಸಂಸ್ಥೆಯ ಪ್ರೋಗ್ರಾಮ್‌ ಚಾಕೌಟ್‌ ಬಗ್ಗೆಯೇ ಗುಸು ಗುಸು ಶುರುವಾಗಿದೆ. ಕೆವಿಎನ್‌ ಸಂಸ್ಥೆಯ ಮಾಲೀಕರು ಹಾಗೇಕೆ ಮಾಡಿದ್ರು ಅನ್ನೋದು ಈ ಚರ್ಚೆಯ ಸುತ್ತಣ ಪ್ರಧಾನ ವಿಷಯ. ಈವೆಂಟ್‌ನಲ್ಲಿ ಭಾಗವಹಿಸಿದ್ದವರ ಪ್ರಕಾರ ಈಗ ಚರ್ಚೆ ಆಗುತ್ತಿರುವ ವಿಷಯದ ಸುತ್ತ ಎರಡು ಕಾರಣಗಳಿವೆ. ಮೊದಲಿಗೆ ಇದ್ದಿದ್ದು ರಾಜಮೌಳಿ ಅವರು ತಾರಾತುರಿಯಲ್ಲಿ ಮಾತನಾಡಿ ಹೋಗಿದ್ದು. ಇದು ಅಲ್ಲಿದ್ದವರ ಪ್ರಶ್ನೆ ಮಾತ್ರವಲ್ಲ, ಮಾಧ್ಯಮವರಿಗೂ ನಿರಾಸೆ ಮೂಡಿಸಿದ ವಿಷಯವೇ ಹೌದು. ಮತ್ತೊಂದು ವಿಷಯ ಆರ್‌ ಆರ್‌ ಆರ್‌ ಚಿತ್ರದ ಆಡಿಯೋ ಹಕ್ಕು ಖರೀದಿಸಿದ ಲಹರಿ ಸಂಸ್ಥೆಯ ಮಾಲೀಕರನ್ನೇ ವೇದಿಕೆಗೆ ಆಹ್ವಾನಿಸದೆ ಇದ್ದಿದ್ದು. ಇದೆಲ್ಲ ಆ ಕ್ಷಣಕ್ಕೆ ಔಚಿತ್ಯವೋ, ಇಲ್ಲವೋ ಅದು ಬೇರೆ ವಿಚಾರ, ಆದರೆ ಒಂದು ಸಿನಿಮಾ ಈವೆಂಟ್‌ ನಲ್ಲಿ ಹೀಗೆಲ್ಲ ಅಗೌರವಗಳಾದರೆ ದುಬಾರಿ ಬೆಲೆ ನೀಡಿ, ಆಡಿಯೋ ಹಕ್ಕು ಖರೀದಿಸಿದವರಿಗೆ ಏನೆಲ್ಲ ಅನಿಸಬಹುದು ಅನ್ನೋದು ಸಹಜವಾದ ಪ್ರಶ್ನೆ.

ನಿಮಗೆಲ್ಲ ಗೊತ್ತಿರುವ ಹಾಗೆ ಭಾರತೀಯ ಚಿತ್ರರಂಗದಲ್ಲಿಯೇ ಭಾರೀ ನಿರೀಕ್ಷೆ ಮೂಡಿಸಿರುವ ʼಆರ್‌ ಆರ್‌ ಆರ್‌ʼ ಚಿತ್ರ ಜನವರಿಗೆ ವಿಶ್ವದಾದ್ಯಂತ ರಿಲೀಸ್‌ ಆಗುತ್ತಿದೆ. ಸದ್ಯಕ್ಕೆ ಅದರ ಪ್ರಮೋಷನ್‌ ಕೆಲಸಗಳಲ್ಲಿಯೇ ಬ್ಯುಸಿ ಆಗಿರುವ ನಿರ್ದೇಶಕ ರಾಜಮೌಳಿ ಬೆಂಗಳೂರಿಗೆ ಬರುತ್ತಿದ್ದಾರೆಂದರೆ ಚಿತ್ರದ ಬಗ್ಗೆ ಸಾಕಷ್ಟು ಮಾತನಾಡುವುದು ಗ್ಯಾರಂಟಿ ಅಂತಲೇ ಶುಕ್ರವಾರ ಒರಾಯನ್‌ ಮಾಲ್‌ ಗೆ ಟವಿ ಮೀಡಿಯಾ ಹಾಗೂ ಆನ್‌ ಮೀಡಿಯಾದ ಕ್ಯಾಮೆರಾಗಳು ಲೆಕ್ಕವಿಲ್ಲದಷ್ಟು ಬಂದಿದ್ದವು. ಅಲ್ಲಿದ್ದು ದೃಶ್ಯ ಸೆರೆ ಹಿಡಿಯುವುದಕ್ಕೆ ಮಾತ್ರವಲ್ಲ, ಲೈವ್‌ ಕೊಡುವುದಕ್ಕೂ ಕ್ಯಾಮೆರಾ ಕಣ್ಣು ರೆಡಿ ಆಗಿದ್ದವು. ಮಾಧ್ಯಮದ ಅದೆಷ್ಟೋ ಜನ ಪತ್ರಕರ್ತರು ರಾಜಮೌಳಿ ಅವರಿಗೆ ಕೇಳುವುದಕ್ಕಾಗಿಯೇ ಪ್ರಶ್ನೆಗಳನ್ನು ಸಿದ್ದಪಡಿಸಿಕೊಂಡು ಬಂದಿದ್ದರು. ಅವರ ಜೇಬಿನಲ್ಲಿದ್ದ ಪ್ರಶ್ನೆಗಳ ಚೀಟಿಯೂ ಕೂಡ ರಾಜಮೌಳಿ ಅವರ ಆಗಮನಕ್ಕಾಗಿ ಕಾಯುತ್ತಿದ್ದವು. ಆದರೇನು, ಅಲ್ಲಿ ಆಗಿದ್ದೇ ಬೇರೆ.

ನಿರೀಕ್ಷೆಯಂತೆ ರಾಜಮೌಳಿ ಬಂದರು. ಮಧ್ಯಾಹ್ನ ೨ ಗಂಟೆಗೆ ಅಂತ ಕಾರ್ಯಕ್ರಮ ಫಿಕ್ಸ್‌ ಆಗಿದ್ದರೂ, ಅವರು ಬಂದಿದ್ದ ೩ ಗಂಟೆಗೆ. ಸಿನಿಮಾ ಕಾರ್ಯಕ್ರಮ ಅಂದ್ರೆ ಇದೆಲ್ಲ ಮಾಮೂಲು. ಅದರಲ್ಲೂ ರಾಜಮೌಳಿ ಚೆನ್ನೈನಿಂದ ಬರುತ್ತಿದ್ದಾರಂತೆ ಎಂಬುದಾಗಿ ಹೇಳಿದ್ದರಿಂದ ಇನ್ನೊಂದು ತಾಸು ಹೆಚ್ಚೇ ಆಗಿದ್ದರೂ, ಅದೆಲ್ಲ ಅಲ್ಲಿ ನಗಣ್ಯವೇ ಅನ್ನಿ. ಇರಲಿ, ಬಿಡಿ ಅಂತೂ ಬಂದರು. ಅವರೊಂದಿಗೆ ಅವರ ಪತ್ನಿ ರಮಾ ರಾಜಮೌಳಿ , ನಿರ್ಮಾಪಕ ಡಿ.ವಿ.ವಿ.ದಾನಯ್ಯ ಕೂಡ ಹಾಜರಿದ್ದರು. ಇನ್ನು ʼಆರ್‌ ಆರ್‌ ಆರ್‌ʼ ಚಿತ್ರದ ಎಲ್ಲಾ ಭಾಷೆಯ ಆಡಿಯೋ ಹಕ್ಕುಗಳನ್ನು ಖರೀದಿಸಿರುವ ಲಹರಿ ಸಂಸ್ಥೆಯ ಮಾಲೀಕರಾದ ಮನೋಹರ್‌ ನಾಯ್ಡು ಹಾಗೂ ಲಹರಿ ವೇಲು ಕೂಡ ಬಂದಿದ್ದರು. ರಾಜಮೌಳಿ ಎಂಟ್ರಿ ಆದಾಗಲೇ ಒಂದು ಶಾಕ್‌ ಕೊಟ್ಟರು. ವೇದಿಕೆಯಲ್ಲಿ ಹಾಕಿದ್ದ ಆಸನಗಳನ್ನು ತೆರವು ಗೊಳಿಸಿದರು. ಅಲ್ಲಿದ್ದವರೆಲ್ಲ ಅಂದುಕೊಂಡಿದ್ದು, ಸ್ಕ್ರೀನ್‌ ಮೇಲೆ ಇನ್ನೇನೋ ಬರುತ್ತೆ ಅಂತ. ಆದರೆ, ರಾಜಮೌಳಿ ಅವರ ಲೆಕ್ಕಚಾರವೇ ಬೇರಿತ್ತು.

ಆಸನ ತೆರೆವುಗೊಳಿಸಿದ ವೇದಿಕೆಯಲ್ಲಿ ಮೊದಲು ಮಾತನಾಡಿದ್ದು ಕೆವಿಎನ್‌ ಸಂಸ್ಥೆಯ ಮಾಲೀಕರಾದ ವೆಂಕಟ್.‌ ಅವರು ʼಆರ್‌ಆರ್‌ಆರ್‌ʼ ಚಿತ್ರವನ್ನು ತಾವು ಕರ್ನಾಟಕದ ಹಕ್ಕು ಖರೀದಿಸಿದ್ದು, ಹಾಗೆಯೇ ಅದನ್ನು ಕನ್ನಡಕ್ಕೆ ಡಬ್‌ ಮಾಡಿ ತರುತ್ತಿರುವ ಬಗ್ಗೆ ಹೇಳಿಕೊಂಡರು. ಅವರ ಮಾತು ಮುಗಿಯುತ್ತಿದ್ದಂತೆಯೇ ರಾಜಮೌಳಿ ಮಾತಿಗೆ ಎಂಟ್ರಿಯಾಗಿಬಿಟ್ಟರು. ಅವರು ಮೊದಲು ಹೇಳಿದ್ದು, ಎರಡು ಕಾರಣಕ್ಕೆ ನನ್ನನ್ನು ಕ್ಷಮಿಸಿ ಅಂದವರೇ, ತಾವೀಗ ಸಿನಿಮಾ ಬಗ್ಗೆ ಹೆಚ್ಚು ಮಾತನಾಡೋದಿಲ್ಲ, ಈಗ ರಿಲೀಸ್‌ ಆಗುತ್ತಿರುವ ಥೀಮ್‌ ಸಾಂಗ್‌ ಜನನಿ ಮಾತನಾಡಬೇಕಿದೆ ಎನ್ನುತ್ತಲೇ ಎರಡೇ ನಿಮಿಷಗಳಲ್ಲಿಯೇ ಮಾತು ಮುಗಿಸಿ ಕುಳಿತವರೇ ಥೀಮ್‌ ಸಾಂಗ್‌ ವಿಡಿಯೋ ಪ್ಲೇ ಮಾಡೋದಿಕ್ಕೆ ಆರ್ಡರ್‌ ಮಾಡಿದರು. ಇನ್ನೇನು ಹಾಡುಮುಗಿದು ಲಹರಿ ಸಂಸ್ಥೆಯ ಮಾಲೀಕರು ಮಾತನಾಡಬಹುದು ಅಂತಲೇ ಎಲ್ಲರು ನಿರೀಕ್ಷಿಸಿದ್ದರು. ಆದರೆ ಅದ್ಯಾವುದಕ್ಕೂ ಅಲ್ಲಿ ಅವಕಾಶವೇ ಸಿಗಲಿಲ್ಲ. ಸಿಗಲಿಲ್ಲ ಎನ್ನುವದಕ್ಕಿಂತ ಕೆವಿಎನ್‌ ಸಂಸ್ಥೆಯವರು ಇದನ್ನು ಗಮನಿಸಲಿಲ್ಲ. ಈವೆಂಟ್‌ ಅನ್ನೋದು ಇದೇ ಮೊದಲಾದರೂ ಕೆವಿಎನ್‌ ಸಂಸ್ಥೆಯವರು ಇದನ್ನು ನಿಭಾಯಿಸಬೇಕಾಗಿದತ್ತಾದರೂ, ಲಹರಿ ಸಂಸ್ಥೆಯ ಮಾಲೀಕರು ಅಲ್ಲಿಯೇ ಇದ್ದರೂ ವೇದಿಕೆಗೆ ಆಹ್ವಾನಿಸದೆ ಒಂದ್ರೀತಿ ಮುಜುಗರಕ್ಕೆ ಒಳಪಡಿಸಿದರು ಎನ್ನುವ ಮಾತು ಈವೆಂಟ್‌ ಅಟೆಂಡ್‌ ಮಾಡಿದವರಿಗೂ ಅನಿಸಿದ್ದು ಹೌದು.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!