ಜೋಗಿ ಪ್ರೇಮ್ ಬರ್ತ್ ಡೇ ಗೆ ಮೋಷನ್ ಪೋಸ್ಟರ್ ಗಿಫ್ಟ್ !
ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್, ಚಿತ್ರ ನಿರ್ದೇಶಕ ಕಮ್ ನಟರಾಗಿ ಮತ್ತೊಂದು ಅವತಾರ ತಾಳುವುದಕ್ಕೆ ರೆಡಿಯಾಗುತ್ತಿದ್ದಾರೆ. ಸದ್ಯಕ್ಕೆ ಚಿತ್ರ ನಿರ್ದೇಶನದ ಅವತಾರ
ನಿಮ್ಗೆಲ್ಲ ಗೊತ್ತೇ ಇದೆ. ಅದು ‘ಕಲ್ಕಿ’ ಅವತಾರ ! ಉಳಿದಂತೆ ಇನ್ನೊಂದು ಅವತಾರಕ್ಕೂ ತೆರೆಮರೆಯಲ್ಲಿ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಅದೇನು ಅನ್ನೋದು ಸದ್ಯಕ್ಕೆ ಸಸ್ಪೆನ್ಸ್. ಅವರ ಪ್ರಕಾರವೇ ಅದಕ್ಕೆ ಇನ್ನಷ್ಟು ದಿನ ಕಾಯಬೇಕಿದೆ. ಉಳಿದಂತೆ, ನಿರ್ದೇಶಕ ಹಾಗೂ ನಟ ಜೋಗಿ ಪ್ರೇಮ್ ಜತೆಗೆ ಸಿನಿಮಾ ಮಾಡಲು ಹೊರಟಿರುವ ಅವರ ಪ್ರಯತ್ನವೀಗ ಒಂದು ಹಂತಕ್ಕೆ ತಲುಪಿದೆ. ಕತೆ, ಚಿತ್ರಕತೆ ಸೇರಿದಂತೆ ಚಿತ್ರದ ಸ್ಕ್ರಿಫ್ಟ್ ವರ್ಕ್ ಬರೆದು ಮುಗಿಸಿದ್ದಾರೆ. ಅಕ್ಟೋಬರ್ 22 ಕ್ಕೆ ಈ ಚಿತ್ರದ ತಾಜಾ ಮಾಹಿತಿ ಯೊಂದನ್ನು ರಿವೀಲ್ ಮಾಡಲು ಅಣಿಯಾಗಿದ್ದಾರೆ. ಸದ್ಯಕ್ಕೆ ಆ ಕೆಲಸದಲ್ಲೇ ಬ್ಯುಸಿಯಾಗಿದ್ದಾರಂತೆ.
ಅಂದ ಹಾಗೆ, ಜೋಗಿ ಪ್ರೇಮ್ ಹಾಗೂ ಚಕ್ರವರ್ತಿಚಂದ್ರಚೂಡ್ ಕಾಂಬಿನೇಷನ್ ಮೂಲಕ ಬರಲಿರುವ ಚಿತ್ರದ ಹೆಸರು ‘ಐ ಆ್ಯಮ್ ಕಲ್ಕಿ’. ತುಂಬಾ ದಿನಗಳ ಹಿಂದೆಯೇ ಚಂದ್ರಚೂಡ್ ತಮ್ಮ ಚಿತ್ರದ ಟೈಟಲ್ ಜತೆಗೆ, ಜೋಗಿ ಪ್ರೇಮ್ ಈ ಚಿತ್ರದ ಹೀರೋ ಅಂತಲೂ ಅನೌನ್ಸ್ ಮಾಡಿದ್ದರು. ಹಾಗೆಯೇ ಈ ಚಿತ್ರಕ್ಕೆ ‘ಆನೆಪಟಾಕಿ ‘ ಚಿತ್ರದ ಖ್ಯಾತಿಯ ನಿರ್ಮಾಪಕ ಸುರೇಶ್ ಬಂಡವಾಳ ಹೂಡುತ್ತಿರುವ ವಿಷಯ ಕೂಡ ಹಂಚಿಕೊಂಡಿದ್ದರು. ಈಮಧ್ಯೆ ಕೊರೋನಾ ಕಾಟ ಶುರುವಾಯಿತು. ಸಿನಿಮಾ ಚಟುವಟಿಕೆಗಳಿಗೂ ಅಡ್ಡಿಯಾಯಿತು. ಅಲ್ಲಿಂದ ಇಲ್ಲಿ ತನಕ ತೆರೆ ಮರೆಯಲ್ಲೇ ತಾವು ನಿರ್ದೇಶಿಸುತ್ತಿರುವ ಚಿತ್ರದ ಕೆಲಸದಲ್ಲಿ ಹೇಗೆ ಬ್ಯುಸಿಯಾಗಿದ್ದರು,ಏನೆಲ್ಲ ತಯಾರಿ ಮಾಡಿಕೊಂಡರು ಎನ್ನುವುದರ ಕುರಿತು ‘ ಸಿನಿಲಹರಿ’ ಜತೆಗೆ ಮಾತನಾಡಿದರು.
ರಿಸರ್ಚ್ ಮಾಡಿ ಬರೆದ ಕತೆ…
‘ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಸೇರಿದಂತೆ ಚಿತ್ರದ ಎಲ್ಲಾ ಬರವಣಿಗೆ ಕೆಲಸ ಮುಗಿದಿದೆ. ಇವೆಲ್ಲವನ್ನು ನಾನೇ ಮಾಡಿದ್ದೇನೆ. ಇದಕ್ಕೆಲ್ಲ ತುಂಬಾ ದಿನ ಹಿಡಿದಿದೆ. ಏನೇ ಮಾಡಿದರೂ ನಾನು ಆಳವಾದ ಅಧ್ಯಯನ, ಪೂರ್ವ ತಯಾರಿ ಇಲ್ಲದೆ ಮಾಡುವುದಿಲ್ಲ. ಈ ಚಿತ್ರದ ಕತೆಗೆ ದೊಡ್ಡ ರಿಸರ್ಚ್ ನಡೆದಿದೆ. ಯಾಕಂದ್ರೆ ಈ ಕತೆಯೇ ಹಾಗಿದೆ. ತೆರೆ ಮೇಲೆ ನೋಡಿದಾಗ ನಮ್ಮ ಶ್ರಮ ಗೊತ್ತಾಗಲಿದೆ’ ಎನ್ನುತ್ತಾರೆ ನಿರ್ದೇಶಕ ಚಂದ್ರಚೂಡ್. ಈಗಾಗಲೇ ಅವರೇ ಮಾಹಿತಿ ಕೊಟ್ಟ ಪ್ರಕಾರ ಇದು ಬಾಂಬರ್ ಆದಿತ್ಯ ರಾವ್ ಸುತ್ತಣ ಕತೆ. ಅವರಿಗೆ ಇಂತಹ ವಿವಾದಿತ ಮತ್ತು ನಿಗೂಢ ಕತೆಗಳ ಮೇಲೆ ಹೆಚ್ಚು ಆಸಕ್ತಿ. ಅವರೇ ಕತೆ, ಚಿತ್ರ ಕತೆ ಬರೆದಿರುವ ‘ ಮೆಲ್ಲೊಬ್ಬ ಮಾಯಾವಿ ‘ ಚಿತ್ರದ ಕತೆ ಕೂಡ ಒಂದು ನಿಗೂಢ ಮಾಫಿಯಾಕ್ಕೆ ಸಂಬಂಧಿಸಿದ್ದು. ವಿಚಿತ್ರ ಅಂದ್ರೆ ಅದು ಕೂಡ ಮಂಗಳೂರು ಸುತ್ತ ಮುತ್ತ ನಡೆದ ನೈಜ ಘಟನೆ. ಈಗ ಮತ್ತೆ ಅಂಥಹದೇ ಒಂದು ರೋಚಕ ಕತೆಯನ್ನು ‘ಐ ಆ್ಯಮ್ ಕಲ್ಕಿ’ಮೂಲಕ ತೋರಿಸಲು ಹೊರಟಿದ್ದಾರಂತೆ.
ಬಾಬಿ ಸಿಂಹ ಬರ್ತಾರೆ…
‘ ಹೌದು, ಇಂತಹ ಕತೆ ಸಿಗದೇ ಹೋಗಿದ್ದರೆ ನಾನು ಸಿನಿಮಾ ಮಾಡುವುದೇ ಡೌಟಿತ್ತು. ಯಾಕಂದ್ರೆ, ಅಂತಹ ಘಟನೆಗಳು ನಂಗೆ ಬೇಕು.ಆಅಲೋಚನೆಯಲ್ಲಿದ್ದಾಗ ನಂಗೆ ಸಿಕ್ಕಿದ್ದು ಬಾಂಬರ್ ಆದಿತ್ಯ ರಾವ್ ಪ್ರಕರಣ.ವ್ಯವಸ್ಥೆಯೊಳಗಡೆ ಈ ಪ್ರಕರಣ ಏನಾಯ್ತು, ಎಂಥಾಯ್ತು ಅನ್ನೋದು ಬೇರೆ ವಿಚಾರ. ಆದರೆ ಬಾಂಬರ್ ಆದಿತ್ಯ ರಾವ್ ಎನ್ನುವ ವ್ಯಕ್ತಿತ್ವವೇ ಒಂದು ನಿಗೂಢತೆಯ ರೂಪ. ಯಾಕಂದ್ರೆ ಆಬಗ್ಗೆ ನಾನು ರಿಸರ್ಚ್ ಮಾಡಿದ್ದೇನೆ.ಅದಕ್ಕಾಗಿ ಹೇಳುತ್ತಿದ್ದೇನೆ. ಆ ಪಾತ್ರಕ್ಕೆ ಯಾರು? ಸದ್ಯಕ್ಕೆನಾನುಈಗಲೇ ಏನನ್ನು ಹೇಳುವುದಿಲ್ಲ.ನನ್ನಕತೆಯ ಹೀರೋ ಜೋಗಿ ಪ್ರೇಮ್. ಉಳಿದಂತೆ ಬಾಲಿವುಡ್ ನಟ ಬಾಬಿಸಿಂಹ ಚಿತ್ರದ ಪ್ರಮುಖ ವಿಲನ್. ಈಗಾಗಲೇ ಅವರೊಂದಿಗೆ ಒಂದು ಹಂತದ ಮಾತುಕತೆ ನಡೆದಿದೆ. ಫೈನಲ್ ಆಗಬೇಕಿದೆ. ಹಾಗೆಯೇ ನಾಯಕಿ ಸೇರಿದಂತೆ ಉಳಿದ ಕಲಾವಿದರನ್ನು ಆಯ್ಕೆಮಾಡಿಕೊಂಡು ಚಿತ್ರೀಕರಣಕ್ಕೆ ಹೊರಡುವುದಷ್ಟೇ ಬಾಕಿಯಿದೆ ಎನ್ನುತ್ತಾರೆ ಚಂದ್ರಚೂಡ್.