ಪುನೀತ್ ರಾಜಕುಮಾರ್ ಅವರ ಸಾಧನೆ ಬಗ್ಗೆ ಎಷ್ಟು ಹೇಳಿದರೂ ಸಾಲದು. ಚಿಕ್ಕಂದಿನಲ್ಲೇ ಬಣ್ಣದ ಲೋಕವನ್ನು ಸ್ಪರ್ಶಿಸಿದ ಅಪ್ಪು, ಬಾಲನಟರಾಗಿರುವಾಗಲೇ ರಾಷ್ಟ್ರಪ್ರಶಸ್ತಿ ಪಡೆದವರು. ನಟನೆಯಷ್ಟೇ ಅಲ್ಲ, ಗಾಯನದ ಮೂಲಕವೂ ಪುನೀತ್ ರಾಜಕುಮಾರ್ ಅವರು, ದೊಡ್ಡ ಸಾಧನೆ ಮಾಡಿದ್ದು ನಿಜ. ಅವೆಲ್ಲವೂ ನಮ್ಮ ಕಣ್ಣ ಮುಂದಿದೆ. ಅಪ್ಪು ಸಾಧನೆ ಬಗ್ಗೆ ಕೇಳಿದವರಿಗೆ ನಿಜಕ್ಕೂ ಹೆಮ್ಮೆ ಎನಿಸುವುದು ದಿಟ. ಅವರ ಸಹೋದರ ರಾಘವೇಂದ್ರ ರಾಜಕುಮಾರ್ ಅವರು ಸಹ, ಪುನೀತ್ ರಾಜಕುಮಾರ್ ಅವರ ಸಾಧನೆ ಬಗ್ಗೆ ಸದಾ ಹೇಳುತ್ತಲೇ ಬಂದವರು. ಪುನೀತ್ ಅವರ ಅಗಲಿಕೆ ಬಳಿಕವೂ ರಾಘವೇಂದ್ರ ರಾಜಕುಮಾರ್ ಅವರು, ಪುನೀತ್ ಬಗ್ಗೆ ಮತ್ತು ಅವರು ಚಿಕ್ಕವಯಸ್ಸಲ್ಲೇ ಮಾಡಿದ ಸಾಧನೆ ಕುರಿತು ಹೇಳಿಕೊಂಡಿದ್ದಾರೆ.
ಪುನೀತ್ ಅವರು 46 ವರ್ಷಕ್ಕೆ 75 ವರ್ಷಕ್ಕೆ ಮಾಡಬೇಕಾಗಿರುವಷ್ಟು ಸಾಧನೆ ಮಾಡಿದ್ದಾರೆ. ದೇವರು, ನಮ್ಮ ಅಪ್ಪಾಜಿಗೆ ಅಷ್ಟು ವರ್ಷಗಳ ಕಾಲ ಬಿಟ್ಟು, ಎಲ್ಲಾ ಸಾಧನೆ ಮಾಡಿಕೊಂಡು ಬನ್ನಿ ಅಂದಿದ್ದರು. ಅಪ್ಪಾಜಿ ನಮ್ಮನ್ನೆಲ್ಲ ಬಿಟ್ಟು ಹೋದರು. ಈಗ ಅಪ್ಪು ಅವರನ್ನೂ ಸಹ ೪೬ ವರ್ಷಕ್ಕೆ ಎಲ್ಲವನ್ನೂ ಮುಗಿಸಿಕೊಂಡು ಬಾ ಅಂತ ಹೇಳಿದ್ದರೇನೋ? ಭಗವಂತ, ಕೊಟ್ಟ ಸಮಯ ಅಷ್ಟೇ ಅನಿಸುತ್ತೆ. ನಿಜಕ್ಕೂ ಚಿಕ್ಕ ವಯಸ್ಸಲ್ಲೇ ಅಪ್ಪು ಸಾಕಷ್ಟು ಸಾಧನೆ ಮಾಡಿದ್ದಾರೆ. ಗೊತ್ತಿಲ್ಲದೆಯೇ ಅದೆಷ್ಟೋ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ.
ಈಗ ಇದ್ದಕ್ಕಿದ್ದಂತೆ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ. ಇದು ದುಃಖದ ಸಂಗತಿ. ಅಭಿಮಾನಿಗಳು ಅಪ್ಪು ಅವರನ್ನು ಶಾಂತಿಯಿಂದಲೇ ಕಳಿಸಿಕೊಟ್ಟಿದ್ದಾರೆ. ಕೆಲವರಿಗೆ ಅಪ್ಪು ದರ್ಶನ ಸಿಕ್ಕಿಲ್ಲ. ಹಾಗಂತ ಯಾರೂ ಬೇಸರ ಮಾಡಿಕೊಳ್ಳಬೇಡಿ. ಎಲ್ಲರಿಗೂ ನೋಡಲು ಅವಕಾಶ ಕಲ್ಪಿಸಲಾಗುವುದು. ಸದ್ಯ ಫ್ಯಾಮಿಲಿಯ ಕಾರ್ಯಗಳು ನಡೆಯಬೇಕಿದೆ. ನಂತರ ಅಭಿಮಾನಿಗಳಿಗೆ ಅವಕಾಶ ಇದ್ದೇ ಇರಲಿದೆ. ಇವತ್ತು ಅಪ್ಪು ಏನೇ ಆಗಿದ್ದರೂ, ಅದು ಅಭಿಮಾನಿಗಳಿಂದ. ಹುಟ್ಟಿದಾಗಲೇ ನಾವೆಲ್ಲರೂ ನಿಮ್ಮವರು. ನಿಮಗೇ ಮೊದಲ ಆದ್ಯತೆ ಎಂದಿದ್ದಾರೆ ರಾಘವೇಂದ್ರ ರಾಜಕುಮಾರ್.