ಸೂಪರ್‌ಸ್ಟಾರ್ ರಜಿನಿಕಾಂತ್ ಮುಡಿಗೇರಿದ `ದಾದಾ ಸಾಹೇಬ್ ಫಾಲ್ಕೆ’; ಗುರು-ಅಣ್ಣ-ಸ್ನೇಹಿತನಿಗೆ ಪ್ರಶಸ್ತಿ ಅರ್ಪಿಸಿದ ತಲೈವಾ !

ದಾದಾ ಸಾಹೇಬ್ ಫಾಲ್ಕೆ' ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ. ೨೦೨೦ನೇ ಸಾಲಿನ ಈ ಹೆಮ್ಮೆಯ ಪ್ರಶಸ್ತಿ ಸೌತ್ ಸಿನಿಮಾ ಇಂಡಸ್ಟ್ರಿ ಕಂಡಂತಂಹ ಅತ್ಯದ್ಭುತ ನಟ, ವಲ್ಡ್ ವೈಡ್ ಅಭಿಮಾನಿ ದೇವರುಗಳನ್ನು ಸಂಪಾದನೆ ಮಾಡಿರುವಂತಹ ತಲೈವಾ ಸೂಪರ್‌ಸ್ಟಾರ್ ರಜಿನಿಕಾಂತ್ ಮುಡಿಗೇರಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ದೆಹಲಿ ವಿಜ್ಞಾನ ಭವನದಲ್ಲಿ ನಡೆದ 67 ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ ಕಾರ್ಯಕ್ರಮದಲ್ಲಿಪಡೆಯಪ್ಪ’ನಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.


ನಡೆದು ಬಂದ ಹಾದಿಯನ್ನು, ಕೈಹಿಡಿದು ಮೇಲಕ್ಕೆತ್ತಿದವರನ್ನು, ದಾರಿ ಮಾರ್ಗ ತೋರಿಸಿಕೊಟ್ಟವರನ್ನು, ಪ್ರತಿಭೆ ಗುರ್ತಿಸಿ ಅವಕಾಶ ಕಲ್ಪಿಸಿಕೊಟ್ಟವರನ್ನು ತಲೈವಾ ಮರೆತಿಲ್ಲ ಮತ್ತು ಮರೆಯೋದಿಲ್ಲ ಎನ್ನುವುದಕ್ಕೆ ಫಾಲ್ಕೆ ಪ್ರಶಸ್ತಿ ಸಮಾರಂಭ ಕಾರ್ಯಕ್ರಮ ಸಾಕ್ಷಿಯಾಯ್ತು. ಹೌದು, ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ರಜಿನಿಕಾಂತ್, ಫಾಲ್ಕೆ ಪ್ರಶಸ್ತಿಯನ್ನ ಗುರು-ಅಣ್ಣ-ಸ್ನೇಹಿತನಿಗೆ ಹಾಗೂ ಅಭಿಮಾನಿ ದೇವರುಗಳಿಗೆ ಅರ್ಪಣೆ ಮಾಡಿದರು. ಮುಖಕ್ಕೆ ಬಣ್ಣ ಹಚ್ಚಿ ಕ್ಯಾಮೆರಾ ಎದುರಿಸಲಿಕ್ಕೆ ಹಾಗೂ ಒಬ್ಬ ಕಲಾವಿದನಾಗಲಿಕ್ಕೆ ಅವಕಾಶ ಮಾಡಿಕೊಟ್ಟ ನಿರ್ದೇಶಕ ಕೆ. ಬಾಲಚಂದರ್ ಅವರನ್ನು ನೆನಪು ಮಾಡಿಕೊಂಡರು. ಇವರು ತಲೈವಾ ಪಾಲಿಗೆ ಗುರು ಹಾಗೂ ಮೆಂಟರ್ ಆಗಿದ್ದವರು. ಇವರ ಅಪೂರ್ವ ರಾಗಂಗಳ್ ಚಿತ್ರದ ಮೂಲಕವೇ ಪಡೆಯಪ್ಪ ಮಾಯಲೋಕಕ್ಕೆ ಪಾದಾರ್ಪಣೆ ಮಾಡಿದ್ದು. ಈ ಚಿತ್ರದಿಂದ ಶುರುವಾದ ಸಿನಿಜರ್ನಿ `ಅಣ್ಣಾತೆ’ವರೆಗೂ ಬಂದುನಿಂತಿದೆ. ಇವತ್ತು ಇಡೀ ಸಿನಿಮಾ ಜಗತ್ತು ರಜನಿಕಾಂತ್‌ರನ್ನು ಆರಾಧಿಸುವಂತೆ ಮಾಡಿದೆ.

ತಲೈವಾ ಕಲಾವಿದನಾಗುವ ಮೊದಲು ಬಸ್ ಕಂಡೆಕ್ಟರ್ ಆಗಿದ್ದವರು ಎನ್ನುವುದು ನಿಮ್ಮೆಲ್ಲರಿಗೂ ಗೊತ್ತಿರುವ ವಿಷಯ. ರಜಿನಿಕಾಂತ್ ಬಿಎಂಟಿಸಿ ಕಂಡೆಕ್ಟರ್ ಆಗಿದ್ದ ಕಾಲದಲ್ಲಿ ಸ್ನೇಹಿತನಾಗಿದ್ದ ಡ್ರೈವರ್ ವೃತ್ತಿಯನ್ನು ಮಾಡುತ್ತಿದ್ದ ವ್ಯಕ್ತಿಯ ಜೊತೆ ಈಗಲೂ ಅದೇ ಸ್ನೇಹ-ಬಾಂದವ್ಯವನ್ನು ಹೊಂದಿದ್ದಾರೆ. ಬೆಂಗಳೂರಿಗೆ ಬಂದಾಗೆಲ್ಲ ಆ ಸ್ನೇಹಿತನ ಮನೆಗೆ ಹೋಗ್ತಾರೆ ಮಾತ್ರವಲ್ಲ ಬಾಲ್ಯದಲ್ಲಿ ಆಡಿ ಬೆಳೆದ ಜಾಗ, ತಿಂಡಿತಿನಿಸು ತಿಂದ ಅಂಗಡಿಗಳು, ಹೋಟೆಲ್‌ಗಳು, ದೇವಸ್ತಾನಗಳು ಹೀಗೆ ಹಳೆಯ ಜಾಗಗಳಿಗೆ ಭೇಟಿ ಕೊಟ್ಟು ನೆನಪುಗಳನ್ನು ಮೆಲುಕು ಹಾಕ್ತಾರೆ. ಇಂತಿಪ್ಪ ರಜಿನಿಯ ಸ್ನೇಹಿತ ಮತ್ಯಾರು ಅಲ್ಲ ಒನ್ ಅಂಡ್ ಓನ್ಲೀ ರಾಜ್‌ ಬಹದ್ದೂರ್ ಅವರು. ಇವರೇ, ತಲೈವಾ ಬಣ್ಣದ ಲೋಕದ ಕಡೆ ಆಕರ್ಷಿತರಾಗಲಿಕ್ಕೆ ಮೊದಲ ಕಾರಣ. ಪಡೆಯಪ್ಪನೊಳಗಿದ್ದ ಕಲಾವಿದನನ್ನು ಮೊದಲು ಗುರ್ತಿಸಿದ್ದೇ ಗೆಳೆಯ ರಾಜ್‌ಬಹದ್ದೂರ್. ಹೀಗಾಗಿ, ಫಾಲ್ಕೆ ಪ್ರಶಸ್ತಿಯ ಪಾಲು ದೋಸ್ತನಿಗೂ ಸಲ್ಲಬೇಕು ಎಂದು ಗೆಳೆಯನನ್ನು ನೆನೆದರು.

ಗುರು ಹಾಗೂ ಗೆಳೆಯನೊಟ್ಟಿಗೆ ರಕ್ತಹಂಚಿಕೊಂಡು ಹುಟ್ಟಿದ ಸಹೋದರನನ್ನು ಸ್ಮರಿಸಿದರು. ತಂದೆಯ ಸ್ಥಾನದಲ್ಲಿ ನಿಂತುಕೊಂಡು ತಲೈವಾರನ್ನ ಸಾಕಿ ಬೆಳೆಸಿ ದೊಡ್ಡವನನ್ನಾಗಿ ಮಾಡಿದ್ದಾರೆ. ಜೊತೆಗೆ ಆಧ್ಯಾತ್ಮದೆಡೆಗೆ ವಾಲುವುದಕ್ಕೂ ಸ್ಪೂರ್ತಿಯಾಗಿದ್ದಾರಂತೆ. ಶುಭಕಾರ್ಯ-ಸಿನಿಮಾ ಬಿಡುಗಡೆಯ ಜೊತೆಗೆ ಮಾನಸಿಕ ನೆಮ್ಮದಿಯಾಗಿ ಪಡೆಯಪ್ಪ ಹಿಮಾಲಯಕ್ಕೆ ಭೇಟಿನೀಡುವುದು ನಿಮೆಗೆಲ್ಲ ಗೊತ್ತಿದೆ.

ಸೂಪರ್‌ಸ್ಟಾರ್ ಆಗಿ ಮೆರೆಯುವ ರಜಿನಿಕಾಂತ್ ಆಧ್ಯಾತ್ಮಿಕತೆಯಲ್ಲಿ ಧನ್ಯತೆಯನ್ನು ಕಾಣುತ್ತಿದ್ದಾರೆ. ಒಟ್ನಲ್ಲಿ ಸಾಮಾನ್ಯ ಶಿವಾಜಿ ರಾವ್ ಗಾಯಕ್‌ವಾಡ್ ಆಗಿದ್ದ ತಲೈವಾ ಇವತ್ತು ಇಂಡಿಯನ್ ಸಿನ್ಮಾ ಇಂಡಸ್ಟ್ರಿಯೇ ತಲೆ ಎತ್ತಿ ನೋಡುವಂತಹ ನಟನಾಗಿ ಬೆಳೆದಿದ್ದಾರೆ. ಕೋಟ್ಯಾಂತರ ಅಭಿಮಾನಿ ದೇವರುಗಳನ್ನು ಸಂಪಾದನೆ ಮಾಡಿದ್ದಾರೆ. ಇದಕ್ಕೆಲ್ಲಾ ಕಾರಣ, ಬಾಷಾ ಕಲೆಯ ಮೇಲಿಟ್ಟಿರುವ ಶ್ರದ್ದಾ-ಭಕ್ತಿಯ ಜೊತೆಗೆ ಗುರುಗಳಾದ ಬಾಲಚಂದರ್, ಅಣ್ಣ ಸತ್ಯನಾರಾಯಣ್, ಸ್ನೇಹಿತ ರಾಜ್‌ಬಹದ್ದೂರ್ ದಾರಿಮಾರ್ಗ ಹಾಗೂ ಅಭಿಮಾನಿ ದೇವರುಗಳ ಆಶೀರ್ವಾದ ಮತ್ತು ಹಾರೈಕೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!