ಕನ್ನಡ ಕಿರುತೆರೆ, ಹಿರಿತೆರೆಯಲ್ಲಿ ೩೦ ವರ್ಷಗಳ ಕಾಲ ಬರಹಗಾರ, ಧಾರಾವಾಹಿ ನಿರ್ದೇಶಕನಾಗಿ ಸೇವೆ ಸಲ್ಲಿಸಿರುವ ಬುಕ್ಕಾಪಟ್ಟಣ ವಾಸು ಈಗಾಗಲೇ ಸೆಂಚುರಿ ಫಿಲಂ ಇನ್ಸ್ಟಿಟ್ಯೂಟ್ ಎಂಬ ಚಲನಚಿತ್ರ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದ್ದು, ಆ ಮೂಲಕ ಹಲವಾರು ಪ್ರತಿಭೆಗಳನ್ನು ಹುಟ್ಟುಹಾಕಿದ್ದಾರೆ. ಅದರ ಮುಂದುವರಿದ ಭಾಗವಾಗಿ ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಗೆಳೆಯ ಶ್ರೀಸಾಯಿಕೃಷ್ಣ ಅವರ ಜೊತೆ ಸೇರಿ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಷದೊಂದಿಗೆ ನಾಗರಭಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ಕ್ರಿಯೇಟಿವ್ ಟೈಮ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ಎಂಬ ಹೊಸ ಸ್ಟುಡಿಯೊವೊಂದನ್ನು ಆರಂಭಿಸಿದ್ದಾರೆ. ಇದರ ಉದ್ಘಾಟನಾ ಕಾರ್ಯಕ್ರಮ ಬುಧವಾರ ಬೆಳಿಗ್ಗೆ ನೆರವೇರಿತು.
ಹಿರಿಯ ಸಾಹಿತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ದೊಡ್ಡರಂಗೇಗೌಡರು, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್, ನಿರ್ದೇಶಕ ಓಂ ಸಾಯಿಪ್ರಕಾಶ್, ಸಂಗೀತ ನಿರ್ದೇಶಕ ವಿ.ಮನೋಹರ್, ಬಾಮ ಹರೀಶ್, ಬಾಮ ಗಿರೀಶ್ ಹಾಗೂ ನಟಿ ಭವ್ಯಶ್ರೀ ರೈ ಇಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು.
ತಮ್ಮ ಹೊಸ ಸ್ಟುಡಿಯೋದ ವಿಶೇಷತೆಗಳ ಕುರಿತಂತೆ ಮಾತನಾಡಿದ ಶ್ರೀಸಾಯಿಕೃಷ್ಣ ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನೊಳಗೊಂಡ ಸ್ಟುಡಿಯೋ ಇದಾಗಿದೆ. ಈ ಹೆಸರಿಗೆ ತಕ್ಕಂತೆ ಪ್ರತಿ ಹಂತದಲ್ಲೂ ಕ್ರಿಯೇಟಿವಿಟಿ ತರಬೇಕಾಗಿತ್ತು. ವಾಸು ಅವರಲ್ಲಿರುವ ಕ್ರಿಯೇಟಿವಿಟಿ, ನಮ್ಮ ಯೋಚನೆ ಸೇರಿಸಿ ಈ ಸ್ಟುಡಿಯೋ ಬೆಳೆಸುವ ಪ್ರಯತ್ನ ಮಾಡಿದ್ದೇವೆ. ಒಂದೇ ಫ್ಲೋರ್ನಡಿ ಎಲ್ಲಾ ರೀತಿಯ ಸೌಲಭ್ಯಗಳನ್ನು ನಮ್ಮ ಸ್ಟುಡಿಯೋದಲ್ಲಿ ಒದಗಿಸಲಾಗುತ್ತದೆ, ಹೊಸ ಪ್ರತಿಭೆಗಳಿಗೆ ಸಪೋರ್ಟಿವ್ ಆಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ನಂತರ ಬುಕ್ಕಾಪಟ್ಟಣ ವಾಸು ಮಾತನಾಡಿ ಮೊದಲು ಜಾಹೀರಾತಿಗೆಂದೇ ಈ ಸಂಸ್ಥೆ ನಿರ್ಮಿಸಿದ್ದು, ಇದೇ ಬ್ಯಾನರ್ನಿಂದ ಈಗ ಹೊಸ ಚಿತ್ರಗಳನ್ನು ಶುರು ಮಾಡುತ್ತಿದ್ದೇವೆ, ಮಾರ್ಕೆಟಿಂಗ್ ಮಾಡಿಕೊಡುತ್ತೇನೆಂದು ಬಂದ ಶ್ರೀಸಾಯಿಕೃಷ್ಣ, ನವೀನ ತಂತ್ರಜ್ಞಾನಗಳನ್ನೊಳಗೊಂಡ ಸ್ಟುಡಿಯೋ ಏಕೆ ಮಾಡಬಾರದು ಎಂದರು. ಆಗ ಗ್ರೀನ್ಮೇಟ್ ಸ್ಟುಡಿಯೋ, ಎಡಿಟಿಂಗ್ ಸ್ಟುಡಿಯೋ ರೆಡಿಯಾಯಿತು. ಸೌಂಡ್ ಎಂಜಿನಿಯರ್ ಪಳನಿ ಜೊತೆ ಸೇರಿದ ನಂತರ ರೆಕಾರ್ಡಿಂಗ್ ಸ್ಟುಡಿಯೋ ಕೂಡ ಆಯಿತು. ಸಿನಿಮಾ ಸ್ಕ್ರಿಪ್ಟ್ ಹಿಡಿದುಕೊಂಡು ಇಲ್ಲಿಗೆ ಬಂದರೆ ಬಂದರೆ ಮೊದಲಪ್ರತಿ ತೆಗೆದುಕೊಂಡು ಹೋಗಬಹುದು. ಪ್ರೇಮ್, ಶೇಖರ್, ಪಳನಿ, ರೇಣು ಸ್ಟುಡಿಯೋ ಹೀಗೆ ಬಹಳಷ್ಟು ಸ್ನೇಹಿತರು ಜೊತೆ ಸೇರಿದರು ಎಂದು ಹೇಳಿದರು.
ನಿರ್ದೇಶಕ ಸಾಯಿಪ್ರಕಾಶ್ ಮಾತನಾಡಿ ವಾಸು ೨೮ ವರ್ಷದ ಹಿಂದೆ ನನ್ನಜೊತೆ ಕೆಲಸ ಮಾಡಿದ್ದರು. ಪಕ್ಕದ ಆಂಧ್ರದಲ್ಲಿ ಆದಂಥ ಬೆಳವಣಿಗೆ ಇಲ್ಲಿ ಕಾಣುತ್ತಿಲ್ಲ, ಅಲ್ಲಿ ಪ್ರತಿಯೊಬ್ಬ ಸ್ಟಾರ್ಗಳು ಸ್ಟುಡಿಯೋ ಮಾಡಿ ಇಂಡಸ್ಟಿಗೆ ಕೊಡುಗೆ ಕೊಟ್ಟಿದ್ದಾರೆ. ಕನ್ನಡ ಫಿಲಂ ಇಂಡಸ್ಟ್ರಿ ಈಗ ತುಂಬಾ ಬೆಳೆದಿದೆ, ಅದಕ್ಕೆ ವಾಸು ಅವರೂ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ನಂತರ ಪ್ರೊ. ದೊಡ್ಡರಂಗೇಗೌಡರು ಮಾತನಾಡಿ ನನ್ನ ವಾಸು ಸಂಬಂಧ ತುಂಬಾ ಹಳೆಯದು, ಕುಂಕುಮ ಭಾಗ್ಯ ಎನ್ನುವ ಮೆಗಾಸೀರಿಯಲ್ಗೆ ನನ್ನಿಂದ 11 ಹಾಡುಗಳನ್ನು ಬರೆಸಿದ್ದರು. ಇದು ಸೆಂಚುರಿ ಫಿಲಂ ಇನ್ ಸ್ಟಿಟ್ಯೂಟ್ನ ಇನ್ನೊಂದು ಶಾಖೆ ಎನ್ನಬಹುದು.
ಅತ್ಯಾಧುನಿಕ ಸ್ಟುಡಿಯೋವನ್ನು ಇಂಥಾ ವಿಷಮ ಸಂದರ್ಭದಲ್ಲಿ ಮಾಡಿದ್ದಾರೆ. ಷಾರ್ಟ್ ಫಿಲಂ, ಡಾಕ್ಯುಮೆಂಟರಿಗಳನ್ನು ಸಹ ಇಲ್ಲಿ ಮಾಡಬಹುದಾಗಿದೆ ಎಂದರು, ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಮಾತನಾಡಿ ಒಂದೇ ಸೂರಿನಡಿ ಎಲ್ಲಾ ಸೌಲಭ್ಯ ಸಿಗುವಂಥ ಸ್ಟುಡಿಯೋ ಮೂಲಕ ಹೊಸ ಸಾಹಸವನ್ನು ವಾಸು ಮಾಡಿದ್ದಾರೆ ಎಂದರು, ವಿ.ಮನೋಹರ್ ಮಾತನಾಡುತ್ತ ಹೊಸ ಸ್ಟುಡಿಯೋಗೆ ಶುಭ ಹಾರೈಸಿದರು,