ಯುವಸಾಮ್ರಾಟ ಚಿರಂಜೀವಿ ಸರ್ಜಾ ಜನ್ಮಜಯಂತಿಗೆ ಪತ್ನಿ ಮೇಘನರಾಜ್ ನಟನೆಯ ಹೊಸ ಸಿನಿಮಾ ಸೆಟ್ಟೇರ್ತಿದೆ. ಚಿರು ಸ್ನೇಹಿತರು ಹಾಗೂ ಹೊಸಬರ ತಂಡ ಸೇರಿಕೊಂಡು ಒಂದು ಸಾಹಸಕ್ಕೆ ಕೈಹಾಕಿದ್ದಾರೆ. ವಾಯುಪುತ್ರನ ಆಶೀರ್ವಾದದೊಂದಿಗೆ ಶುರುವಾಗುತ್ತಿರುವ ಮೇಘನಾ ಮೂವೀಯ ಡೀಟೈಲ್ಸ್ ಇಲ್ಲಿದೆ.
ಅಕ್ಟೋಬರ್ 17 ಸ್ಯಾಂಡಲ್ ವುಡ್ ನ ಯುವಸಾಮ್ರಾಟ ಚಿರಂಜೀವಿ ಸರ್ಜಾರ ಜನುಮದಿನ. ವಿಧಿಯ ಆಟಕ್ಕೆ ಬಲಿಯಾಗದಿದ್ದರೆ ಅ. 17 ರಂದು 37ನೇ ವಸಂತಕ್ಕೆ ಕಾಲಿಡುತ್ತಿದ್ದರು.ವಾಯುಪುತ್ರನ ಹುಟ್ಟುಹಬ್ಬ ಅದ್ದೂರಿಯಾಗಿ ನಡೀತಿತ್ತು. ಅಭಿಮಾನಿ ದೇವರುಗಳು ಚಿರು ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲಬ್ರೇಟ್ ಮಾಡ್ತಿದ್ದರು.ರಾಯನ್ ರಾಜ್ ಸರ್ಜಾನಿಂದ ಯುವಸಾಮ್ರಾಟನ ಬರ್ತ್ ಡೇಗೆ ಹೊಸ ಕಳೆಬರುತ್ತಿತ್ತು. ಆದರೆ, ಹಿಂಗಾಗಲಿಕ್ಕೆ ಸಾಧ್ಯವಿಲ್ಲ ಯಾಕಂದ್ರೆ ದೈಹಿಕವಾಗಿ ಚಿರು ನಮ್ಮೊಟ್ಟಿಗೆ ಇಲ್ಲ.
ಚಿರಂಜೀವಿಯ ಅಕಾಲಿಕ ನಿಧನ ಈ ಕ್ಷಣಕ್ಕೂ ಕರುಳು ಹಿಂಡುವ ಕಥನ. ಅವರುಗಳ ಕುಟುಂಬ ಮಾತ್ರವಲ್ಲ ಕನ್ನಡಿಗರೆಲ್ಲರೂ ಕೂಡ ಚಿರು ನೆನೆದು ಕಣ್ಣೀರಾಗುತ್ತಾರೆ. ಹೀಗೆ, ಮರುಗುವ ಹೃದಯಗಳು ನಿಟ್ಟುಸಿರು ಬಿಟ್ಟಿದ್ದು ರಾಯನ್ ರಾಜ್ ಸರ್ಜಾ ಭೂಮಿಗೆ ಬಂದ್ಮೇಲೆ. ಚಿರು ತದ್ರೂಪವನ್ನೆತ್ತಿ ಬಂದಿರುವ ರಾಯನ್, ಸುಂದರ್ ರಾಜ್ ಹಾಗೂ ಸರ್ಜಾ ಕುಟುಂಬಕ್ಕೆ ಬೆಳಕಾಗಿದ್ದಾನೆ. ಎರಡು ಕುಟುಂಬವನ್ನು ದುಃಖ- ಸಂಕಟ-ನೋವಿನಿಂದ ಹೊರತಂದಿದ್ದಾನೆ. ಅಮ್ಮ ಮೇಘನಾ ಮತ್ತೆ ಬಣ್ಣ ಹಚ್ಚುವುದಕ್ಕೆ ಹುರುಪು ತುಂಬಿದ್ದಾನೆ.
ಹೌದು, ನಟಿ ಮೇಘನಾ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ. ಚಿರು ಕಳೆದುಕೊಂಡ ಹೊತ್ತಲ್ಲಿ ಗರ್ಭಿಣಿಯಾಗಿದ್ದ ಮೇಘನಾ, ಅನಂತರ ಮಗನ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದರು. ಈಗ ಪುತ್ರ ರಾಯನ್ ಒಂದು ವರ್ಷ ಬೆಳೆದು ದೊಡ್ಡವನಾಗಿದ್ದಾನೆ. ಹೀಗಾಗಿ, ಮೇಘನಾ ಮತ್ತೆ ಮುಖಕ್ಕೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಪತಿ ಚಿರಂಜೀವಿ ಸರ್ಜಾರ ಹುಟ್ಟುಹಬ್ಬದಂದೇ ಕ್ಯಾಮರಾ ಎದುರಿಸಲಿದ್ದಾರೆ.
ವಾಯುಪುತ್ರನ ಸ್ನೇಹಿತರು ನಟಿ ಮೇಘನಾ ಕಮ್ ಬ್ಯಾಕ್ ಗೆ ರೆಡ್ ಕಾರ್ಪೆಟ್ ಹಾಕಿದ್ದಾರೆ. ಚಿರು ಪಾಲಿನ ಜೀವದ ಗೆಳೆಯ ಪನ್ನಗಾಭರಣ ಮೇಘನಾ ನಟನೆಯ ಹೊಸ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.ಯುವಪ್ರತಿಭೆ ವಿಶಾಲ್ ಆಕ್ಷನ್ ಕಟ್ ಹೇಳ್ತಿದ್ದಾರೆ, ವಾಸುಕಿ ವೈಭವ್ ಸಂಗೀತ ನೀಡುತ್ತಿದ್ದಾರೆ.ಪಿ.ಬಿ.ಸ್ಟುಡಿಯೋಸ್ ಲಾಂಛನದಲ್ಲಿ ನೂತನ ಚಿತ್ರ ನಿರ್ಮಾಣವಾಗುತ್ತಿದೆ.
ಅಂದ್ಹಾಗೇ, ಚಿರುಗೆ ಆಕ್ಷನ್ ಕಟ್ ಹೇಳಬೇಕು, ಯುವಸಾಮ್ರಾಟ್ ಹಾಗೂ ಜಂಟಲ್ ಮ್ಯಾನ್ ಪ್ರಜ್ವಲ್ ಕಾಂಬಿನೇಷನ್ ನಲ್ಲಿ ಸಿನಿಮಾ ಮಾಡಬೇಕು ಎನ್ನುವುದು ಪನ್ನಗ ಕನಸಾಗಿತ್ತು. ಆದರೆ, ಆ ಮಹಾದಾಸೆ ಈಡೇರುವ ಮುನ್ನವೇ ಚಿರು ಉಸಿರು ಚೆಲ್ಲಿದರು. ಇದೀಗ, ಗೆಳೆಯ ಚಿರು ವೈಫ್ ಕಮ್ ಆಪ್ತ ಸ್ನೇಹಿತೆಯಾಗಿರುವ ಮೇಘನಾರಿಗೆ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಮೇಘನಾರಾಜ್ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಳೆ ಸಿನಿಮಾ ಸೆಟ್ಟೇರಲಿದ್ದು,ನಿರ್ದೇಶಕ ಟಿ.ಎಸ್.ನಾಗಾಭರಣ, ನಟ ಸುಂದರ್ ರಾಜ್ ಹಾಗೂ ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಚಿರು ಆಪ್ತಬಳಗ ಮುಹೂರ್ತದಲ್ಲಿ ಪಾಲ್ಗೊಳ್ಳಲಿದೆ
ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ