ಚಿರಂಜೀವಿ, ತಮನ್ನಾ ಸೇರಿ ಹೆಸರಾಂತ ಸ್ಟಾರ್ ಗಳ ಮನಸ್ಸು ಗೆದ್ದ ಅಸಾಧಾರಣ ಡಾನ್ಸರ್!

ಟಾಲಿವುಡ್ ಗೆ ಇಷ್ಟ, ಕನ್ನಡಕ್ಕೆ ಕಷ್ಟ, ಯಾಕೆ ಹೀಗೆ ಅನ್ನೋದೇ ಈಕೆಯ ಪೋಷಕರ ಸಂಕಷ್ಟ!

ನಟರ ಮಕ್ಕಳು ನಟರಾಗೋದು, ಡಾನ್ಸರ್ ಮಕ್ಕಳು ಡಾನ್ಸರ್ ಆಗೋದು, ಸಿಂಗರ್ ಮಕ್ಕಳು ಸಿಂಗರ್ ಆಗೋದು ವಿಶೇಷವೇನಲ್ಲ. ಅದೆಲ್ಲ ಈಗ ಮಾಮೂಲು. ಆದರೆ ಹಳ್ಳಿಯೊಂದರ ಬಡ ಮೆಕಾನಿಕ್ ಯೊಬ್ಬನ ಮಗಳು ಪುಟಾಣಿ ಬಾಲಕಿ ಜಗತ್ ಪ್ರಸಿದ್ಧ ಸ್ಟಾರ್ ಗಳೇ ಅಚ್ಚರಿಪಟ್ಟು ಹಾಡಿ- ಹೊಗಳುವಷ್ಟು ಸಾಧನೆ ಮಾಡುತ್ತಾಳೆಂದರೆ ಅದು ನಿಜವಾದ ಸಾಧನೆ. ಆ ಸಾಧಕಿ ಮಹಾಲಕ್ಷ್ಮಿ. ಹೆಸರಿಗೆ ತಕ್ಕಂತೆ ‘ಮಹಾ’ ಪ್ರತಿಭೆ‌. ಈ ಹಳ್ಳಿ ಪ್ರತಿಭೆಯ ಸಾಧನೆಯ ಹಿಂದಿದೆ ಒಂದು ರೋಚಕ ಕತೆ, ಅದೇನು ಅಂತ ಗೊತ್ತಾಗ ಬೇಕಾದ್ರೆ ಈ ಸ್ಟೋರಿ ಓದಿ.

ಅಸಾಧಾರಣ ಪ್ರತಿಭೆ ಈ ಪುಟಾಣಿ…

ಹೆಸರು ಮಹಾಲಕ್ಷ್ಮಿ .ಕನ್ನಡ ಹಾಗೂ ತೆಲುಗು ಕಿರುತೆರೆಗೆ ಚಿರಪರಿಚಿತ ಹೆಸರು. ಆಕೆಗೀಗ ಹತ್ತು ವರ್ಷ. ಈಗಷ್ಟೇ ಐದನೇ ತರಗತಿ ವಿದ್ಯಾರ್ಥಿನಿ. ನಾಲ್ಕನೇ ವರ್ಷದಿಂದಲೇ ಡಾನ್ಸ್ ಅಭ್ಯಾಸ ಆರಂಭಿಸಿದವಳು. ಕಲಿಕೆಗೆ ಗುರು ಇಲ್ಲ . ಕುಟುಂಬದ ದೊಡ್ಡ ಹಿನ್ನೆಲೆಯೂ ಇಲ್ಲ‌. ಮನೆಯಲ್ಲೇ ಟಿವಿ ಶೋ ನೋಡಿ ಡಾನ್ಸ್ ಹುಚ್ಚು ಹಿಡಿಸಿಕೊಂಡವಳು, ಮುಂದೆ ಅದರಲ್ಲೇ ದೊಡ್ಡ ಸಾಧನೆ ಮಾಡಿದ್ದಾಳೆ. ಮಹಾಲಕ್ಣ್ಮಿ ಎನ್ನುವ ಹೆಸರಿನ ಬಲವೋ, ದೇವರೇ ಕೊಟ್ಟ ವರವೋ ಮಹಾಲಕ್ಣ್ಮಿಗೆ ಡಾನ್ಸ್ ಎನ್ನುವುದು ನೀರು ಕುಡಿದಷ್ಟೇ ಸುಲಭ. ಮೊದಲು ಊರಿನ ವಿವಿಧ ಕಾರ್ಯಕ್ರಮಗಳಲ್ಲಿ ಕುಣಿದು ಚಪ್ಪಾಳೆ ಗಿಟ್ಟಿಸಿಕೊಂಡಿದ್ದೇ ದೊಡ್ಡ ಪ್ರೇರಣೆ ನೀಡಿದೆ. ಕನ್ನಡ ಮತ್ತು ತೆಲುಗಿನ ಜನಪ್ರಿಯ ಟಿವಿ ಡಾನ್ಸ್ ಶೋಗಳಿಗೆ ಹೋಗಿ, ಗೆದ್ದು ಬಂದಿದ್ದಾಳೆ. ರಾಜ್ಯ, ಹೊರ ರಾಜ್ಯದ ದೊಡ್ಡ ಸ್ಟಾರ್ ಗಳೇ ಹಾಡಿ- ಹೊಗಳಿದ್ದಾರೆ. ಆದರೆ ಈಗ, ಕನ್ನಡದಲ್ಲೇಕೆ ಆಕೆಯ ಪ್ರತಿಭೆಗೆ ತಕ್ಕಂತೆ ಯಾವುದೇ ಮನ್ನಣೆ ಸಿಗುತ್ತಲ್ಲ ಎನ್ನುವ ಅಳಲು ಆಕೆಯ ಪೋಷಕರದ್ದು. ಹಾಗಾದ್ರೆ ಏನಾಯ್ತು? ಅದಕ್ಕೂ ಮೊದಲು, ಆಕೆಯ ಹಿನ್ನೆಲೆ, ನೃತ್ಯ ಕಲಿತ ಸಾಹಸ, ಆ ಮೂಲಕ ಸಾಧಿಸಿದ ಯಶಸ್ಸಿನ ಕತೆ ಕೇಳಿ.

ಇಷ್ಟಕ್ಕೂ ಆಕೆ ಶ್ರೀಮಂತ‌ ಕುಟುಂಬದ ಮಗಳಲ್ಲ…

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಊಳವಿ ಮಹಾಲಕ್ಣ್ಮಿ ಊರು. ತಂದೆ ಉಮೇಶ್ ಗೌಡ. ತಾಯಿ ಉಷಾ. ಉಮೇಶ್ ಗೌಡ್ರು ಉಳವಿಯಲ್ಲೇ ಸಣ್ಣದೊಂದು ಗ್ಯಾರೇಜ್ ಇಟ್ಟುಕೊಂಡಿದ್ದಾರೆ. ತಾಯಿ ಉಷಾ ಹಾಲಿನ ಡೈರಿಯಲ್ಲಿ ವರ್ಕರ್. ಇದೊಂದು ಕೆಳ ಮಧ್ಯಮ ವರ್ಗದ ಫ್ಯಾಮಿಲಿ .ಅಂತಹ ಕುಟುಂಬದಲ್ಲಿ ಹುಟ್ಟಿ ಡಾನ್ಸ್ ನಲ್ಲಿ ದೊಡ್ಡ ಸಾಧನೆಯ ಕನಸು ಕಂಡವಳು ಈ ಮಹಾಲಕ್ಣ್ಮಿ. ‌ಆದರೆ ಆಕೆಯ ಕನಸು ನನಸಾಗಿಸುವ ಪೂರಕವಾದ ವಾತಾವರಣ ಮನೆಯಲ್ಲಿಲ್ಲ. ಡಾನ್ಸ್ ಕಲಿಸುವುದಕ್ಕಾಗಲಿ ಅಥವಾ ತರಬೇತಿ ಕೊಡಿಸುವುದಕ್ಕಾಗಲಿ ಪೋಷಕರಿಗೆ ಆರ್ಥಿಕ ಶಕ್ತಿ ಇಲ್ಲ. ಮೇಲಾಗಿ ಸಮಯವೂ ಇರಲಿಲ್ಲ. ಒಂದೊತ್ತಿನ ಊಟ ಬೇಕಾದರೆ ಅವರು ದುಡಿಯ ಲೇಬೇಕು. ಆದರೆ ಮಗಳ ಇಚ್ಚಾಶಕ್ತಿಯಂತೆ ದೊಡ್ಡ ಡಾನ್ಸರ್ ಮಾಡ್ಲಿಕ್ಕೆ ಬೇಕು ಎನ್ನುವ ಛಲ ಮಾತ್ರ ಅವರಲ್ಲಿತ್ತು. ಆಗ ಮಹಾಲಕ್ಷ್ಮಿ ಗೆ ಒಬ್ಬ ಗುರುವಾಗಿ ನಿಂತವರು ಆಕೆಯ ಮಾವ ಕಡೆನಂದಿ ಹಳ್ಳಿಯ ಕರಿಬಸಪ್ಪ ಅಲಿಯಾಸ್ ಕಬಿ ಮುತ್ತಿಗಿ.

ಮಾವ ಕಬಿ ಮುತ್ತಿಗಿ‌ ಜೊತೆಗೆ ಮಹಾಲಕ್ಷ್ಮಿ

ಅಂಗವಿಕಲತೆಯನ್ನೇ ಮೀರಿ, ಗುರುವಾಗಿ ನಿಂತರು…

ಮಹಾಲಕ್ಣ್ಮಿಯ ಮಾವ ಕಬಿ ಮುತ್ತಿಗಿ ಅಂಗ ವಿಕಲ. ಒಂದು ಕಾಲಿಲ್ಲ. ಆಕ್ಸಿಡೆಂಟ್ ನಲ್ಲಿ ಕಾಲು ಕಳೆದು ಕೊಂಡು ಶಾಶ್ವತವಾಗಿ, ಊನವಾಗುಂತಾಗಿದೆ. ಅದಕ್ಕಾಗಿಯೇ ಆಗವರು ಮನೆಹಿಡಿದಿದ್ದರು. ಅವರ ಆರೈಕೆಗೆ ಅವರ ಅಕ್ಕ-ಮಾವ ಸಾಥ್ ನೀಡಿದ್ದರು. ಅದರ ಋಣ ತೀರಿಸುವ ಅವಕಾಶವನ್ನೇ ಬಳಸಿಕೊಂಡು, ಸೊಸೆಯನ್ನು ದೊಡ್ಡ ಡಾನ್ಸರ್ ಮಾಡಲು ಹೊರಟರು.’ ಮಹಾಲಕ್ಷ್ಮಿ‌ ನಂಗೆ ಸೊಸೆಯಲ್ಲ ಮಗಳು. ಆಕೆ ನಾಲ್ಕು ವರ್ಷದಲ್ಲಿದ್ದಾಗಲೇ ಡಾನ್ಸ್ ಕಲಿಯಲು ಶುರು ಮಾಡಿದಳು. ಅದು ಆಕೆಗೆ ದೇವರೇ ಕೊಟ್ಟ ವರ. ಟಿ ವಿಗಳಲ್ಲಿ‌ ನೋಡಿದ್ದನ್ನು ಪಟ್ಟಂತೆ ನಮ್ಮೆದುರು ಮಾಡಿ ತೋರಿಸುತ್ತಿದ್ದಳು. ನಮಗೆಲ್ಲ ಒಂದ್ರೀತಿ ಅಚ್ಚರಿ. ಇನ್ನೊಂದು ರೀತಿಯಲ್ಲಿ ಸಂತೋಷ.‌ ಅದನ್ನೇ ಗಂಬೀರವಾಗಿ ಪರಿಗಣಿಸಿ, ಆಕೆಗೆ ಒಂದಷ್ಟು ಜಿಮ್ನಾಸ್ಟಿಕ್ ತರಬೇತಿ ನೀಡತೊಡಗಿದೆ. ಜತೆಗೆ ಡಾನ್ಸ್ ತರಬೇತಿಯೂ ಅಗತ್ಯ ಎನಿಸಿತು. ಅದಕ್ಕೂ ಅಲೆದಾಡಿದೆ. ನುರಿತ ಡಾನ್ಸ್ ಮಾಸ್ಟರ್ ಹತ್ತಿರದಲ್ಲಿ ಸಿಗಲಿಲ್ಲ. ‌ಅಲೆದಾಡಿದೆ. ಸೊರಬದಲ್ಲಿ ಒಂದಷ್ಟು ದಿನ ಡಾನ್ಸ್ ಕಲಿತಳು. ಆಕೆಯ ಡಾನ್ಸ್ ಸಾಮಾರ್ಥ್ಯ ಕ್ಕೆ ನುರಿತ ನೃತ್ಯ ನಿರ್ದೇಶಕರೇ ಸೂಕ್ತ ಎನಿಸಿತು. ಕೊನೆಗೆ ಪರಿಚಿತರೊಬ್ಬರ ಬಳಿ ಕರೆದುಕೊಂಡು ಹೋದೆ. ಅವರು ಕೊಟ್ಟ ಸಲಹೆಯೇ ಟಿವಿ ಶೋ ಗಳಿಗೆ ಎಂಟ್ರಿ’ ಎನ್ನುವ ಮೂಲಕ ಹಳ್ಳಿ ಡಾನ್ಸ್ ಪ್ರತಿಭೆ ಮಹಾಲಕ್ಣ್ಮಿ ಡಾನ್ಸರ್ ಆಗಿ ರಿಯಾಲಿಟಿ ಶೋಗೆ ಎಂಟ್ರಿಯಾದ ಹಿಂದಿನ ಕತೆ ಬಿಚ್ವಿಡುತ್ತಾರೆ ಕಬಿ ಮುತ್ತಿಗಿ.

ವೈಲ್ಡ್ ಕಾರ್ಡ್ ಎಂಟ್ರಿ ಎಂಬ ಅದೃಷ್ಟ ದ ಬಾಗಿಲು…

ನಿಜಕ್ಕೂ ಇದು ಅದೃಷ್ಟದಾಟ.‌ ಕಿರುತೆರೆಯ ರಿಯಾಲಿಟಿ ಶೋ ಗಳಿಗೆ ಹೋಗುವುದು ಅಂದುಕೊಂಡಷ್ಟು ಸುಲಭ ಅಲ್ಲ.ಅಲ್ಲಿ ಏನೇನೋ ಕತೆಗಳಿವೆ. ಅದರಲ್ಲೂ ಹಳ್ಳಿ ಪ್ರತಿಭೆಗಳಿಗೆ ಕೈ ಗೆಟುಕದ ಜಗತ್ತು. ಅಂತಹದರಲ್ಲಿ ಮಹಾಲಕ್ಷ್ಮಿ ಗೆ ರಿಯಾಲಿಟಿ ಶೋ ಬಾಗಿಲು ತೆರೆದಿದ್ದು ವೈಲ್ಡ್ ಎಂಟ್ರಿ‌ ಮೂಲಕ.’ ಪರಿಚಿತ ಡಾನ್ಸ್ ಮಾಸ್ಟರ್‌ಸಲಹೆಯಂತೆ ಟಿವಿ ಶೋಗಳ ಬಗ್ಗೆ ಗಮನ‌ಹ ರಿಯಿತು. ಫಸ್ಟ್ ಟೈಮ್ ‘ಕಲರ್ಸ್ ಕನ್ನಡ’ ದ ಮಾಸ್ಟರ್ ಡಾನ್ಸ್ ಗೆ ಆಡಿಷನ್ ನಡೆಯಿತು. ಆದರೆ, ಅಲ್ಲಿ ಮಹಾಲಕ್ಷ್ಮಿ ರಿಜೆಕ್ಟ್ ಆದಳು‌. ನಿರಾಸೆಯಿಂದ ವಾಪಾಸ್ ಬರುವಾಗ ಒಬ್ರು ಡಾನ್ಸ್ ಮಾಸ್ಟರ್ ಕಾಂಟ್ಯಾಕ್ಟ್ ನಂಬರ್ ತೆಗೆದುಕೊಂಡಿದ್ದರು‌ . ಅದಾಗಿ ಒಂದಷ್ಟು ದಿನ ಕಳೆಯುವ ಹೊತ್ತಿಗೆ ಫೋನ್ ಬಂತು. ಮಾಸ್ಟರ್ ಡಾನ್ಸ್ ಗೆ ವೈಲ್ಡ್ ಕಾರ್ಡ್ ಎಂಟ್ರಿಯಿದೆ. ಬನ್ನಿ ಅಂದ್ರು. ಆಗ ನನ್ನೆಲ್ಲ ನೋವುಗಳು ಮರೆತು, ಸಂಭ್ರಮದಲ್ಲಿ ಬೆಂಗಳೂರು‌ಬಸ್ ಹತ್ತಿದೆವು ‘ ಎನ್ನುವಾಗ ಕಬಿ ಮುತ್ತಿಗಿ ಭಾವುಕರಾಗುತ್ತಾರೆ. ಅವರ ಕಣ್ಣಾಲೆಗಳು ತುಂಬಿಕೊಳ್ಳುತ್ತವೆ.

ಆಟ ಜೂನಿಯರ್ಸ್ ನಲ್ಲಿ‌ಗೆದ್ದ ಕ್ಷಣ

ವೇದಿಕೆ ಏರಿಸಿದ್ದು ಕಲರ್ಸ್ ಕನ್ನಡ, ಬಹುಮಾನ ನೀಡಿದ್ದು ಝೀ ತೆಲುಗು..
ಮಹಾಲಕ್ಷ್ಮಿ ವೈಲ್ಡ್ ಕಾರ್ಡ್ ಮೂಲಕ ಮಾಸ್ಟರ್ ಡಾನ್ಸರ್ ಎಂಟ್ರಿಯಾದಳು. ಅಲ್ಲಿ ನುರಿತ ನೃತ್ಯ ನಿರ್ದೇಶಕರ ಮೂಲಕ‌ ಜನಪ್ರಿಯ ಗೀತೆಗಳಿಗೆ ತೀರ್ಪುಗಾರರೇ ಅಚ್ವರಿ ಪಡುವಂತೆ ಕುಣಿದಳು. ಹೆಸರಾಂತ ನೃತ್ಯಗಾರ್ತಿ ಮಯೂರಿ ಸೇರಿದಂತೆ ನಟರಾದ ಯೋಗಿ, ವಿಜಯ್ ರಾಘವೇಂದ್ರ‌ ಅವರ ಮೆಚ್ಚುಗೆ ಪಡೆದುಕೊಂಡಳು. ಆದರೆ ಅಲ್ಲಿ ಅವಳು ರನ್ನರ್ ಆಗಿ ತೃಪ್ತಿಪಟ್ಟು ಕೊಳ್ಳಬೇ ಕಾಯಿತು.‌ಮುಂದೆ ತೆಲುಗು ರಿಯಾಲಿಟಿ ಶೋ‌ನಲ್ಲಿ ಕಾಣಿಸಿಕೊಂಡಳು. ಝೀ ತೆಲುಗು ಚಾನೆಲ್ ‘ ಆಟ ಜೂನಿಯರ್ಸ್’ ನಲ್ಲಿ ಮಹಾಲಕ್ಷಿಯದ್ದೇ ಅಬ್ಬರ.‌ ಅದೇನು ಡಾನ್ಸ್ ಅಂತೀರಾ, ಭಾರತೀಯ ಚಿತ್ರರಂಗದ ಹೆಸರಾಂತ ಕೋರಿಯೋಗ್ರಾಫರ್ ಮುಗೂರು ಸುಂದರ್ ಅವರೇ ಶಹಬ್ಬಾಸ್ ಅಂದ್ರು. ಮೆಗಾಸ್ಟಾರ್ ಚಿರಂಜೀವಿ, ಮಿಲ್ಕಿ ಬ್ಯೂಟಿ ತಮ್ಮನ್ನಾ, ಪ್ರಿಯಾಮಣಿ, ರಶ್ಮಿಕಾ‌ಮಂದಣ್ಣ‌ ಮುಂತಾದವರೆಲ್ಲ ಮಹಾಲಕ್ಣ್ಮಿ ನೃತ್ಯಕ್ಕೆ ಅಚ್ವರಿಪಟ್ಟರು. ಅಪಾರ ಮೆಚ್ಚುಗೆ ಫಲ ನೀಡಿತು. ಆ ಶೋ ವಿನ್ನರ್ ಆದಳು ಮಹಾಲಕ್ಣ್ಮಿ. ಮುಂದೆ ಅಲ್ಲಿಯೇ ಕಪಲ್ ಸೆಲಿಬ್ರಟಿ‌ಶೋ ನಲ್ಲೂ ನರ್ತಿಸಿದಳು ಈ ನಾಟ್ಯ ಮಯೂರಿ.

ಪ್ರೀ ಸ್ಟೈಲ್ ಡಾನ್ಸರ್..

ಶೂಟಿಂಗ್ ಸೆಟ್ ನಲ್ಲಿ ಮಹಾಲಕ್ಣ್ಮಿ

ಮಹಾಲಕ್ಣ್ಮಿ ಪ್ರೀ ಸ್ಟೈಲ್ ಡಾನ್ಸರ್. ಇಂತಹದೇ ಕಲಾ ಪ್ರಕಾರ ಅಂತಿಲ್ಲ. ಯಾವುದೇ ನೃತ್ಯ ಹೇಳಿಕೊಟ್ಟರೂ, ಅದನ್ನು ಕ್ಷಣ ಮಾತ್ರದಲ್ಲಿ ಕಲಿತು, ನೋಡುಗರು ಅಚ್ಚರಿ ಪಡುವಂತೆ ಮಾಡಿ‌ ತೋರಿಸುವ ಸಾಮಾರ್ಥ್ಯ ಮತ್ತು ಬುದ್ದಿವಂತಿಕೆ‌ ಆಕೆಯಲ್ಲಿದೆ. ಅದೇ ಅವಳ‌ ಕರಿಯರ್ ಗೆ ವರವಾಗಿದೆ. ಶೋ ವೇದಿಕೆ ಮೇಲೆ ಬಂದರೆ ಮಹಾಲಕ್ಣ್ಮಿ‌ಅವರದ್ದು ಅಕ್ಷರಶಃ ಡಾನ್ಸ್ ವಾರ್. ಚೈನಿ ಜಿಮ್ನಾಸ್ಟಿಕ್ ಪಟುಗಳೇ ಬೆಚ್ಚಿ ಬೀಳುವ ಹಾಗೆ ಮೈ ಯನ್ನು ರಬ್ಬರ್ ನಂತೆ ಬಾಗಿಸುತ್ತಾಳೆ‌. ಚೆಂಡಿನಂತೆ ಪುಟಿದೇಳುತ್ತಾಳೆ. ಟ್ರೆಡಿಷನಲ್ ಗೀತೆಗಳಾಗಲಿ, ಮಾರ್ಡನ್ ಗೀತೆಗಳಾಗಲಿ ಎಲ್ಲದಕ್ಕೂ ಸೈ ಈ‌ ಮಹಾಲಕ್ಣ್ಮಿ.

ಇವರೆಲ್ಲ ಮಹಾಲಕ್ಷ್ಮಿ‌ಗುರುಗಳು
ಸ್ಥಳೀಯವಾಗಿ ಮಹಾಲಕ್ಷ್ಮಿ‌‌ ಹಲವು ಡಾನ್ಸ್‌ಮಾಸ್ಟರ್ ಬಳಿ ತರಬೇತಿ ಪಡೆದಳು.‌ಶಿರಾಳಕೊಪ್ಪದ ಅಂಜಿ, ಆನವಟ್ಟಿಯ ಅಮಿತ್, ಸೊರಬದ ನೀಯಾಜ್ ಆ್ಯಂಡ್ ಸ್ಟಿವನ್ ಹಾಗೂ ಹಿರೇಕೆರೂರ ನ ಅರುಣ್ ಅವರ ಬೆಂಬಲ‌ ಮಹಾಲಕ್ಷ್ಮಿ ಯ ಸಾಧನೆಗೆ‌ ಸಾಥ್ ನೀಡಿತು.‌ಅಲ್ಲಿ‌ಂದಲೇ ಆಕೆ‌‌‌ರಿಯಾಲಿಟಿ ಶೋ ವೇದಿಕೆ ಏರುವಂತಾಯಿತು. ಮುಂದೆ ಕಲರ್ಸ್ ಸೂಪರ್ ನಲ್ಲಿ ಮಾಸ್ಟರ್ ಡ್ಯಾನ್ಸರ್ ಪವನ್, ಝೀ ತೆಲುಗು ಆಟ‌ಜೂನಿಯರ್ಸ್ ನಲ್ಲಿ ಯಶವಂತ್ ಮಾಸ್ಟರ್,
ಅದೇ ಚಾನೆಲ್ ನ ‘ ಡ್ಯಾನ್ಸ್ ಜೋಡಿ ಡ್ಯಾನ್ಸ್ ‘ ಸೆಲೆಬ್ರೆಟಿ ರಿಯಾಲಿಟಿ ಶೋ ನಲ್ಲಿ ಸುದರ್ಶನ್ ಮಾಸ್ಟರ್ ಕೊಟ್ಟ ಟ್ರೈನಿಂಗ್ ಅತ್ಯಾದ್ಬುತ ಎನ್ನುವ ಮಾತು ಕಬಿ‌ಮುತ್ತಿಗಿ ಅವರದು.

ಮಹಾಲಕ್ಣ್ಮಿ ಗೆ ಬಂದಿವೆ ಸಿನಿಮಾ‌ ಅವಕಾಶ..

ಮಹಾಲಕ್ಷ್ಮಿ ಈಗ ಸಿನಿಮಾ‌ನಟಿ. ಹೌದು, ಪುಟಾಣಿಗೆ ಈಗ ಸಿನಿಮಾ‌ ಬೇಡಿಕೆ ಬಂದಿವೆ. ಈಗಾಗಲೇ ವಿಶಾಲ್ ರಾಜ್ ನಿರ್ದೇಶನದ ‘ದಂತ ಪುರಾಣ ‘ಚಿತ್ರದಲ್ಲಿ ಮಹಾಲಕ್ಣ್ಮಿ ಅಭಿನಯಸಿದ್ದಾಳೆ. ಮತ್ತೆರೆಡು ಸಿನಿಮಾಗಳಿಗೂ ಆಫರ್ ಬಂದಿವೆ. ಹಾಗೆಯೇ ತೆಲುಗಿನಲ್ಲೂ‌ಒಂದು ಚಿತ್ರದಲ್ಲಿ ಅಭಿನಯಿಸಲು ಕೇಳಿದ್ದಾರಂತೆ.ಆದರೆ ಇವೆಲ್ಲ ಲಾಕ್ ಡೌನ್ ಆರಂಭಕ್ಕೂ ಮುಂಚೆ ಆದ ಮಾತುಕತೆ. ಈಗ ಇವೆಲ್ಲ ಮತ್ತೆ ಹೇಗೆ ಅನ್ನೋದು ಗೊತ್ತಿಲ್ಲ ಎನ್ನುವ ಮಾತು‌ ಆಕೆಯ‌ಮಾವ ಕಬಿ‌ಮುತ್ತಿಗೆ ಅವರದು.

ನಿರೀಕ್ಷಿತ ಪ್ರೋತ್ಸಾಹ ಸಿಕ್ಕಿಲ್ಲ ಎಂಬ ಕೊರಗು..

ನೋ‌ ಡೌಟ್, ಪುಟಾಣಿ ಮಹಾಲಕ್ಣ್ಮಿ ಒಬ್ಬ ಅಸಾಧಾರಣ ಪ್ರತಿಭೆ. ಯಾವುದೇ ಸೂಕ್ತ ತರಬೇತಿ ಇಲ್ಲದೆ, ಆಕೆ ರಿಯಾಲಿಟಿ ಶೋಗಳಲ್ಲಿ ಕುಣಿಯುವುದನ್ನು ನೋಡಿದರೆ ಎಂತವರಿಗೂ ಮೈ ಝುಮ್ ಎನ್ನುತ್ತೆ. ಅಷ್ಟು ನೃತ್ಯ ಪ್ರವೀಣೆ. ಇದೆಲ್ಲ ಯಾರೋ ಕಲಿಸಿದ್ದುಎನ್ನುವುದಕ್ಕಿಂತ ಅದೊಂದು ಗಾಡ್ ಗಿಫ್ಟ್ ಎಂದೇ ನಂಬಿದ್ದಾರೆ ಆಕೆಯ ಪೋಷಕರು. ಆದರೂ ಆಕೆಗೆ ಒಳ್ಳೆಯ ತರಬೇತುದಾರರು ಬೇಕಿದೆ. ಹಾಗೆಯೇ ಅವಳಲ್ಲಿರುವ ಆಸಕ್ತಿಗೆ ದೊಡ್ಡ ಪ್ರೋತ್ಸಾಹ ವೂ ಬೇಕಿದೆ. ಅದೆಲ್ಲ ಸಿಕ್ಕರೆ ರಾಜ್ಯ ಮಾತ್ರವಲ್ಲ ಇಡೀ ದೇಶವೇ ಮೆಚ್ಚುವ ಡಾನ್ಸರ್ ಆಗುತ್ತಾಳೆಂಬ ಆಸೆ ಆಕೆಯ ಮಾವ ಕಬಿ ಮುತ್ತಿಗೆ ಅವರದು. ಆದರೆ ಅದೇ ಇಲ್ಲಿ ಆಕೆಗೆ ಸರ್ಕಾರದಿಂದಾಗಲಿ, ಮಾಧ್ಯಮದಿಂದಾಗಲಿ ಒಳ್ಳೆಯ ಪ್ರೋತ್ಸಾಹ ಸಿಗುತ್ತಿಲ್ಲ ಎನ್ನುವುದು ಅವರ ಬೇಸರ.’ ಹಳ್ಳಿ ಪ್ರತಿಭೆಗೆ ಪ್ರೋತ್ಸಾಹ ಇಲ್ಲ ಸರ್.‌ಅದೇ ಮಹಾಲಕ್ಣ್ಮಿ ಪಟ್ಟಣದ ಯಾವುದಾದರೂ ಅನುಕೂಲಸ್ಥ ಕುಟುಂಬದ ಲ್ಲಿ ಹುಟ್ಟಿದ್ದರೆ ದೊಡ್ಡ ಅವಕಾಶಗಳೇ ಸಿಗುತ್ತಿದ್ದವೋ ಏನೋ. ಮಾಧ್ಯಮದವರಂತೂ ನಮ್ಮ‌ಕಡೆ ತಿರುಗಿಯೂ ನೋಡಿಲ್ಲ. ಎಷ್ಟೇ ಆದ್ರೂ ಹಳ್ಳಿ ಪ್ರತಿಭೆಯಲ್ಲವೇ, ಅವರಿಗೆ ಇದು ಬೇಡ’ ಎನ್ನುತ್ತಾ ತಮ್ಮೊಳಗಿನ ಅಗಾಧ ನೋವನ್ನು ಹೊರ ಚೆಲ್ಲುತ್ತಾರೆ ಕಬಿ‌ಮುತಿಗೆ.‌ಇನ್ನಾದರೂ ಈ ಪ್ರೋತ್ಸಾಹ ಸಿಗಬಹುದೇ ಎನ್ನುವುದು ಅವರ ನಿರೀಕ್ಷೆ.

Related Posts

error: Content is protected !!