ಬೆಳೆದ ಬೆಳೆ ಬರಲಿಲ್ಲ ಅಂತನೋ, ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗಲಿಲ್ಲ ಅಂತಲೋ ಇಲ್ಲಿ ರೈತರ ಅತ್ಮಹತ್ಯೆ ನಡೆದಿವೆ. ಕಾರ್ಮಿಕರು ಕಾರ್ಖಾನೆ ಮುಚ್ಚಿ ತಮಗೆ ಕೆಲಸ ಇಲ್ಲದಂತಾಗಿದೆ ಅಂತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಡೆದ ಸಾಲ ತೀರಿಸಲಾಗದೆ ಅದೆಷ್ಟೋ ಬಡ ಕುಟುಂಬಗಳು ಕೂಡ ಅತ್ಮಹತ್ಯೆ ಮಾಡಿಕೊಂಡಿವೆ.ಹಾಗೆಯೇ ಪರೀಕ್ಷೆಯಲ್ಲಿ ಫೇಲಾದೆ ಅಂತಲೋ, ಒಳ್ಳೆಯ ಅಂಕಬಂದಿಲ್ಲೋ ಅಂತಲೋ ಬೆಳೆಯಬೇಕಿದ್ದ ವಿದ್ಯಾರ್ಥಿಗಳು ಕೂಡ ನೇಣಿಗೆ ಶರಣಾಗಿದ್ದಾರೆ. ವರದಕ್ಷಿಣೆ ಕಿರುಕುಳ ತಾಳಲಾರದೆ ಅದೆಷ್ಟೋ ವಿವಾಹಿತ ಹೆಣ್ಣು ಮಕ್ಕಳು ತವರಿಗೆ ಬಾರಲಾರದೆ ಸ್ಮಶಾನದ ಪಾಲಾಗಿದ್ದಾರೆ. ಆದರೂ ಸಮಾಜ ಯಾವುದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಬದಲಿಗೆ ಅವೆಲ್ಲ ಪ್ರಕರಣಗಳಿಗೆ ಇನ್ನಾವುದೋ ಕಾರಣ ಸೇರಿಸಿ, ಅರ್ಥಕ್ಕೆ ಅಪಾರ್ಥ ಬರುವಂತೆಯೇ ಮಾಡಿದೆ. ಹಾಗಾಗಿ ಆತ್ಮಹತ್ಯೆಗಳ ಹಿಂದಿನ ನಿಜ ಕಾರಣಗಳು ಇಲ್ಲಿಮಣ್ಣು ಪಾಲಾಗಿ, ಯಾರಿಗೂ ನ್ಯಾಯ ಸಿಕ್ಕಿಲ್ಲ ಎನ್ನುವ ಕಟು ಸತ್ಯದ ನಡುವೆಯೇ ಕನ್ನಡದ ನಟಿಯೊಬ್ಬಳು ನಟಿಸಲು ಅವಕಾಶ ಸಿಗದೆ ಅತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ವರದಿ ಆಗಿದೆ.
ಆಕೆಯ ಹೆಸರು ಸೌಜನ್ಯ ಅಲಿಯಾಸ್ ಸವಿ ಮಾದಪ್ಪ. ಕೊಡಗು ಮೂಲದ ನಟಿ. ಒಂದೆರೆಡು ಸಿನಿಮಾಗಳಲ್ಲೂ ಅಭಿನಯಿಸಿದ್ದಳಂತೆ. ಈಗೀಗ ನಟಿಸಲು ಅವಕಾಶ ಸಿಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಲಾಗಿದೆ. ಇದು ಬಿಟ್ಟರೆ ಇನ್ನೇನೋ ಕಾರಣವೂ ಇರಬಹುದು. ಅಥವಾ ಅದೇನಿಜವಾದ ಕಾರಣವೇ ಇರಬಹುದು. ಇರಲಿ, ಆಕೆ ಅವಕಾಶ ಸಿಗದ ಕಾರಣಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಂಡಿ ದ್ದಾಳೆನ್ನುವುದೇ ನಿಜವಾಗಿದ್ದರೂ, ಚಿತ್ರರಂಗ ಅದನ್ನು ಗಂಭೀರವಾಗಿ ಪರಿಗಣಿಸುತ್ತೆ ಅಂತ ನಮಗೇನು ಅನಿಸೋದಿಲ್ಲ. ಯಾಕಂದ್ರೆ ಈ ಚಿತ್ರರಂಗವೂ ಸೇರಿ ಈ ಕಟ್ಟ ಸಮಾಜದ ಆಲೋಚನೆಗಳೇ ಬೇರೆ. ವಿವಾಹಿತವೋ ಅಥವಾ ಅವಿವಾಹಿತವೋ ವಯಸ್ಸಿನ ಒಂದು ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು ಅಂದ್ರೆ ಸಮಾಜದಲ್ಲಿ ಮೊದಲು ಕೇಳಿ ಬರುವ ಮಾತೇ ಆಕೆಯ ಇತರೆ ರಿಲೇಷನ್ ಶಿಫ್ ಗಳ ಬಗ್ಗೆ. ಇದೇ ಮಾತು ಚಿತ್ರರಂಗಕ್ಕೂಅನ್ವಯವೇ ಹೌದು.
ಈ ವಾಸ್ತವ ಸಿನಿಮಾ ರಂಗಕ್ಕೆ ಹೊಸದಾಗಿ ಬರುವ ಪ್ರತಿಭೆಗಳಿಗೆ ಗೊತ್ತಿರಲಿ. ಹೋದವರು ಹೋದರಷ್ಟೇ ಅಂತಲೇ ನೋಡುತ್ತೆ ಈ ವ್ಯವಸ್ಥೆ. ಇನ್ನು ಹೊಸಪ್ರತಿಭೆಗಳನ್ನು ಚಿತ್ರೋದ್ಯಮ ನೋಡುವ ರೀತಿಯೇ ಇಲ್ಲಿ ವಿಚಿತ್ರ. ಹೊಸಪ್ರತಿಭೆಗಳು ಇಲ್ಲಿ ಒಂದು ಅವಕಾಶ ಪಡೆಯಬೇಕಾದರೆ ಸಿಕ್ಕಾಪಟ್ಟೆ ಸರ್ಕಸ್ ಮಾಡ್ಬೇಕು. ನಿರ್ಮಾಪಕರು, ನಿರ್ದೇಶಕರ ಮನೆ ಬಾಗಿಲಿಗೆ ತಿರುಗಬೇಕು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಅವರ ಆಸೆ- ಆಕಾಂಕ್ಷೆಗಳನ್ನು ಈಡೇರಿಸಬೇಕು. ಅಂತಹದರಲ್ಲಿ ಒಂದು ಅವಕಾಶ ಸಿಕ್ಕರೂ, ಅದರಲ್ಲಿಯೇ ಇಲ್ಲಿ ನೆಲೆ ಕಂಡುಕೊಳ್ಳುವುದು ಅಷ್ಟೇನು ಸುಲಭ ಇಲ್ಲ. ಅದೊಂಥರ ಅದೃಷ್ಟದಾಟ. ಅಂತಹದರಲ್ಲಿ ಅವಕಾಶಕ್ಕಾಗಿ ಅದೆಷ್ಟು ಹೊಸ ಪ್ರತಿಭೆಗಳು, ಇಲ್ಲಿಗೆ ಬಂದು ವಾಪಾಸ್ ಹೋಗಿವೆಯೋ ಗೊತ್ತಿಲ್ಲ. ಆದರೆ ಅವರೆಲ್ಲ ಮನನೊಂದು ಆತ್ಮಹತ್ಯೆ ಮಾಡಿಕೊಂಡಿಲ್ಲ.ಈ ಹುಡುಗಿ ಮಾತ್ರ, ಬದುಕೋದಿಕ್ಕೆಆಗುತ್ತಿಲ್ಲ ಅಂತ ಮತ್ತೆ ಬಾರದ ಲೋಕಕ್ಕೆಪಯಣ ಬೆಳೆಸಿಬಿಟ್ಟಿದ್ದಾಳೆ. ಪಾಪಾ, ಆಕೆಯ ಅಪ್ಪ- ಅಮ್ಮ ಕುಟುಂಬ ಅದೆಷ್ಟು ನೊಂದಿದೆಯೋ, ಇಂತಹ ಸ್ಥಿತಿ ಇನ್ನಾರಿಗೂ ಇಲ್ಲಿ ಬರುವುದು ಬೇಡ . ಯಾಕಂದ್ರೆ, ಅವಕಾಶ ಸಿಕ್ಕಿಲ್ಲ ಮನನೊಂದರೆ ಅದಕ್ಕೆ ಆತ್ಮಹತ್ಯೆಯೇ ಪರಿಹಾರ ಅಲ್ಲ. ಹೊಸ ದಾರಿ, ಅವಕಾಶಗಳ ಕಡೆಗೆ ಆಲೋಚಿಸಬೇಕು, ಸಿಕ್ಕರೆ ಅಲ್ಲಿಗೆ ಜಂಪ್ ಆಗಬೇಕು.
ನಿಜ, ಚಿತ್ರೋದ್ಯಮ ಇವತ್ತು ಅನೇಕ ಬಿಕ್ಕಟ್ಟು ಗಳ ನಡುವಿದೆ. ಅನೇಕ ಲೋಪದೋಷಗಳನ್ನು ತುಂಬಿಕೊಂಡಿದೆ. ಹೊಸಬರು ಅವಕಾಶಕ್ಕೆ ಪರದಾಡುವ ಪರಿಸ್ಥಿತಿಯೂ ಇಲ್ಲಿದೆ. ಬಿದ್ದವರಿಗೆ ಇಲ್ಲಿ ಅವಮಾನ, ಅಪಮಾನ, ನಿಂದನೆ ಇದ್ದೆ ಇದೆ. ಅವೆಲ್ಲವನ್ನು ಸಹಿಸೋದಿಕ್ಕೆ ಆಗುತ್ತಿಲ್ಲ ಅಂದ್ರೆ ಹೊಸ ಪ್ರತಿಭೆಗಳಿಗೆ ಇನ್ನೇನೋ ಹೊಸ ಕೆಲಸ ಹುಡುಕುವತ್ತ ಬೇರೆಯವರು ಪ್ರೇರಣೆ ಆಗಲಿ. ಅದು ಬಿಟ್ಟು ಆತ್ಮಹತ್ಯೆ ಯೇ ಪರಿಹಾರ ಅಂತಂದುಕೊಂಡರೆ, ರೈತರ ಆತ್ಮಹತ್ಯೆಗಳ ಹಾಗೆ ಇಲ್ಲೂ ಸರಣಿ ಆತ್ಮಹತ್ಯೆ ಗಳು ನಡೆದು ಹೋದವಾ? ಸಮಾಜ ಕೂಡ ತನ್ನ ಮನಸ್ಥಿತಿ ಬದಲಾಯಿಸಿಕೊಳ್ಳಲಿ, ನಡೆಯಬಾರದ ಆತ್ಮಹತ್ಯೆಗಳು ನಡೆದು ಹೋದಾಗ, ಅವುಗಳಿಗೆ ಇನ್ನಾವುದೋ ಕಾರಣದ ಗಾಳಿ ಸುದ್ದಿ ಹರಿಬಿಟ್ಟು, ಅವರ ಕುಟುಂಬದವರನ್ನು ನೋಯಿಸುವುದು ಕೈ ಬಿಡಬೇಕು. ಹಾಗೆಯೇ ಯಾವಾವುದೋ ಕನಸು ಹೊತ್ತು ಸಿನಿಮಾರಂಗಕ್ಕೆ ಬರುವ ಯುವ ಮನಸ್ಸು ಗಳು ಬಂದು ಹತಾಸೆ ಸಿಲುಕದಂತೆನೋಡಿಕೊಳ್ಳಬೇಕಿದೆ. ಹಾಗೆಯೇ ಎಲ್ಲೋ ಒಂದು ಅವಕಾಶ ಸಿಕ್ಕಿತು ಅಂತ ಬಣ್ಣದ ಜಗತ್ತಿಗೆ ಬರುವ ಯುವ ಜನರು ಕೂಡ, ಭ್ರಮೆಯಿಂದ ಹೊರ ಬಂದು ಇಲ್ಲಿ ವಾಸ್ತವ ಲೋಕ ಏನೆಂದು ಅರ್ಥ ಮಾಡಿಕೊಳ್ಳಲಿ.
– ಎಂಟರ್ ಟೈನ್ ಮೆಂಟ್ ಬ್ಯೂರೋ ಸಿನಿಲಹರಿ