“ವಾರ್ತೆಗಳು ಓದುತ್ತಿರುವವರು ಗೋಪಾಲ ಉಲ್ಲಾಳ. ಕಂದಕದಲ್ಲಿ ಬೇಸಾಯ ಮಾಡಲು ಸುಮಾರು ೬೫ ವರ್ಷದ ವ್ಯಕ್ತಿ ಮೃತಪಟ್ಟಿರೋದು ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಹೊಲ, ಗದ್ದೆ, ತೋಟಗಳಲ್ಲಿ ಬೇಸಾಯ ಮಾಡುವ ಪದ್ಧತಿ ಬಿಟ್ಟು ನೇರವಾಗಿ ಕಂದಕಕ್ಕೆ ಬಿದ್ದಿರುವ ಬಗ್ಗೆ ಕೃಷಿ ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ. ಈಗ ಜಾಹಿರಾತು. ನಂತರ ವಾರ್ತೆಗಳು ಮುಂದುವರೆಯುವುದು…”
ಸದ್ಯದ ಮಟ್ಟಿಗೆ ಮೇಲಿನ ಈ ಡೈಲಾಗ್ಗಳು ಸಾಕಷ್ಟು ಸುದ್ದಿ ಮಾಡುತ್ತಿವೆ. ಹೌದು, ಈ ಡೈಲಾಗ್ಗಳು ಜೋರು ಸುದ್ದಿಯಾಗಿರೋದಂತೂ ನಿಜ. ಅದು “ಪೆಟ್ರೋಮ್ಯಾಕ್ಸ್” ಸಿನಿಮಾದ್ದು.
“ಪೆಟ್ರೋಮ್ಯಾಕ್ಸ್” ಅಂದಾಕ್ಷಣ, ಬೇರೆ ಏನೇನೋ ನೆನಪಾಗುತ್ತೆ. ಆದರೆ, ಇದು ಅದಲ್ಲ. ಬದುಕಿಗೊಂದು ಭರವಸೆ ಮೂಡಿಸಿದ್ದೇ ಈ ಪೆಟ್ರೋಮ್ಯಾಕ್ಸ್ ಅನ್ನೋದನ್ನು ಇಡೀ ತಂಡ ಹೇಳುತ್ತಿದೆ. ಅಂದಹಾಗೆ, ಇದು ವಿಜಯ ಪ್ರಸಾದ್ ನಿರ್ದೇಶನದ ಚಿತ್ರ. ಇಲ್ಲಿ ನೀನಾಸಂ ಸತೀಶ್ ಇದ್ದಾರೆ. ಅವರಿಗೆ ಹರಿಪ್ರಿಯಾ ಜೋಡಿ. ಉಳಿದಂತೆ ಸಾಕಷ್ಟು ಕಲಾವಿದರು ಇಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಪ್ರಸಾದ್ ಅಂದಾಕ್ಷಣ, ನೆನಪಾಗೋದೇ ಮತ್ತದೇ “ನೀರ್ದೋಸೆ”. ಅಲ್ಲಿ ಬರೀ ಡೈಲಾಗ್ನಿಂದಲೇ ಸಾಕಷ್ಟು ಮೋಡಿ ಮಾಡಿದ್ದ ವಿಜಯ್ಪ್ರಸಾದ್, ಈಗ “ಪೆಟ್ರೋಮ್ಯಾಕ್ಸ್” ಹಿಂದೆ ನಿಂತಿದ್ದಾರೆ. ಈ ಚಿತ್ರದ ಟ್ರೇಲರ್ ಸೋಮವಾರ ಬಿಡುಗಡೆಯಾಗಿದೆ. ಟ್ರೇಲರ್ ಸಾಕಷ್ಟು ವೀಕ್ಷಣೆ ಪಡೆದಿರುವುದಷ್ಟೇ ಅಲ್ಲ, ಅದು ಎಲ್ಲೆಡೆ ಸುದ್ದಿಗೂ ಗ್ರಾಸವಾಗಿದೆ. ಟ್ರೇಲರ್ನಲ್ಲಿರುವ ಡೈಲಾಗ್ಗಳೇ ಸಿನಿಮಾದ ಜೀವಾಳ ಅನ್ನುವಷ್ಟರ ಮಟ್ಟಿಗೆ ಟ್ರೇಲರ್ ಮೂಡಿಬಂದಿದೆ. ಟ್ರೇಲರ್ ನೋಡಿದವರಿಗೆ ನಿಜಕ್ಕೂ ಸಿನಿಮಾ ನೋಡಲೇಬೇಕೆನಿಸದೇ ಇರದು. ಅಷ್ಟರಮಟ್ಟಿಗೆ ನಿರ್ದೇಶಕ ವಿಜಯ್ಪ್ರಸಾದ್ ಅವರು ಅದನ್ನು ಕಟ್ಟಿಕೊಟ್ಟಿದ್ದಾರೆ.
ಟ್ರೇಲರ್ ನೋಡಿದವರಿಗೆ ಬರೀ ಪೋಲಿ ಮಾತುಗಳು ಕೇಳಿಸುತ್ತವೆ. ಹಾಗಂತ. ಇಲ್ಲಿ ಬರೀ ಪೋಲಿತನವಿಲ್ಲ. ಸಿನಿಮಾದಲ್ಲಿ ಪೆಟ್ರೋಮ್ಯಾಕ್ಸ್ನ ಭರವಸೆಯ ಬೆಳಕೂ ಕೂಡ ಇರಲಿದೆ ಎಂಬುದನ್ನು ಸ್ವತಃ ನಿರ್ದೇಶಕ ವಿಜಯ್ ಪ್ರಸಾದ್ ಹೇಳಿದ್ದಾರೆ. ಅವರು ಪೋಲಿ ಮಾತುಗಳ ಜೊತೆ ಜೊತೆಯಲ್ಲಿ “ಈ ಪ್ರೆಟ್ರೋಮ್ಯಾಕ್ಸ್ ಬದುಕಿನ ಅವಿಭಾಜ್ಯ ಅಂಗ” ಅಂತಾನೂ ಹೇಳಿದ್ದಾರೆ. ಅದು ಹೇಗೆ ಅನ್ನೋದನ್ನು ಸಿನಿಮಾದಲ್ಲೇ ನೋಡಬೇಕು. ಇನ್ನು, ಟ್ರೇಲರ್ ಬಗ್ಗೆ ಹೇಳುವುದಾದರೆ, ಒಂದು ಮಜ ಎನಿಸುವ ಟ್ರೇಲರ್ ಕಟ್ಟಿಕೊಟ್ಟಿದ್ದಾರೆ. ಅದರಲ್ಲೂ ಸಂಭಾಷಣೆಯೇ ಟ್ರೇಲರ್ನ ಹೈಲೈಟ್ ಅನ್ನಬಹುದು. ಟ್ರೇಲರ್ನ ಒಂದು ಡೈಲಾಗ್ ಹೀಗಿದೆ.
” ನಮ್ಮೂರಲ್ಲಿ ಒಬ್ಬ ಹುಡುಗಿ ಇದಾಳೆ. ಬಿಎಸ್ಸಿ ಓದಿದ್ದಾಳೆ. ನೀನು ಏನಾದ್ರೂ ಹೂ ಅಂದ್ರೆ ನಾಳೇನೆ ಕರೆಸಿಬಿಡ್ತೀನಿ” ಅಂತ ಒಂದು ಪಾತ್ರ ಹೀರೋ ಮುಂದೆ ಹೇಳುತ್ತೆ. ಆಗ ಹೀರೋ ಹೇಳುವ ಡೈಲಾಗ್ ಇದು. “ದಯವಿಟ್ಟು ಕ್ಷಮಿಸಿ, ನಂದಿಕಂಬ ನಿಲ್ಸೋಕೋಸ್ಕರ ಜಾತ್ರೆನೆ ಮಾಡಿಕೊಳ್ಳೋಕ್ಕಾಗಲ್ಲ…” ಅನ್ನೋ ಮಾತಿಗೆ ಜೋರು ನಗೆ ಬರದೇ ಇರದು. ಟ್ರೇಲರ್ನಲ್ಲಿ ಬರುವ ಪ್ರತಿ ಪಾತ್ರಗಳೂ ಕೂಡ ಪಂಚಿಂಗ್ ಡೈಲಾಗ್ ಹೇಳುವ ಮೂಲಕ ಟ್ರೇಲರ್ ಅನ್ನು ಇನ್ನಷ್ಟು ನೋಡಿಸಿಕೊಂಡು ಹೋಗುವಂತೆ ಮಾಡಿವೆ.
ಕೊನೇ ಮಾತು: ನಿರ್ದೇಶಕ ವಿಜಯ್ ಪ್ರಸಾದ್ ಹೇಳೋದಿಷ್ಟು. “ಪೆಟ್ರೋಮ್ಯಾಕ್ಸ್ ಅಂದ್ರೆ ತಾಯಾಣೆ ಅದಲ್ಲ..” ಹೀಗೆ ಅವರು ಹೇಳೋಕೆ ಕಾರಣವೇನು? ಅದನ್ನು ಸಹ ಸಿನಿಮಾದಲ್ಲೇ ನೋಡಬೇಕು. ಮುಖಪುಟದಲ್ಲಿ ಬಂದ ವಿಜಯ್ ಪ್ರಸಾದ್, ನಮ್ಮ “ಪೆಟ್ರೋಮ್ಯಾಕ್ಸ್”ಗೆ ಹೆಗಲು ಕೊಟ್ಟವರಿಗೆಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಅದರಲ್ಲೂ, ಅಕಾಶದಲ್ಲಿ ಮೋಡಗಳು ಹೇಗೆ ಇರುತ್ತವೋ, ಹಾಗೆಯೇ ಚಿತ್ರದಲ್ಲೂ ಚೇಷ್ಟೇಗಳೂ ಇರುತ್ತವೆ. ನಿಮ್ಮ ಆಶೀರ್ವಾದ ಇರಲಿ ಅಂತಾರೆ ನಿರ್ದೇಶಕರು.