ನಿರ್ದೇಶಕ ಹರಿ ಸಂತೋಷ್ ಅವರ ‘ಬೈ ಟು ಲವ್’ ಸಿನಿಮಾದ ಮಾತಿನ ಭಾಗ ಮುಗಿದಿದೆ. ‘ಬಜಾರ್’ ಬಳಿಕ ಧನ್ವೀರ್ ನಟಿಸುತ್ತಿರುವ ಎರಡನೇ ಸಿನಿಮಾ ಇದು. ಇತ್ತೀಚೆಗೆ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದ್ದು ಗೊತ್ತೇ ಇದೆ. ಧನ್ವೀರ್-ಶ್ರೀಲೀಲಾ ಹಾಗೂ ಪುಟ್ಟ ಮಗುವೊಂದು ಹಸೆಮಣೆ ಮೇಲೆ ಕುಳಿತಿರುವ ಫೋಟೋವೊಂದು ಎಲ್ಲೆಡೆ ವೈರಲ್ ಆಗಿತ್ತು. ಸೆಪ್ಟೆಂಬರ್ 8ರಂದು ಚಿತ್ರದ ನಾಯಕ ಧನ್ವೀರ್ ಅವರ ಹುಟ್ಟುಹಬ್ಬ. ಅಂದು ಸಾಕಷ್ಟು ವಿಶೇಷತೆಗಳಿವೆ. ಚಿತ್ರತಂಡ ಧನ್ವೀರ್ಗಾಗಿಯೇ ಒಂದು ಸ್ಪೆಷಲ್ ಗಿಫ್ಟ್ ಕೊಡಲು ಸಜ್ಜಾಗಿದೆ. ಆದರೆ, ಅದು ಏನೆಂಬುದನ್ನು ಈಗಲೇ ಗುಟ್ಟು ಬಿಟ್ಟುಕೊಡಲು ಚಿತ್ರತಂಡ ಸಿದ್ಧವಿಲ್ಲ.
ಧನ್ವೀರ್ ಹುಟ್ಟು ಹಬ್ಬಕ್ಕೆ ಸರ್ಪೈಸ್ ನೀಡುವ ಸಲುವಾಗಿ ಚಿತ್ರತಂಡ ಕುತೂಹಲಕಾರಿ ಕಂಟೆಂಟ್ ಸಿದ್ಧಪಡಿಸಿದ್ದು, ಅದನ್ನು ಹುಟ್ಟುಹಬ್ಬದಂದೇ ರಿವೀಲ್ ಮಾಡುವ ಯೋಜನೆ ಹಾಕಿಕೊಂಡಿದೆ.
ಮೊದಲ ಚಿತ್ರದಲ್ಲಿ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದ ಧನ್ವೀರ್ ಅವರಿಗಿಲ್ಲಿ ಲವರ್ ಬಾಯ್ ಪಾತ್ರ. ಅವರ ಫಸ್ಟ್ ಲುಕ್ ಪೋಸ್ಟರ್ ನೋಡಿದವರಿಗೆ ಫ್ಯಾಮಿಲಿ ಮ್ಯಾನ್ ಅಂತಾನು ಅನಿಸದೇ ಇರದು. ಈಗ ಚಿತ್ರತಂಡ ಹೊಸ ಕಂಟೆಂಟ್ ಹರಿಬಿಡುವ ಯೋಜನೆಯಲ್ಲಿರುವುದರಿಂದ ಸದ್ಯದ ಮಟ್ಟಿಗೆ ನಿರೀಕ್ಷೆಯನ್ನಂತೂ ಹುಟ್ಟಿಸಿದೆ.
ಸುಮಾರು 70 ದಿನಗಳಿಗೂ ಹೆಚ್ಚು ಕಾಲ ಚಿತ್ರೀಕರಣ ನಡೆಸಲಾಗಿದೆ. ಧನ್ವೀರ್ ಹಾಗೂ ಶ್ರೀಲೀಲಾ ಜೋಡಿ ತೆರೆಯ ಮೇಲೆ ಮೋಡಿ ಮಾಡಲಿದೆ ಎಂಬುದು ನಿರ್ದೇಶಕರ ಮಾತು. ಗಣೇಶ್ ನಟನೆಯ ಸಖತ್, ನಿಖಿಲ್ ಕುಮಾರ್ಸ್ವಾಮಿ ನಟನೆಯ ಹೊಸ ಸಿನಿಮಾ ಹಾಗೂ ಜೋಗಿ ಪ್ರೇಮ್-ಧ್ರುವ ಸರ್ಜಾ ಕಾಂಬಿನೇಷನ್ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ‘ಬೈ ಟು ಲವ್’ ನಿರ್ಮಾಣ ಮಾಡಿದೆ. ಚಿತ್ರದ ಕಥೆ ಮೆಚ್ಚಿಕೊಂಡು ಈ ಸಿನಿಮಾ ನಿರ್ಮಾಣ ಮಾಡಲು ಮುಂದಾದ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಡಿ ಇದು ಎರಡನೇ ಚಿತ್ರ. ಮಹೇಂದ್ರ ಸಿಂಹ ಛಾಯಾಗ್ರಹಣವಿದೆ. ಅಜನೀಶ್ ಲೋಕನಾಥ್ ಸಂಗೀತ ಹಾಗೂ ಯೋಗಾನಂದ್ ಸಂಭಾಷಣೆ ಈ ಚಿತ್ರಕ್ಕಿದೆ.
‘ಈ ಸಿನಿಮಾ ಶುರುವಾಗಲು ಮುಖ್ಯ ಕಾರಣ ಕಥೆ. ಒನ್ಲೈನ್ ಕೇಳಿದ ನಿರ್ಮಾಪಕರು, ಒಂದೇ ಸಿಟ್ಟಿಂಗ್ನಲ್ಲಿ ಪೂರ್ತಿ ಕಥೆ ಕೇಳಿ ಓಕೆ ಮಾಡಿದರು. ಆನಂತರವಷ್ಟೇ ತಾರಾಗಣ, ತಾಂತ್ರಿಕವರ್ಗ ಅಂತಿಮವಾಗಿದ್ದು. ಈಗ ಮಾತಿನ ಭಾಗವನ್ನು ಮುಗಿಸಿದ್ದೇವೆ. ಎಲ್ಲವೂ ಅಂದುಕೊಂಡದ್ದಕ್ಕಿಂತ ನೀಟಾಗಿ ಮೂಡಿ ಬಂದಿದೆ. ಎಲ್ಲರ ಸಹಕಾರದಿಂದ ಶೂಟಿಂಗ್ ಬೇಗ ಮುಗಿಸಲು ಸಾಧ್ಯವಾಯ್ತು. ಈ ಚಿತ್ರದಲ್ಲಿ ಧನ್ವೀರ್-ಶ್ರೀಲೀಲಾ ಕಾಂಬಿನೇಷನ್ ಅದ್ಭುತವಾಗಿ ಮೂಡಿ ಬಂದಿದೆ.
ಅದನ್ನು ಸಿನಿಮಾ ನೋಡಿಯೇ ಅನುಭವಿಸಬೇಕು. 8 ತಿಂಗಳ ಮಗು ಕೂಡ ಪ್ರಮುಖ ಪಾತ್ರಧಾರಿ. ಚಿತ್ರದಲ್ಲಿ ಸಾಕಷ್ಟು ಕುತೂಹಲಕಾರಿ ಅಂಶಗಳಿವೆ. ಇದು ಈಗಿನ ಟ್ರೆಂಡ್ಗೆ ತಕ್ಕಂತೆ ಮಾಡಿದ ಕಥೆ. ಹೀಗಾಗಿ ಎಲ್ಲರಿಗೂ ಕನೆಕ್ಟ್ ಆಗಲಿದೆ ಎಂಬುದು ನಿರ್ದೇಶಕ ಹರಿ ಸಂತೋಷ್ ಮಾತು.