ಕೊರೊನಾ ಈಗ ಒಂದು ಹಂತಕ್ಕೆ ಮರೆಯಾಗುತ್ತಿದೆ. ಮೆಲ್ಲನೆ ಭಯ ಕಡಿಮೆಯಾಗುತ್ತಿದೆ. ಎಲ್ಲಾ ರಂಗದಲ್ಲೂ ಕಾರ್ಯಚಟುವಟಿಕೆಗಳೂ ಜೋರಾಗಿವೆ. ಸಿನಿಮಾರಂಗ ಮಾತ್ರ ಶೇ.೫೦ರಷ್ಟು ಆಸನ ಭರ್ತಿ ಆದೇಶದಲ್ಲೇ ಇದೆ. ಹೀಗಿದ್ದರೂ, ಈಗ ಒಂದೊಂದೆ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿವೆ. ಶಿವರಾಜಕುಮಾರ್ ಅಭಿನಯದ “ಭಜರಂಗಿ ೨” ಸಿನಿಮಾ ರಿಲೀಸ್ ಅನೌನ್ಸ್ ಮಾಡಿದೆ. ಅದರ ಬೆನ್ನಲ್ಲೇ ಈಗ ಜಗ್ಗೇಶ್ ಪುತ್ರ ಗುರುರಾಜ್ ಅವರ ಸಿನಿಮಾವೊಂದು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಹೌದು, ನವರಸನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ನಾಯಕನಾಗಿ ಅಭಿನಯಿಸಿದ ಚಿತ್ರ “ಕಾಗೆ ಮೊಟ್ಟೆ” ಎಲ್ಲವೂ ಅಂದುಕೊಂಡಂತೆ ನಡೆದರೆ, ಸೆಪ್ಟೆಂಬರ್ ಎರಡನೇ ವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಇದೊಂದು ಪಕ್ಕಾ ಲೋಕಲ್ ಹುಡುಗರ ಕಥೆ. ಮೂವರು ಲೋಕಲ್ ಹುಡುಗರ ಕಥೆಯನ್ನಿಟ್ಟುಕೊಂಡು ನಿರ್ದೇಶಕ ಚಂದ್ರಹಾಸ ಅವರು ಈ ಚಿತ್ರ ಮಾಡಿದ್ದಾರೆ. ಕಾಗೆ ಶನೀಶ್ವರನ ವಾಹನ, ಶನಿ ಹೆಗಲೇರಿದರೆ ಕೊನೇವರೆಗೆ ಬಿಡಲ್ಲ ಅನ್ನೋದು ಗೊತ್ತು. ಅದೇ ರೀತಿ ಈ ಮೂರೂ ಜನ ಹುಡುಗರು ಯಾರ ಹಿಂದಾದ್ರೂ ಬಿದ್ದರೆ ಸುಲಭದಲ್ಲಿ ಬಿಡುವವರೇ ಅಲ್ಲ, ಮೊಟ್ಟೆಯಂತಿರುವ ಇವರು ಬೆಳೆದ ಮೇಲೆ ಯಾವ ರೀತಿ ಇರಬಹುದು ಎಂಬ ಪರಿಕಲ್ಪನೆಯೊಂದಿಗೆ ಚಂದ್ರಹಾಸ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಈಗಾಗಲೇ ತನ್ನೆಲ್ಲ ಕೆಲಸಗಳನ್ನು ಮುಗಿಸಿಕೊಂಡು ರಿಲೀಸ್ಗೆ ಸಿದ್ದವಾಗಿರುವ ಕಾಗೆಮೊಟ್ಟೆ ಸೆಪ್ಟೆಂಬರ್ ಎರಡನೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಳೆದ ಲಾಕ್ಡೌನ್ಗೂ ಮುಂಚೆಯೇ ರೆಡಿಯಾಗಿದ್ದ ಈ ಚಿತ್ರದಲ್ಲಿ ಗುರುರಾಜ್ ಜಗ್ಗೇಶ್ ಜೊತೆ ಕೆ.ಮಾದೇಶ್ ಹಾಗೂ ಹೇಮಂತ್ ಇನ್ನಿಬ್ಬರು ಗೆಳೆಯರಾಗಿ ನಟಿಸಿದ್ದಾರೆ. ಕನ್ನಡದವರೇ ಆದ ತನುಜಾ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ, ಸಹ ನಿರ್ಮಾಪಕರಾಗಿ ಸುಬ್ಬರಾಯುಡು ಹಾಗೂ ಹೆಚ್.ಎನ್.ಶ್ರೀನಿವಾಸಯ್ಯ ಇವರ ಜೊತೆ ಕೈಜೋಡಿಸಿದ್ದಾರೆ.
ಅಂದಹಾಗೆ ಈ ಚಿತ್ರಕ್ಕೆ ಪಿಳ್ಳಾ, ಗೋವಿ, ಕೃಷ್ಣನ ಕಥೆ ಎಂಬ ಅಡಿಬರಹವಿದೆ. ಹಳ್ಳಿಯಲ್ಲಿ ಸಣ್ಣಪುಟ್ಟ ರಾಬರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಮೂವರು ಹುಡುಗರು, ಒಮ್ಮೆ ಒಂದು ದೊಡ್ಡ ಉದ್ದೇಶ ಇಟ್ಟುಕೊಂಡು ಬೆಂಗಳೂರಿಗೆ ಬರುತ್ತಾರೆ. ಯಾವುದೇ ಹಿನ್ನೆಲೆ ಇಲ್ಲದೆ ಸಿಟಿಗೆ ಬಂದ ಇವರು ತಾವು ಅಂದುಕೊಂಡಿದ್ದನ್ನು ಮಾಡುತ್ತಾರೋ ಇಲ್ಲವೋ ಅನ್ನೋದು ಕಥೆ. ಕೊಳ್ಳೇಗಾಲ, ಚಾಮರಾಜನಗರ ಅಲ್ಲದೆ ಬೆಂಗಳೂರಿನ ಹಲವಾರು ಸ್ಲಂಗಳಲ್ಲಿ ಚಿತ್ರೀಕರಣ ನಡೆದಿದೆ. ಈ ಮೂವರು ಹುಡುಗರಿಗೆ ನಗರದಲ್ಲಿ ಬೆನ್ನೆಲುಬಾಗಿ ನಿಲ್ಲುವ ವೇಶ್ಯೆಯ ಪಾತ್ರವನ್ನು ಸೌಜನ್ಯ ಎಂಬ ನಟಿ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ೩ ಹಾಡುಗಳಿದ್ದು, ಶ್ರೀವತ್ಸ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ, ಕವಿರಾಜ್ ಹಾಗೂ ನಟ ಜಗ್ಗೇಶ್ ಸಹ ಹಾಡೊಂದಕ್ಕೆ ಸಾಹಿತ್ಯ ರಚಿಸಿದ್ದಲ್ಲದೆ ಅದಕ್ಕೆ ತಾವೇ ದನಿಯಾಗಿದ್ದಾರೆ. ಪಿ.ಎಲ್. ರವೀ ಚಿತ್ರದ ಕ್ಯಾಮೆರಾ ಹಿಡಿದರೆ, ರಜನೀಕಾಂತ್ ಅವರ ಸ್ನೇಹಿತ ರಾಜ್ ಬಹದ್ದೂರ್ ಮುಸ್ಲಿಂ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.