ಶಿವತೇಜಸ್ ಹೇಳಿದ ಬ್ಯೂಟಿಫುಲ್ ಲವ್ಸ್ಟೋರಿಗೆ ಫಿದಾ ಆದ “ಡಾರ್ಲಿಂಗ್” ಕೃಷ್ಣ, ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಾಗಿದೆ. ಆಗಸ್ಟ್ 27ರಂದು ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ. ಒಬ್ಬ ನಿರ್ದೇಶಕರಾಗಿ ಮತ್ತೊಬ್ಬ ನಿರ್ದೇಶಕರಿಗೆ ಅವಕಾಶ ಕೊಡೋದು ಅಂದರೆ ತಮಾಷೆಯ ಮಾತಲ್ಲ. ಒಬ್ಬ ನಿರ್ದೇಶಕನಲ್ಲಿರುವ ಪ್ರತಿಭೆ ಮತ್ತು ಶ್ರದ್ಧೆ ನಿರ್ದೇಶಕನಿಗೆ ಮಾತ್ರ ಗೊತ್ತು. ಆ ಪ್ರತಿಭೆ ಮತ್ತು ಶ್ರದ್ಧೆ ಶಿವತೇಜಸ್ ಅವರಲ್ಲಿದೆ ಎಂಬುದನ್ನು ಬಲವಾಗಿ ನಂಬಿರುವ ಸುಮಂತ್ ಕ್ರಾಂತಿ ನಿರ್ಮಾಣ ಮಾಡಲು ಮನಸ್ಸು ಮಾಡಿದ್ದಾರೆ
ಒಂದು ಸಿನಿಮಾ ಮಾಡೋಕೆ ಮುಖ್ಯವಾಗಿ ಬೇಕಾಗಿರೋದು ಸಿನಿಮಾ ಪ್ರೀತಿ. ಅದಷ್ಟೇ ಅಲ್ಲ, ಶ್ರದ್ಧೆ ಮತ್ತು ಪ್ರತಿಭೆ. ಇದನ್ನೇ ನಂಬಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟವರು ನಿರ್ದೇಶಕ ಶಿವತೇಜಸ್. ಈಗಾಗಲೇ ಜೋರು ಪ್ರೀತಿಯ “ಮಳೆ” ಸುರಿಸಿದ ಶಿವತೇಜಸ್, ಸಿನಿಪ್ರೇಮಿಗಳ ಮನವನ್ನು ಪ್ರೀತಿಯಿಂದಲೇ ಒದ್ದೆ ಮಾಡಿದವರು. ಆ ನಂತರ “ಧೈರ್ಯಂ” ಮೂಲಕ ಗಾಂಧಿನಗರದಲ್ಲಿ ಗಟ್ಟಿನೆಲೆ ಕಂಡ ಧೈರ್ಯದಲ್ಲೇ ಮತ್ತೊಂದು ಕ್ಯೂಟ್ ಅಂಡ್ ಪ್ಯೂರ್ ಲವ್ಸ್ಟೋರಿ ಹಿಂದೆ ನಿಂತಿದ್ದಾರೆ ಶಿವತೇಜಸ್. ಹೌದು, ನಿರ್ದೇಶಕ ಶಿವತೇಜಸ್ ಈಗ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಈ ಬಾರಿ ಎಂದಿಗಿಂತಲೂ ಜೋರು ಸದ್ದು ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಆವರ ಆಯ್ಕೆ ಕೂಡ ಹಾಗೆಯೇ ಇದೆ. ಹಾಗಾಗಿ, ಅವರ ಹೊಸ ಚಿತ್ರ ಜೋರು ಸೌಂಡು ಮಾಡುವುದರಲ್ಲಿ ಅನುಮಾನವೇ ಇಲ್ಲ ಬಿಡಿ.
ಅಂದಹಾಗೆ, ಶಿವತೇಜಸ್ ಮಾಡ ಹೊರಟಿರುವ ಸಿನಿಮಾದ ಹೀರೋ ಬೇರಾರೂ ಅಲ್ಲ, “ಲವ್ ಮಾಕ್ಟೇಲ್” ಖ್ಯಾತಿಯ “ಡಾರ್ಲಿಂಗ್” ಕೃಷ್ಣ ಅವರದು. ನಿಜ, ಶಿವತೇಜಸ್ ಅವರು ಹೇಳಿದ ಬ್ಯೂಟಿಫುಲ್ ಲವ್ಸ್ಟೋರಿಗೆ ಫಿದಾ ಆದ “ಡಾರ್ಲಿಂಗ್” ಕೃಷ್ಣ, ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಾಗಿದೆ. ಆಗಸ್ಟ್ 27ರಂದು ಚಿತ್ರದ ಪೂಜೆ ನೆರವೇರುತ್ತಿದೆ. ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ ನಡೆಯುತ್ತಿದೆ ಅನ್ನೋದು ವಿಶೇಷ. ಈ ಚಿತ್ರದಲ್ಲಿ ಹಲವು ವಿಶೇಷತೆಗಳೇ ತುಂಬಿವೆ. ಆ ವಿಶೇಷತೆಗಳಲ್ಲಿ ಮೊದಲ ಸ್ಪೆಷಲ್ ಅಂದರೆ, ನಿರ್ದೇಶಕ ಶಿವತೇಜಸ್ ಅವರನ್ನು ನಂಬಿ, ಅವರು ಮಾಡಿಕೊಂಡಿರುವ ಲವ್ಸ್ಟೋರಿಯನ್ನು ಒಪ್ಪಿ, ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿರೋದು ನಿರ್ಮಾಪಕ ಸುಮಂತ್ ಕ್ರಾಂತಿ ಇದು ಅವರ ರಶ್ಮಿ ಫಿಲಂಸ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿದೆ.
ಶಿವತೇಜಸ್, ನಿರ್ದೇಶಕರು
ಈ ಸುಮಂತ್ ಕ್ರಾಂತಿ ಹೆಸರು ಕೇಳಿದಾಕ್ಷಣ, ಥಟ್ಟನೆ ನೆನಪಾಗೋದೇ “ನಾನಿ” ಎಂಬ ಕಾಡುವ ಚಿತ್ರ. ಹೌದು, ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಎಂಟ್ರಿಯಾದ ಸುಮಂತ್ ಕ್ರಾಂತಿ ಇದೀಗ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. “ಕಾಲಚಕ್ರ” ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಅದೀಗ ಬಿಡುಗಡೆಗೆ ಸಜ್ಜಾಗಿದೆ. ಅದರ ಬೆನ್ನ ಹಿಂದೆಯೇ ಅವರು “ಬರ್ಕ್ಲಿ” ಎಂಬ ಮತ್ತೊಂದು ಫೆಂಟಾಸ್ಟಿಕ್ ಸಿನಿಮಾ ಕೂಡ ಮಾಡಿದ್ದಾಗಿದೆ. ಅದರ ಹಿಂದೆಯೇ ಅವರು ಪ್ರಜ್ವಲ್ ದೇವರಾಜ್ ಅವರಿಗೊಂದು ಸಿನಿಮಾ ಮಾಡಲೂ ಮುಂದಾಗಿರೋದು ಹೊಸ ಸುದ್ದಿಯೇನಲ್ಲ. ಈಗ ಶಿವತೇಜಸ್ ಅವರಿಗಾಗಿ “ಡಾರ್ಲಿಂಗ್” ಕೃಷ್ಣ ಅವರ ನಟನೆಯ ಸಿನಿಮಾಗೆ ನಿರ್ಮಾಪಕರಾಗಿದ್ದಾರೆ. ಇದು ನಿಜಕ್ಕೂ ಮೆಚ್ಚುವ ವಿಷಯ.
ಸುಮಂತ್ ಕ್ರಾಂತಿ, ನಿರ್ಮಾಪಕರು
ಒಬ್ಬ ನಿರ್ದೇಶಕರಾಗಿ ಮತ್ತೊಬ್ಬ ನಿರ್ದೇಶಕರಿಗೆ ಅವಕಾಶ ಕೊಡೋದು ಅಂದರೆ ತಮಾಷೆಯ ಮಾತಲ್ಲ. ಒಬ್ಬ ನಿರ್ದೇಶಕನಲ್ಲಿರುವ ಪ್ರತಿಭೆ ಮತ್ತು ಶ್ರದ್ಧೆ ನಿರ್ದೇಶಕನಿಗೆ ಮಾತ್ರ ಗೊತ್ತು. ಆ ಪ್ರತಿಭೆ ಮತ್ತು ಶ್ರದ್ಧೆ ಶಿವತೇಜಸ್ ಅವರಲ್ಲಿದೆ ಎಂಬುದನ್ನು ಬಲವಾಗಿ ನಂಬಿರುವ ಸುಮಂತ್ ಕ್ರಾಂತಿ ಅವರು, ಈಗ ನಿರ್ಮಾಣ ಮಾಡಲು ಮನಸ್ಸು ಮಾಡಿದ್ದಾರೆ. ಸುಮಂತ್ ಕ್ರಾಂತಿ ಅವರೂ ನಿರ್ದೇಶಕರಾಗಿರುವುದರಿಂದ, ಈ ಚಿತ್ರಕ್ಕೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಪೂರೈಸುತ್ತಾರೆ ಎಂಬ ಭವ್ಯ ಭರವಸೆ ಕೂಡ ನಿರ್ದೇಶಕ ಶಿವತೇಜಸ್ ಅವರಿಗಿದೆ. ಅದೇನೆ ಇರಲಿ, ಶಿವತೇಜಸ್ ಈ ಬಾರಿ ಒಂದೊಳ್ಳೆಯ ಕಥೆ ಹಿಡಿದು ಬರುತ್ತಿದ್ದಾರೆ. ತಮ್ಮ ಬ್ಯೂಟಿಫುಲ್ ಲವ್ಸ್ಟೋರಿ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ ಶಿವತೇಜಸ್ ಹೇಳಿದ್ದಿಷ್ಟು.
ಡಾರ್ಲಿಂಗ್ ಕೃಷ್ಣ, ನಾಯಕ
“ನಾನು “ಮಳೆ” ಬಳಿಕ ಮತ್ತೊಂದು ಪ್ಯೂರ್ ಬೊಂಬಾಟ್ ಲವ್ಸ್ಟೋರಿ ಸಿನಿಮಾ ಮಾಡ್ತಾ ಇದ್ದೇನೆ. ನವೆಂಬರ್ನಿಂದ ಸಿನಿಮಾ ಶುರುವಾಗಲಿದೆ. ಧರ್ಮಸ್ಥಳದಲ್ಲಿ ಆಗಸ್ಟ್ 27ರಂದು ಪೂಜೆ ನೆರವೇರಲಿದೆ. ಸುಮಂತ್ ಕ್ರಾಂತಿ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಮೂಲತಃ ನಿರ್ದೇಶಕರಾಗಿದ್ದರೂ, ನನ್ನ ಕಥೆ ನಂಬಿ ಹಣ ಹಾಕುತ್ತಿದ್ದಾರೆ. ಅವರ ನಂಬಿಕೆಯನ್ನು ನಾನು ಉಳಿಸಿಕೊಳ್ತೀನಿ ಎಂಬ ಮಾತು ಕೊಡ್ತೀನಿ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ನನ್ನದೇ. ಇನ್ನು, ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಅವರು ಯಾರೆಂಬುದು ಸದ್ಯ ಗೌಪ್ಯ.
ಅಂತೆಯೇ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಛಾಯಾಗ್ರಹಣ ಸೇರಿದಂತೆ ಉಳಿದ ತಾಂತ್ರಿಕ ವರ್ಗದ ಆಯ್ಕೆ ಹಾಗು ಕಲಾವಿದರ ಆಯ್ಕೆ ನಡೆಯಬೇಕಿದೆ. ನವೆಂಬರ್ನಿಂದ ಚಿತ್ರೀಕರಣ ಶುರುವಾಗಲಿದೆ ಎನ್ನುವ ಶಿವತೇಜಸ್, “ಮಳೆ” ನೋಡಿದವರಿಗೆ ಒಂದೊಳ್ಳೆಯ ಫೀಲ್ ಇತ್ತು. ಈ ಸಿನಿಮಾ ಅದಕ್ಕಿಂತಲೂ ಬೊಂಬಾಟ್ ಫೀಲ್ ಕೊಡುತ್ತೆ. ಈಗಿನ ಟ್ರೆಂಡ್ಗೆ ತಕ್ಕಂತಹ ಲವ್ಸ್ಟೋರಿ ಇಲ್ಲಿದೆ. ಲವ್ಸ್ಟೋರಿ ಅಂದರೆ, ಅದೇ ಪ್ರೀತಿ ಗೀತಿ ಇತ್ಯಾದಿ ಇರುತ್ತೆ. ಆದರೆ, ನಮ್ ಲವ್ಸ್ಟೋರಿಯ ರೇಂಜ್ ಬೇರೆ ರೀತಿ ಇರುತ್ತೆ. ಎಲ್ಲವನ್ನೂ ಈಗಲೇ ಹೇಳಿದರೆ, ಕುತೂಹಲ ಇರಲ್ಲ. ಸಿನಿಮಾ ಬಂದಮೇಲೆ ಖಂಡಿತವಾಗಿಯೂ ಎಲ್ಲಾ ವರ್ಗಕ್ಕೆ ಇಷ್ಟವಾಗುತ್ತೆ ಎಂಬ ಭರವಸೆ ಕೊಡ್ತೀನಿ ಅಂತಾರೆ ಶಿವತೇಜಸ್.