ಕೊರೋನಾ ಯಾವಾಗ ಹೋಗುತ್ತೆ ? ಈ ಪ್ರಶ್ನೆಗೆ ಉತ್ತರ ಯಾರಿಗಾದ್ರು ಗೊತ್ತಾ ? ಖಂಡಿತಾ ಇಲ್ಲ. ಯಾಕಂದ್ರೆ, ಕಳೆದ ಒಂದು- ಒಂದೂವರೆ ವರ್ಷದಿಂದ ಇಡೀ ಜಗತ್ತೇ ಕೊರೋನಾ ಮಹಾಮಾರಿಯ ಅಟ್ಟಹಾಸದಲ್ಲಿ ನಲುಗಿ ಹೋಗಿದೆ. ಒಂದನೇ ಅಲೆ ಮುಗಿದು, ಈಗ ಎರಡನೇ ಅಲೆ ಇದೆಯಂತೆ. ಜನರೆಲ್ಲಾ ಕೊರೋನಾ ಎರಡನೇ ಅಲೆಯೂ ಮುಗಿದಿದೆ ಅಂದ್ಕೊಂಡಿದ್ದಾರೆ. ಆದರೆ, ಸರ್ಕಾರ ಹೇಳುವ ಪ್ರಕಾರ ಇನ್ನು ಎರಡನೇ ಅಲೆಯೇ ಇದೆ. ಇದು ಮುಗಿದ ನಂತ್ರ ಮೂರನೇ ಅಲೆ ಬರುತ್ತೆ ಅಂತ ಹೇಳಲಾಗುತ್ತಿದೆ. ಅಲ್ಲಿಗೆ ಈ ಕೊರೋನಾ ಇನ್ನೇಷ್ಟು ದಿನ ಇರುತ್ತೆ ? ಯಾವಾಗ ಹೋಗುತ್ತೆ ? ಅಂದಾಜು ಕೂಡ ಮಾಡಲಾಗುತ್ತಿಲ್ಲ. ಕೊರೋನಾ ಬಗ್ಗೆ ಎಚ್ಚರಿಕೆ ನೀಡುತ್ತಿರುವ ತಜ್ಜರಿಗೂ ಇದು ಗೊತ್ತಿಲ್ಲ. ಆದರೆ, ಕೊರೋನಾ ಯಾವಾಗ ಹೋಗುತ್ತೆ ಎನ್ನುವುದರ ಬಗ್ಗೆ ಕನ್ನಡ ಚಿತ್ರರಂಗದ ಹಿರಿಯ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಭವಿಷ್ಯ ನುಡಿದ್ದಾರೆ. ಅವರು ಹೇಳುವ ಪ್ರಕಾರ ಕೊರೋನಾ ತಾನಾಗಿಯೇ ಹೋಗೋದಿಲ್ಲ, ಅದನ್ನು ಜನರೇ ಹೋಗಿಸಬೇಕಂತೆ. ಅದು ಹೇಗೆ ಅಂತ ಅವ್ರು ಕೊಡುವ ಕಾರಣ ಇದು.
‘ಎಲ್ಲರೂ ಕೊರೋನಾ ಕೊರೋನಾ ಅಂತ ಮನೆ ಹಿಡಿದು ಕುಳಿತಿದ್ದಾರೆ. ಏನಾಗುತ್ತೋ ಎನ್ನುವ ಭಯ ಅವರನ್ನು ಆವರಿಸಿಕೊಂಡಿದೆ. ಅದೇ ಕಾರಣಕ್ಕೆ ಎಲ್ಲ ಉದ್ಯಮವೋ ಬಿದ್ದು ಹೋಗಿದೆ. ಇದೆಲ್ಲ ಸರಿ ಆಗಬೇಕಾದ್ರೆ ಕೊರೋನಾ ಹೋಗಬೇಕು. ಕೊರೋನಾ ಹೋಗಬೇಕಾದ್ರೆ ಜನರು ಭಯ ಬಿಡಬೇಕು. ಭಯ ಬಿಟ್ಟು ಫೀಲ್ಡಿಗಿಳಿದರೆ ಕೊರೋನಾ ತಾನಾಗಿಯೇ ಹೊಗುತ್ತೆ’ ಅಂತ ನಟ ರವಿಚಂದ್ರನ್ ಹೇಳ್ತಾರೆ.
‘ದೃಶ್ಯ 2’ ಚಿತ್ರದ ಸುದ್ದಿಗೋಷ್ಠಿಯ ಮೂಲಕ ಮೊನ್ನೆಯಷ್ಟೇ ನಟ ರವಿಚಂದ್ರನ್ ಮಾಧ್ಯಮದ ಮುಂದೆ ಬಂದಿದ್ದರು. ಮಾಧ್ಯಮದವರನ್ನು ನೋಡಿ ಅವರಿಗೆ ಶಾಕ್. ಯಾಕಂದ್ರೆ ಎಲ್ಲರೂ ಕೂಡ ಮಾಸ್ಕ್ ಹಾಕ್ಕೊಂಡೆ ಅಲ್ಲಿಗೆ ಹಾಜರಾಗಿದ್ದರು. ಸರ್ಕಾರದ ರೂಲ್ಸು- ಗಿಲ್ಸು ಅದೆಲ್ಲ ತಮಗ್ಯಾಕೆ ಬೇಕು ಅಂತ ಆ ಬಗ್ಗೆ ಮಾತನಾಡದೆ ಮೊದಲು ‘ದೃಶ್ಯ 2’ ಸಿನಿಮಾದ ಕುರಿತು ಮಾತನಾಡ ಹೊರಟರು. ಮಾತಿನ ಮಧ್ಯೆ ಸಿನಿಮಾ ರಿಲೀಸ್ ಮಾತು ಬಂತು. ಹಾಗೆಯೇ ಈಗಿರುವ ಚಿತ್ರಮಂದಿರಗಳ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿದರು. ಎಲ್ಲವೂ ಸರಿ ಹೋಗಬೇಕಾದರೆ, ಚಿತ್ರಮಂದಿರಗಳು ಮೊದಲಿನಂತೆ ಒಪನ್ ಆಗ್ಬೇಕು, ಚಿತ್ರಮಂದಿರಗಳಿಗೆ ಜನರು ಬರಬೇಕು. ಅಲ್ಲಿಗೆ ಜನ ಬರಬೇಕಾದರೆ ಜನರಲ್ಲಿ ಕೊರೋನಾ ಭಯ ಹೋಗಬೇಕು, ಆಗ ಮಾತ್ರ ಚಿತ್ರೋದ್ಯಮಕ್ಕೆ ಒಳ್ಳೆಯ ದಿನಗಳು ಬಂದೇ ಬರುತ್ತವೆ ಎಂದರು ಕ್ರೇಜಿಸ್ಟಾರ್.
- ಎಂಟರ್ ಟೈನ್ ಮೆಂಟ್ ಬ್ಯೂರೋ ಸಿನಿಲಹರಿ