ಸಿನಿಮಾನೆ ಹಾಗೆ. ಇಲ್ಲಿ ಕನಸು ಕಾಣೋ ಮಂದಿಯೇ ಹೆಚ್ಚು. ಅದರಲ್ಲೂ ಇಲ್ಲಿ ಕನಸು ಕಂಡವರಿಗೆಲ್ಲಾ ಅದು ನನಸಾಗುತ್ತೆ ಅಂತ ಹೇಳುವುದಕ್ಕೂ ಆಗೋದಿಲ್ಲ. ಎಲ್ಲೋ ಒಂದಷ್ಟು ಅದೃಷ್ಟವಂತರಿಗೆ ಮಾತ್ರ ಅಂಥದ್ದೊಂದು ಲಕ್ ಸಿಗುತ್ತೆ. ಈಗ ಅಂಥದ್ದೊಂದು ಲಕ್ಗೆ ಸಿದ್ದರಾಜು ಕಾಳೇನಹಳ್ಳಿ ಕಾರಣರಾಗಿದ್ದಾರೆ. ಹೌದು, ಸರಿ ಸುಮಾರು ಎರಡು ದಶಕಗಳಿಂದಲೂ ಕ್ಯಾಬ್ ಚಾಲಕರಾಗಿರುವ ಸಿದ್ದರಾಜು ಅವರಿಗೆ ತಮ್ಮ ಅನುಭವಗಳನ್ನೇ ಆಧರಿಸಿ ಚಿತ್ರ ನಿರ್ಮಾಣ ಮಾಡಬೇಕೆಂಬ ಹಂಬಲವಿತ್ತು. ಆದರೆ, ಹಣವಿರಲಿಲ್ಲ. ಕ್ಯಾವ್ನಲ್ಲಿ ಪಯಣಿಸುತ್ತಿದ್ದ, ಜ್ಞಾನೇಶ್ ಅವರ ಬಳಿ ಸಿದ್ದರಾಜು ಈ ವಿಷಯ ಹೇಳಿದಾಗ, ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸುವ ಮನಸ್ಸು ಮಾಡಿದ್ದಾರೆ ಜ್ಞಾನೇಶ್. ನಂತರ ಇಬ್ಬರು ಸೇರಿ ಕೆ.ಹೆಚ್.ಎಸ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಿಸಿದ್ದಾರೆ.
ತಮ್ಮ ಕನಸ್ಸನ್ನೇ ನನಸು ಮಾಡಿಕೊಳ್ಳಲು ಹೆಣಗಾಡುತ್ತಿರುವವರ ನಡುವೆ ಮತ್ತೊಬ್ಬನ ಕನಸನ್ನು ನನಸು ಮಾಡಲು ಹೊರಟಿದ್ದಾರೆ ಜ್ಞಾನೇಶ್. ಒಬ್ಬ ಕ್ಯಾಬ್ ಡ್ರೈವರ್ ಅನ್ನು ಡೈರೆಕ್ಟರ್ ಮಾಡಲು ಹೋಗಿ ಪ್ಯಾಸೆಂಜರ್ ಒಬ್ಬರು ಪ್ರೊಡ್ಯೂಸರ್ ಆಗಿದ್ದಾರೆ. ಇನ್ನು, ಬಾಲ್ಯದಲ್ಲೇ ತಂದೆತಾಯಿ ಕಳೆದುಕೊಂಡ ಮಕ್ಕಳು ವಿದ್ಯಾಭ್ಯಾಸ ಹಾಗೂ ತಮ್ಮ ಜೀವನ ಹೇಗೆ ರೂಪಿಸಿಕೊಳ್ಳಬೇಕು ಎಂಬ ಕಥಾವಸ್ತು ಚಿತ್ರದ ಹೈಲೈಟ್. ಸದ್ಯ ಚಿತ್ರೀಕರಣ ಪೂರ್ಣಗೊಂಡು, ಬಿಡುಗಡೆಗೆ ರೆಡಿಯಾಗಿದೆ.
ಹುಲಿಯೂರುದುರ್ಗ, ಮಾಗಡಿ ತಾವರೆಕೆರೆ, ಬೆಂಗಳೂರು ನಗರ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಸಿದ್ದರಾಜು ಕಾಳೇನಹಳ್ಳಿ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ನಾಗೇಶ್ ಉಜ್ಜನಿ ಸಹ ನಿರ್ದೇಶನವಿದೆ. ಮಲ್ಲಿಕಾರ್ಜುನ್ ಎಮ್ ಎನ್, ಸೋಮಣ್ಣ ಅವರ ಸಹಾಯಕ ನಿರ್ದೇಶನವಿದೆ. ಅಮ್ಮನಿಂದ ದೂರವಾದ ಒಂದು ಬಡ ವರ್ಗದ ಹುಡುಗನ ಶೈಕ್ಷಣಿಕ ಹಾದಿ, ಅಮ್ಮ ಮಗನ ನಡುವಿನ ಬಾಂಧವ್ಯ ಇರುವ ಹಾಗೂ ಸಮಾಜಕ್ಕೆ ಶಿಕ್ಶಣದ ಮಹತ್ವದ ಅರಿವು ಮೂಡಿಸುವ ಕುರಿತಾದ ಈ ಚಿತ್ರದಲ್ಲಿ ಪಕ್ಕಾ ಫ್ಯಾಮಿಲಿ, ಫ್ರೆಂಡ್ಷಿಪ್, ಸೆಂಟಿಮೆಂಟ್ ಹಾಗೂ ಕಾಮಿಡಿಯಂತಹ ಎಲ್ಲಾ ಮನರಂಜನಾತ್ಮಕ ಅಂಶಗಳಿವೆ.
ಈ ಚಿತ್ರಕ್ಕೆ ಎ.ಟಿ.ರವೀಶ್ ಅವರ ಸಂಗೀತವಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ನಾಗೇಶ್ ಉಜ್ಜನಿ, ಜ್ಞಾನೇಶ ಎಂ.ಬಿ, ಶೈಲಜಾ ಎಸ್.ರಾವ್ ಸಾಹಿತ್ಯವಿದೆ. ಸರಿಗಮಪ ವಿನ್ನರ್ ಸುನಿಲ್, ಮೆಹಬೂಬ್ ಸಾಬ್, ಕನ್ನಡ ಕೋಗಿಲೆ ತನುಷ್ ರಾಜ್ ಹಾಡಿದ್ದಾರೆ. ಮಲ್ಲ, ಕೋದಂಡರಾಮ ಚಿತ್ರದ ಸಂಜೀವ್ ರೆಡ್ಡಿ ಅವರ ಸಂಕಲನವಿದ್ದು, ರಮೇಶ್ ಹಾಗೂ ನರಸಿಂಹ ಅವರ ಛಾಯಾಗ್ರಹಣವಿದೆ. ಲಯನ್ ಗಂಗರಾಜು ಅವರ ಸಾಹಸ, ಸ್ಟಾರ್ ನಾಗಿ, ಸುರೇಶ್ ಅವರ ನೃತ್ಯ ನಿರ್ದೇಶನವಿದೆ.
ಈ ಚಿತ್ರದಲ್ಲಿ ಬಾಲನಟರಾಗಿ ತನುಷರಾಜ್, ಕಾನಿಷ್ಕ ರವಿ ದೇಸಾಯಿ, ಅಮೋಘ ಕೃಷ್ಣ, ಮಧುಸೂಧನ್, ಬೇಬಿ ಅಂಕಿತ ಜಯರಾಮ್, ಬೇಬಿಶ್ರೀ, ಜೀವನ್, ಚೇತನ್, ನವನೀತ್, ಬಾ ನಾ ರವಿ, ಚಂದ್ರಪ್ರಭಾ, ಗೋವಿಂದೇಗೌಡ, ವಿನೋದ್ ಆನಂದ್, ಮೋನಿಕ, ಶ್ರೀದೇವಿ ಮಂಜುನಾಥ, ರಾಜೇಶ್, ನವೀನ್ ರಾಜ್, ಗಂಗರಾಜು ನಾಗಶ್ರೀ, ಗುರು, ರಾಜು, ಅಂಧರಾದ ಬಸವರಾಜ್, ಪ್ರತಾಪ್ ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಕರ್ನಾಟಕ ಜನಸೇವಾ ಟ್ರಸ್ಟಿನ ಪ್ರಶಾಂತ್ ಚಕ್ರವರ್ತಿ ಕಾಣಿಸಿಕೊಂಡಿದ್ದಾರೆ. ಗೋ ಸಂರಕ್ಷಕರಾದ ಮಹೇಂದ್ರ ಮುನ್ನೋತ್ ಶಿಕ್ಷಣ ಸಚಿವರಾಗಿ ನಟಿಸಿದ್ದಾರೆ.