ಪಿ.ವಾಸು ಅಂದ್ರೆ ರಿಯಲಿ ಅಮೇಜಿಂಗ್….ಹಿರಿಯ ನಿರ್ದೇಶಕ ಪಿ. ವಾಸು ಅವರ ಬಗ್ಗೆ ಹೀಗೆ ಮೆಚ್ಚುಗೆಯ ಉದ್ಘಾರ ತೆಗೆದಿದ್ದು ಕನ್ನಡದ ಭರವಸೆಯ ಯುವ ನಟಿ ಆರೋಹಿ ನಾರಾಯಣ್. ಭೀಮಸೇನ ನಳಮಹಾ ರಾಜನ ಈ ಚೆಲುವೆ ಈಗ ʼ ದೃಶ್ಯ 2ʼ ಚಿತ್ರದ ಚಿತ್ರೀಕರಣ ದಲ್ಲಿ ಬ್ಯುಸಿ ಆಗಿದ್ದಾರೆ. ಅಂದ ಹಾಗೆ ʼದೃಶ್ಯ 2ʼ ಹೆಸರಾಂತ ನಿರ್ದೇಶಕ ಪಿ. ವಾಸು ನಿರ್ದೇಶನದ ಸಿನಿಮಾ. ʼದೃಶ್ಯʼ ಭಾಗ ಒಂದಕ್ಕೂ ಅವರೇ ನಿರ್ದೇಶಕರು. ಕನ್ನಡಕ್ಕೆ ʼಆಪ್ತಮಿತ್ರʼದಂತಹ ಸೂಪರ್ ಡೂಪರ್ ಹಿಟ್ ಸಿನಿಮಾ ಕೊಟ್ಟ ಖ್ಯಾತಿ ಅವರದು. ಇದೀಗ ʼದೃಶ್ಯ 2ʼ ಮೂಲಕ ಮತ್ತೆ ಸಿನಿದುನಿಯಾದಲ್ಲಿ ಕಮಾಲ್ ಮಾಡಲು ಬರುತ್ತಿದ್ದು, ಕೊರೋನಾ ಭೀತಿಯ ನಡುವೆಯೂ ಈ ಚಿತ್ರಕ್ಕೆ ಈಗ ಮಡಿಕೇರಿಯಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ನಟ ರವಿಚಂದ್ರನ್ ಸೇರಿದಂತೆ ಇಡೀ ತಂಡವೇ ಅಲ್ಲಿದೆ. ಇನ್ನು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿರುವ ನಟಿ ಆರೋಹಿ ನಾರಾಯಣ್ ಕೂಡ ಈಗ ಮಡಿಕೇರಿ ನಲ್ಲಿದ್ದಾರೆ.
ಮಡಿಕೇರಿಯಲ್ಲೀಗ ಮಳೆ. ಮಡಿಕೇರಿ ಮಳೆ ಅಂದ್ರೆ ಅದನ್ನು ಹೆಚ್ಚೇನು ವಿವರಿಸಬೇಕಿಲ್ಲ. ಕಾಫಿ ಕಾಡಿನಲ್ಲಿ ದಟ್ಟವಾಗಿ ಸುರಿಯುವ ಮಳೆ ಅದು. ಅದರ ನಡುವೆಯೇ ಕಳೆದ ಹಲವು ದಿನಗಳಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ನಟಿ ಆರೋಹಿ ನಾರಾಯಣ್, ʼಸಿನಿಲಹರಿʼಯೊಂದಿಗೆ ಮಾತನಾಡುತ್ತಾ, ಚಿತ್ರೀಕರಣದ ಅನುಭವ ಹಂಚಿಕೊಂಡರು.ʼ ಚಿತ್ರೀಕರಣ ಅದ್ಬುತವಾಗಿ ನಡಯುತ್ತಿದೆ. ಇಡೀ ಟೀಮ್ ಜತೆಗಿದೆ. ಒಂದು ಸಿನಿಮಾ ಟೀಮ್ ಎನ್ನುವುದಕ್ಕಿಂತ ಒಂದೇ ಫ್ಯಾಮಿಲಿ ವಾತಾವರಣ ಇಲ್ಲಿದೆ. ತುಂಬಾ ಕಂಫರ್ಟ್ ಜೋನ್ ನಲ್ಲಿ ಶೂಟಿಂಗ್ ನಡೆಯುತ್ತಿದೆ. ಎಲ್ಲರೂ ತುಂಬಾ ಸೇಫ್ಟಿ ತೆಗೆದುಕೊಂಡೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆನ್ನುತ್ತಾ ಅಲ್ಲಿನ ಅನುಭವ ತೆರೆದಿಟ್ಟರು.
ಚಿತ್ರೀಕರಣದ ಕುರಿತು ಮಾತನಾಡಿದ್ದಕ್ಕಿಂತ ನಿರ್ದೇಶಕ ಪಿ. ವಾಸು ಅವರ ಬಗ್ಗೆಯೇ ಹೆಚ್ಚು ಮಾತನಾಡಿದರು.ʼ ಪಿ.ವಾಸು ಅವರಂತಹ ಲೆಂಜೆಡರಿ ಡೈರೆಕ್ಟರ್ ಕಾಂಬನೇಷನಿನಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದೆ ಒಂದು ಪುಣ್ಯ. ಸಿನಿಮಾ ಅಂತ ಬಂದಾಗ ಅವರಿಂದ ತುಂಬಾ ಕಲಿಯುವುದಿದೆ. ಅದಕ್ಕೆ ನಂಗೊಂದು ಅವಕಾಶ ಈ ಸಿನಿಮಾದಲ್ಲಿ ಸಿಕ್ಕಿದೆ ಎಂದರು.
ಇನ್ನು ನಟಿ ಆರೋಹಿ ನಾರಾಯಣ್ ಡಯಟ್ ಮಾಡುತ್ತಿದ್ದಾರಂತೆ. ಕೊಂಚ ಸಣ್ಣಾಗಬೇಕೆನ್ನುವುದು ಅವರ ಆಸೆ. ಹೀಗಾಗಿ ಫುಡ್ ವಿಚಾರ ದಲ್ಲಿ ತುಂಬಾ ಸ್ಟ್ರಿಕ್ಟ್ ಅಂತೆ. ʼ ಡಯೆಟ್ನಲ್ಲಿದ್ದಾಗ ತಕ್ಕನಾದ ಫುಡ್ ಸಿಗೋದು ಕಷ್ಟ. ಅದರಲ್ಲೂ ಸಿನಿಮಾ ಸೆಟ್ ನಲ್ಲಿ ಅಂತಹ ಫುಡ್ ಗೆ ಪರದಾಡಬೇಕಾಗುತ್ತದೆ. ಆದರೆ ನಿರ್ದೇಶಕರಾದ ಪಿ. ವಾಸು ಸ್ವಂತ ತಮ್ಮ ಮಕ್ಕಳಂತೆ ನಮ್ಮನ್ನು ನೋಡಿಕೊಳ್ಳುತ್ತಿದ್ದಾರೆ. ಡಯಟ್ ಪೂರಕವಾದ ಫುಡ್ ಅನ್ನು ಟೀಮ್ ಗೆ ಹೇಳಿ ತರಿಸಿಕೊಡುತ್ತಾರೆ. ಇಷ್ಟು ಕೇರ್ ಯಾರು ತಗೋಳ್ಳೋದಿಲ್ಲ. ಆದರೆ, ನಮ್ಮ ನಿರ್ದೇಶಕರು ಡಿಫೆರೆಂಟ್ ಅಂತಾರೆ ನಟಿ ಆರೋಹಿ ನಾರಾಯಣ್.