ಕೆಲ ಸಿನಿಮಾಗಳು ಹಾಗೆನೇ. ಎಷ್ಟೇ ವರ್ಷ ಉರುಳಿದರೂ ಪದೇ ಪದೇ ನೆನಪಾಗುತ್ತಲೇ ಇರುತ್ತವೆ. ಅಷ್ಟರಮಟ್ಟಿಗೆ ಪ್ರಭಾವ ಬೀರಿರುವ ಸಿನಿಮಾಗಳ ಪೈಕಿ, ಈ ಹಿಂದೆ ಕನ್ನಡದಲ್ಲಿ ಜೋರು ಸದ್ದು ಮಾಡಿದ “ಪೋಲೀಸ್ ಸ್ಟೋರಿ”ಯೂ ಒಂದು. ಹೌದು, “ಪೋಲೀಸ್ ಸ್ಟೋರಿ” ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸುದ್ದಿ ಮಾಡಿದ್ದಂತೂ ನಿಜ. ಅದಕ್ಕೆ ಕಾರಣ, ಚಿತ್ರದ ಕಥೆ ಹಾಗೂ ಸಾಯಿಕುಮಾರ್ ಅವರ ನಟನೆ. ಅಲ್ಲಿ ನಟನೆ ಅನ್ನುವುದಕ್ಕಿಂತ ಅವರ ಡೈಲಾಗ್ ಡಿಲವರಿಯೇ ಚಿತ್ರವನ್ನು ಬಹು ಎತ್ತರಕ್ಕೆ ಕೊಂಡೊಯ್ದ ವಿಷಯ ಎಲ್ಲರಿಗೂ ಗೊತ್ತು. ಆ ಚಿತ್ರದ ಡೈಲಾಗ್ಗಳು ಎಲ್ಲರ ಬಾಯಲ್ಲೂ ಗುನುಗುವಂತಾಗಿದ್ದು ಸುಳ್ಳಲ್ಲ. ಇಂದಿಗೂ ಪಡ್ಡೆ ಹುಡುಗ್ರು ಸಾಯಿಕುಮಾರ್ ಬಾಯಿಂದ ಬಂದಂತಹ ಪೋಲೀಸ್ ಸ್ಟೋರಿ ಸಿನಿಮಾದ ಡೈಲಾಗ್ ಹೇಳ್ತಾರೆ ಅಂದರೆ, ಆ ಸಿನಿಮಾದ ಖಡಕ್ ಮಾತುಗಳು ಎಷ್ಟರಮಟ್ಟಿಗೆ ಪರಿಣಾಮ ಬೀರಿವೆ ಅನ್ನೋದನ್ನು ಊಹಿಸಿಕೊಳ್ಳಿ.
ಅಷ್ಟಕ್ಕೂ ಈಗ ಯಾಕೆ “ಪೋಲೀಸ್ ಸ್ಟೋರಿ” ಸಿನಿಮಾ ವಿಷಯ ಅಂದುಕೊಂಡ್ರಾ? ವಿಷಯವಿದೆ. ಡೈಲಾಗ್ ಕಿಂಗ್ ಸಾಯಿಕುಮಾರ್ ಅಭಿನಯಿಸಿ, ಭರ್ಜರಿ ಯಶಸ್ಸು ಕಂಡಿದ್ದ “ಪೊಲೀಸ್ ಸ್ಟೋರಿ” ಚಿತ್ರ ಇಂದಿಗೆ ಯಶಸ್ವಿ ೨೫ ವರ್ಷಗಳನ್ನು ಪೂರೈಸಿದೆ. ಹೌದು, ಆಗಸ್ಟ್ 16 ಕ್ಕೆ “ಪೋಲಿಸ್ ಸ್ಟೋರಿ” ರಿಲೀಸ್ ಆಗಿ 25 ವರ್ಷಗಳಾಗಿವೆ. 1996 ರಲ್ಲಿ ತೆರೆ ಕಂಡ ಈ ಸಿನಿಮಾ, ಭರ್ಜರಿ ಯಶಸ್ಸು ಪಡೆದಿತ್ತು.
ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು ಹಾಗೂ ಮಲೆಯಾಳಂನಲ್ಲೂ ಈ ಚಿತ್ರ ಗೆಲುವು ಕಂಡಿತ್ತು.
ಇಪ್ಪತ್ತೈದು ವರ್ಷ ತುಂಬಿರುವ ಈ ಸಂದರ್ಭದಲ್ಲಿ ನಟ ಸಾಯಿಕುಮಾರ್ ಅವರು, “ಪೋಲೀಸ್ ಸ್ಟೋರಿ” ಚಿತ್ರದ ಯಶಸ್ಸಿಗೆ ಕಾರಣರಾದ ನಿರ್ಮಾಪಕ, ನಿರ್ದೇಶಕ ಸೇರಿದಂತೆ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
ಚಿತ್ರ ಯಶಸ್ಸು ಕಾಣಲು ಮಾಧ್ಯಮದವರ ಹಾಗೂ ಕನ್ನಡ ಕಲಾಭಿಮಾನಿಗಳ ಪಾಲು ಬಹು ದೊಡ್ಡದು. ಅವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ ಸಾಯಿಕುಮಾರ್. ಇದೇ ಖುಷಿಯಲ್ಲಿರುವ ಸಾಯಿಕುಮಾರ್, ಅದೇ ತಂಡದ ಜೊತೆ ಇಷ್ಟರಲ್ಲೇ ಹೊಸ ಚಿತ್ರ ಶುರುಮಾಡುವ ಯೋಚನೆಯೂ ಇದೆ ಎಂದಿದ್ದಾರೆ.