ಅಮಿತಾಬ್‌ ಜೊತೆ ನಟಿಸಿದ ಅನುಭವ ಹಂಚಿಕೊಂಡ ರಶ್ಮಿಕಾ ಮಂದಣ್ಣ; ಬಚ್ಚನ್‌ ಮಗಳಾಗಿ ಕಾಣಿಸಿಕೊಂಡ ಕನ್ನಡ ಬೆಡಗಿ

ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ, ನೋಡ ನೋಡುತ್ತಿದ್ದಂತೆಯೇ, ಸಾಕಷ್ಟು ಸುದ್ದಿ ಮಾಡಿಬಿಟ್ಟರು. ಕನ್ನಡದಿಂದ ಟಾಲಿವುಡ್‌, ಕಾಲಿವುಡ್‌ಗೆ ಜಂಪ್‌ ಮಾಡಿರುವ ರಶ್ಮಿಕಾ ಬಾಲಿವುಡ್‌ ಅಂಗಳಕ್ಕೂ ಜಿಗಿದಿರುವ ಸುದ್ದಿ ಹೊಸದೇನಲ್ಲ. ಮೊದಲ ಬಾಲ್‌ನಲ್ಲೇ ಸಿಕ್ಸರ್‌ ಬಾರಿಸಿದಂತೆ, ಮೊದಲ ಹಿಂದಿ ಸಿನಿಮಾದಲ್ಲೇ ಬಾಲಿವುಡ್‌ ಲೆಜೆಂಡ್‌ ಅಮಿತಾಬ್‌ ಬಚ್ಚನ್‌ ಅವರೊಂದಿಗೆ ನಟಿಸುವ ಅವಕಾಶ ಪಡೆದರು. “ಗುಡ್‌ ಬೈ” ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ಅಮಿತಾಬ್‌ ಬಚ್ಚನ್‌ ಜೊತೆ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಯಾವುದೇ ಕಲಾವಿದ ಅಥವಾ ಕಲಾವಿದೆಗೆ ಅಮಿತಾಬ್ ಜೊತೆ ನಟಿಸಬೇಕೆಂಬ ಹಂಬಲ ಇದ್ದೇ ಇರುತ್ತೆ. ಆದರೆ, ಅದು ಅದೃಷ್ಟವಂತರಿಗೆ ಮಾತ್ರ ಆ ಅವಕಾಶ ಸಿಗುತ್ತೆ. ಅಂಥದ್ದೊಂದು ಅವಕಾಶ ರಶ್ಮಿಕಾ ಮಂದಣ್ಣ ಅವರಿಗೆ ಬಹುಬೇಗ ಸಿಕ್ಕಿದ್ದು, ನಿಜಕ್ಕೂ ತಮಾಷೆಯ ಮಾತಲ್ಲ.
ಅಂದಹಾಗೆ, ರಶ್ಮಿಕಾ ಮಂದಣ್ಣ ಅವರು, “ಗುಡ್‌ ಬೈ” ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸಿದ ಅನುಭವ ಕುರಿತು ಮಾಧ್ಯಮಗಳ ಜೊತೆ ಮಾತಾಡಿದ್ದಾರೆ. “ನಾನು ನಿಜಕ್ಕೂ ಅದೃಷ್ಟವಂತೆ. ಬಾಲಿವುಡ್‌ ಹಿರಿಯ ನಟ, ಅಮಿತಾಬ್‌ ಬಚ್ಚನ್ ಅವರ ಜೊತೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಅದ್ಭುತ ಅನುಭವ.

ಯಾವುದೇ ಚಿತ್ರತಂಡವಿರಲಿ, ಅಲ್ಲಿ ಸಾಕಷ್ಟು ದಿನಗಳ ಕಾಲ ಚಿತ್ರೀಕರಣದಲ್ಲಿ ತೊಡಗಿದರೆ, ಅಲ್ಲಿ ನಟಿಸುವ ಕಲಾವಿದರೊಂದಿಗೆ ಒಂದಷ್ಟು ಸಲುಗೆ ಇದ್ದೇ ಇರುತ್ತೆ. ಆ ನಂತರ ಅವರೊಂದಿಗೆ ಕ್ಯಾಮೆರಾ ಮುಂದೆ ನಿಂತು ಅಭಿನಯಿಸುವುದು ಸುಲಭವಾಗುತ್ತೆ. ನನಗೂ ಇಲ್ಲಿ ಹಾಗೆಯೇ ಆಗಿದೆ. ಅಮಿತಾಬ್‌ ಬಚ್ಚನ್ ಅವರೊಟ್ಟಿಗೆ ಬಹಳ ಕಂಫರ್ಟ್‌ ಆಗಿ ಕೆಲಸ ಮಾಡಿದೆ. ಆ ಚಿತ್ರದ ನಿರ್ದೇಶಕರು ಹಾಗೂ ಸೆಟ್‌ನಲ್ಲಿದ್ದ ಎಲ್ಲರಿಗೂ ನನ್ನ ಕೆಲಸ ಇಷ್ಟವಾಗಿದೆʼ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.


ಚಿತ್ರದಲ್ಲಿ ರಶ್ಮಿಕಾ ಅವರು ಅಮಿತಾಬ್ ಬಚ್ಚನ್ ಮಗಳ ಪಾತ್ರ ಮಾಡಿದ್ದಾರೆ. ಅದೊಂದು ಅಪ್ಪ-ಮಗಳ ಸಂಬಂಧ ಕುರಿತ ಕಥೆ. ಇಡೀ ಸಿನಿಮಾ ಅಪ್ಪ-ಮಗಳ ಸುತ್ತವೇ ಸುತ್ತುತ್ತದೆ. ಇನ್ನು, ಈ ಚಿತ್ರಕ್ಕೆ ವಿಕಾಸ್ ಭಾಲ್ ನಿರ್ದೇಶಕರು. ಬಾಲಾಜಿ ಮೋಶನ್ ಪಿಕ್ಚರ್ಸ್, ರಿಲಯನ್ಸ್ ಎಂಟರ್ಟೈನ್‌ಮೆಂಟ್‌ ನಿರ್ಮಾಣ ಮಾಡಿದೆ. ಹಿರಿಯ ನಟಿ ನೀನಾ ಗುಪ್ತಾ, ಶಿವಿನ್ ನಾರಂಗ್ ಇತರರು ನಟಿಸಿದ್ದಾರೆ.
ಸದ್ಯ ರಶ್ಮಿಕಾ ಮಂದಣ್ಣ ಅವರು, ಬ್ಯುಝಿಯಾಗಿದ್ದಾರೆ. ತೆಲುಗಿನ ‘ಪುಷ್ಪ’ ಚಿತ್ರದ ಶೂಟಿಂಗ್‌ ನಡೆಯುತ್ತಿದೆ. ‘ಆಡುವಾಳ್ಳು ಮೀಕು ಜೋಹಾರ್ಲುʼ ಚಿತ್ರ ಕೂಡ ಇತ್ತೀಚೆಗೆ ಸೆಟ್ಟೇರಿದೆ. ಇದರೊಂದಿಗೆ ಸ್ಟಾರ್ ನಟ ವಿಜಯ್‌ ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಹಿಂದಿಯಲ್ಲೂ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ‘ಮಿಷನ್ ಮಜ್ನು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದೇನೆ ಇರಲಿ, ಬಾಲಿವುಡ್‌ನಲ್ಲಿ ಗಟ್ಟಿ ನೆಲೆಯೂರುವ ಸಲುವಾಗಿ ಮುಂಬೈನಲ್ಲಿ ರಶ್ಮಿಕಾ ಮಂದಣ್ಣ ಹೊಸ ಮನೆ ಖರೀದಿಸಿದ್ದೂ ಹೌದು.

Related Posts

error: Content is protected !!