ಚಂದನವನದ ಚೆಂದದ ಚೆಲುವೆ, ತುಪ್ಪದ ಬೆಡಗಿ ಅಂತನೇ ಕರೆಸಿಕೊಳ್ಳುವ ನಟಿ ರಾಗಿಣಿಗೆ 2021 ‘ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ’ ಅವಾರ್ಡ್ ಲಭಿಸಿದೆ. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ರಾಗಿಣಿ ಮಾಡಿಕೊಂಡು ಬಂದಂತಹ ಸಮಾಜಮುಖಿ ಕಾರ್ಯವನ್ನು ಗುರುತಿಸಿದ ಮುಂಬೈ ಮೂಲದ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿಯು ನಟಿ ರಾಗಿಣಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಅಂದ ಹಾಗೆ, ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿಯು ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಅವರ ಮೊಮ್ಮಗನ ನೇತೃತ್ವದ ಸಂಸ್ಥೆ.
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲೇ ಈ ಅವಾರ್ಡ್ ನ ಪಡೆದಿರುವುದು ಒನ್ ಅಂಡ್ ಓನ್ಲೀ ರಾಗಿಣಿ ಮಾತ್ರ. ಅದು ಸಮಾಜಮುಖಿ ಕೆಲಸಕ್ಕೆ ಎಂಬುದು ಗಮನಾರ್ಹದ ಸಂಗತಿ. ನಟಿ ರಾಗಿಣಿ ಸಮಾಜಮುಖಿ ಕೆಲಸಗಳಲ್ಲಿ ಮೊದಲಿನಿಂದಲೂ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ, ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ರಾಗಿಣಿಯ ನೆರವಿನ ಹಸ್ತದ ಕಾರ್ಯ ಶ್ಲಾಘನೀಯವಾದದ್ದು.
ಹೌದು, ಮನೆಯಿಂದ ಕಾಲ್ತೆಗೆದರೆ ಎಲ್ಲಿ ಕೊರೊನಾ ಅಟ್ಯಾಕ್ ಆಗುತ್ತೋ ಎಂಬ ಭಯದಲ್ಲಿ ಬದುಕಿದ್ದಂತಹ ಸಂದರ್ಭದಲ್ಲಿ ನಟಿ ರಾಗಿಣಿ ಬೀದಿಗಿಳಿದರು. ನಿರಾಶ್ರಿತರು, ನಿರ್ಗತಿಕರು,
ಅಸಹಾಯಕರು, ಬಡವರು ಸೇರಿದಂತೆ ಯಾರೆಲ್ಲಾ ಕೊರೊನಾ ಹೊಡೆತಕ್ಕೆ ಸಿಲುಕಿ ಒದ್ದಾಡುತ್ತಿದ್ದರೋ, ಯಾರೆಲ್ಲಾ ಒಪ್ಪೊತ್ತಿನ ಊಟಕ್ಕಿಲ್ಲದೇ ಅಲೆಯುತ್ತಿದ್ದರೋ ಅವರೆಲ್ಲರಿಗೂ ತಮ್ಮ ಶಕ್ತಿ ಮೀರಿ ಸಹಾಯ ಹಸ್ತ ಚಾಚಿದರು. ಹಸಿವು ನೀಗಿಸುವ ಕೆಲಸವನ್ನು ನಿತ್ಯನಿರಂತರವಾಗಿ ಮಾಡಿಕೊಂಡು ಬಂದರು.
ಈ ನಡುವೆ ರಾಗಿಣಿ ಜೈಲಿಗೆ ಹೋಗಬೇಕಾದ ಸಂದರ್ಭ ಬಂತು. ಕಾನೂನಿಗೆ ತಲೆಬಾಗಿ ತಿಂಗಳುಗಟ್ಟಲೇ ಜೈಲುವಾಸ ಅನುಭವಿಸಿ ಬಂದ ರಾಗಿಣಿ ‘ ಕರ್ಮ ರಿಟರ್ನ್ ‘ ಇದನ್ನು ಯಾರೂ ತಪ್ಪಿಸೋದಕ್ಕೆ ಆಗಲ್ಲ. ನನ್ನನ್ನ ಸಂಕಷ್ಟಕ್ಕೆ ಸಿಲುಕಿಸಿ ಮುಸಿಮುಸಿ ನಕ್ಕವರು ಒಂದಲ್ಲ ಒಂದು ಅನುಭವಿಸ್ತಾರೆ ನಾನು ಅದನ್ನು ಕಣ್ಣಾರೇ ನೋಡ್ತೀನಿ ಅಂತ ಸವಾಲ್ ಎಸೆದುಕೊಂಡರು. ಮನೆಯಲ್ಲಿ ಪೂಜೆ ಹೋಮ ಹವನ ಮಾಡಿಸಿ ತಂದೆ ತಾಯಿ ಜೊತೆ ಖುಷಿಖುಷಿಯಾಗಿ ಜೀವನ ಕಳೆಯುತ್ತಿದ್ದರು ಈ ನಡುವೆ ಕೊರೊನಾ ಎರಡನೇ ಅಲೆ ಶುರುವಾಯ್ತು. ಈಟೈಮ್ ನಲ್ಲಿ ರಾಗಿಣಿ ಊರ ಉಸಾಬರಿ ನನಗ್ಯಾಕೆ ಬಿಡು, ನಾನೆಷ್ಟು ಸಹಾಯ ಮಾಡಿದರೂ ನನಗೆ ಒಳ್ಳೆದಾಗ್ತಿಲ್ಲ ಅಂತ ಸುಮ್ಮನೇ ಆಗಬಹುದಿತ್ತು. ಆದರೆ, ರಾಗಿಣಿ ಆ ಥರ ಯೋಚನೆ ಮಾಡಲಿಲ್ಲ ಬದಲಾಗಿ ಮತ್ತೆ ಫೀಲ್ಡಿಗಿಳಿದರು. ಹಗಲು ರಾತ್ರಿ ಎನ್ನದೇ ಸಂಕಷ್ಟಧಾರಿಗಳ ನೆರವಿಗೆ ಧಾವಿಸಿದರು. ದೇಹಿ ಎನ್ನುವ ಮೊದಲೇ ದಾನ ಮಾಡುತ್ತಾ, ಹಲವರ ಕಣ್ಣೀರು ಒರೆಸುತ್ತಾ, ಅದೆಷ್ಟೋ ಜನರ ಕಣ್ಣಲ್ಲಿ ದೇವತೆಯಾದರು.
ರಾಗಿಣಿಯ ಮಾನವೀಯ ಮುಖ ಹಾಗೂ ಸಮಾಜಮುಖಿ ಕೆಲಸವನ್ನು ಸೂಕ್ಷವಾಗಿ ಅವಲೋಕಿಸಿದ ದಾದಾ ಸಾಹೇಬ್ ಫಾಲ್ಕೆಯವರ ಮೊಮ್ಮಗನ ನೇತೃತ್ವದ ಸಂಸ್ಥೆ ನಟಿ ರಾಗಿಣಿಗೆ ‘ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಅವಾರ್ಡ್ ನೀಡಿ ಗೌರವಿಸಿದ್ದಾರೆ. ಪ್ರತಿಷ್ಠಿತ ಸಂಸ್ಥೆಯಿಂದ ಅವಾರ್ಡ್ ಗಿಟ್ಟಿಸಿಕೊಂಡಿರುವ ರಾಗಿಣಿ ಸಂತೋಷದ ಅಲೆಯಲ್ಲಿ ತೇಲುತ್ತಾ ಹೆಮ್ಮೆ ಪಡುತ್ತಿದ್ದಾರೆ. ಈ ಅವಾರ್ಡ್ ನನಗೆ ಮಾತ್ರವಲ್ಲ ನನ್ನೊಟ್ಟಿಗೆ ಹಗಲು ರಾತ್ರಿ ಎನ್ನದೇ ಸಮಾಜಮುಖಿ ಕೆಲಸ ಮಾಡಲಿಕ್ಕೆ ಶ್ರಮಿಸಿದ ತಂಡಕ್ಕೆ ಅರ್ಪಿಸುವುದಾಗಿ ಹೇಳಿಕೊಂಡಿದ್ದಾರೆ. ಇದೇ, ರೀತಿ ಸೊಸೈಟಿಯಲ್ಲಿ ತಮ್ಮ ಸೇವೆಯನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ನಿರ್ಧರಿಸಿದ್ದಾರೆ. ಎನಿವೇ ನಟಿ ರಾಗಿಣಿಯ ಸಮಾಜಸೇವೆ ಹೀಗೆ ನಿತ್ಯನಿರಂತರವಾಗಿ ನಡೆಯಲಿ, ಪ್ರತಿಷ್ಠಿತ ಹೆಮ್ಮೆಯ ಪ್ರಶಸ್ತಿಗಳು ರಾಗಿಣಿ ಮುಡಿಗೇರಲಿ. ಗಿಣಿ ಕಂಡ ಎಲ್ಲಾಕನಸು ನನಸಾಗಲಿ ಅಲ್ಲವೇ.