ಕೆಜಿಎಫ್ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲೆ ದೊಡ್ಡ ಸದ್ದು ಮಾಡಿದ ಖ್ಯಾತಿ ನಿರ್ಮಾಪಕ ವಿಜಯ್ ಕಿರಗಂದೂರು ಅವರದ್ದು. ಆ ಚಿತ್ರದ ಮೂಲಕ ಅವರು ನಿರೀಕ್ಷೆ ಮೀರಿ ಗಳಿಕೆ ಕಂಡಡು ಅನ್ನೋದು ಕೂಡ ಅಷ್ಟೇ ಸುದ್ದಿ ಆಗಿದ್ದು ನಿಮಗೂ ಗೊತ್ತು. ಆದರೆ ಅದೇ ಬಂಡವಾಳದ ಮೂಲಕವೇ ಭಾರತೀಯ ಚಿತ್ರರಂಗವೇ ಕನ್ನಡದತ್ತ ತಿರುಗಿ ನೋಡುವ ಹಾಗೆ ಅದ್ದೂರಿ ವೆಚ್ಚದ ಸಿನಿಮಾಗಳ ನಿರ್ಮಾಣದಲ್ಲಿ ಅವರು ಬ್ಯುಸಿ ಆಗಿದ್ದಾರೆನ್ನುವುದು ಒಂದೆಡೆಯಾದರೆ, ಕೊರೊನಾ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸದ್ದಿಲ್ಲದೆ ಸುದ್ದಿ ಮಾಡದೆ ತೆರೆಮರೆಯಲ್ಲಿದ್ದೇ ದೊಡ್ಡ ಪ್ರಮಾಣದಲ್ಲಿ ಸಹಾಯಕ್ಕೆ ನಿಂತಿದ್ದಾರೆನ್ನುವುದು ಇನ್ನೊಂದು ವಿಶೇಷ.
ಹೌದು, ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಸಂಸ್ಥೆಯ ಮಾಲೀಕರಾದ ವಿಜಯ್ ಕಿರಗಂದೂರು, ತಮ್ಮ ಹುಟ್ಟೂರಿನ ಜನರ ಸಹಾಯಕ್ಕೆ ನಿಂತಿದ್ದಾರೆ. ತಮ್ಮ ತವರು ಜಿಲ್ಲೆ ಮಂಡ್ಯ ಆಸ್ಪತ್ರೆಗೆ ಎರಡು ಆಕ್ಸಿಜನ್ ಪ್ಲಾಂಟ್ ಹಾಗೂ ಇಪ್ಪತ್ತು ಆಕ್ಸಿಜನ್ ಸೇರಿದಂತೆ ಉತ್ತಮ ಸೌಲಭ್ಯವುಳ್ಳ ಹಾಸಿಗೆ ನೀಡಿದ್ದಾರೆ. ಹಾಗೆಯೇ ಸಂಕಷ್ಟದಲ್ಲಿದ್ದ ಜನರಿಗೂ ಆರ್ಥಿಕ ನೆರವಿನ ಜತೆಗೆ ಅಗತ್ಯ ಸೌಕರ್ಯ ಕಲ್ಪಿಸಿದ್ದಾರೆ. ಇದು ಅಲ್ಲಿನ ಜನರಿಗೆ ಸಾಕಷ್ಟು ಮೆಚ್ಚುಗೆ ಆಗಿದೆ. ಯಾವುದೇ ಪ್ರಚಾರವಿಲ್ಲದೆ ಅವರು ಈ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಹಾಗೆಯೇ ಕನ್ನಡ ಚಲನಚಿತ್ರ ಕಾರ್ಮಿಕರ, ತಂತ್ರಜ್ಞರ ಹಾಗೂ ಕಲಾವಿದರ ಒಕ್ಕೂಟದ ಸುಮಾರು 3200ಕ್ಕೂ ಅಧಿಕ ಮಂದಿಗೆ ಧನಸಹಾಯ ಮಾಡಿದ್ದಾರೆ.
ಎಲ್ಲಕ್ಕಿಂತಲೂ ಮಿಗಿಲಾಗಿ ಹೊಂಬಾಳೆ ಸಂಸ್ಥೆಯಲ್ಲಿ ಕೆಲಸ ಮಾಡುವ 600 ಕ್ಕೂ ಅಧಿಕ ಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತ ಕೊರೋನ ಲಸಿಕೆ ಹಾಕಿಸಿದ್ದಾರೆ. ಜತೆಗೆ ಅವರ ಎಲ್ಲಾ ಕಷ್ಟಗಳಿಗೂ ಸ್ಪಂದಿಸಿದ್ದಾರೆ. ಅವರ ಸಹಾಯ ಹಸ್ತ ಬರೀ ಕರ್ನಾಟಕಕಷ್ಟೇ ಸೀಮಿತವಾಗಿಲ್ಲ. ತಮ್ಮ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ತೆಲುಗಿನ “ಸಲಾರ್” ಚಿತ್ರಕ್ಕೆ ಕಾರ್ಯನಿರ್ವಹಿಸುತ್ತಿರುವ ಸುಮಾರು 150ಕ್ಕೂ ಅಧಿಕ ಮಂದಿ ಚಿತ್ರತಂಡದ ಸದಸ್ಯರಿಗೂ ಅಗತ್ಯ ನೆರವು ನೀಡಿ, ಅಪತ್ಪಾಂದವ ಎನಿಸಿಕೊಂಡಿದ್ದಾರೆ. ಸಿನಿಮಾ ಕಾರ್ಮಿಕರು ಹಾಗೂ ಮಾಧ್ಯಮದ ಮಿತ್ರರಿಗೂ ಗೊತ್ತಾಗದಂತೆ ನೆರವಿ ಹಸ್ತ ನೀಡಿದ್ದಾರೆ.
ಇದ್ಯಾವುದೇ ಕೆಲಸವನ್ನು ಅವರು ಯಾವುದೇ ಪ್ರಚಾರವಿಲ್ಲದೆ ನಡೆಸಿಕೊಂಡು ಬಂದಿದ್ದಾರೆ.
ಕಳೆದ ವರ್ಷ ಕೊರೋನಾದಿಂದ ಸಿನಿಮಾ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದಾಗಲೂ, ನಿರ್ಮಾಪಕ ವಿಜಯ್ ಕಿರಗಂದೂರು ಅವರ ನೆರವಿಗೆ ಬಂದಿದ್ದರು. ತಮ್ಮ ನಿರ್ಮಾಣದ ಕೆ.ಜಿ.ಎಫ್ ಹಾಗೂ ಯುವರತ್ನ ಚಿತ್ರತಂಡದ ಸದಸ್ಯರ ಖಾತೆಗೆ ಉತ್ತಮ ಮೊತ್ತವನ್ನು ಎರಡು ತಿಂಗಳು ವರ್ಗಾಯಿಸಿದ್ದರು. ಹಾಗೆಯೇ ಕನ್ನಡ ಚಲನಚಿತ್ರ ಕಾರ್ಮಿಕರ ಸಂಕಷ್ಟ ಕ್ಕೂ ನರೆವಾಗಿದ್ದರು. ಕೊರೋನ ಸಂದರ್ಭದಲ್ಲಿ ಅವರು ಯಾವುದೇ ಪ್ರಚಾರವಿಲ್ಲದೇ ಮಾಡಿರುವ ಸತ್ಕಾರ್ಯಗಳು ನಿಜಕ್ಕೂ ಆದರ್ಶನೀಯವಾಗಿವೆ. ಸದ್ದಿಲ್ಲದೆ ಮಾಡುತ್ತಿರುವ ಅವರ ನೆರವಿನ ಕಾರ್ಯಗಳ ಬಗ್ಗೆ ಕೇಳಿದರೆ, ಇದಕ್ಕೆಲ್ಲ ಪ್ರಚಾರ ಬೇಕಾ? ಪ್ರಚಾರಕ್ಕಾಗಿ ಸಂಕಷ್ಟದಲ್ಲಿದ್ದವರ ನೆರವಿಗೆ ನಿಲ್ಲಬೇಕಾ? ಬದಲಿಗೆ ಇದು ನಮ್ಮ ಕರ್ತವ್ಯ. ದೇವರು ಕೊಡುವ ಶಕ್ತಿ ಕೊಟ್ಟಿದ್ದಾನೆ ಅಂದಾಗ, ನಮ್ಮಿಂದಾದಷ್ಟು ಕೆಲಸ ಮಾಡಬೇಕು. ಅದೇ ನಿಜವಾದ ಧರ್ಮ ಅಂತಾರೆ ನಿರ್ಮಾಪಕ ವಿಜಯ್ ಕಿರಗಂದೂರು.