ಡಿಂಪಲ್ ಕ್ವೀನ್ ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಈಗವರು ಶಬರಿ ಆಗಿ ತೆರೆ ಮೇಲೆ ಬರಲು ರೆಡಿ ಆಗಿದ್ದಾರೆ. ಹೌದು, ಶಬರಿ ಹೆಸರಿನ ಚಿತ್ರವೊಂದಕ್ಕೆ ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಫಿಕ್ಸ್ ಆಗಿದ್ದಾರೆ. ಶ್ರೀರಾಮ ನವಮಿ ದಿನವಾದ ಬುಧವಾರ ರಚಿತಾ ರಾಮ್ ಶಬರಿ ಆಗಿ ಅಭಿಮಾನಿಗಳ ಮುಂದೆ ಬರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಹೌದು, ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಹೊಸ ಚಿತ್ರಕ್ಕೆ ಶಬರಿ ಸರ್ಚಿಂಗ್ ಫಾರ್ ರಾವಣ ಅಂತ ಶೀರ್ಷಿಕೆ ಇಡಲಾಗಿದೆ. ಇದು ರಚಿತಾ ಅವರ ೩೬ ನೇ ಸಿನಿಮಾ. ರಾಮ ನವಮಿಯ ವಿಶೇಷವಾಗಿ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ಬಿಡುಗಡೆ ಮಾಡಲಾಗಿದೆ. ಪೋಸ್ಟರ್ ನಲ್ಲಿ ಉಗ್ರ ಅವತಾರ ತಾಳಿರುವ ರಚಿತಾ ಲುಕ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.ಅಂದಹಾಗೆ ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರಕ್ಕೆ ನವೀನ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಷ್ಟು ದಿನ ಇಂಡಸ್ಟ್ರಿನಲ್ಲಿ ಸಂಕಲನಕಾರನಾಗಿ ಗುರುತಿಸಿಕೊಂಡಿದ್ದ ನವೀನ್ ಶಬರಿ ಸಿನಿಮಾ ಮೂಲಕ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದೊಂದು ಮಹಿಳಾ ಪ್ರಧಾನ ಚಿತ್ರ. ಇದರಲ್ಲಿ ರಚಿತಾ ರಾಮ್ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪೋಸ್ಟರ್ ಶೇರ್ ಮಾಡಿರುವ ರಚಿತಾ, ಎಲ್ಲರಿಗೂ ಶ್ರೀರಾಮ ನವಮಿಯ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಹೊಸ ಸಿನಿಮಾಗೆ ಎಲ್ಲರ ಆಶೀರ್ವಾದ ಇರಲಿ ಎಂದು ಕೇಳಿಕೊಂಡಿದ್ದಾರೆ. ಇನ್ನು ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ರಚಿತಾ ರಾಮ್ ಬಳಿ ಸದ್ಯ ಬ್ಯಾಡ್ ಮ್ಯಾನರ್ಸ್, ರಚ್ಚು ಐ ಲವ್ ಯು, ವೀರಂ, ಮ್ಯಾಟ್ನಿ, ಲಿಲ್ಲಿ, ಏಪ್ರಿಲ್, ಡಾಲಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ರಚಿತಾ ಬ್ಯುಸಿಯಾಗಿದ್ದಾರೆ