ಚಂದನವನದ ಬೆಳದಿಂಗಳ ಬಾಲೆ ಸುಮನ್ ನಗರ್ಕರ್ ಅವರ ಹೊಸ ಅವಾತರ ಇದು. ಅವರೀಗ ಮನೋರೋಗ ವೈದ್ಯರು. ಹಾಗಂತ ನಟನೆ, ನಿರ್ಮಾಣ ಅಂತ ಸಿನಿಮಾ ಬದುಕು ಬಿಟ್ಟು ಮೆಂಟಲ್ ಡಾಕ್ಟರ್ ಆಗಿಬಿಟ್ರಾ ಅಂತ ಅಂದುಕೊಳ್ಳಬೇಕಿಲ್ಲ. ನಟಿಯಾಗಿ ಅವರಿಗೀಗ ಸಿಕ್ಕ ಮತ್ತೊಂದು ವಿಭಿನ್ನ ಪಾತ್ರ ಇದು. ಅಂದ ಹಾಗೆ ಈ ಪಾತ್ರಕ್ಕೆ ಅವರು ಬಣ್ಣ ಹಚ್ಚಿರೋದು “ಮೃತ್ಯುಂಜಯʼ ಹೆಸರಿನ ಚಿತ್ರದಲ್ಲಿ.
ಕನ್ನಡ ಸಿನಿಮಾ ಮೃತ್ಯುಂಜಯ ಅಂದಾಕ್ಷಣ ಶಿವರಾಜ್ ಕುಮಾರ್ ಸಿನಿಮಾ ನೆನಪಾಗೋದು ಸಹಜ. ಯಾಕಂದ್ರೆ ತುಂಬಾ ಹಿಂದೆಯೇ ಶಿವರಾಜ್ ಕೂಮಾರ್ ʼಮೃತ್ಯುಂಜಯʼ ನಾಗಿ ಕಾಣಸಿಕೊಂಡಿದ್ರು. ಹಾಗಂತ ನಾವಿಲ್ಲಿ ಹೇಳ್ತಿರೋದು ಈ ಸಿನಿಮಾ ಕಥೆ ಅಲ್ಲ. ಹೊಸಬರ ತಂಡವೊಂದು ಈಗ ಅದೇ ಹೆಸರಲ್ಲಿ ಒಂದು ಸಿನಿಮಾ ಮಾಡಿ ತೆರೆಗೆ ತರಲು ಹೊರಟಿದೆ. ಆ ಸಿನಿಮಾದಲ್ಲಿ ಸುಮನ್ ನಗರ್ಕರ್ ಮನರೋಗ ವೈದ್ಯೆ ಆಗಿ ಕಾಣಸಿಕೊಂಡಿದ್ದಾರಂತೆ. ಸಜ್ಜನ್ ನಿರ್ದೇಶನದ ಈ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ಇತ್ತೀಚೆಗಷ್ಟೇ ನಡೀತು. ಆ ಮೂಲಕ ಚಿತ್ರದ ತಂಡ ಮಾಧ್ಯಮದ ಮುಂದೆ ಬಂದಾಗ ನಟಿ ಸುಮನ್ ನಗರ್ಕರ್ ತಾವು ಮನೋ ವೈದ್ಯೆಯಾಗಿದ್ದ ಕಥೆ ಬಿಚ್ಚಿಟ್ಟರು.
“ ಮೃತ್ಯುಂಜಯ ಅಂದಾಕ್ಷಣ ಶಿವಣ್ಣ ಅಭಿನಯದ ಶಿನಿಮಾ ನೆನಪಾಗುತ್ತೆ. ಆದ್ರೆ ಆ ಸಿನಿಮಾವೇ ಬೇರೆ, ಈ ಸಿನಿಮಾವೇ ಬೇರೆ, ಇದೊಂದು ಹಾರರ್, ಥ್ರಿಲ್ಲರ್ ಕಥಾ ಹಂದರದ ಸಿನಿಮಾ. ತಂಡದಲ್ಲಿರುವವರು ಹೊಸಬರಾದ್ರೂ ಒಳ್ಳೆಯ ರೀತಿಯಲ್ಲೇ ಸಿನಿಮಾ ಮಾಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ನಂಗೆ ಈ ಸಿನಿಮಾ ಅವಕಾಶ ಬಂತು. ಆಗೆಲ್ಲ ಹೊರಗಡೆ ಹೋಗುವುದಕ್ಕೂ ಭಯ ಇತ್ತು. ಆದ್ರೆ ಟೀಮ್ನವ್ರು ತುಂಬಾ ಮುನ್ನೆಚ್ಚರಿಕೆ ವಹಿಸಿ, ಚಿತ್ರೀಕರಣ ಮುಗಿಸಿದ್ರು. ಸ್ಪೆಷಲ್ ಅಂದ್ರೆ ೧೯೨ ಗಂಟೆಗಳಲ್ಲಿ ಈ ಚಿತ್ರದ ಚಿತ್ರೀಕರಣ ಮುಗೀತುʼ ಅಂತ ನಟಿ ಸುಮನ್ ನಗರ್ಕರ್ ಚಿತ್ರದಲ್ಲಿನ ತಮ್ಮ ಪಾತ್ರ ಹಾಗೂ ಚಿತ್ರೀಕರಣದ ಅನುಭವ ಹೇಳಿಕೊಂಡರು.
ಒಂದಷ್ಟು ವರ್ಷಗಳ ಗ್ಯಾಪ್ ಬಳಿಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ʼಇಷ್ಟಕಾಮ್ಯʼ ಚಿತ್ರದೊಂದಿಗೆ ನಟಿ ಸುಮನ್ ನಗರ್ಕರ್ ಮತ್ತೆ ಚಂದನವನದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ನಂತರ ನಿರೀಕ್ಷೆಯಂತೆ ಅವರು ನಟಿಯಾಗಿ ಬ್ಯುಸಿ ಆಗಿದ್ದಾರೆ. ಮೃತ್ಯುಂಜಯ ಸೇರಿದಂತೆ ನಾಲ್ಕೈದು ಚಿತ್ರಗಳಲ್ಲಿ ಅಭಿನಯಿಸಿದ್ದಾರಂತೆ. ಅವೆಲ್ಲ ಈಗ ರಿಲೀಸ್ ಗೆ ರೆಡಿ ಆಗಿವೆ. ಹಾಗೆಯೇ ಅವರು ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಬಬ್ರು ನಂತರ ಬ್ರಾಹ್ಮೀ ಹೆಸರಿನ ಚಿತ್ರವೊಂದನ್ನು ನಿರ್ಮಿಸಿ, ಅದರ ರಿಲೀಸ್ ಗೂ ಸಿದ್ಧತೆ ನಡೆಸಿದ್ದಾರೆ. ಆದರೆ ಕೊರೋನಾ ಪರಿಸ್ಥಿತಿ ಅವರಲ್ಲೂ ಆತಂಕ ಸೃಷ್ಟಿಸಿದೆ.
“ ಎಲ್ಲವೂ ಸರಿಹೋಯ್ತು ಅನ್ನುವಷ್ಟರಲ್ಲಿಯೇ ಈಗ ಕೊರೋನಾ ಮತ್ತೆ ಹೆಚ್ಚಾಗಿದೆ. ಜನರ ಜೀವನದ ಜತೆಗೆ ಚಿತ್ರೋದ್ಯಮದ ಪರಿಸ್ಥಿತಿಯೂ ಹದಗೆಡುತ್ತಿದೆ. ಸಿನಿಮಾ ನಿರ್ಮಾಣ ಮಾಡಿ, ರಿಲೀಸ್ ಗೆ ಕಾಯುತ್ತಿದ್ದೇವೆ. ಅದರ ಮೇಲೆ ಸಾಕಷ್ಟು ಬಂಡವಾಳವೂ ಹಾಕಿದ್ದೇವೆ. ಆದರೆ ಅದರ ರಿಲೀಸ್ ಗೆ ಒಳ್ಳೆಯ ಸಮಯವೇ ಸಿಗುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಆದರೆ, ಸಿನಿಮಾಗಳ ಗತಿಯೇನೋ ಅನ್ನೋದು ಆತಂಕ ನಿರ್ಮಾಣವಾಗಿದೆʼ ಎನ್ನುತ್ತಾರವರು. ಸದ್ಯಕ್ಕೆ ನಟನೆಯಲ್ಲಿ ಬ್ಯುಸಿ ಆಗಿರುವ ಅವರು, ಹೊಸ ಅವಕಾಶಗಳತ್ತ ಮುಖ ಮಾಡಿದ್ದು, ಒಳ್ಳೆಯ ಪಾತ್ರಗಳು ಸಿಕ್ಕರೆ ಹೊಸಬರ ಸಿನಿಮಾಗಳಲ್ಲೂ ನಾನು ಅಭಿನಯಿಸಲು ರೆಡಿ ಎನ್ನುತ್ತಾರೆ ನಟಿ ಸುಮನ್ ನಗರ್ಕರ್.