ಕನ್ನಡದ ಬಹುನಿರೀಕ್ಷಿತ ಸುದೀಪ್ ಅಭಿನಯದ “ವಿಕ್ರಾಂತ್ ರೋಣ” ಸಿನಿಮಾ ಆರಂಭದಿಂದಲೂ ಒಂದಲ್ಲ ಒಂದು ಕುತೂಹಲ ಮೂಡಿಸುತ್ತಲೇ ಇತ್ತು. ಶೀರ್ಷಿಕೆಯಿಂದ ಹಿಡಿದು, ಪೋಸ್ಟರ್ವರೆಗೂ ಸಿನಿಮಾ ಜೋರು ಸದ್ದು ಮಾಡಿತ್ತು. ಯಾವಾಗ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತೋ ಎಂದು ಕಾದು ಕುಳಿತಿದ್ದವರಿಗೆ ಈಗ ಸ್ವತಃ ಸುದೀಪ್ ಅವರೇ ಉತ್ತರ ಕೊಟ್ಟಿದ್ದಾರೆ. ಹೌದು, “ವಿಕ್ರಾಂತ್ ರೋಣ” ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ ಸುದೀಪ್. ತಮ್ಮ ಟ್ವಿಟ್ಟರ್ನಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, “ವಿಕ್ರಾಂತ್ ರೋಣ” ಸಿನಿಮಾದ ಚಿತ್ರೀಕರಣ ಸಿದ್ದತೆ ಮತ್ತು ಪ್ರಕ್ರಿಯೆಯ ಆನಂದವನ್ನು ಅನುಭವಿಸಿದ ನಂತರ ಈಗ ರೋಮಾಂಚನಕಾರಿ ಸುದ್ದಿಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಮಯ! “ವಿಕ್ರಾಂತ ರೋಣ” ಸಿನಿಮಾ ಆಗಸ್ಟ್ 19 ರಂದು ಭಾರತದಾದ್ಯಂತ ಬಿಡುಗಡೆಯಾಗಲಿದೆ” ಎಂದು ತಿಳಿಸಲು ನಮ್ಮ “ವಿಕ್ರಾಂತ್ ರೋಣ” ತಂಡವು ಹರ್ಷಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.
ಚಿತ್ರಕ್ಕೆ ಮೊದಲು “ಪ್ಯಾಂಟಮ್” ಎಂಬ ಶೀರ್ಷಿಕೆ ಇತ್ತು. ಅದನ್ನು ಬದಲಿಸಿ, “ವಿಕ್ರಾಂತ್ ರೋಣ” ಎಂದು ನಾಮಕರಣ ಮಾಡಲಾಯಿತು. ದುಬೈನ ಅತೀ ಎತ್ತರದ ಬುರ್ಜಾ ಖಲೀಫ ಮೇಲೆ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಲಾಯಿತು. ಟೈಟಲ್ ಎಷ್ಟು ಫೋರ್ಸ್ ಆಗಿದೆಯೋ, ಕಥೆ ಮತ್ತು ಪಾತ್ರ ಕೂಡ ಅಷ್ಟೇ ಫೋರ್ಸ್ ಆಗಿದೆ ಎಂಬ ನಂಬಿಕೆ ಸುದೀಪ್ ಅವರಿಗಿದೆ.
ಇನ್ನು, ಈ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಜಾಕ್ ಮಂಜು ಅವರ ನಿರ್ಮಾಣ ಈ ಚಿತ್ರಕ್ಕಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
ಸದ್ಯಕ್ಕೆ “ವಿಕ್ರಾಂತ್ ರೋಣ” ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದ ಸುದೀಪ್ ಫ್ಯಾನ್ಸ್ಗೆ ಈಗ ಆಗಸ್ಟ್ ೧೯ ಡೇಟ್ ಕಣ್ಣೆದುರಲ್ಲೇ ಬಂದಂತಾಗಿರುವುದು ಸತ್ಯ. ಅಂದಹಾಗೆ, ಆಗಸ್ಟ್. ೧೯ ಗುರುವಾರ. ಅಂದೇ ಚಿತ್ರವನ್ನು ದೇಶಾದ್ಯಂತ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.