ನಾನು ಪಕ್ಕಾ ಮಾಸ್ ಅಂಡ್ ಕ್ಲಾಸ್ ಪವರ್ ಫುಲ್ ಗೌಡ…..ಅರೆ, ಇದೇನು ಗೌಡ್ರು ದರ್ಬಾರ್ ಶುರುವಾಯ್ತು ಅಂತ ಅನ್ನೊಂಡ್ರಾ, ಇಲ್ಲ. ಇದು ಅರ್ಜುನ್ ಗೌಡನ ಘರ್ಜನೆ. ಹೌದು, ಸ್ಯಾಂಡಲ್ ವುಡ್ ನಲ್ಲಿ ಅರ್ಜುನ್ ಗೌಡನ ಹವಾ ಶುರುವಾಗಿದೆ. ತಾನು ಬರೀ ಗೌಡ ಅಲ್ಲ, ಪಕ್ಕಾ ಕ್ಲಾಸ್-ಮಾಸ್ ಪವರ್ಫುಲ್ ಗೌಡ ಅಂತಿದ್ದಾನೆ ಈತ. ಅದೇ ಕಾರಣಕ್ಕೆ ಅದರ ಎರಡು ನಿಮಿಷಗಳ ಟ್ರೇಲರ್. ಅನ್ನ ಬೆಂದಿದೆ ಅನ್ನೋದಿಕ್ಕೆ ಇಡೀ ಪಾತ್ರೆಗೇ ಕೈ ಹಾಕಬೇಕಿಲ್ಲ. ಅದರ ಒಂದ್ ಅಗುಳು ಸಾಕಂತೆ. ಹಾಗೆಯೇ ಈ ಅರ್ಜುನ್ ಗೌಡ ಹವಾ ಹೆಂಗಿದೆ ಅಂತ ಗೊತ್ತಾಗುವುದಿಕ್ಕೆ ಇಡೀ ಟ್ರೇಲರ್ ನೋಡಿ ಡಿಸೈಡ್ ಮಾಡಬೇಕಿಲ್ಲ, ಅದರ ಒಂದ್ ಆಕ್ಷನ್ ಸೀನ್ ಸಾಕು. ಟ್ರೇಲರ್ ಸಖತ್ ಖಡಕ್ ಆಗಿ ಮೂಡಿ ಬಂದಿದೆ. ಆಕ್ಷನ್ ಫ್ರಿನ್ಸ್ ಪ್ರಜ್ವಲ್ ದೇವರಾಜ್ ಅಂದ್ರೆ ಹೆಂಗಿರಬೇಕು ಅಂತ ಅವರ ಫ್ಯಾನ್ಸ್ ಬಯಸ್ತಾರೋ ಆ ರೀತಿಯಲ್ಲಿ ಸಿನಿಮಾ ಕೂಡ ಬಂದಿದೆ ಅನ್ನೋದಿಕ್ಕೆ ಅದರ ಸ್ಯಾಂಪಲ್ ಈ ಟ್ರೇಲರ್.
ಅರ್ಜುನ್ ಗೌಡ ಅಂದಾಕ್ಷಣ, ಇದು ತೆಲುಗಿನ ಅರ್ಜುನ್ ರೆಡ್ಡಿಯ ಕಾಫಿ ಅಂತ ಕೆಲವ್ರು ಮಾತನಾಡಿದ್ರಂತೆ. ಆದ್ರೆ ಈ ಗೌಡ, ರೆಡ್ಡಿಗೂ ಮೀರಿದ ಪಕ್ಕಾ ಮಾಸ್ ಅಂಡ್ ಕ್ಲಾಸ್ ಮಿಶ್ರಣದಲ್ಲಿ ಎದ್ದು ಬಂದವ ಅಂತ ತೋರಿಸಿದೆ ಈ ಟ್ರೇಲರ್. ಬದಲಾದ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಆಕ್ಷನ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹೇಗಿರಬೇಕೋ ಹಾಗೆಯೇ ಅವರನ್ನು ಹೊಸ ಲುಕ್ ನಲ್ಲಿ ತೆರೆ ಮೇಲೆ ತೋರಿಸಲು ಹೊರಟಿದ್ದಾರೆ ನಿರ್ದೇಶಕ ಲಕ್ಕಿ ಶಂಕರ್. ನಿರ್ದೇಶಕ ಲಕ್ಕಿ ಶಂಕರ್ ಹಿಂದೆ “ನೈಂಟಿ’ ಹೆಸರಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಅದೊಂದು ಪಕ್ಕಾ ಕಾಮಿಡಿ ಪ್ರಧಾನ ಸಿನಿಮಾ. ಆ ಗೆರೆಯನ್ನು ಈಗವರು ಕಂಪ್ಲೀಟ್ ದಾಟಿಕೊಂಡೆ ಈ ಸಿನಿಮಾ ಮಾಡಿದ್ದಾರೆ. ಇದೊಂದು ಪಕ್ಕಾ ಆಕ್ಷನ್ ಸಿನಿಮಾ. ಮೈ ನವಿರೇಳಿಸುವ ಆಕ್ಷನ್ ಸೀನ್ ಗಳ ಜತೆಗೆ ಕಾಮಿಡಿ, ಸೆಂಟಿಮೆಂಟ್, ರೋಮಾನ್ಸ್ ಎನ್ನುವ ಎಲಿಮೆಂಟ್ಸ್ ಗಳನ್ನು ಪ್ರೇಕ್ಷಕನಿಗೆ ಉಣಬಡಿಸಬೇಕೆನ್ನುವ ಛಲದಲ್ಲಿ ಈ ಸಿನಿಮಾ ಮಾಡಿದಂತಿದೆ.
ಟ್ರೇಲರ್ ಆರಂಭವೇ ಒಂದು ಕಥೆ ಹೇಳುತ್ತೆ. ಕನ್ನಡ ಎಕ್ಸ್ ಪ್ರೆಸ್ ಚಾನೆಲ್ ನ ಮುಖ್ಯಸ್ಥರ ಕೊಲೆ ಆಗುತ್ತೆ. ಆ ಮೂಲಕ ಅಲ್ಲಿ ಹೊಡೆದಾಟ, ಹುಡುಕಾಟಗಳು ಶುರುವಾಗುತ್ತವೆ. ಅದರ ಸುತ್ತ ಒಂದಷ್ಟು ಪ್ರೇಮ, ಕಾಮ, ವಿರಹ, ಕಾಮಿಡಿ, ಜತೆಗೆ ಸೆಂಟಿಮೆಂಟ್ ಎಳೆಗಳ ಮಸಾಲೆ ಹಾಕಲಾಗಿದೆ. ಟ್ರೇಲರ್ ಔಟ್ ಲುಕ್ ಇದಾದರೆ, ನಿರ್ಮಾಣ ಅಂತ ಬಂದಾಗ ಈ ಸಿನಿಮಾದ ಮೇಲೆ ದೊಡ್ಡ ಕುತೂಹಲ ಸಹಜವೇ. ಯಾಕಂದ್ರೆ ಇದು ರಾಮು ನಿರ್ಮಾಣದ ಸಿನಿಮಾ. ಮೊದಲ ಬಾರಿಗೆ ಕೋಟಿ ಸುರಿದು ಸಿನಿಮಾ ಮಾಡಿದವರು ರಾಮು. ಹಾಗಾಗಿ ಈ ಸಿನಿಮಾದಲ್ಲಿ ಅದ್ದೂರಿ ತನಕ್ಕೆ ಕೊರತೆ ಇರೋದಿಲ್ಲ ಅನ್ನೋದನ್ನು ಈ ಟ್ರೇಲರ್ ಕೂಡ ತೋರಿಸಿದೆ.
ಟೈಟಲ್ ಫೋರ್ಸಿಗೆ ತಕ್ಕಂತೆ ಇದರ ತಾರಾಗಣವೂ ಕೂಡ ದೊಡ್ಡದ್ದು. ಪ್ರಜ್ವಲ್ ದೇವರಾಜ್, ಪ್ರಿಯಾಂಕಾ ತಿಮ್ಮೇಶ್ ಚಿತ್ರದ ಮೈನ್ ಅಟ್ರ್ಯಾಕ್ಷನ್. ಅವರ ಜತೆಗೆ ರಾಹುಲ್ ದೇವ್, ಸ್ಪರ್ಶಾ ರೇಖಾ, ಸಾಧು ಕೋಕಿಲ, ಕಡ್ಡಿಪುಡಿ ಚಂದ್ರು, ದೀಪಕ್ ಶೆಟ್ಟಿ, ದಿನೇಶ್ ಮಂಗಳೂರು ಮತ್ತಿತರರು ಇಲ್ಲಿದ್ದಾರೆ. ಟ್ರೇಲರ್ ಕುತೂಹಲಕಾರಿ ಆಗಿದೆ. ಪ್ರಜ್ವಲ್ ತಮ್ಮ ಎಂದಿನ ಮಾಸ್ ಲುಕ್ ಜತೆಗೆಯೇ ಒಂದಷ್ಟು ಸೆಂಟಿಮೆಂಟ್, ಹಾಗೆಯೇ ರೋಮಾನ್ಸ್ ದೃಶ್ಯಗಳ ಸಮ್ಮಿಳಿತದ ಹೊಸ ಕಥೆಯಲ್ಲಿ ಕಾಣಿಸಿಕೊಳ್ಳುವುದು ಖಚಿತ ಎನ್ನುವ ಭರವಸೆ ಹುಟ್ಟು ಹಾಕಿದೆ ಈ ಟ್ರೇಲರ್. ಮುಂದಿನದು ಚಿತ್ರದ ರಿಲೀಸ್ ನಿರೀಕ್ಷೆ.