ಕನ್ನಡದಲ್ಲಿ ಹೊಸಬರೇ ಸೇರಿ ಮಾಡಿದ “ಮೋಕ್ಷ” ಚಿತ್ರ ಈಗಾಗಲೇ ಬಿಡುಗಡೆಯ ದಿನವನ್ನು ಘೋಷಿಸಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಏಪ್ರಿಲ್ ೧೬ರಂದು ರಾಜ್ಯಾದ್ಯಂತ ಬಿಡುಗಡೆ ಕಾಣಬೇಕಿತ್ತು. ಆದರೆ, ಕೊರೊನಾ ಭಯ ಹೆಚ್ಚಾಗಿದ್ದರಿಂದ ಚಿತ್ರತಂಡ, “ಮೋಕ್ಷ” ಚಿತ್ರದ ಬಿಡುಗಡೆಯನ್ನು ಸ್ವಲ್ಪ ದಿನಗಳ ಕಾಲ ಮುಂದಕ್ಕೆ ಹಾಕಿದೆ.
ಹೌದು, ಈಗಾಗಲೇ ಟ್ರೇಲರ್ ಮೂಲಕ ಜೋರು ಸದ್ದು ಮಾಡಿರುವ ಸಸ್ಪೆನ್ಸ್ ಥ್ರಿಲ್ಲರ್ “ಮೋಕ್ಷ” ಚಿತ್ರ ಏಪ್ರಿಲ್ 16 ರಂದು ಬಿಡುಗಡೆ ಮಾಡಲು ನಿರ್ದೇಶಕ ಸಮರ್ಥ್ ನಾಯಕ್ ಅವರು ತಯಾರಾಗಿದ್ದರು. ರಾಜ್ಯದಲ್ಲಿ ಪುನಃ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ತೋರಿಸುತ್ತಿರುವುದರಿಂದ ಚಿತ್ರವನ್ನು ಸ್ವಲ್ಪ ದಿನಗಳ ಕಾಲ ಕಾದು ಆ ನಂತರ ಬಿಡುಗಡೆ ಮಾಡಲು ಯೋಚಿಸಿದ್ದಾಗಿ ಹೇಳಿದ್ದಾರೆ ನಿರ್ಮಾಪಕ ಕಮ್ ನಿರ್ದೇಶಕ ಸಮರ್ಥ್ ನಾಯಕ್. ಚಿತ್ರದ ಹಾಡುಗಳಿಗೆ ಕಿಶನ್ ಮೋಹನ್ ಹಾಗೂ ಸಚಿನ್ ಬಾಲು ಸಂಗೀತ ನೀಡಿದ್ದಾರೆ.
ಹಿನ್ನೆಲೆ ಸಂಗೀತ ಕಿಶನ್ ಮೋಹನ್ ಮಾಡಿದ್ದಾರೆ. ಗುರುಪ್ರಶಾಂತ್ ರೈ, ಜೋಮ್ ಜೋಸಫ್, ಕಿರಣ್ ಹಂಪಾಪುರ ಛಾಯಾಗ್ರಹಣ ಮಾಡಿದರೆ, ವರುಣ್ ಕುಮಾರ್ ಅವರ ಸಂಕಲನವಿದೆ. ಚಿತ್ರದಲ್ಲಿ ಮೋಹನ್ ಧನರಾಜ್ ಮತ್ತು ಆರಾಧ್ಯ ಲಕ್ಷ್ಮಣ್ ಪ್ರಮುಖ ಆಕರ್ಷಣೆಯಾಗಿದ್ದಾರೆ. ಉಳಿದಂತೆ ತಾರಕ್ ಪೊನ್ನಪ್ಪ, ಭೂಮಿ ಅಜ್ಞಾನಿ, ಪ್ರಶಾಂತ್ ನಟನ ಇತರರು ಇದ್ದಾರೆ.