ಕನ್ನಡದಲ್ಲಿ “ರೂಮ್ ಬಾಯ್” ಸಿನಿಮಾ ಶುರುವಾಗಿದ್ದು ಗೊತ್ತೇ ಇದೆ. ಆ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆದು ಈಗ ಎರಡನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದೆ. ಇನ್ನೂ ಮೂರನೇ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿರುವ ಚಿತ್ರತಂಡ, ಸಾಕಷ್ಟು ಉತ್ಸಾಹದಲ್ಲೇ ಕೆಲಸ ಮಾಡುತ್ತಿದೆ. ಅದಕ್ಕೆ ಕಾರಣ, ಸಿನಿಮಾ ಕಂಪ್ಲೀಟ್ ಆಗುವ ಮೊದಲೇ ಒಂದಷ್ಟು ಮಂದಿ ಪರಭಾಷೆ ಡಬ್ಬಿಂಗ್ ರೈಟ್ಸ್ ಕೇಳುತ್ತಿರುವುದು.
ಆ ಕುರಿತು ಮಾತುಕತೆ ನಡೆಸುತ್ತಿರುವ ಚಿತ್ರತಂಡ, ಕಂಪ್ಲೀಟ್ ಮಾಡಿದ ಬಳಿಕ ಆ ಬಗ್ಗೆ ಯೋಚಿಸುವ ಮಾತನಾಡುತ್ತಿದೆ. ಇನ್ನು, ಈಗಾಗಲೇ ಶೇ.೮೦ ರಷ್ಟು ಚಿತ್ರೀಕರಣ ಮುಗಿಸಿದೆ. ಲಿಖಿತ್ ಸೂರ್ಯ ಇಲ್ಲಿ ಹೀರೋ ಅಷ್ಟೇ ಅಲ್ಲ, ನಿರ್ಮಾಪಕರೂ ಹೌದು. ತಮ್ಮ “ಐ ಕ್ಯಾನ್” ಪ್ರೊಡಕ್ಷನ್ನಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು ಈ ಚಿತ್ರವನ್ನು ರವಿ ನಾಗಡದಿನ್ನಿ ನಿರ್ದೇಶನ ಮಾಡುತ್ತಿದ್ದಾರೆ.
ಲಿಖಿತ್ ಸೂರ್ಯ, ನಟ
ಲಿಖಿತ್ ಸೂರ್ಯ ಅವರಿಗೆ “ರೂಮ್ ಬಾಯ್” ನಾಲ್ಕನೇ ಚಿತ್ರ. ಈ ಹಿಂದೆ “ಲೈಫ್ ಸೂಪರ್ʼ, ʼಆಪರೇಷನ್ ನಕ್ಷತ್ರʼ ಹಾಗೂ ತೆಲುಗಿನ “ರಾಮಾಪುರಂ” ಹೆಸರಿನ ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ್ದಾರೆ. ಅವರೀಗ “ರೂಮ್ ಬಾಯ್” ಎಂಬ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳೋಕೆ ರೆಡಿಯಾಗಿದ್ದಾರೆ ಎಂಬುದು ವಿಶೇಷ.
ತಾರಾಗಣದಲ್ಲಿ ಲಿಖಿತ್ ಅವರ ಜೊತೆಗೆ ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ವಜ್ರಾಂಗ್ ಶೆಟ್ಟಿ ಹಾಗೂ ರೋಶನ್ ಕೊಡಗು ಸೇರಿದಂತೆ ನಾಯಕಿ ರಕ್ಷಾ, ಪದ್ಮಿನಿ, ಚಂದನಾ, ಪ್ರಗ್ಯಾ ಹಾಗೂ ಜನನಿ, ರಜನಿ, ಭಾನುಪ್ರಕಾಶ್ ಅಭಿನಯಿಸಿದ್ದಾರೆ. ವಿಶೇಷವಾಗಿ ಇಲ್ಲಿ ರಘುಶಿವಮೊಗ್ಗ ಅವರು ಕೂಡ ಸ್ಪೆಷಲ್ ಪಾತ್ರದ ಮೂಲಕ ಎಂಟ್ರಿಯಾಗಿದ್ದಾರೆ.
ಐವರು ನಾಯಕರು ಹಾಗೂ ಅಷ್ಟೇ ಸಂಖ್ಯೆಯ ನಾಯಕಿಯರ ಸುತ್ತ ನಡೆಯುವ ಒಂದೊಳ್ಳೆಯ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇಲ್ಲಿದೆ. ಇನ್ನು, ಯುವ ಪ್ರತಿಭೆ ರವಿ ನಾಗಡದಿನ್ನಿ ನಿರ್ದೇಶಿಸುತ್ತಿದ್ದು, ಇವರಿಗೆ ಇದು ಮೊದಲ ಚಿತ್ರ. ಸಿನಿಮಾ ಮೇಲಿನ ಪ್ರೀತಿ ಮತ್ತು ಆಸಕ್ತಿಯಿಂದಾಗಿ ಎಂಜಿನಿಯರ್ ವೃತ್ತಿ ಬಿಟ್ಟು ಬಂದು ನಿರ್ದೇಶಕರಾಗಿದ್ದಾರೆ.
ರಘು ಶಿವಮೊಗ್ಗ
ಹಲವು ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ದುಡಿದು, ನಿರ್ದೇಶನದ ಪಟ್ಟು ಕಲಿತುಕೊಂಡು ಈಗ ತಾವೇ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ರವಿ ನಾಗಡದಿನ್ನಿ, ನಿರ್ದೇಶಕ
ನಾಯಕ ನಟ ಲಿಖಿತ್ ಅವರಿಗೂ ಇಂತಹದೇ ವೃತ್ತಿ ಬದುಕಿನ ಹಿನ್ನೆಲೆ ಇದೆ. ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ವಿದೇಶಕ್ಕೆ ಹಾರಿ, ಕೈ ತುಂಬಾ ಸಂಪಾದನೆ ಮಾಡಿಕೊಂಡಿದ್ದ ಲಿಖಿತ್ ಈಗ ನಟ ಆಗಿದ್ದು ಕೂಡ ಸಿನಿಮಾದ ಮೇಲಿನ ಪ್ರೀತಿಗಾಗಿಯೇ. ಇವರಿಬ್ಬರು ಹಣ ಮಾಡುವುದಕ್ಕಾಗಿ ಸಿನಿಮಾ ಜಗತ್ತಿಗೆ ಬಂದವರಲ್ಲ ಎನ್ನುವುದನ್ನು ಅವರ ವೃತ್ತಿಯ ಹಿನ್ನೆಲೆಯೇ ಹೇಳುತ್ತೆ. ಒಟ್ಟಿನಲ್ಲಿ ಈ ಜೋಡಿ ಸಿನಿಮಾ ಮೇಲಿನ ಪ್ರೀತಿ, ಕಾಳಜಿ, ಮೋಹಕ್ಕಾಗಿಯೇ ಒಂದಾಗಿ ಈಗ “ರೂಮ್ ಬಾಯ್” ಚಿತ್ರ ಶುರು ಮಾಡಿ ಯಶಸ್ವಿಯಾಗಿ ಎರಡನೇ ಹಂತವನ್ನು ಮುಗಿಸಿದೆ.
ಇನ್ನು, “ರೂಮ್ ಬಾಯ್” ಚಿತ್ರಕ್ಕೆ ಕಿರಣ ಕುಮಾರ್ ಸಂಕಲನವಿದೆ. ಧನ್ ಪಾಲ್ ಅವರು ಕ್ಯಾಮೆರಾ ಹಿಡಿದಿದ್ದಾರೆ. ರೋಣದ ಬಕ್ಕೇಶ್ ಸಂಗೀತವಿದೆ. ಈಗಾಗಲೇ ನಂದಿಬೆಟ್ಟ ಬಳಿಯ ರೆಸಾರ್ಟ್ ಸೇರಿದಂತೆ ಬೆಂಗಳೂರು ಸುತ್ತಮುತ್ತಲ ತಾಣಗಳಲ್ಲಿ ಹಾಗೂ ವಿಶೇಷ ಮನೆಯಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. “ರೂಮ್ ಬಾಯ್” ಅಂದಾಕ್ಷಣ ಹಲವರಿಗೆ ಒಂದೊಂದು ನೆನಪಾಗುತ್ತೆ.
ಇಲ್ಲಿ ಟೈಟಲ್ ಎಷ್ಟು ವಿಭಿನ್ನ ಎನಿಸುತ್ತೋ, ಅಷ್ಟೇ ವಿಭಿನ್ನವಾಗಿಯೇ ಕಥೆ ಹೆಣೆದು ಸಿನಿಮಾ ಮಾಡಲು ಹೊರಟಿದೆ ಚಿತ್ರತಂಡ. ” ಇದೊಂದು ಸೈಕಾಲಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಸಾಮಾನ್ಯವಾಗಿ ರೂಮ್ ಬಾಯ್ ಅಂದ್ರೆ ಒಂದು ಹೊಟೇಲ್ ಅಥವಾ ರೆಸಾರ್ಟ್ ನಲ್ಲಿ ನಡೆಯುವ ಕತೆ ಎನ್ನುವುದು ಎಲ್ಲರಿಗೂ ಗೊತ್ತಾಗುವ ವಿಚಾರ. ಇಷ್ಟಾದರೂ ರೆಸಾರ್ಟ್ನಲ್ಲಿ ಒಂದು ಘಟನೆ ನಡೆಯುತ್ತೆ. ಅದೇನು ಅನ್ನೋದು ಸಸ್ಪೆನ್ಸ್.