ಕನ್ನಡಕ್ಕೆ ಮತ್ತೊಬ್ಬರು ಮಹಿಳಾ ನಿರ್ದೇಶಕಿ ಎಂಟ್ರಿ ಆಗಿದ್ದಾರೆ. ಅವರ ಹೆಸರು ವಿಜಯಾ ನರೇಶ್. ʼರಿಯಾʼ ಹೆಸರಿನ ಚಿತ್ರದ ಮೂಲಕ ಸ್ಯಾಂಡಲ್ ವುಡ್ನಲ್ಲಿ ಅವರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಚಿತ್ರದ ಮೂಲಕವೇ ಗಮನ ಸೆಳೆಯುವ ರಿಯಾ ಒಂದು ಹಾರಾರ್ ಸಸ್ಸ್ಪೆನ್ಸ್ ಹಾಗೂ ಥ್ರಿಲ್ಲರ್ ಜಾನರ್ ಸಿನಿಮಾ. ಅದರ ಜತೆಗೆ ಇಲ್ಲಿ ಸೆಂಟಿಮೆಂಟ್ ಅಂಶಗಳು ಇವೆಯಂತೆ. ಸದ್ಯಕ್ಕೀಗ ಚಿತ್ರತಂಡ ಚಿತ್ರದ ಹಾಡುಗಳ ಬಿಡುಗಡೆ ಮೂಲಕ ಮಾಧ್ಯಮ ಮುಂದೆ ಹಾಜರಾಗಿತ್ತು. ನಿರ್ದೇಶಕಿ ವಿಜಯಾ ನರೇಶ್ ಅವರ ಪರಿ ಕನಿಗೊಂಡ ನರೇಶ್ ಈ ಚಿತ್ರದ ನಿರ್ಮಾಪಕರು. ಕಾರ್ತಿಕ್ ವರ್ಣೇಕರ್ ಇದರ ಕಾರ್ಯಕಾರಿ ನಿರ್ಮಪಕರು. ಕನ್ನಡದಲ್ಲಿ ಈ ತಂಡಕ್ಕಿದು ಚೊಚ್ಚಲ ಚಿತ್ರ.
ನಿರ್ದೇಶಕಿ ವಿಜಯಾ, ನಿರ್ಮಾಪಕ ಕನಿಗೊಂಡ ನರೇಶ್ ದಂಹತಿಗಳದ್ದು ಆಂಧ್ರ ಮೂಲ. ನಿರ್ದೇಶಕಿ ವಿಜಯಾ ಅವರು ವೃತ್ತಿಯಲ್ಲಿ ಶಿಕ್ಷಕಿಯಂತೆ. ಆದರೂ ಉತ್ತಮ ಕಥೆ ಸಿಕ್ಕರೆ ಸಿನಿಮಾ ನಿರ್ದೇಶನ ಮಾಡಬೇಕೆನ್ನುವ ಮಹಾದಾಸೆಯ ಮೂಲಕ ʼರಿಯಾʼ ಚಿತ್ರಕ್ಕೆ ಅಕ್ಷನ್ ಕಟ್ ಹೇಳಿದ್ದಾರಂತೆ. ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿರುವ ಕಾರ್ತಿಕ್ ವರ್ಣೇಕರ್ ಅವರೇ ಈ ಚಿತ್ರದ ನಾಯಕರು. ಅವರಿಗೆ ಇಲ್ಲಿ ಜೋಡಿಯಾಗಿ ಸಾವಿತ್ರಿ ಅಭಿನಯಿಸಿದ್ದಾರೆ. ಅವರೊಂದಿಗೆ ವಿಕಾಸ್ ಕುಲಕರ್ಣಿ, ರಣ್ವೀರ್, ಶ್ವೇತಾ ಮತ್ತಿತರರು ಚಿತ್ರದಲ್ಲಿದ್ದಾರೆ, ವಿಶೇಷವಾಗಿ ಮೈಸೂರಿನ ಬಾಲಕಿ ಅನನ್ಯ ಈ ಚಿತ್ರದ ಪ್ರಮುಖ ಪಾತ್ರ ರಿಯಾಗೆ ಬಣ್ಣ ಹಚ್ಚಿದ್ದಾರೆ. ಆಡಿಯೋ ಲಾಂಚ್ ಸಂದರ್ಭದಲ್ಲಿ ಅವರೆಲ್ಲ ಹಾಜರಿದ್ದು ಚಿತ್ರದಲ್ಲಿನ ಪಾತ್ರ ಹಾಗೂ ಚಿತ್ರೀಕರಣ ಅನುಭವ ಹಂಚಿಕೊಂಡರು.
ಚಿತ್ರ ತಂಡಕ್ಕೆ ಇದೊಂದು ಹೊಸ ಅನುಭವ. ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ಇದು ಮೊದಲ ಸಿನಿಮಾ ಎನ್ನುವ ಹಾಗೆಯೇ, ಇಲ್ಲಿರುವ ಬಹುತೇಕ ಕಲಾವಿದರಿಗೂ ಇದು ಮೊದಲ ಸಿನಿಮಾ. ಅಷ್ಟು ಕಲಾವಿದರನ್ನು ನಿರ್ದೇಶಕರು ಆಡಿಷನ್ಸ್ ಮೂಲಕವೇ ಆಯ್ಕೆ ಮಾಡಿಕೊಂಡಿದೆಯಂತೆ. ಚಿತ್ರದ ವಿಶೇಷತೆ ಕುರಿತು ನಿರ್ದೇಶಕಿ ವಿಜಯಾ ನರೇಶ್ ಮಾತನಾಡಿದರು. ” ಇದೊಂದು ಹಾರಾರ್, ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಸೆಂಟಿಮೆಂಟ್ ಸನ್ನಿವೇಶಗಳ ಕಥೆಯುಳ್ಳ ಚಿತ್ರ. ಕನ್ನಡ ಹೆಚ್ಚಾಗಿ ಮಾತನಾಡಲು ಬಾರದ ನನಗೆ, ಚಿತ್ರ ಯಾವುದೇ ತೊಂದರೆ ಇಲ್ಲದೇ ಸಿದ್ಧವಾಗಲು ಹಲವರು ಸಹಕರಿಸಿದ್ದಾರೆʼ ಎಂದರು. ಚಿತ್ರದ ಎರಡು ಹಾಡುಗಳಿಗೆ ಸಂಗೀತ ನೀಡಿರುವ ಹೇಮಂತ್ ಕುಮಾರ್ ಸಂಗೀತದ ಬಗ್ಗೆ ಮಾಹಿತಿ ನೀಡಿದರು.
ಹಿರಿಯ ನಟ ಬ್ಯಾಂಕ್ ಜನಾರ್ದನ್ ಹಾಗೂ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಆಡಿಯೋ ಲಾಂಚ್ ಗೆ ಅತಿಥಿಯಾಗಿ ಬಂದಿದ್ದರು. ಸದ್ಯ ಸಿನಿಮಾ ಚಿತ್ರೀಕರಣ ಮುಗಿಸಿ, ರಿಲೀಸ್ ಗೆ ರೆಡಿಯಾಗಿದೆ. ಚಿತ್ರದ ಬಹುತೇಕ ಭಾಗ ದುಬಾರೆ ಫಾರೆಸ್ಟ್ ಬಳಿಯೇ ಚಿತ್ರೀಕರಣಗೊಂಡಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಗೆ ಸಿಕ್ಕಾಪಟ್ಟೆ ಸದ್ದು ಮಾಡಿದೆಯಂತೆ. ಇದೀಗ ಆಡಿಯೋ ಸಾಂಗ್ ಮೂಲಕ ಸದ್ದು ಮಾಡುತ್ತಿದೆ. ಆಕಾಶ್ ಆಡಿಯೋ ಸಂಸ್ಥೆ ಹಾಡುಗಳನ್ನು ಹೊರತಂದಿದೆ.