ಕನ್ನಡ ಚಿತ್ರರಂಗದ ಮಟ್ಟಿಗೆ ಈ ಸಮಯದಲ್ಲಿ ಇದು ದೊಡ್ಡ ಸುದ್ದಿಯೇ. ಹೌದು, “ರಾಬರ್ಟ್” ನಿರೀಕ್ಷೆಯಂತೆಯೇ, ದೊಡ್ಡ ಸಕ್ಸಸ್ ಕಂಡಿದೆ. ಎಲ್ಲರಲ್ಲೂ ಇದ್ದದ್ದು ಒಂದೇ ಒಂದು ಪ್ರಶ್ನೆ, ಈ ಸಿನಿಮಾ 100 ಕೋಟಿ ಕ್ಲಬ್ ಸೇರುತ್ತಾ ಅನ್ನೋದು. ಅದಕ್ಕೀಗ ಉತ್ತರವೂ ಸಿಕ್ಕಿದೆ. ಹೌದು, “ರಾಬರ್ಟ್” ಚಿತ್ರ ಈಗ ನೂರು ಕೋಟಿ ಕ್ಲಬ್ ಸೇರಿದ್ದಾಗಿದೆ. ಕೇವಲ 20 ದಿನದಲ್ಲಿ ಈ ನೂರು ಕೋಟಿ ಗಳಿಕೆ ಕಂಡಿರೋದು ಸಹಜವಾಗಿಯೇ ಸಿನಿಮಾತಂಡಕ್ಕೆ ಖುಷಿ ಹೆಚ್ಚಿಸಿದೆ.
ಕೊರೊನಾ ನಂತರದ ದಿನಗಳಲ್ಲಿ ಚಿತ್ರರಂಗದ ಕಥೆ ಏನಪ್ಪಾ ಅಂದುಕೊಂಡೋರಿಗೆ ಈಗ “ರಾಬರ್ಟ್” ಧೈರ್ಯ ಕೊಟ್ಟಿರೋದು ಸುಳ್ಳಲ್ಲ. ಒಂದೊಳ್ಳೆಯ ಸಿನಿಮಾವನ್ನು ಕನ್ನಡಿಗರು ಎಂದಿಗೂ ಕೈ ಬಿಟ್ಟಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ದರ್ಶನ್ ಸಿನಿಮಾ ಅಂದರೆ, ಒಂದಷ್ಟು ಜನರಿಗೆ ಕ್ರೇಜ್ ಇದ್ದೇ ಇರುತ್ತೆ. “ರಾಬರ್ಟ್” ಟೈಟಲ್ ಅನೌನ್ಸ್ ಮಾಡಿದಾಗಿನಿಂದಲೂ ಸಾಕಷ್ಟು ಕುತೂಹಲ ಮೂಡಿಸಿದ್ದ ಚಿತ್ರ ಮಾರ್ಚ್ 11 ರಂದು ಬಿಡುಗಡೆಯಾಗಿದ್ದೇ ತಡ, ಎಲ್ಲರಲ್ಲೂ ಮತ್ತಷ್ಟು ಉತ್ಸಾಹ ಹೆಚ್ಚಿಸಿತ್ತು.
ಅವರ ಫ್ಯಾನ್ಸ್ಗಂತೂ “ರಾಬರ್ಟ್” ಭರ್ಜರಿ ಹಬ್ಬದೂಟದಂತಾಗಿತ್ತು. “ರಾಬರ್ಟ್”ನನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಮೆರೆದರು. ತೆರೆಕಂಡ ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್ಫುಲ್ ಪ್ರರ್ದಶನ್ ಕಂಡಿತು. ಇನ್ನು, ತೆಲುಗಿನಲ್ಲೂ ಕೂಡ “ರಾಬರ್ಟ್” ದೊಡ್ಡ ಹವಾ ಎಬ್ಬಿಸಿದ್ದು ನಿಜ. ಅಲ್ಲೂ ಕೂಡ ದರ್ಶನ್ ಫ್ಯಾನ್ಸ್ ಸಿನಿಮಾವನ್ನು ಗೆಲ್ಲಿಸಿದರು.
ಕನ್ನಡದ ಮಟ್ಟಿಗೆ “ರಾಬರ್ಟ್” ಕೊರೊನಾ ಬಳಿಕ ದೊಡ್ಡ ಓಪನಿಂಗ್ ಕೊಟ್ಟಿದೆ. ಒಂದಷ್ಟು ಸಿನಿಮಾ ನಿರ್ಮಾಪಕರಿಗೂ ಅದು ಧೈರ್ಯ ಕೊಟ್ಟಿದೆ. ದರ್ಶನ್ ಗಲ್ಲಾ ಪೆಟ್ಟಿಗೆ ಸುಲ್ತಾನ್ ಅನ್ನುವುದನ್ನು ಪುನಃ ಸಾಬೀತುಪಡಿಸಿದ್ದಾರೆ. ಇದೇ ಖುಷಿಯಲ್ಲೇ “ರಾಬರ್ಟ್” ಚಿತ್ರತಂಡ ಇತ್ತೀಚೆಗೆ ಸಂಭ್ರಮ ಆಚರಿಸಿಕೊಂಡಿದೆ. ನಿರ್ದೇಶಕ ತರುಣ್ ಸುಧೀರ್,ನಿರ್ಮಾಪಕ ಉಮಾಪತಿ, ವಿನೋದ್ ಪ್ರಭಾಕರ್ ಸೇರಿದಂತೆ ಚಿತ್ರತಂಡದ ಹಲವರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.