ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಮೋಕ್ಷ ಚಿತ್ರದ ಟ್ರೇಲರ್ ಲಾಂಚ್ ಆಗಿದೆ. ಡಿ ಬೀಟ್ಸ್ ಯೂಟ್ಯೂಬ್ ಚಾನಲ್ ಮೂಲಕ ಇದು ಹೊರ ಬಂದಿದೆ. ಅದು ಲಾಂಚ್ ಆಗಿ ಇಲ್ಲಿಗೆ ಮೂರು ದಿನಗಳು ಕಳೆದಿವೆ. ಸೋಷಲ್ ಮೀಡಿಯಾದಲ್ಲಿ ಟ್ರೇಲರ್ ಸಖತ್ ಸದ್ದು ಮಾಡುತ್ತಿದೆ. ಸಸ್ಪೆನ್ಸ್, ಥ್ರಿಲ್ಲರ್ ಸ್ಟೋರಿ ಅಂದ್ಮೇಲೆ ಅಲ್ಲೇನಿರುತ್ತೆ ಅಂತ ವಿವರಿಸಿ ಹೇಳಬೇಕಿಲ್ಲ, ಮರ್ಡರ್ ಗೇಮ್ ಇರುತ್ತೆ. ಯಾರೋ, ಇನ್ನಾರನ್ನೋ ಮುಗಿಸುವ ಸಂಚುಗಳಿರುತ್ತವೆ. ಅವೆಲ್ಲ ಗೊತ್ತಾಗದೆ ಹಲವು ಟರ್ನ್ ಅಂಡ್ ಟ್ವಿಸ್ಟ್ ಗಳು ಮೂಲಕ ಸಾಗುತ್ತವೆ. ಹಾಗೊಂದು ಕಥೆ ಈ ಚಿತ್ರದ್ದು ಕೂಡ. ಆ ಬಗ್ಗೆ ಒಂದಷ್ಟು ಕುತೂಹಲ ಹುಟ್ಟಿಸುತ್ತೆ ಈ ಟ್ರೇಲರ್.
ಚಿತ್ರ ತಂಡ ಮೊನ್ನೆಯಷ್ಟೇ ಅಧಿಕೃತವಾಗಿಯೇ ಟ್ರೇಲರ್ ಲಾಂಚ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅಲ್ಲಿ ಚಿತ್ರ ತಂಡವು ಟ್ರೇಲರ್ ವಿಶೇಷತೆ ಜತೆಗೆ ಸಿನಿಮಾದ ಕುತೂಹಲದ ಅಂಶಗಳ ಕುರಿತು ಮಾತನಾಡಿತು. “ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ನಮ್ಮ ಚಿತ್ರ ತಾಂತ್ರಿಕವಾಗಿ ಅದ್ದೂರಿತನದಿಂದ ಮೂಡಿಬಂದಿದೆ. ಅದಕ್ಕೆ ಕಾರಣ ನಮ್ಮ ಚಿತ್ರದ ತಂತ್ರಜ್ಞರು. ಟ್ರೇಲರ್ಗೆ ಚಿತ್ರರಂಗದ ಗಣ್ಯರು ಹಾಗೂ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡದ ಸಿನಿಮಾ ಪ್ರೇಕ್ಷಕರು ನಮ್ಮನ್ನು ಕೈ ಹಿಡಿಯಬೇಕಿದೆ ಅಂತ ಚಿತ್ರದ ನಾಯಕ ಕಮ್ ನಿರ್ಮಾಪಕ ಸಮರ್ಥ್ ನಾಯಕ್ ಮನವಿ ಮಾಡಿಕೊಂಡರು. ಬಾಲಿವುಡ್ ನಟ ಮೋಹನ್ ಧನರಾಜ್ ಈ ಚಿತ್ರದ ಪ್ರಮುಖ ಆಕರ್ಷಣೆ. ಕನ್ನಡದಲ್ಲಿ ಅವರಿಗಿದು ಚೊಚ್ಚಲ ಚಿತ್ರ. ಅವರ ಪ್ರಕಾರ ಸಸ್ಪೆನ್ಸ್ ಕಥೆಗಳ ತಿರುಳು ಗೊತ್ತಾಗುವುದು ಪ್ರೇಕ್ಷಕ ಚಿತ್ರ ನೋಡಿದ ಮೇಲೆಯೇ ಅಂತೆ. ಹಾಗಂತ ಅವರು ಅಲ್ಲಿ ಹೇಳಿಕೊಂಡರು.
ನಟ ತಾರಕ್ ಪೊನ್ನಪ್ಪ ಈ ಚಿತ್ರದ ಇನ್ನೊಂದು ಪ್ರಮುಖ ಪಾತ್ರಧಾರಿ. ಅಂದ್ರೆ ಅವರಿಲ್ಲಿ ಪೊಲೀಸ್ ಪಾತ್ರಧಾರಿ. ಅವರ ಪಾತ್ರವೇ ಇಲ್ಲಿ ಇನ್ನೊಂದು ಹೈಲೈಟ್ ಅಂತೆ. ಮಂಗಳೂರು ಚೆಲುವೆ ಆರಾಧ್ಯ ಲಕ್ಷ್ಮಣ್ ಈ ಚಿತ್ರದ ನಾಯಕಿ. ಜಯಂತ್ ಕಾಯ್ಕಿಣಿ, ಕುಮಾರ್ ದತ್ ಬರೆದ ಸಾಹಿತ್ಯಕ್ಕೆ ಕಿಶನ್ ಮೋಹನ್ ಹಾಗೂ ಸಚಿನ್ ಬಾಲು ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಕಿಶನ್ ಮೋಹನ್ ಅವರದು.
ಗುರುಪ್ರಶಾಂತ್ ರೈ, ಜೋಮ್ ಜೋಸೆಫ್, ಕಿರಣ್ ಹಂಪಾಪುರ ಸೇರಿದಂತೆ ಮೂವರು ಛಾಯಾಗ್ರಾಹಕರು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದು, ವರುಣ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ನಟ ಕಿಚ್ಚ ಸುದೀಪ್, ತಮ್ಮ ಟ್ವಿಟರ್ ಖಾತೆಯಲ್ಲಿ ಮೋಕ್ಷ ಚಿತ್ರದ ಟೀಸರ್ ಲಿಂಕ್ ಷೇರ್ ಮಾಡಿ, ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ಹಾಗೆಯೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನಿರ್ದೇಶಕರಾದ ಯೋಗರಾಜ್ ಭಟ್, ಸಿಂಪಲ್ ಸುನಿ ಹಾಗೂ ನಟ ರಿಷಿ ಸೇರಿದಂತೆ ಹಲವರಿಗೆ ಟ್ರೇಲರ್ ಹಿಡಿಸಿದೆ. ಎಲ್ಲರೂ ಮೆಚ್ಚುಗೆ ಹೇಳಿದ್ದಾರೆ. ದಿನೇ ದಿನೆ ಟ್ರೇಲರ್ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದೇ ಖುಷಿಯಲ್ಲಿ ಚಿತ್ರ ತಂಡವು ಏಪ್ರಿಲ್ ಕ್ಕೆ 16ಈ ಚಿತ್ರವನ್ನು ರಿಲೀಸ್ ಮಾಡಲು ಸಿದ್ಧತೆ ನಡೆಸಿದೆ.