ಕನ್ನಡದಲ್ಲಿ ಈಗ ಸಾಲು ಸಾಲು ಹೊಸಬರ ಸಿನಿಮಾಗಳು ಕಾಣಿಸಿಕೊಳ್ಳುತ್ತಿವೆ. ಆ ಸಾಲಿಗೆ ಈಗ “ಅನಘ” ಕೂಡ ಸೇರಿದೆ. ಹೌದು, ಈ ವಾರ ರಾಜ್ಯಾದ್ಯಂತ “ಅನಘ” ಬಿಡುಗಡೆಯಾಗುತ್ತಿದೆ. ದೀಕ್ಷಾ ಫಿಲಂಸ್ ಸಮೂಹ ಸಿನಿಮಾ ಬ್ಯಾನರ್ನಡಿ ಡಿ.ಪಿ. ಮಂಜುಳ ನಾಯಕ ಅವರು ನಿರ್ಮಾಣ ಮಾಡಿರುವ “ಅನಘ” ಚಿತ್ರವನ್ನು ರಾಜು ಎನ್. ಆರ್. ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದ ಮೂಲಕ ಅವರು ನಿರ್ದೇಶನ ಪಟ್ಟ ಅಲಂಕರಿಸಿದ್ದಾರೆ. ಕಥೆ ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯೂ ನಿರ್ದೇಶಕರೇ ವಹಿಸಿಕೊಂಡಿದ್ದಾರೆ. “ಅನಘ” ಇದೊಂದು ಹಾರರ್ ಸಿನಿಮಾ. ಈವೆಗೆ ಸಾಕಷ್ಟು ಹಾರರ್ ಚಿತ್ರಗಳು ಬಂದಿವೆಯಾದರೂ, ಬಂದಿರುವ ಹಾರರ್ ಸಿನಿಮಾಗಳಿಗಿಂತಲೂ ಇದೊಂದು ವಿಭಿನ್ನ ಎನಿಸುವ ಸಿನಿಮಾ ಎಂಬುದು ಚಿತ್ರತಂಡದ ಮಾತು.
ಇಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಕಾಣಿಸಿಕೊಂಡಿವೆ. ಹಾರರ್ ಇದ್ದರೂ, ಇಲ್ಲಿ ಹಾಸ್ಯವೂ ಮೇಳೈಸಿದೆ. ಜೊತೆಯಲ್ಲಿ ಸಸ್ಪೆನ್ಸ್ ಕೂಡ ಇಲ್ಲಿರಲಿದೆ. ವಿಷೇಶವಾಗಿ ಚಿತ್ರದಲ್ಲಿ ನಾಲ್ಕು ಕ್ಲ್ಯೆಮ್ಯಾಕ್ಸ್ ಇದೆ. ಅದು ಹೇಗೆ ಅನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ಇಲ್ಲಿ ಮನರಂಜನೆಗೆ ಜಾಸ್ತಿ ಒತ್ತು ಕೊಟ್ಟು ಚಿತ್ರಕಥೆ ನಿರೂಪಿಸಲಾಗಿದೆ.
ಇನ್ನು, ಈ ಚಿತ್ರಕ್ಕೆ ಬೆಂಗಳೂರು ಹಾಗೂ ದೇವರಾಯನದುರ್ಗದ ಸುತ್ತಮುತ್ತಲ ಲೊಕೇಶನ್ಗಳಲ್ಲಿ ಚಿತ್ರಿಕರಣ ನಡೆಸಲಾಗಿದೆ. ಚಿತ್ರದಲ್ಲಿ ಶಂಕರ್ ಅವರ ಕ್ಯಾಮೆರಾ ಕೈಚಳಕವಿದೆ.
ಅವಿನಾಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾರರ್ ಹೆಚ್ಚಾಗಿರುವುದರಿಂದ ಹಿನ್ನೆಲೆ ಸಂಗೀತಕ್ಕೆ ಆದ್ಯತೆ ಇದೆ. ಅವಿನಾಶ್ ಅವರು ಹಿನ್ನೆಲೆ ಸಂಗೀತವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ವೆಂಕಿ ಯುಡಿವಿ ಸಂಕಲನ ಮಾಡಿದರೆ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ.
ರಂಗಭೂಮಿ ಪ್ರತಿಭೆಗಳಾದ ನಳೀನ್ಕುಮಾರ್ ಮತ್ತು ಪವನ್ಪುತ್ರ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ಕಿರಣ್ರಾಜ, ದೀಪಾ ಮೋಹನ್, “ಸಿಲ್ಲಿಲಲ್ಲಿ” ಖ್ಯಾತಿಯ ಶ್ರೀನಿವಾಸ್ಗೌಡ್ರು, ಕಿರಣ ತೇಜ, ಕರಣ್ ಆರ್ಯನ್, ರೋಹಿತ್, ಖುಷಿ ರಶ್ಮಿ ಹಾಗೂ ವಿಶೇಷ ಪಾತ್ರದಲ್ಲಿ ನಂಜಪ್ಪ ಬೆನಕ ರಂಗಭೂಮಿ ಮತ್ತು ಹಾಸ್ಯಪಾತ್ರದಲ್ಲಿ ಮೋಟು ರವಿ, ಅಭಿ ಮತ್ತು ವೀರೇಶ(ಕೆಜಿಎಫ್) ಅವರು ನಟಿಸಿದ್ದಾರೆ.