ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ” ಯುವರತ್ನʼ ಚಿತ್ರದ ಟ್ರೇಲರ್ ಇಂದು ಲಾಂಚ್ ಆಗಿದೆ. ಲಾಂಚ್ ಆದ ಕೇವಲವೇ ಕ್ಷಣಗಳಲ್ಲಿ ಅದು ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಪ್ಪು ಅಭಿನಯಗಳಂತೂ ಫುಲ್ ಖುಷ್ ಆಗಿದ್ದಾರೆ. ಪುನೀತ್ ರಾಜ್ ಕುಮಾರ್ ಟ್ರೇಲರ್ನಲ್ಲಿ ಭರ್ಜರಿ ಆಗಿ ಘರ್ಜಿಸಿದ್ದು, ನೋಡುವುದಕ್ಕೆ ಸಖತ್ ಥ್ರಿಲ್ ಆಗಿದೆ. ಸಿನಿಮಾದ ಬಗೆಗೆ ಇನ್ನಷ್ಟು- ಮೊಗದಷ್ಟು ಕ್ರೇಜ್ ಹುಟ್ಟುವಂತೆ ಮಾಡಿದೆ ಈ ಟ್ರೈಲರ್. ಚಿತ್ರದ ರಿಲೀಸ್ ಪೂರ್ವ ಪ್ರಚಾರಕ್ಕೆ ” ಯುವ ಸಂಭ್ರಮʼ ಪ್ರವಾಸದ ವೇಳಾಪಟ್ಟಿ ಪಟ್ಟಿ ಅನೌನ್ಸ್ ಮಾಡಿದ ಬೆನ್ನಲೇ ಇಂದು ಚಿತ್ರ ತಂಡವು ಚಿತ್ರದ ಟ್ರೈಲರ್ ಲಾಂಚ್ ಮಾಡಿತು. ಅದಕ್ಕಂತಲೇ ಬೆಂಗಳೂರಿನ ಪಂಚತಾರಾ ಹೋಟೆಲ್ ನಲ್ಲಿ ಗ್ರಾಂಡ್ ಕಾರ್ಯಕ್ರಮ ಆಯೋಜಿಸಿತ್ತು.
ಇವ್ರಿಗೆ ಕೊಟ್ಟಿರೋ ಸ್ಟಾರ್ ಇವ್ರು ಡ್ಯೂಟಿನಲ್ಲಿರೋ ತನಕ, ನಂಗೆ ಕೊಟ್ಟಿರೋ ಸ್ಟಾರ್ ನಾವ್ ಬದುಕಿರೋ ತನಕ…, ಎನ್ನುವ ಖಡಕ್ ಡೈಲಾಗ್ ಮೂಲಕ ಟ್ರೈಲರ್ ಲಾಂಚ್ ಆದ ಸರಿ ಸುಮಾರು 3 ಗಂಟೆಯ ಹೊತ್ತಿಗೆ ಸುಮಾರು 5ಲಕ್ಷ ವೀಕ್ಷಣೆಯೊಂದಿಗೆ ಅದು ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕನ್ನಡದ ಮಟ್ಟಿಗೆ ಯುವರತ್ನ ಚಿತ್ರ ತೀವ್ರ ಕುತೂಹಲ ಹುಟ್ಟಿಸಿದ ಚಿತ್ರ. ಅದಕ್ಕೆ ಕಾರಣ ನಟ ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್. ಹಾಗೆಯೇ ಹೊಂಬಾಳೆ ಫಿಲಂಸ್ ಬ್ಯಾನರ್ ನಿರ್ಮಾಣದ ಚಿತ್ರ ಎನ್ನುವುದು ಕೂಡ ಅದಕ್ಕೆ ಕಾರಣ. ವಿಶೇಷವಾಗಿ ಪುನೀತ್ ರಾಜ್ ಕುಮಾರ್ ಇಲ್ಲಿ ಸಾಸರ್ ಆಟಗಾರರಾಗಿ ಕಾಣಿಸಿಕೊಳ್ಳುತ್ತಿದ್ದು, ಇದುವರೆಗಿನ ಅವರ ಲುಕ್ ಗಿಂತ ಇಲ್ಲಿ ಭಿನ್ನವಾದ ನೋಟವೇ ಇದೆ. ಹಾಗೆಯೇ ಅವರಿಗಿಲ್ಲಿ ಸೌತ್ ಇಂಡಸ್ಟ್ರಿಯ ಬಹು ಜನಪ್ರಿಯ ನಟಿ ಶಯೇಶಾ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳ ಲಿರಿಕಲ್ ವಿಡಿಯೋಗಳಲ್ಲಿ ಈ ಜೋಡಿ ಸಾಕಷ್ಟು ಕ್ರೇಜ್ ಹುಟ್ಟಿಸಿದೆ.
ಇನ್ನು ಪ್ರಕಾಶ್ ರೈ, ಡಾಲಿ ಧನಂಜಯ್, ಅಚ್ಯುತ್ ಕುಮಾರ್, ಅವಿನಾಶ್, ಸಾಯಿಕುಮಾರ್, ರಂಗಾಯಣ ರಘು ಮತ್ತಿತರರು ಚಿತ್ರದಲ್ಲಿದ್ದಾರೆ. ಏಪ್ರಿಲ್ 1 ಕ್ಕೆ ಈ ಚಿತ್ರ ತೆರೆಗೆ ಬರುತ್ತಿದೆ. ಕನ್ನಡದ ಜತೆಗೆ ತೆಲುಗಿನಲ್ಲೂ ಏಕಕಾಲದಲ್ಲೇ ಬಿಡುಗಡೆ ಆಗುತ್ತಿದೆ. ಫಸ್ಟ್ ಟೈಮ್ ಈ ಚಿತ್ರದೊಂದಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡದಾಚೆಗೂ ಅಬ್ಬರಿಸಲಿದ್ದಾರೆ. ಚಿತ್ರದ ಪ್ರಚಾರಕ್ಕೆ ಈಗಾಗಲೇ ಹಲವು ತಂತ್ರಗಳನ್ನು ಪಳಗಿಸಿರುವ ಚಿತ್ರ ತಂಡ, ಈ ಯುವ ಸಂಭ್ರಮ ಕಾರ್ಯಕ್ರಮದೊಂದಿಗೆ ನಾಳೆ( ಮಾ.21 ) ಯಿಂದ ಪ್ರವಾಸ ಫಿಕ್ಸ್ ಮಾಡಿಕೊಂಡಿದೆ. ಮೈಸೂರಿನಲ್ಲಿ ಫಿಕ್ಸ್ ಯುವ ಸಂಭ್ರಮ ರದ್ದಾದ ಬೆನ್ನಲೇ ಚಿತ್ರ ತಂಡ ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಿದೆ. ಗುಲ್ಬರ್ಗಾ, ಬೆಳಗಾವಿ, ಹುಬ್ಬಳ್ಳಿ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಮಂಡ್ಯ ಹಾಗೂ ಮೈಸೂರಿನಲ್ಲಿ ಮೊದಲ ಹಂತದ ಯುವ ಸಂಭ್ರಮ ಫಿಕ್ಸ್ ಆಗಿದೆ. ಎರಡನೇ ಹಂತದಲ್ಲಿ ಶಿವಮೊಗ್ಗ , ಚಿಕ್ಕಮಗಳೂರು, ಕಾರವಾರ, ಮಂಗಳೂರು, ಹಾವೇರಿ , ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಪ್ರವಾಸಕ್ಕೆ ಮುಂದಾಗಿದೆ ಅಂತ ಚಿತ್ರ ತಂಡ ಹೇಳಿದೆ.