ಕೊರೊನಾ ಹಾವಳಿ ಕಡಿಮೆಯಾಗುವುದನ್ನೇ ಕಾಯುತ್ತಿದ್ದ ಸಿನಿಮಾ ಮಂದಿ ಈಗ ಮೆಲ್ಲನೆ ಒಂದಷ್ಟು ಸಿನಿಮಾ ನಿರ್ಮಾಣದತ್ತ ಮುಖ ಮಾಡಿದ್ದಾರೆ. ಕೆಲವರು ಸದ್ದಿಲ್ಲದೆಯೇ ಸಿನಿಮಾ ಮುಗಿಸಿ, ರಿಲೀಸ್ಗೆ ಸಜ್ಜಾಗುತ್ತಿದ್ದಾರೆ. ಆ ನಿಟ್ಟಿನಲ್ಲಿ ಹೊಸಬರ “ಸರ್ವಂ” ಎಂಬ ಚಿತ್ರವೂ ಕೂಡ ಸದ್ದಿಲ್ಲದೆಯೇ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಕೃಷ್ಣ ಕಂಬೈನ್ಸ್ ಹಾಗೂ ಉದಯ ಆರ್ಟ್ಸ್ ಬ್ಯಾನರ್ನಲ್ಲಿ ಸುರೇಶ್ ಕಣ್ಣ ಹಾಗೂ ಕೆ.ಎಂ.ಕೃಷ್ಣ ದೊಡ್ಡಿ ಜೊತೆಗೂಡಿ ನಿರ್ಮಿಸುತ್ತಿರುವ “ಸರ್ವಂ” ಚಿತ್ರ ಮೊದಲ ಹಂತವನ್ನು ಪೂರೈಸಿದೆ. ಒಂದು ಹಾಡು, ಒಂದು ಸಾಹಸ ಸನ್ನಿವೇಶ ಹಾಗೂ ಮಾತಿನ ಭಾಗದ ಚಿತ್ರೀಕರಣವನ್ನು ಈ ಮೊದಲ ಹಂತದಲ್ಲಿ ನಡೆಸಲಾಗಿದೆ. ಈ ಚಿತ್ರದಲ್ಲಿ ಅಫ್ಜಲ್ (ನಮ್ಮ ಸೂಪರ್ ಸ್ಟಾರ್) ಸಹ ನಿರ್ಮಾಪಕರಾಗಿದ್ದಾರೆ.
ಚಿತ್ರೀಕರಣಕ್ಕಾಗಿ ಬೆಂಗಳೂರಿನ ಜಿಗಣಿ ಬಳಿ ಅದ್ದೂರಿ ಸೆಟ್ ಹಾಕಿದ್ದು ವಿಶೇಷ. ಎರಡನೇ ಹಂತದ ಚಿತ್ರೀಕರಣವನ್ನು ಪಾಂಡಿಚೇರಿ, ಮಂಗಳೂರು ಹಾಗೂ ಗೋವಾದಲ್ಲಿ ನಡೆಯಲಿದ್ದು, ಇಷ್ಟರಲ್ಲೇ ಚಿತ್ರೀಕರಣ ಶುರುವಾಗಲಿದೆ. ಒಟ್ಟು ನಾಲ್ಕು ಹಂತದಲ್ಲಿ ಚಿತ್ರದ ಚಿತ್ರೀಕರಣ ನೆರವೇರಲಿದೆ.
ಈ ಹಿಂದೆ “ಅನಕ್ಷ”, “ಮೊಂಬತ್ತಿ”, “ತಮಸ್” ಹಾಗೂ “ಛಾಯ” ಚಿತ್ರಗಳಲ್ಲಿ ಅಭಿನಯಿಸಿರುವ ರಾಜ್ ಪ್ರಭು ಈ ಚಿತ್ರದ ನಾಯಕರು. ಜೊತೆಗೆ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಸಾಕಷ್ಟು ಜಾಹೀರಾತುಗಳನ್ನು ನಿರ್ದೇಶಿಸಿರುವ ರಾಜ್ ಪ್ರಭು ಅವರಿಗೆ ಈ ಸಿನಿಮಾ ಮೊದಲ ಪ್ರಯತ್ನ.
ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ನಾಲ್ಕು ಹಾಡುಗಳಿರುವ ಚಿತ್ರಕ್ಕೆ ಕೌಶಿಕ್ ಹರ್ಷ ಸಂಗೀತ ನೀಡುತ್ತಿದ್ದಾರೆ. ಶ್ಯಾಂ ಸಿಂಧನೂರು ಛಾಯಾಗ್ರಹಣವಿದೆ. ಕೆ.ಬಿ.ಕೆ ಫಯಾಜ್ ಖಾನ್ ಸಾಹಸ ನಿರ್ದೇಶನ ಹಾಗೂ ಜಗ್ಗು ಅವರ ನೃತ್ಯ ನಿರ್ದೇಶನವಿದೆ. ರಾಜ್ ಪ್ರಭು ಅವರಿಗೆ ನಾಯಕಿಯಾಗಿ ಅಕ್ಷಿತ ನಾಗರಾಜ್ ನಟಿಸಿದ್ದಾರೆ. ಧಾರಾ ಪರೇಕ್, ಅಫ್ಜಲ್, ರವಿ, ಕನ್ನಡ ರಾಜು, ಸ್ಮೈಲ್ ಶಿವು ಮುಂತಾದವರು ನಟಿಸಿದ್ದಾರೆ.