ವಿಭ
ಚಿತ್ರ: ಸೂಪರ್ ಹಿಟ್
ನಿರ್ದೇಶನ: ವಿಜಯಾನಂದ
ನಿರ್ಮಾಣ: ಜಿ.ಉಮೇಶ್
ತಾರಾಗಣ: ಗೌರವ್ ಶೆಟ್ಟಿ, ಗಿಲ್ಲಿ ನಟ, ಸಾಧುಕೋಕಿಲ, ಶ್ವೇತಾ, ಡ್ರ್ಯಾಗನ್ ಮಂಜು, ಪ್ರಮೋದ್ ಶೆಟ್ಟಿ, ಜೀ ಜೀ, ನಾಗೇಂದ್ರ ಪ್ರಸಾದ್, ಟೆನ್ನಿಸ್ ಕೃಷ್ಣ, ಗಿರಿ ಕರಿಸುಬ್ಬು ಇತರರು.
ಕನ್ನಡದಲ್ಲಿ ಹಾಸ್ಯಮಯ ಸಿನಿಮಾಗಳಿಗೇನೂ ಕೊರತೆ ಇಲ್ಲ. ಆ ಸಾಲಿಗೆ ಸೇರುವ ಮತ್ತೊಂದು ಸಿನಿಮಾವನ್ನು ಹೆಸರಿಸುವುದಾದರೆ, ಈ ಚಿತ್ರವನ್ನು ಮುಲಾಜಿಲ್ಲದೆ ಹೇಳಬಹುದು. ಮನಸ್ಸಿಗೆ ಖುಷಿ ಕೊಡುವ, ನಗು ತರಿಸುವ ತಾಕತ್ತು ಈ ಚಿತ್ರಕ್ಕಿದೆ.
ಆರಂಭದಿಂದ ಅಂತ್ಯದವರೆಗೆ ನಗು ನಗು ನಗು. ಇದು ಬಿಟ್ಟರೆ ಬೇರೇನೂ ಇಲ್ಲ. ಭರಪೂರ ಮನರಂಜನೆಯ ಸಂತೃಪ್ತ ಭೋಜನ ಗ್ಯಾರಂಟಿ.

ಮೊದಲೇ ಹೇಳಿದಂತೆ ಇದೊಂದು ಹಾಸ್ಯಮಯ ಕಥಾಹಂದರದ ಸಿನಿಮಾ. ಹಾಗಾಗಿ ಇಲ್ಲಿ ಮಚ್ಚು, ಲಾಂಗು, ಗನ್ನು ಸದ್ದಿಲ್ಲ. ಆದರೂ ಇಲ್ಲೊಂದು ಮರ್ಡರ್ ಸುತ್ತ ನಡೆಯೋ ಕಥೆ ಇದೆ. ಅಲ್ಲಿ ನೂರೆಂಟು ನಗುವಿನ ಕಥೆಗಳು ಹುಟ್ಟಿಕೊಳ್ಳುತ್ತವೆ. ಆ ಕಥೆಯಲ್ಲಿ ಒಂದಷ್ಟು ಟ್ವಿಸ್ಟು ಇದೆ. ನೋಡುಗರಿಗೆ ಕೊಂಚ ಟೆಸ್ಟೂ ಇದೆ. ಯಾವುದೇ ಗೊಂದಲವಿಲ್ಲದೆ ಸರಾಗವಾಗಿ ನೋಡಿಸಿಕೊಂಡು ಹೋಗುವ ಸಾಮರ್ಥ್ಯ ಚಿತ್ರಕ್ಕಿದೆ. ಶೀರ್ಷಿಕೆಗೆ ತಕ್ಕಂತೆಯೇ ಸಿನಿಮಾನೂ ಇದೆ. ಕಥೆ, ಚಿತ್ರಕಥೆ, ನಿರೂಪಣೆ ಶೈಲಿ, ಪಾತ್ರಗಳ ಆಯ್ಕೆ ಎಲ್ಲವೂ ಸೂಪರ್. ಹಾಗಾಗಿ ಸಿನಿಮಾವನ್ನು ಒಂದೊಮ್ಮೆ ನೋಡುವುದರಲ್ಲಿ ಯಾವುದೇ ಗೊಂದಲ ಬೇಡ.
ಒಂದು ಸರಳ ಕಥೆಯನ್ನು ಅದ್ಭುತವಾಗಿ ಕಟ್ಟಿಕೊಟ್ಟಿರುವ ನಿರ್ದೇಶಕರ ಪ್ರಯತ್ನ ಸಾರ್ಥಕ ಎನ್ನಬಹುದು. ಪ್ರೇಕ್ಷಕ ಮುಖ್ಯವಾಗಿ ಬಯಸೋದು ಮನರಂಜನೆ. ಅದರ ನಾಡಿಮಿಡಿತ ಅರಿತಿರುವ ನಿರ್ದೇಶಕರು, ಅದನ್ನು ಅತ್ಯದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಮೊದಲರ್ಧ ಹಾಸ್ಯಕ್ಕೇನೂ ಕೊರತೆ ಇಲ್ಲ. ದ್ವಿತಿಯಾರ್ಧ ಮುನ್ನ ಒಂದು ಟ್ವಿಸ್ಟ್ ಇದೆ. ಸೆಕೆಂಡ್ ಹಾಫ್ ಇನ್ನಷ್ಟು ಮಜವೆನಿಸೋ ಸನ್ನಿವೇಶ, ಪಾತ್ರಗಳು ಎದುರಾಗುತ್ತವೆ. ಆ ಕಾರಣಕ್ಕೆ ಸಿನಿಮಾ ರುಚಿಸುತ್ತಾ ಹೋಗುತ್ತೆ.
ಸಿನಿಮಾ ಕಥೆಗೆ ಚಿತ್ರಕಥೆಯೇ ಹೂರಣ. ಹಿನ್ನೆಲೆ ಸಂಗೀತ ಸಿನಿಮಾದ ವೇಗ ಹೆಚ್ಚಿಸಿದೆ. ಕ್ಯಾಮರಾ ಕೈಚಳಕ ಕೂಡ ‘ಸೂಪರ್’ ಎನಿಸಿದೆ. ಎಲ್ಲೋ ಒಂದು ಕಡೆ ವೇಗ ಕಮ್ಮಿ ಆಯ್ತು ಅನ್ನುವಷ್ಟರಲ್ಲಿ ಹಾಡೊಂದು ಬಂದು ವೇಗ ಹೆಚ್ಚಿಸುತ್ತೆ. ಚಿತ್ರಕಥೆಗೆ ಸೇರುವ ಪಾತ್ರಗಳು ವೇಗಕ್ಕೆ ಸಾಥ್ ಕೊಟ್ಟಿವೆ.

ಕಥೆ ಏನು?
ಒಂದು ಕಾರು. ಅದೂ ಕದ್ದ ಕಾರು! ಆ ಕಾರಿನ ಡಿಕ್ಕಿಯಲ್ಲೊಂದು ಬಾಡಿ. ಆ ಕಾರನ್ನು ಕದ್ದಿದ್ದು ಒಬ್ಬ. ಆ ಕದ್ದ ಕಾರನ್ನು ಕದ್ದಿದ್ದು ಇನ್ನೊಬ್ಬ. ಆ ಕಾರಲ್ಲಿ ಜರ್ನಿ ಮಾಡೋದು ಒಬ್ಬಿಬ್ಬರಲ್ಲ. ಕದ್ದ ಕಾರಿನ ಜರ್ನಿ ಸ್ಟೋರಿಯೇ ಇಂಟ್ರೆಸ್ಟಿಂಗ್.
ಕಾರು ಕದ್ದಿದ್ದು ಯಾರೋ ಅದನ್ನು ಕದ್ದಿದ್ದು ಇನ್ಯಾರೋ ದಾರಿಮಧ್ಯೆ ಸಿಗುವ ಪಾತ್ರಗಳೆಲ್ಲವೂ ಒಂದಕ್ಕೊಂದು ಕನೆಕ್ಟ್ ಆಗ್ತಾ ಹೋಗುತ್ತವೆ. ಈ ಜರ್ನಿಯಲ್ಕಿ ಬರೀ ಮಾತು ಮತ್ತು ನಗು. ಅಲ್ಲಲ್ಲಿ ಸ್ಪೆಷಲ್ ಟ್ವಿಸ್ಟು. ಅಲ್ಲೊಂದು ಪೆನ್ ಡ್ರೈವ್ ಸ್ಟೋರಿ ಇದೆ. ಕೊನೆಗೊಂದು ತಿರುವು. ಕ್ಲೈಮ್ಯಾಕ್ಸ್ ಸಿನಿಮಾದ ಹೈಲೆಟ್. ಅದೇನು ಅನ್ನುವ ಕುತೂಹಲ ಇದ್ದರೆ ಒಮ್ಮೆ ಸಿನಿಮಾ ನೋಡಲೇಬೇಕು.
ಯಾರು ಹೇಗೆ?
ಗೌರವ್ ಶೆಟ್ಟಿ ಸಿನಿಮಾದ ಹೈಲೆಟ್. ಅವರ ಡೈಲಾಗ್ ಡಿಲವರಿ, ಬಾಡಿ ಲಾಂಗ್ವೇಜ್ ಇಲ್ಲಿ ವರ್ಕೌಟ್ ಆಗಿದೆ. ಗಿಲ್ಲಿ ನಟ ಎಂದಿಗಿಂತಲೂ ನಗಿಸಿದ್ದಾರೆ. ಅವರ ಟೈಮಿಂಗ್ ಮತ್ತು ನಟನೆ ಆ ಎನರ್ಜಿ ಸಿನಿಮಾಗೆ ಪ್ಲಸ್. ಸಾಧು ಅವರ ಕಾಮಿಡಿ, ಜೀ ಜೀ ಟೈಮಿಂಗ್, ಪ್ರಮೋದ್ ಶೆಟ್ಟಿ ಪಾತ್ರಕ್ಕೆ ಕೊಟ್ಟ ನ್ಯಾಯ ಮೆಚ್ಚುಗೆಯಾಗುತ್ತೆ. ಉಳಿದಂತೆ ನಾಗೇಂದ್ರ ಪ್ರಸಾದ್ ಖಳನಟನೆಯಲ್ಲಿ ಇಷ್ಟ ಆಗುತ್ತಾರೆ. ಟೆನ್ನಿಸ್ ಕೃಷ್ಟ, ಗಿರಿ, ಕರಿಸುಬ್ಬು ಇತರರು ಗಮನ ಸೆಳೆಯುತ್ತಾರೆ.
ಚಿತ್ರದ ಸಂಗೀತದಲ್ಲಿ ಬರುವ ಸುಮ್ ಸುಮ್ನೆ ಶುರುವಾಗೋಯ್ತು ಕಣ್ಣ ಸನ್ನೆ.. ಹಾಡು ಚೆನ್ನಾಗಿದೆ. ಹಿನ್ನೆಲೆ ಸಂಗೀತದಲ್ಲಿ ಹೊಸತನವಿದೆ. ನಾಗಾರ್ಜುನ ಕ್ಯಾಮರಾ ಕೈಚಳಕ ಪರವಾಗಿಲ್ಲ. ಶ್ರೀಕಾಂತ್ ಕತ್ತರಿ ಪ್ರಯೋಗದಲ್ಲಿ ಮ್ಯಾಜಿಕ್ ಇದೆ. ಸಣ್ಣ ಪುಟ್ಟ ಮಿಸ್ಟೇಕ್ಸ್ ಹೊರತು ಪಡಿಸಿದರೆ ಸಿನಿಮಾ ನೋಡಿಸಿಕೊಂಡು ಹೋಗುತ್ತೆ.




