ಚಿತ್ರ ವಿಮರ್ಶೆ : ವಿಭ
ನಿರ್ದೇಶಕ: ಮಂಜು ಸ್ವರಾಜ್
ನಿರ್ಮಾಣ: ಲೋಹಿತ್ ನಂಜುಂಡಯ್ಯ
ತಾರಾಗಣ: ಅಜೇಯ್ ರಾವ್, ಮಿಶಾ ನಾರಂಗ್, ರಂಗಾಯಣ ರಘು, ವಿಜಯ್ ಚೆಂಡೂರ್, ವೀಣಾ ಸುಂದರ್, ರಾಮಕೃಷ್ಣ ರಘು ರಾಮನಕೊಪ್ಪ, ಇತರರು
ಇದು ತ್ರಿವೇಣಿ ಅವರ ಕಾದಂಬರಿ ಆಧಾರಿತ ಚಿತ್ರ. ಅವರ ಕಾದಂಬರಿಗಳು ಪರಿಣಾಮಕಾರಿ ಆಗಿರುತ್ತವೆ. ಪ್ರಭಾವ ಕೂಡ ಬೀರುತ್ತವೆ. ಇದು ಎಲ್ಲರಿಗೂ ಗೊತ್ತು. ಹಾಗಂತ, ಈ ಸರಳ ಸುಬ್ಬರಾವ್ ಪರಿಣಾಮಕಾರಿನಾ? ಪ್ರಭಾವ ಬೀರುತ್ತಾ? ಈ ಪ್ರಶ್ನೆಗೆ ಉತ್ತರ ಕಷ್ಟ. ಆದರೂ ಕುತೂಹಲಕ್ಕಾಗಿ ಒಮ್ಮೆ ನೋಡಲ್ಲಡ್ಡಿ ಇಲ್ಲ.
ಇದು ಎಪ್ಪತ್ತರ ದಶಕದ ಕಥೆ. ಹಾಗಾಗಿ ರೆಟ್ರೋ ಶೈಲಿಯಲ್ಲೇ ಸಿನಿಮಾ ಇದೆ. ಸೂಕ್ಷ್ಮವಾಗಿ ಗಮನಿಸಿದರೆ ಕೆಲವು ಕಡೆ ಇಲ್ಲಿ ರೆಟ್ರೋ ಫೀಲ್ ಆಗೋದಿಲ್ಲ. ಆದರೆ, ಕಾದಂಬರಿಯನ್ನು ಸಿನಿಮಾ ಮಾಡಿರುವುದರಿಂದ ಪ್ರಯತ್ನ ಮೆಚ್ಚಲೇಬೇಕು.

ಕಥೆ ಸರಳ ಆದರೆ, ಸರಳ ಸುಬ್ಬರಾವ್ ಚಿತ್ರಕಥೆ ಸರಳ ಅನಿಸಲ್ಲ. ಇನ್ನಷ್ಟು ಬಿಗಿಯಾಗಿರಬೇಕಿತ್ತು. ಮೊದಲರ್ಧ ತುಂಬಾ ನಿಧಾನ ಅನಿಸುತ್ತೆ. ದ್ವಿತಿಯಾರ್ಧ ತುಸು ವೇಗ ಪಡೆದುಕೊಳ್ಳುತ್ತೆ. ಸರಳವಾದ ಪ್ರೀತಿ ಇದೆ. ಎಮೋಷನಲ್ ಜರ್ನಿಯ ಜೊತೆ ಬಾಂಧವ್ಯದ ಬೆಸುಗೆ ನೋಡುಗರಲ್ಲಿ ಖುಷಿ ಕೊಡುತ್ತೆ. ಆ ಕಾಲಘಟ್ಟದ ಕಥೆಯನ್ನು ದೃಶ್ಯಕ್ಕಿಳಿಸಿರುವ ಹರಸಾಹಸ ಕಾಣುತ್ತೆ. ಯಥಾವತ್ ಕಾದಂಬರಿಯೊಳಗಿನ ಕಥೆಯನ್ನು ರೂಪಕವಾಗಿಸುವುದು ಕಷ್ಟದ ಕೆಲಸನಾ ಅನ್ನುವ ಪ್ರಶ್ನೆ ಮೂಡುತ್ತೆ. ಕೆಲವೆಡೆ ಅನಗತ್ಯ ದೃಶ್ಯಗಳು ಬೇಕಿತ್ತಾ ಅನಿಸುತ್ತವೆ. ಉಳಿದಂತೆ ಗಂಡ ಹೆಂಡತಿಯ ಅನ್ಯೋನ್ಯತೆ, ಸಂಬಂಧಗಳ ಮೌಲ್ಯ ಇಲ್ಲಿ ಹೈಲೆಟ್.
ಆರಂಭದಲ್ಲಿ ಸಿನಿಮಾ ನಿಧಾನ ಅನ್ನುವುದು ಬಿಟ್ಟರೆ, ಅಲ್ಲಲ್ಲಿ ಮನಸ್ಸಿಗೆ ನಾಟುವ ವಿಷಯಗಳಿವೆ. ಆ ಕಾರಣಕ್ಕೆ ಸರಳ ಮತ್ತು ಸುಬ್ಬರಾವ್ ಇಷ್ಟ ಆಗುತ್ತಾರೆ.
ಕಥೆ ಏನು?
ಸುಬ್ಬರಾವ್ ಆಂಗ್ಲ ಪ್ರಾಧ್ಯಾಪಕ. ಅಕ್ಕನ ಮಗಳು ದೇವಿಯಾನಿ ಇದ್ದರೂ, ಸರಳ ಅನ್ನುವ ಸರಳತೆಯ ಹುಡುಗಿ ಮೇಲೆ ಪ್ರೀತಿ. ಕೊನೆಗೆ ಮದ್ವೆ. ಆಮೇಲೆ ಟ್ವಿಸ್ಟು ಒಂದಷ್ಟು ಟೆಸ್ಟು. ಇಲ್ಲಿ ಭಾವುಕ ಸನ್ನಿವೇಶಗಳಿವೆ. ಅಲ್ಲಲ್ಲಿ ಭಾವುಕತೆ ಹೆಚ್ಚಿಸುವ ಅಂಶಗಳಿವೆ. ಹೆಂಡತಿಯನ್ನು ಅತಿಯಾಗಿ ಪ್ರೀತಿಸುವ ಸುಬ್ಬರಾವ್ ಬದುಕಲ್ಲೊಂದು ಘಟನೆ ನಡೆಯುತ್ತೆ. ಅದೇ ಸಿನಿಮಾದ ಸಸ್ಪೆನ್ಸ್.
ಬದುಕು, ಬಾಂಧವ್ಯ, ಅದಮ್ಯ ಪ್ರೀತಿ, ತೊಳಲಾಟವಿದೆ. ವಿಷಾದ, ವಿನೋದ ಇತ್ಯಾದಿ ಅಂಶಗಳು ನೋಡುಗರಿಗೆ ಹತ್ತಿರವಾಗುತ್ತವೆ.

ಸಿನಿಮಾ ನಿಧಾನ ಎನಿಸಿದಾಗ ‘ರಂಗೋಲಿ ಅಂಗಾಲಿನಲ್ಲೇ ಚಂದ ಮರಿ ಹಾಕಿದೆ’ ಎಂಬ ಹಾಡು ವೇಗವನ್ನು ಹೆಚ್ಚಿಸುತ್ತೆ.
ಎಪ್ಪತ್ತರ ದಶಕದ ಪ್ರೀತಿ, ಕುಟುಂಬ, ಬಾಂಧವ್ಯದ ಚಿತ್ರಣವನ್ನು ಉಣಬಡಿಸಿರುವ ಚಿತ್ರ ಇವತ್ತಿನ ಕಾಲಘಟ್ಟಕ್ಕೆ ರುಚಿಸುತ್ತಾ ಎಂಬ ಪ್ರಶ್ನೆ ಇದ್ದರೆ ಒಮ್ಮೆ ಸಿನಿಮಾ ನೋಡಬಹುದು.
ಇನ್ನು ಹಾಡುಗಳ ಬಗ್ಗೆ ಹೇಳುವುದಾದರೆ ಒಂದು ಹಾಡು ಗುನುಗಬಹುದು. ಇನ್ನು ರೆಟ್ರೋ ಶೈಲಿಯ ಕಥೆಗೆ ಕಾಬೂಲ್ ದ್ರಾಕ್ಷಿ ಕಾಶ್ಮೀರಿ ಕೇಸರಿ ಹಾಡು ರುಚಿಸಲ್ಲ. ಸಂಚಿತ್ ಹೆಗ್ಡೆ ದನಿಯೂ ಹೊಂದಿಕೆ ಆಗಿಲ್ಲ.
ಉಳಿದಂತೆ ತಾಯಿ ಬಳ್ಳಿಗೆ ಹಾಡು ಅರ್ಥಪೂರ್ಣ.
ಯಾರು ಹೇಗೆ?
ಅಜೇಯ್ ರಾವ್ ನಟನೆ ಎಂದಿನಂತೆ ಇದೆ. ಯಾವುದೇ ಬದಲಾವಣೆ ಇಲ್ಲ. ಕೆಲ ದೃಶ್ಯಗಳಲ್ಲಿ ಓವರ್ ಅನಿಸುತ್ತಾರೆ. ಇನ್ನೂ ಚೆನ್ನಾಗಿ ಪಾತ್ರದಲ್ಲಿ ಜೀವಿಸಬಹುದಿತ್ತು. ಮಿಶಾ ನಾರಂಗ್ ಪಾತ್ರಕ್ಕೆ ಮೋಸ ಮಾಡಿಲ್ಲ. ರಂಗಾಯಣ ರಘು ಇರುವಷ್ಟು ಕಾಲ ಭಾವುಕತೆ ಹೆಚ್ಚಿಸುತ್ತಾರೆ. ವಿಜಯ್ ಚೆಂಡೂರ್, ವೀಣಾ ಸುಂದರ್, ರಾಮಕೃಷ್ಣ , ರಘು ರಾಮನಕೊಪ್ಪ ಪಾತ್ರಕ್ಕೆ ಮೋಸ ಮಾಡಿಲ್ಲ.
ಪ್ರದೀಪ್ ಪದ್ಮ ಕುಮಾರ್ ಕ್ಯಾಮೆರಾ ಕೈಚಳಕದಲ್ಲಿ ಚಿತ್ರ ಸರಳವಾಗಿದೆ. ಸೂರಜ್ ಎಸ್.ವಾಸುದೇವ್ ಸಂಗೀತ ಪೂರಕವಾಗಿದೆ. ಬಸವರಾಜ್ ಅರಸ್ ಕತ್ತರಿ ಪ್ರಯೋಗ ಪರವಾಗಿಲ್ಲ.




