ಚಿತ್ರ ವಿಮರ್ಶೆ: ವಿಭ
ಚಿತ್ರ: ದೈವ
ನಿರ್ದೇಶನ: ಮಂಜುನಾಥ್ ಜಯರಾಜ್
ನಿರ್ಮಾಣ: ಜಯಮ್ಮ ಪದ್ಮರಾಜ್
ತಾರಾಗಣ: ಮಂಜುನಾಥ್ ಜಯರಾಜ್, ಸುರಭಿ, ನೀತು ರಾಯ್, ಬಲ ರಾಜವಾಡಿ, ಅರುಣ್ ಬಚ್ಚನ್, ನಿಶ್ಚಿತ ಶೆಟ್ಟಿ, ಮಂಜುರಾಜ್ ಸೂರ್ಯ (ವಿಸಿಎನ್ ಮಂಜು) ಇತರರು.
“ಈ ಊರನ್ನು ಉದ್ಧಾರ ಮಾಡೋಕೆ ದ್ಯಾವರಂಗೆ ಬಂದ್ರಲ್ಲೋ, ಅಂಥವರನ್ನೂ ಈ ಜನ ಬಿಡಲಿಲ್ಲ…” ಜನರನ್ನು ಕಾಪಾಡೋಕೆ ಆ ದ್ಯಾವ್ರೇ ಬರಬೇಕು…” ಅಲ್ಲೊಂದು ಕೊಲೆಯಾದ ವ್ಯಕ್ತಿಯ ಶವ ಮುಂದೆ ಆ ಊರ ಜನರಲ್ಲೊಬ್ಬ ಹೇಳುವ ಡೈಲಾಗ್ ಇದು. ಈ ಡೈಲಾಗ್ ನಿಂದ ಸಿನಿಮಾದ ಕಥೆ ಶುರುವಾಗುತ್ತೆ. ಅಲ್ಲಿಗೆ ಇದೊಂದು ರಿವೇಂಜ್ ಸ್ಟೋರಿ ಅಂತ ಗೊತ್ತಾಗುತ್ತೆ. ಆದರೆ, ಸಿನಿಮಾದಲ್ಲಿ ರಿವೇಂಜ್ ಕಥೆ ಇದೆಯಾ? ಈ ಪ್ರಶ್ನೆಗೆ ಸಿನಿಮಾ ನೋಡಬೇಕು. ಕನ್ನಡಕ್ಕೆ ಈ ಕಥೆ ಹೊಸದೇನಲ್ಲ. ಇಂತಹ ಅದೆಷ್ಟೋ ಕಥೆಗಳು ಬಂದಿವೆ. ಆದರೆ, ಸಂಪೂರ್ಣ ಹಳ್ಳಿ ಸೊಗಡಿನ ಕಥೆಯಾದ್ದರಿಂದ ಇದು ಒಂದಷ್ಟು ಮಂದಿಗೆ ಇಷ್ಟವಾಗಬಹುದು. ಕೆಲವರಿಗೆ ಕಥೆ ಹಳೆಯದು ಅನ್ನಿಸಬಹುದು. ಅದೇನೆ ಇದ್ದರೂ, ಹೊಸಬರ ಪ್ರಯತ್ನ ಮೆಚ್ಚಲು ಅಡ್ಡಿಯಿಲ್ಲ.

ನಿರ್ದೇಶಕ ಮಂಜುನಾಥ್ ಜಯರಾಜ್ ಇಲ್ಲಿ ಮೂರು ಕೆಲಸ ನಿರ್ವಹಿಸಿದ್ದಾರೆ. ಒಂದು ಕಡೆ ನಿರ್ಮಾಣ, ಇನ್ನೊಂದು ಕಡೆ ನಿರ್ದೇಶನ ಮತ್ತೊಂದು ಕಡೆ ನಟನೆ. ಹಾಗಾಗಿ ಯಾವುದನ್ನೂ ಫುಲ್‌ಫಿಲ್ ಮಾಡೋಕೆ ಹೋಗಿಲ್ಲ. ಕಥೆಯ ಎಳೆ ಹಳೆಯದ್ದಾಗಿದ್ದರೂ, ನಿರೂಪಣೆಯಲ್ಲಿ ಅದನ್ನು ಇನ್ನಷ್ಟು ಬಿಗಿಯಾಗಿಡಬಹುದಿತ್ತು. ಆದರೆ, ಅಂತಹ ಪ್ರಯತ್ನ ಇಲ್ಲಿ ಆಗಿಲ್ಲ. ಕಥೆ ಸರಳವಾಗಿದೆ. ಆದರೆ, ಚಿತ್ರಕಥೆಯಲ್ಲಿನ್ನೂ ಹಿಡಿತ ಬೇಕಿತ್ತು. ಕೆಲವು ದೃಶ್ಯಗಳಲ್ಲಿ ಹೊಸತನವಿದೆ. ಇಂತಹ ಕಥೆಗಳಿಗೆ ವೇಗ ಬೇಕು. ಮೊದಲರ್ಧ ಅಷ್ಟಾಗಿ ರುಚಿಸುವುದಿಲ್ಲ. ದ್ವಿತಿಯಾರ್ಧದ ಮುಂದೇನಾಗುತ್ತೆ ಅನ್ನುವ ಕುತೂಹಲವಿದೆ. ಕ್ಲೈಮ್ಯಾಕ್ಸ್ ಚೆನ್ನಾಗಿದೆಯಾದರೂ, ಮತ್ತಷ್ಟು ಗಟ್ಟಿಯಾಗಿರಬೇಕಿತ್ತು. ಇಡೀ ಕಥೆ ನಾಯಕನ ಸುತ್ತವೇ ಸುತ್ತುತ್ತೆ. ಅಲ್ಲಲ್ಲಿ ಸ್ವಲ್ಪ ನಿಧಾನ ಅನಿಸುತ್ತೆ. ಹಾಡೊಂದು ಕಾಣಿಸಿಕೊಂಡು ನಿಧಾನಗತಿಯ್ನು ಮರೆಮಾಚುತ್ತೆ. ಇಡೀ ಸಿನಿಮಾದಲ್ಲಿ ಅನ್ಯಾಯ, ಕೊಲೆ, ದಬ್ಬಾಳಿಕೆ, ಬೆದರಿಕೆಯಲ್ಲೇ ಸಾಗುತ್ತೆ. ಇಲ್ಲಿ ಹೀರೋ ಅ ಎಲ್ಲದರ ವಿರುದ್ಧ ಹೋರಾಡುತ್ತಾನೆ. ಅಂತ್ಯದಲ್ಲಿ ಏನಾಗುತ್ತೆ ಅನ್ನೋದೇ ಸಿನಿಮಾದ ಸಸ್ಪೆನ್ಸ್.

ಕಥೆ ಏನು?
ಒಂದೂರಲ್ಲಿ ಒಬ್ಬ ಗೌಡ. ಅವನಿಗೆ ಆ ಊರ ಜನರ ಜಮೀನಿನ ಮೇಲೆಯೇ ಆಸೆ. ಆ ಜನರಿಗೆ ಬಡ್ಡಿಗೆ ಹಣ ಕೊಟ್ಟು, ವಸೂಲಿ ಮಾಡೋದು ಅವನ ಕಾಯಕ. ಹಣ ಕೊಡದವರ ಜಮೀನು ಪತ್ರಕ್ಕೆ ಬಲವಂತದ ಸಹಿ ಮಾಡಿಸಿಕೊಂಡು ಕಬಳಿಸುವ ಗೌಡನಿಗೆ ಊರ ಜನ ಹಿಡಿಶಾಪ ಹಾಕುತ್ತಿರುತ್ತಾರೆ. ಜನರ ಪರ ಇರಬೇಕಾದ ಹೀರೋ ದೇವ ಆ ಗೌಡನ ಜೊತೆ ಕೂಲಿ ಮಾಡಿಕೊಂಡಿರುತ್ತಾನೆ. ಮೊದಲರ್ಧ ಹೀರೋ ಕೂಡ ಗೌಡ ಹೇಳಿದಂತೆಯೇ ಕೇಳುತ್ತಾನೆ. ದ್ವಿತಿಯಾರ್ಧ ಆ ಗೌಡನ ವಿರುದ್ಧವೇ ತಿರುಗಿ ಬೀಳುತ್ತಾನೆ. ಅದಕ್ಕೆ ಒಂದು ತಿರುವು ಇದೆ. ಆ ಟ್ವಿಸ್ಟ್ ಏನು ಅನ್ನುವ ಕುತೂಹಲವಿದ್ದರೆ ಒಮ್ಮೆ ನೋಡುವ ಪ್ರಯತ್ನ ಮಾಡಬಹುದು. ಇಲ್ಲಿ ದೈವದ ಮೊರೆ ಹೋಗುವ ಜನರಿಗೆ ಆ ಹೀರೋ ಕೂಡ ದೇವನಂತೆಯೇ ಕಾಣುತ್ತಾನೆ. ಅದು ಕ್ಲೈಮ್ಯಾಕ್ಸ್‌ನಲ್ಲಿ ರಿವೀಲ್ ಆಗುತ್ತೆ. ಒಟ್ಟಾರೆ, ಒಂದು ಸರಳ ಕಥೆ ಜೊತೆಗೆ ಕಮರ್ಶಿಯಲ್ ಅಂಶ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಇಲ್ಲಿ ಫೈಟ್ಸ್‌ಗೇನೂ ಕೊರತೆ ಇಲ್ಲ. ಅಲ್ಲಲ್ಲಿ ಹೊಡೆದಾಟದ ದೃಶ್ಯಗಳು ಕಾಣಸಿಗುತ್ತವೆ. ಮಾಸ್ ಪ್ರಿಯರಿಗೆ ಫೈಟ್ ರುಚಿಸಬಹುದು. ಕೇಳುಗರಿಗೆ ಹಾಡೂ ಇದೆ. ಗುನುಗುವಂತಹ ಹಾಡೇನೂ ಇಲ್ಲ. ಹಿನ್ನೆಲೆ ಸಂಗೀತ ದೃಶ್ಯಗಳಿಗೆ ಪೂರಕವಾಗಿದ.
ಯಾರು ಹೇಗೆ?
ನಾಯಕ ಮಂಜುನಾಥ್ ಜಯರಾಜ್ ಪಾತ್ರಕ್ಕೆ ಮೋಸ ಮಾಡಿಲ್ಲ. ನಟನೆಯಲ್ಲಿನ್ನೂ ಒಂದಷ್ಟು ಪಟ್ಟುಗಳನ್ನು ಹಿಡಿಯಬೇಕು. ಆದರೂ ಕೆಲವೊಂದು ದೃಶ್ಯಗಳಲ್ಲಿ ಒಳ್ಳೆಯ ಸ್ಕೋರ್ ಮಾಡಿದ್ದಾರೆ. ಫೈಟ್ ದೃಶ್ಯಗಳಲ್ಲಿ ಇಷ್ಟವಾಗುತ್ತಾರೆ. ಅಲ್ಲಲ್ಲಿ ಮಿಸ್ಟೇಕ್ ಇದ್ದರೂ, ಅವರ ಬಾಡಿಲಾಂಗ್ವೇಜ್ ಅದನ್ನು ಪಕ್ಕಕ್ಕಿಡುವಂತೆ ಮಾಡುತ್ತೆ. ಇನ್ನು, ಸುರಭಿ, ನೀತು ರಾಯ್ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಬಲರಾಜವಾಡಿ ಅವರಿಲ್ಲಿ ದುಷ್ಟ ಗೌಡನಾಗಿ ಸ್ಕೋರ್ ಮಾಡಿದ್ದಾರೆ. ಪತ್ರಕರ್ತ ಮಂಜುರಾಜ್ ಸೂರ್ಯ ಸಿಕ್ಕ ಪಾತ್ರವನ್ನು ನಿಭಾಯಿಸಿದ್ದಾರೆ. ಉಳಿದಂತೆ ತೆರೆಮೇಲೆ ಬರುವ ಪಾತ್ರಗಳು ಸಿಕ್ಕ ಪಾತ್ರಕ್ಕೆ ಜೀವ ತುಂಬಿವೆ. ಕೆ.ಎಂ.ಪ್ರಕಾಶ್ ಅವರ ಸಂಕಲನ ಪರವಾಗಿಲ್ಲ. ಸಿದ್ಧಾರ್ಥ್ ಅವರ ಕ್ಯಾಮೆರಾ ಕೈಚಳಕದಲ್ಲಿ ದೈವದ ಸೊಬಗಿದೆ. ವಿಜೇತ ಮಂಜಯ್ಯ ಅವರ ಸಂಗೀತ ಪೂರಕವಾಗಿದೆ.



