ಮಧುರ ಮಾತಿಲ್ಲದ ನೆನಪು!

ಚಿತ್ರ ವಿಮರ್ಶೆ: ವಿಭ

ಚಿತ್ರ: ನೆನಪುಗಳ ಮಾತು ಮಧುರ
ನಿರ್ದೇಶಕ: ಅಫ್ಜಲ್‌ ಸೂಪರ್ ‌ಸ್ಟಾರ್‌
ನಿರ್ಮಾಪಕ: ಸೆವೆನ್ ರಾಜ್
ತಾರಾಗಣ: ಸೆವೆನ್‌ ರಾಜ್‌, ವಸಿಷ್ಠ ರಾಜಪ್ರಭು, ರಣವೀರ್, ವಿನಯ್ ಕುಮಾರ್, ನಾಗೇಂದ್ರ ಅರಸ್, ಶುಭಾ, ರನ್ವಿತಾ ರಾಣಿ, ರೇಖಾ, ಅಂಜಲಿ ಇತರರು.

ಆಗಾಗ ಕರ್ಮ ರಿಟರ್ನ್ಸ್‌ ಅನ್ನುವ ಮಾತು ಕೇಳುತ್ತಲೇ ಇರುತ್ತೇವೆ. ಮಾಡಿದ್ದುಣ್ಣೋ ಮಾರಾಯ ಎಂಬ ಮಾತಿಗೆ ಕಾರಣ, ಅವರು ಮಾಡಿದ ಕೆಲಸಗಳೇ ಅವರಿಗೆ ಮುಳುವಾಗುತ್ತವೆ. ಇದು ಅಕ್ಷರಶಃ ನಿಜ. ಈ ಸಿನಿಮಾದ ಥಾಟ್‌ ಕೂಡ ಅಂಥದ್ದೇ. ಹೌದು, ಸಿನಿಮಾದಲ್ಲಿ ಮಾಡಬಾರದ್ದು ಕೆಲಸ ಮಾಡಿದ ವ್ಯಕ್ತಿಯೊಬ್ಬ ಕೊನೆಗೆ ನೋವು ಅನುಭವಿಸುತ್ತಾನೆ. ಆತ ಮಾಡಿದ ಕೆಲಸಗಳೇನು? ಯಾರಿಗೆ ತೊಂದರೆ ಕೊಡ್ತಾನೆ ಅನ್ನುವ ಕುತೂಹಲವೇನಾದರೂ ಇದ್ದರೆ ಒಂದೊಮ್ಮೆ ಸಿನಿಮಾ ನೋಡಬಹುದು. ಹಾಗಂತ, ಸಿನಿಮಾ ನಿಮಗೆ ಇಷ್ಟವಾಗುತ್ತೆ ಅನ್ನುವ ಗ್ಯಾರಂಟಿ ಕೊಡುವುದು ಕಷ್ಟಸಾಧ್ಯ. ಇದು ಅದ್ಭುತ ಕಥೆ ಇರುವ ಸಿನಿಮಾವಲ್ಲ. ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡು ಸಿನಿಮಾಗೆ ಹೋಗುವುದು ಬೇಡ. ಮೇಕಿಂಗ್‌, ಹಾಡು, ಸಂಭಾಷಣೆ ಇತ್ಯಾದಿ ಬಗ್ಗೆಯೂ ನಿರೀಕ್ಷೆಗಳು ಸಲ್ಲದು.

ಹಾಗಂತ ಸಿನಿಮಾದ ಆಶಯ ಸರಿ ಇಲ್ಲವೆಂದಲ್ಲ. ಇನ್ನೂ ಅದ್ಭುತವಾಗಿ ಇರುವ ಕಥೆಯನ್ನು ಚೆನ್ನಾಗಿ ಕಟ್ಟಿಕೊಡುವ ಸಾಧ್ಯತೆ ಇತ್ತು. ತಾಂತ್ರಿಕವಾಗಿ ಸಿನಿಮಾ ಇನ್ನಷ್ಟು ಬಿಗಿಯಾಗಿರಬೇಕಿತ್ತು. ನಿರ್ದೇಶಕರ ಒನ್‌ ಲೈನ್‌ ಸ್ಟೋರಿ ಚೆನ್ನಾಗಿಯೇ ಇದೆ. ಆದರೆ, ನಿರೂಪಣೆ ಹಾಗು ಚಿತ್ರಕಥೆಯಲ್ಲಿ ಬಿಗಿ ಹಿಡಿತ ಸಾಧಿಸಬೇಕಿತ್ತು. ಅವರೇ ಇಲ್ಲಿ ನಟನೆಯನ್ನೂ ಮಾಡಿರುವುದರಿಂದ ಬಹುಶಃ ಎಲ್ಲವನ್ನೂ ಸರಿಯಾಗಿ ತೂಗಿಸುವಲ್ಲಿ ಹಿಂದೆ ಉಳಿದಿದ್ದಾರೆ ಅಂತ ಕಾಣುತ್ತೆ. ಆದರೆ ಮೊದಲ ಪ್ರಯತ್ನ ಅನ್ನುವ ಕಾರಣಕ್ಕೆ ಕೆಲವು ತಪ್ಪುಗಳನ್ನು ಪಕ್ಕಕ್ಕೆ ಇಟ್ಟು ಸಿನಿಮಾ ನೋಡಬಹುದು.

ಮೊದಲೇ ಹೇಳಿದಂತೆ ಕಥೆ ಸರಳವಾಗಿದೆ. ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸುವ ಪ್ರಯತ್ನ ಮಾಡಬಹುದಿತ್ತು. ಕೆಲವು ದೃಶ್ಯಗಳ ಕಥೆಗಳು ವಾಸ್ತವಕ್ಕೆ ಹತ್ತಿರ ಎನಿಸುತ್ತವೆ. ಉಳಿದಂತೆ ಸಿನಿಮಾದ ಮೊದಲರ್ಧಕ್ಕಿಂತ ದ್ವಿತಿಯಾರ್ಧ ತಕ್ಕಮಟ್ಟಿಗೆ ಕಥೆಯ ಆಶಯ ಸರಿ ಎನಿಸುತ್ತೆ. ಕಥೆ ಬಗ್ಗೆ ಹೇಳುವುದಾದರೆ, ಹಲವು ವರ್ಷಗಳಿಂದ ದೂರ ದೂರ ಇದ್ದಂತಹ ನಾಲ್ಕು ಜನ ಗೆಳೆಯರು ಒಂದೆಡೆ ಸೇರಿ ಪಾರ್ಟಿ ಮಾಡಬೇಕು ಅಂತ ನಿರ್ಧರಿಸುತ್ತಾರೆ. ಅದರಂತೆ ಒಟ್ಟಿಗೆ ಸೇರುತ್ತಾರೆ. ಪಾರ್ಟಿ ಮಧ್ಯೆ ಒಬ್ಬೊಬ್ಬರ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತೆ. ಅವರೆಲ್ಲರೂ ಮಿಡ್ಲ್‌ ಕ್ಲಾಸ್‌ ಕುಟುಂಬದವರು. ಒಬ್ಬನ ಅಮ್ಮ ತನ್ನ ಮಗ ಮದ್ವೆಯಾಗಿ ಬದುಕಲ್ಲಿ ಸೆಟ್ಲ್‌ ಆಗಬೇಕು ಅನ್ನೋ ಆಸೆ. ಮದ್ವೆ ಆಗೋಕೆ ಅವನ ಬಳಿ ಹಣವಿಲ್ಲ. ಶ್ರೀಮಂತ ವ್ಯಕ್ತಿಯೊಬ್ಬನ ಬಳಿ ಅವನ ಗೆಳೆಯ ಮದ್ವೆಗೆ ಎರಡು ಲಕ್ಷ ಸಾಲ ಕೊಡಿಸುತ್ತಾನೆ. ಆದರೆ, ಮದ್ವೆ ಆಗುವ ಹುಡುಗಿ ಬೇರೊಬ್ಬನ ಜೊತೆ ಓಡಿ ಹೋಗ್ತಾಳೆ. ಸಾಲ ತಂದು ಮದ್ವೆಗೆ ಖರ್ಚು ಮಾಡಿದ್ದ ಹಣವನ್ನು ಹೇಗೆ ತೀರಿಸ್ತಾನೆ ಅನ್ನೋ ಎಪಿಸೋಡ್ ಇಂಟ್ರೆಸ್ಟ್‌ ಅನಿಸುತ್ತೆ.

ಮತ್ತೊಬ್ಬ ಬದುಕಿಗಾಗಿ ಜೊಮೆಟೊ ಬಾಯ್‌ ಆಗಿ ಕೆಲಸ. ಮಳೆ ಸುರಿಯೋ ವೇಳೆ ಮನೆಯೊಂದಕ್ಕೆ ಹೋಗಿ ಫುಡ್‌ ಡಿಲವರಿ ಮಾಡುವ ಅವನಿಗೆ ಅಲ್ಲೊಬ್ಬ ಆಂಟಿ ಜೊತೆ ಆಕರ್ಷಣೆ ಆಗುತ್ತೆ. ಅಲ್ಲೊಂದು ಊಹಿಸದಿರುವ ಘಟನೆ ನಡೆದುಹೋಗುತ್ತೆ. ಆ ಘಟನೆ ಎಂಥದ್ದು ಅನ್ನೋದೇ ಸಸ್ಪೆನ್ಸ್.‌ ಮತ್ತೊಬ್ಬನದು ಭಯಾನಕ ಕಥೆ. ಅದನ್ನು ಸಿನಿಮಾದಲ್ಲೇ ನೋಡಬೇಕು. ಇನ್ನೊಬ್ಬಾತನದು ಈಗಿನ ಟ್ರೆಂಡ್‌ ಸ್ಟೋರಿ. ಒಟ್ಟಾರೆ ಒಬ್ಬೊಬ್ಬನದು ಒಂದೊಂದು ಸ್ಟೋರಿ ಹೇಳುವ ಹೊತ್ತಿಗೆ ಸೆಕೆಂಡ್‌ ಹಾಫ್‌ ಮುಗಿದು ಹೋಗುತ್ತೆ. ಒಂದಷ್ಟು ಟ್ವಿಸ್ಟ್‌ ಬರುತ್ತೆ. ಅದು ನೋಡುಗರ ಟೆಸ್ಟ್‌ ಮಾಡುತ್ತೆ. ದ್ವಿತಿಯಾರ್ಧದಲ್ಲಿ ಫಸ್ಟ್‌ ಹಾಫ್‌ನಲ್ಲಿ ಏನೆಲ್ಲ ಆಯ್ತು ಅದಕ್ಕೆ ಕ್ಲಾರಿಟಿ ಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

ಈಗಾಗಲೇ ಇಂತಹ ಕಥೆಯ ಎಳೆ ಇರುವ ಅನೇಕ ಸಿನಿಮಾಗಳು ಬಂದು ಹೋಗಿವೆ. ಆದರೆ, ಇಲ್ಲಿ ಈಗಿನ ಯೂಥ್ಸ್‌ ಯಾವೆಲ್ಲಾ ಸಮಸ್ಯೆಗೆ ಸಿಲುಕುತ್ತೆ. ಯಾವೆಲ್ಲ ಹಾದಿ ತುಳಿಯುತ್ತಾರೆ ಎಂಬ ಅಂಶವನ್ನು ನಿರ್ದೇಶಕರು ಹೈಲೆಟ್‌ ಮಾಡಿದ್ದಾರೆ. ಆರಂಭದಲ್ಲಿ ಸಿನಿಮಾ ಮಂದಗತಿಯಲ್ಲೇ ಸಾಗುತ್ತೆ. ಸಿನಿಮಾದ ನಿಧಾನಕ್ಕೆ ಹಿನ್ನೆಲೆ ಸಂಗೀತವೂ ಕಾರಣ. ಕೆಲವು ದೃಶ್ಯಗಳು ಅನಗತ್ಯವಾಗಿವೆ. ಇನ್ನಷ್ಟು ಚುರುಕುತದನ ನಿರೂಪಣೆ ಬೇಕಿತ್ತು. ಯೂಥ್ಸ್‌ ಮಿಸ್ಟೇಕ್ಸ್‌ ಹಾಗು ಹಣವಂತನ ತಪ್ಪುಗಳು ಹೇಗೆಲ್ಲ ಇರುತ್ತವೆ ಅನ್ನುವುದಕ್ಕೆ ಸಿನಿಮಾ ನೋಡಬಹುದು.

ಸಿನಿಮಾದಲ್ಲಿ ನಿರ್ದೇಶಕ ಅಫ್ಜಲ್‌ ಸೂಪರ್‌ ಸ್ಟಾರ್‌ ಅವರು ಕಾಣಿಸಿಕೊಂಡಿದ್ದರೂ ಪಾತ್ರದಲ್ಲಿ ಇನ್ನಷ್ಟು ತಲ್ಲೀನರಾಗಬೇಕಿತ್ತು. ನಿರ್ಮಾಪಕ ಸೆವೆನ್‌ ರಾಜ್‌ ಇಲ್ಲಿ ನೆಗೆಟಿವ್‌ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ಇನ್ನಷ್ಟು ಗಟ್ಟಿತನ ಕೊಡಬಹುದಿತ್ತು. ಉಳಿದಂತೆ ಕಾಣಿಸಿಕೊಂಡಿರುವ ವಸಿಷ್ಠ ರಾಜಪ್ರಭು, ರಣವೀರ್, ವಿನಯ್ ಕುಮಾರ್, ನಾಗೇಂದ್ರ ಅರಸ್, ಶುಭಾ, ರನ್ವಿತಾ ರಾಣಿ, ರೇಖಾ, ಅಂಜಲಿ ಇತರರು ನಿರ್ದೇಶಕರು ಹೇಳಿದಂತೆ ಪಾತ್ರವನ್ನು ಕಟ್ಟಿಕೊಟ್ಟಿದ್ದಾರೆ. ಸ್ವಾಮಿ ಅವರ ಕ್ಯಾಮೆರಾ ಕೈಚಳಕ ಪರವಾಗಿಲ್ಲ. ರಾಜು ಎಮ್ಮಿಗನೂರು ಅವರ ಹಾಡು ಸನ್ನಿವೇಶಕ್ಕೆ ತಕ್ಕಂತೆ ಇದೆ. ದೇವರಾಜ್‌ ಕುಷ್ಟಗಿ ಅವರ ಹಿನ್ನೆಲೆ ಸಂಗೀತವೇ ಇಲ್ಲಿ ಮೈನಸ್. ಕಾರ್ತಿಕ್‌ ಈಶ್ವರಾಚಾರಿ‌ ಅವರ ಸಂಕಲನ ಕೆಲವು ಕಡೆ ಅಚ್ಚುಕಟ್ಟಾಗಿದೆ.

Related Posts

error: Content is protected !!