ಶಶಾಂಕ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ಅಭಿನಯದ ಹೊಸ ಚಿತ್ರ ಶುರುವಾಗುತ್ತಿದೆ. ಅದಕ್ಕೆ “ಬ್ರ್ಯಾಟ್” ಎಂದು ಹೆಸರಿಡಲಾಗಿದೆ. ಮಂಜುನಾಥ್ ಕಂದಕೂರ್ ನಿರ್ಮಾಪಕರು. ಈ ಚಿತ್ರದ ಶೀರ್ಷಿಕೆಯನ್ನು. ನಿರ್ಮಾಪಕರ ಸಹೋದರ ಬದರೀನಾಥ್ ಅನಾವರಣ ಮಾಡಿದರು.

ನಾನು ಹಾಗೂ ನಿರ್ದೇಶಕ ಶಶಾಂಕ್ ಅವರು “ಕೌಸಲ್ಯ ಸುಪ್ರಜಾ ರಾಮ” ಚಿತ್ರದ ನಂತರ ಈ ಚಿತ್ರ ಮಾಡುತ್ತಿದ್ದೇವೆ. ಆದರೆ ಶಶಾಂಕ್ ಅವರು ಈವರೆಗೂ ನಿರ್ದೇಶನ ಮಾಡಿರದ ಹಾಗೂ ನಾನು ಕೂಡ ಈವರೆಗೂ ಮಾಡಿರದ ವಿಭಿನ್ನ ಕಥೆಯುಳ್ಳ ಚಿತ್ರ “ಬ್ರ್ಯಾಟ್”. ನನ್ನ ಪ್ರಕಾರ ಕನ್ನಡದಲ್ಲಿ ತೀರ ಅಪರೂಪವಾದ ಕಥಾಹಂದರ ಹೊಂದಿರುವ ಚಿತ್ರವಿದು. ಪ್ರೇಮಕಥೆಗಳು, ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರಗಳಲ್ಲಿ ನಟಿಸುತ್ತಿದ್ದ ನನಗೆ ಇದು ಹೊಸ ತರಹದ ಚಿತ್ರ. ಈ ಚಿತ್ರಕ್ಕಾಗಿ ನಾನು ಮೊದಲ ಬಾರಿಗೆ ವರ್ಕ್ ಶಾಪ್ ಸಹ ಮಾಡಿದ್ದೇನೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಮನಿಶಾ ಅವರು ಕನ್ನಡದವರೆ ಆಗಿದರೂ ಮೊದಲ ಬಾರಿಗೆ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಯಾವುದೇ ಕೊರತೆ ಇಲ್ಲದ ಹಾಗೆ ನಿರ್ಮಾಪಕರು ನಿರ್ಮಾಣ ಮಾಡುತ್ತಿದ್ದಾರೆ. ಅದ್ಭುತ ಕಲಾವಿದರ ಹಾಗೂ ಅನುಭವಿ ತಂತ್ರಜ್ಞರ ದಂಡೇ ನಮ್ಮ ಚಿತ್ರದಲ್ಲಿದೆ ಎಂದರು ನಾಯಕ ಡಾರ್ಲಿಂಗ್ ಕೃಷ್ಣ.

ಅತೀ ಹೆಚ್ಚು ತರಲೆ ಮಾಡುವ ಹುಡುಗರನ್ನು ಸಾಮಾನ್ಯವಾಗಿ “ಬ್ರ್ಯಾಟ್” ಎಂದು ಕರೆಯುತ್ತಾರೆ. ಅದರಲ್ಲೂ ಹದಿನಾರು ವರ್ಷದ ಒಳಗಿರುವ ಮಕ್ಕಳಿಗೆ ಈ ಪದ ಬಳಸುವುದು ಹೆಚ್ಚು. ನಮ್ಮ ಚಿತ್ರದ ಕಥೆಯೂ ಸಹ ಯುವಜನತೆಗೆ ಹತ್ತಿರವಾಗಿರುವುದರಿಂದ ಈ ಶೀರ್ಷಿಕೆ ಸೂಕ್ತವೆನಿಸಿತು. ಕನ್ನಡದಲ್ಲಿ ಶೀರ್ಷಿಕೆ ಇಡೋಣ ಎಂದು ಕೊಂಡು ನೋಡಿದಾಗ ಸಾಕಷ್ಟು ಈಗಾಗಲೇ ಬಂದಿರುವ ಚಿತ್ರಗಳ ಶೀರ್ಷಿಕೆಗಳೆ ದೊರಕಿತು. ಹಾಗಾಗಿ, ಹೇಗಿದ್ದರೂ ಇದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬರುತ್ತಿರುವ ಚಿತ್ರವಾಗಿರುವುದರಿಂದ “ಬ್ರ್ಯಾಟ್” ಶೀರ್ಷಿಕೆಯೇ ಸರಿ ಎನಿಸಿತು. ಈವರೆಗೂ ಈ ಹೆಸರಿನಲ್ಲಿ ಯಾವ ಭಾಷೆಗಳಲ್ಲೂ ಸಿನಿಮಾ ಬಂದಿಲ್ಲ. ನಮ್ಮದೇ ಮೊದಲು.

ಈ ಚಿತ್ರ ಕೂಡ ನಾನು ಈವರೆಗೂ ಮಾಡಿರದ ಬೇರೆ ಜಾನರ್ ಚಿತ್ರ. ಮಂಜುನಾಥ್ ಈ ಕಥೆಯನ್ನು ಮೆಚ್ಚಿಕೊಂಡು ಮತ್ತೆ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಚಿತ್ರ ಅದ್ದೂರಿಯಾಗಿ ಮೂಡಿಬರಲು ಅವರ ಸಹಕಾರವೇ ಕಾರಣ. ಇನ್ನೂ, ಸಾಮಾನ್ಯವಾಗಿ ಎಲ್ಲರೂ ಶೀರ್ಷಿಕೆಯನ್ನು ವಿಡಿಯೋ ತುಣಕಿನಲ್ಲೂ ಅಥವಾ ಪೋಸ್ಟರ್ ನಲ್ಲೂ ಬಿಡುಗಡೆ ಮಾಡುತ್ತಾರೆ. ಆದರೆ ನಮ್ಮ ಚಿತ್ರದ ಶೀರ್ಷಿಕೆಯನ್ನು ವಿಶೇಷವಾಗಿ ಹಾಡೊಂದರ ಮೂಲಕ ಅನಾವರಣ ಮಾಡಿದ್ದೇವೆ. ಐದು ಭಾಷೆಗಳಲ್ಲಿ ಈ ಶೀರ್ಷಿಕೆಗೀತೆ ಇರುತ್ತದೆ. ರಾಪರ್ ರಾಹುಲ್ ಡಿಟೋ ಈ ಹಾಡನ್ನು ಹಾಡಿದ್ದಾರೆ. ಈ ಹಾಡು ಚಿತ್ರದಲ್ಲಿರುವುದಿಲ್ಲ. ಚಿತ್ರದಲ್ಲಿ ಅರ್ಜುನ್ ಜನ್ಯ ಸಂಗೀತ ನೀಡಿರುವ ಮೂರು ಹಾಡುಗಳಿರುತ್ತದೆ. ಈಗಾಗಲೇ ಆನಂದ್ ಆಡಿಯೋದವರು ಈ ಚಿತ್ರದ ಆಡಿಯೋ ಹಕ್ಕನ್ನು ಪಡೆದುಕೊಂಡಿದ್ದಾರೆ. “ಬ್ರ್ಯಾಟ್” ಇದು ಅಪ್ಪ – ಮಗನ ಸಂಘರ್ಷ. ಅಪ್ಪನಿಗೆ ಮಗನೇ “ಬ್ರ್ಯಾಟ್”. ಅಪ್ಪನ ಪಾತ್ರದಲ್ಲಿ ಅಚ್ಯುತ ಕುಮಾರ್ ಅಭಿನಯಿಸುತ್ತಿದ್ದಾರೆ. ಮನೀಶ ನಾಯಕಿ. ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು ಮುಂತಾದವರು ತಾರಾಬಳಗದಲ್ಲಿದ್ದಾರೆ. ಅಭಿಲಾಷ್ ಕಲ್ಲತ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈಗಾಗಲೇ ಶೇಕಡಾ 80 ರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆದಿದೆ ಎಂದು ನಿರ್ದೇಶಕ ಶಶಾಂಕ್ ತಿಳಿಸಿದರು.

ನಮ್ಮ “ಫಸ್ಟ್ ರ‍್ಯಾಂಕ್ ರಾಜು” ಚಿತ್ರಕ್ಕೆ ನೀವೆಲ್ಲರೂ ನೀಡಿದ ಪ್ರೋತ್ಸಾಹ ಅಪಾರ. ಶಶಾಂಕ್ ಅವರು ಹೇಳಿದ ಕಥೆ ಇಷ್ಟವಾಯಿತು. ಹಾಗಾಗಿ ಐದು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಮರಳಿ ಬಂದಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ ಎಂದರು ನಿರ್ಮಾಪಕ ಮಂಜುನಾಥ್ ಕಂದಕೂರ್.
ನಾನು ಕನ್ನಡದವಳು. ಈಗಾಗಲೇ ತೆಲುಗಿನ ಒಂದು ಚಿತ್ರದಲ್ಲಿ ನಟಿಸಿರುವ ನನಗೆ ಕನ್ನಡದಲ್ಲಿ ಇದು ಮೊದಲ ಚಿತ್ರ. ಇದರಲ್ಲಿ ನನ್ನದು ಮಧ್ಯಮ ವರ್ಗದ ಹುಡುಗಿ ಪಾತ್ರ ಎಂದರು ನಾಯಕಿ ಮನಿಶಾ ಕಂದಕೂರ್.

ಶೀರ್ಷಿಕೆ ಗೀತೆ ಹಾಡಿರುವ ರಾಹುಲ್ ಡಿಟೋ, ಆನಂದ್ ಆಡಿಯೋ ಶ್ಯಾಮ್, ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿರುವ ರಮೇಶ್ ಇಂದಿರ, ಡ್ಯಾಗನ್ ಮಂಜು, ನಾಯಕನ ಸ್ನೇಹಿತರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ರೀವತ್ಸ, ತೇಜಸ್, ಗೌರವ್ ಶೆಟ್ಟಿ ಸಂಚಿತ್ ಹಾಗೂ ಛಾಯಾಗ್ರಾಹಕ ಅಭಿಲಾಷ್ ಕಲ್ಲತ್ತಿ “ಬ್ರ್ಯಾಟ್” ಚಿತ್ರದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.