ಚಿತ್ರ ವಿಮರ್ಶೆ: ಕಡಲೊಳು ಮೂವರ ಪ್ರೇಮಾಯಣ

ರೇಟಿಂಗ್: 3.5/5

ಚಿತ್ರ: ಮನದ ಕಡಲು
ನಿರ್ದೇಶನ: ಯೋಗರಾಜ್ ಭಟ್
ನಿರ್ಮಾಪಕ: ಈ. ಕೃಷ್ಣಪ್ಪ
ತಾರಾಗಣ: ಸುಮುಖ, ರಾಶಿಕಾ ಶೆಟ್ಟಿ, ಅಂಜಲಿ ಅನೀಶ್, ರಂಗಾಯಣ ರಘು, ದತ್ತಣ್ಣ ಇತರರು.

ಹುಡುಗಿಯರು ಗೊತ್ತಾಗಲ್ಲ. ಐ ಮೀನ್ ಅರ್ಥ ಆಗಲ್ಲ… ‘ ಸಿನಿಮಾದ ನಾಯಕ ಸುಮುಖ ಆ ಹುಡುಗಿಯ ಮುಂದೆ ಹೀಗೆ ಹೇಳುವ ಹೊತ್ತಿಗೆ, ಅವನು ಒಬ್ಬಳನ್ನು ಲವ್ ಮಾಡೋಕೆ ಶುರು ಮಾಡಿರುತ್ತಾನೆ. ಮತ್ತೊಬ್ಬಳು ಅವನನ್ನು ಇಷ್ಟ ಪಡೋಕೆ ಶುರು ಮಾಡಿರುತ್ತಾಳೆ. ಹಾಗಂತ ಇದು ತ್ರಿಕೋನ ಪ್ರೇಮ ಕಥೆಯಲ್ಲ. ಭಟ್ಟರ ಎಂದಿನ ಮಾತಿನ ಶೈಲಿಯ ಸಿನಿಮಾ ಇದು. ಅಲ್ಲಲ್ಲಿ ಬರುವ ಕಚಗುಳಿ ಮಾತು, ತುಂಟಾಟ, ಹುಚ್ಚಾಟ, ತಿಕ್ಕಲುತನ ಎಲ್ಲವೂ ಇಲ್ಲಿ ಮೇಳೈಸಿದೆ. ಆ ಕಾರಣಕ್ಕೆ ಕಡಲು ಮನತಟ್ಟುತ್ತೆ.

ಇಡೀ ಸಿನಿಮಾ ಆಹ್ಲಾದಕರ ಎನಿಸುತ್ತಾದರೂ ಅಲ್ಲಲ್ಲಿ ಕಡಲ್ಕೊರೆತವೂ ಇದೆ. ಅದು ಮಾತಿನ ಕೊರೆತ. ಆಗಾಗ ಅರಗಿಸಿಕೊಳ್ಳುವ ಅನಿವಾರ್ಯತೆ ಬರುತ್ತೆ. ಹೊರತುಪಡಿಸಿದರೆ ಇದೊಂದು ಆಪ್ತವೆನಿಸೋ ಚಿತ್ರ. ತೆರೆ ಮೇಲೆ ಪಾತ್ರಗಳು ಸುರಿಯೋ ಮಳೆಗೆ ಮೈಯೊಡ್ಡಿದರೆ, ನೋಡುಗರು ಕಣ್ಣು ಒದ್ದೆಯಾಗಿಸಿಕೊಂಡು ಹೊರಬರುವಷ್ಟು ವಿಷಯವಿದೆ.

ಸಿನಿಮಾದ ಮೊದಲರ್ಧ ಜಾಲಿ ಜಾಲಿ. ದ್ವಿತಿಯಾರ್ಧ ಕೊಂಚ ಭಾವುಕತೆಗೆ ದೂಡುತ್ತೆ. ಸಿನಿಮಾದಲ್ಲಿ ಪ್ಲಸ್ಸು – ಮೈನಸ್ಸು ಎರಡೂ ಇವೆ. ಒಂದೊಳ್ಳೆಯ ಸಂದೇಶವೂ ಇದೆ. ಕೆಲವು ಕಡೆ ಕಂಟಿನ್ಯುಟಿ ಮಿಸ್ಟೇಕ್ಸ್ ಕೂಡ ಎದ್ದು ಕಾಣುತ್ತೆ. ಇನ್ನು ಸಿನಿಮಾ ಸರಾಗವಾಗಿ ನೋಡಿಸಿಕೊಂಡು ಹೋಗುತ್ತೆ. ಆದರೆ, ಚಿತ್ರದ ಅವಧಿ ಕೊಂಚ ಕಡಿಮೆ ಆಗಿದ್ದರೆ, ಮನಸ್ಸಿಗೆ ಭಟ್ಟರ ಕಡಲು ಇನ್ನಷ್ಟು ಹತ್ತಿರವಾಗುತ್ತಿತ್ತು. ಆದರೂ ಒಂದೊಮ್ಮೆ ನೋಡಿ ಖುಷಿಪಡಲು ಅಡ್ಡಿ ಇಲ್ಲ.

ಸಿನಿಮಾ ಲ್ಯಾಗ್ ಆಯ್ತು ಅನ್ನುವುದು ಬಿಟ್ಟರೆ , ಭಟ್ಟರು ಯುವ ಮನಸ್ಸನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಹಳೆಯ ಟ್ರ್ಯಾಕ್ ಬದಿಗೊತ್ತಿ ಹೊಸದೇನನ್ನೋ ಹೇಳಿದ್ದಾರೆ ಅನ್ನುವ ಭ್ರಮೆ ಬಿಟ್ಟು ಸಿನಿಮಾ ನೋಡಬೇಕು. ಎಲ್ಲೂ ಬೋರ್ ಅನಿಸಲ್ಲ. ಕೆಲವು ಕಡೆ ಕೆಲ ಮಾತುಗಳು, ದೃಶ್ಯಗಳು ಅನಗತ್ಯ ಅನಿಸುತ್ತವೆ. ಉಳಿದಂತೆ ಕಡಲ ಕಿನಾರೆಯೊಳಗಿನ ಚಿತ್ರಣ ಖುಷಿ ಕೊಡುತ್ತೆ.

ಕಥೆ ಏನು?

ನಾಯಕ ಸುಮುಖ ಅಪ್ಪ ಅಮ್ಮನಿಗೆ ಒಬ್ಬನೇ ಮಗ. ಅಪ್ಪ ಡಾಕ್ಟರ್ ಅಮ್ಮ ಟೀಚರ್. ಸುಮುಖ ಮೆಡಿಕಲ್ ಸ್ಟುಡೆಂಟ್. ಮೂರನೇ ವರ್ಷ ಓದಿದ ನಂತರ ಮೆಡಿಕಲ್ ಓದೋದೇ ಬೇಡ ಅಂತ ನಿರ್ಧರಿಸ್ತಾನೆ. ಅದಕ್ಕೊಂದು ಬಲವಾದ ಕಾರಣವೂ ಇದೆ. ಮೆಡಿಕಲ್ ಕಾಲೇಜ್ ಬಿಟ್ಟು, ಹೊರ ಬರುವ ಸುಮುಖನಿಗೆ ಕ್ರಿಕೆಟ್ ಪ್ಲೇಯರ್ ರಾಶಿಕಾ ದರ್ಶನವಾಗುತ್ತೆ. ಮೊದಲ‌ ನೋಟಕ್ಕೆ ಲವ್ ಶುರು. ಅಲ್ಲಿಂದ ಪ್ರೀತಿ ಮಾಡುವಂತೆ ದುಂಬಾಲು. ನಂತರ ಆರು ತಿಂಗಳು ಆಕೆ ಮಾಯ. ಆಮೇಲೆ ಸಿಗ್ತಾಳಾ? ಇದು ಟ್ವಿಸ್ಟು.

ಇಲ್ಲಿ ಅಂಜಲಿ ಅನ್ನುವ ಮತ್ತೊಬ್ಬ ನಾಯಕಿ ಇದ್ದಾಳೆ. ಅವಳಿಗೆ ಸುಮುಖನ ಮೇಲೆ ಪ್ರೀತಿ. ಸುಮುಖನಿಗೆ ರಾಶಿಕಾ ಮೇಲೆ ಪ್ರೀತಿ. ಇಬ್ಬರ ಜೊತೆಗೂ ಇರುವ ಸುಮುಖ ಕೊನೆಗೆ ಯಾರನ್ನು ಕೈ ಹಿಡಿತಾನೆ ಎಂಬುದು ಕಥೆ. ಕುತೂಹಲ ಇದ್ದರೆ ಒಮ್ಮೆ ಸಿನಿಮಾ ನೋಡಬಹುದು.

ಯಾರು ಹೇಗೆ?

ಸುಮುಖ ಪಾತ್ರಕ್ಕೆ ಜೀವ ತುಂಬಿದ್ದಾನೆ. ಅವರ ನಟನೆಯಲ್ಲಿ ಲವಲವಿಕೆ ಇದೆ. ಪ್ರತಿ ದೃಶ್ಯದಲ್ಲೂ ಲೀಲಾಜಾಲ. ಸಣ್ಣಪುಟ್ಟ ಮಿಸ್ಟೇಕ್ಸ್ ತಿದ್ದಿಕೊಂಡರೆ ಕನ್ನಡಕ್ಕೊಬ್ಬ ಹೀರೋ ಆಗಿ ನಿಲ್ಲುವ ಲಕ್ಷಣಗಳಿವೆ. ರಾಶಿಕಾ ಮತ್ತು ಅಂಜಲಿ ಇಬ್ಬರೂ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ಇಬ್ಬರಿಗೂ ಸಮಪಾತ್ರ. ಅದನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಸ್ವಲ್ಪ ಬೋಲ್ಡ್ ಮಾತುಗಳು ಹೆಚ್ಚಾದವು ಅನ್ನೋದು ಬಿಟ್ಟರೆ ನಟನೆ ಓಕೆ. ರಂಗಾಯಣ ರಘು ಅವರಿಗಿಲ್ಲಿ ವಿಶೇಷ ಪಾತ್ರವಿದೆ. ಅವರ ಶೈಲಿಯ ಮಾತಿಗೆ ಅವಕಾಶವಿಲ್ಲ. ದತ್ತಣ್ಣ ಇಲ್ಲೊಂದು ಗಮನ ಸೆಳೆಯೋ ಪಾತ್ರದಲ್ಲಿ ಇಷ್ಟ ಆಗುತ್ತಾರೆ. ಉಳಿದಂತೆ ಶಿವಧ್ವಜ್ ಇತರರು ಪಾತ್ರಕ್ಕೆ ಜೀವ ತುಂಬಿದ್ದಾರೆ.

ಇಲ್ಲಿ ಮುಖ್ಯವಾಗಿ ಗಮನ ಸೆಳೆಯೋದು ಸಂತೋಷ್ ರೈ ಪಾತಾಜೆ ಅವರ ಕ್ಯಾಮರಾ ಕೆಲಸ. ಅದ್ಭುತವಾಗಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಒಂದಷ್ಟು ಶಾಟ್ಸ್ ನೋಡಲೇಬೇಕು. ಇನ್ನು ಸಂಗೀತದ ಎರಡು ಹಾಡು ಓಕೆ. ಹಿನ್ನೆಲೆ ಸಂಗೀತಕ್ಕೆ ಇನ್ನಷ್ಟು ಸ್ವಾದ ಬೇಕಿತ್ತು. ಹರಿಕೃಷ್ಣ ಹಾಡುವ ಬದಲು ಬೇರೆ ಗಾಯಕರಿಗೆ ಅವಕಾಶ ಕೊಟ್ಟಿದ್ದರೆ ಇನ್ನೂಂದು ಹಾಡು ಕೇಳುವಂತಿರುತ್ತಿತ್ತು.

ಕೊನೇಮಾತು: ಇಲ್ಲಿ ಕಥೆ ಬಗ್ಗೆ ಹೇಳುವುದಕ್ಕಿಂತ ಒಂದೊಳ್ಳೆಯ ಸಂದೇಶವಿದೆ. ಸಾವು ಮುಖ್ಯ ಅಲ್ಲ. ಬದುಕೋದನ್ನ ಕಲೀರಿ . ಬದುಕೇ‌ ಜೀವನ ಎನ್ನುವುದು ಭಟ್ಟರ ವೇದಾಂತ.

Related Posts

error: Content is protected !!