ಇದು ಹೆಣ್ಮಕ್ಳ ಕಬ್ಬಡ್ಡಿ ಗುರು: ಏಪ್ರಿಲ್ 5 ಕ್ಕೆ CWKL ಶುರು

ನವರಸನ್ ನೇತೃತ್ವದ “ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್” ಗೆ ಚಂದನ್ ಶೆಟ್ಟಿ ಅವರು ಚಂದದ ಥೀಮ್ ಸಾಂಗ್ ಬರೆದಿದ್ದಾರೆ.

ನಿರ್ಮಾಪಕ, ನಿರ್ದೇಶಕ, ನಟ ನವರಸನ್ “ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್” ಆಯೋಜಿಸುವ ಮೂಲಕ ಕ್ರೀಡಾಲೋಕಕ್ಕೂ‌ ಪಾದಾರ್ಪಣೆ ಮಾಡಿರುವುದು ಎಲ್ಲರಿಗೂ ತಿಳಿದ ಸಂಗತಿ. ಕಳೆದ ಕೆಲವು ದಿನಗಳ ಹಿಂದೆ “CWKL” ಲೋಗೊ ಅನಾವರಣವನ್ನು ನವರಸನ್ ಅದ್ದೂರಿಯಾಗಿ ಬಿಡುಗಡೆ ಮಾಡಿದ್ದರು. ಪ್ರಸ್ತುತ ಹೆಸರಾಂತ ಗಾಯಕ, ನಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರು “CWKL” ಗಾಗಿ “ಕಬ್ಬಡಿ ಕಬ್ಬಡಿ” ಎಂಬ ಚಂದದ ಥೀಮ್ ಸಾಂಗ್ ಬರೆದು ಸಂಗೀತ ಸಂಯೋಜಿಸಿದ್ದಾರೆ.

ಇದೇ ಸಂದರ್ಭದಲ್ಲಿ “CWKL” ಪಂದ್ಯಗಳು ನಡೆಯುವ ದಿನಾಂಕಗಳನ್ನು ಸಹ ತಿಳಿಸಲಾಯಿತು. ವಿಧಾನ ಪರಷತ್ ಸದಸ್ಯರು ಹಾಗೂ‌ ಸಾಯಿಗೋಲ್ಡ್ ಸಂಸ್ಥೆಯ ಮಾಲೀಕರಾದ ಶರವಣ ಅವರು ಪಂದ್ಯಗಳು ನಡೆಯುವ ದಿನಾಂಕಗಳ ಬಗ್ಗೆ ತಿಳಿಸಿ, “CWKL” ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಏಪ್ರಿಲ್ 5 ಹಾಗೂ 6 “CWKL” ನ ಪಂದ್ಯಗಳು ನಡೆಯಲಿದೆ. ಥೀಮ್ ಸಾಂಗ್ ಅನ್ನು ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಬಿಡುಗಡೆ ಮಾಡಿದರು.

“CWKL” ತಂಡಗಳ ಮಾಲೀಕರಾದ ಸಾಯಿಗೋಲ್ಡ್ ಪ್ಯಾಲೆಸ್ ನ ಶರವಣ,‌ “ವಾಮನ” ಚಿತ್ರದ ನಿರ್ಮಾಪಕ ಚೇತನ್ ಗೌಡ,‌ ನಿರ್ಮಾಪಕ ಸುರೇಶ್ ಗೌಡ, ನಿರ್ಮಾಪಕ ರಾಜೇಶ್ ಗೌಡ, ನಿರ್ಮಾಪಕ ಗೋವಿಂದರಾಜು ಹಾಗೂ ಗಜೇಂದ್ರ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಲೀಗ್ ನಲ್ಲಿ ಏಳು ತಂಡಗಳಿದ್ದು, ಏಳೂ ತಂಡಗಳ ನಾಯಕಿಯರು ಹಾಗೂ ಆಟಗಾರರು ಸಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಹಾಡು ಬಿಡುಗಡೆ ನಂತರ ಆಯೋಜಕರಾದ ನವರಸನ್ ಮಾತನಾಡಿದರು.

ಕಳೆದ ಕೆಲವು ದಿನಗಳ ಹಿಂದಷ್ಟೇ “CWKL” ಲೋಗೊ ಅನಾವರಣ ಮಾಡುವ ಮೂಲಕ ಅದ್ದೂರಿ ಚಾಲನೆ ನೀಡಲಾಗಿತ್ತು. ಈಗಂತೂ ಎಲ್ಲೆಲ್ಲೂ ನಮ್ಮ “CWKL” ದೇ ಮಾತು. ನಾನು ಇತ್ತೀಚೆಗೆ ಬೇರೆ ಭಾಷೆಗಳ ಸಿನಿಮಾ ಇವೆಂಟ್ ಗಳಿಗೆ ಹೋದಾಗಲೂ ಅಲ್ಲಿನ ಸೆಲೆಬ್ರಿಟಿಗಳು ಹಾಗೂ ನಮ್ಮ ಕನ್ನಡದ ಸೆಲೆಬ್ರಿಟಿಗಳು “CWKL” ಬಗ್ಗೆ ಮೆಚ್ಚುಗೆ ಮಾತುಗಳಾಡಿದ್ದು ನನಗೆ ಬಹಳ ಖುಷಿಯಾಗಿದೆ. ಈ ಲೀಗ್ ಗಾಗಿ ಒಂದು ಹಾಡನ್ನು ಬರೆದು ಸಂಗೀತ ಸಂಯೋಜಿಸಿ ಕೊಡಿ ಎಂದು ಚಂದನ್ ಶೆಟ್ಟಿ ಅವರನ್ನು ಕೇಳಿದಾಗ ಅದ್ಭುತವಾದ ಥೀಮ್ ಸಾಂಗ್ ಬರೆದುಕೊಟ್ಟಿದ್ದಾರೆ.

ಚಂದನ್ ಶೆಟ್ಟಿ ಅವರ ತಮ್ಮ ಪುನೀತ್ ಈಗಿನ AI ತಂತ್ರಜ್ಞಾನದ ಮೂಲಕ ಈ ಹಾಡನ್ನು ಸಿದ್ದ ಮಾಡಿಕೊಟ್ಟಿದ್ದಾರೆ. ನಮ್ಮ “CWKL” ನ ಮುಂದಿನ ಎಲ್ಲಾ ಕಾರ್ಯಕ್ರಮಗಳಲ್ಲೂ ಈ ಥೀಮ್ ಸಾಂಗ್ ಅನ್ನು ಬಳಸಿಕೊಳ್ಳಲಾಗುವುದು. ನಮ್ಮ ತಂಡಗಳ ಮಾಲೀಕರಾದ ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ,‌ “ವಾಮನ” ಚಿತ್ರದ ನಿರ್ಮಾಪಕ ಚೇತನ್ ಗೌಡ, ಸುರೇಶ್ ಗೌಡ, ರಾಜೇಶ್ ಗೌಡ, ಎ.ವಿ.ಅರ್ ಫಿಲಂಸ್ ನ ವೆಂಕಟೇಶ್ ರೆಡ್ಡಿ,

ಗಜೇಂದ್ರ ಹಾಗೂ ಗೋವಿಂದರಾಜು ಅವರಿಗೆ, ನನಗೆ ಬೆನ್ನೆಲುಬಾಗಿ ನಿಂತಿರುವ ನನ್ನ ತಂಡಕ್ಕೆ ಹಾಗೂ ಈ ಲೀಗ್ ನಲ್ಲಿ ಭಾಗವಹಿಸುತ್ತಿರುವ ಎಲ್ಲಾ ಸೆಲೆಬ್ರಿಟಿ ನಟಿಯರಿಗೆ ನನ್ನ ಧನ್ಯವಾದ ಎಂದು ತಿಳಿಸಿದ ನವರಸನ್, ಏಪ್ರಿಲ್ 5 ಹಾಗೂ 6 ನಮ್ಮ “CWKL” ನ ಪಂದ್ಯಗಳು ಅದ್ದೂರಿಯಾಗಿ ನಡೆಯಲಿದೆ ಎಂದರು.

Related Posts

error: Content is protected !!