ಶೇರ್…ಟೀಸರ್ ಬಂತು: ಇದು ಕಿರಣ್ ರಾಜ್ ಚಿತ್ರ

ಕಿರಣ್ ರಾಜ್ ಅಭಿನಯದ ಈ ಚಿತ್ರದಲ್ಲಿ ಕ್ರಿಸ್ ಎಂಬ ನವನಟ ಖಡಕ್ ವಿಲನ್ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ

ಸುದರ್ಶನ್ ಸುಂದರರಾಜ್ ನಿರ್ಮಾಣದ, ಪ್ರಸಿದ್ಧ್ ನಿರ್ದೇಶನದ ಹಾಗೂ “ಕನ್ನಡತಿ” ಧಾರಾವಾಹಿ ಮೂಲಕ ಜನಪ್ರಿಯರಾಗಿರುವ ಕಿರಣ್ ರಾಜ್ ನಾಯಕನಾಗಿ ನಟಿಸಿರುವ “ಶೇರ್” ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು.

ಹಿರಿಯ ರಾಜಕೀಯ ಮುಖಂಡರಾದ ಪಿ.ಜಿ.ಆರ್ ಸಿಂಧ್ಯಾ ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಈ ಚಿತ್ರದ ಮೂಲಕ ನಿರ್ಮಾಪಕ ಸುದರ್ಶನ್ ಸುಂದರರಾಜ್ ಅವರ ಪುತ್ರ ಕ್ರಿಸ್ ಖಳನಟನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ‌.

ಟೀಸರ್ ಬಿಡುಗಡೆ ನಂತರ ಮಾತನಾಡಿದ ನಿರ್ದೇಶಕ ಪ್ರಸಿದ್ದ್, “ಶೇರ್” ನನ್ನ ನಿರ್ದೇಶನದ ಮೂರನೇ ಚಿತ್ರ. ನಾನು ನನ್ನ ಚಿತ್ರಗಳಲ್ಲಿ ಸಂದೇಶ ಕೊಡಲು ಇಷ್ಟ ಪಡುವುದಿಲ್ಲ. ಜನರಿಗೆ ಬೇಕಾಗಿರುವುದು ಮನೋರಂಜನೆ. ಅದನ್ನು ಕೊಡಲು ಪ್ರಯತ್ನ ಮಾಡುತ್ತೇನೆ. “ಶೇರ್” ಕೂಡ ಪಕ್ಕಾ ಎಂಟರ್ಟೈನ್ಮೆಂಟ್ ಚಿತ್ರ. ಅನಾಥಾಶ್ರಮದಲ್ಲಿ ಹೆಚ್ಚಿನ ಕಥೆ ನಡೆಯುತ್ತದೆ. ಅಲ್ಲೊಬ್ಬ ರಾಜಕಾರಣಿ ಇರುತ್ತಾನೆ.

ಅಲ್ಲಿ ಎರಡು ಗುಂಪುಗಳಿರುತ್ತದೆ. ಒಂದು ಗುಂಪಿನವರು ಅನಾಥಾಶ್ರಮವನ್ನೇ ಅಡ್ಡ ಮಾಡಿಕೊಂಡಿರುತ್ತಾರೆ. ಅಲ್ಲೊಂದು ಒಳ್ಳೆಯ ಗುಂಪು ಸಹ ಇರುತ್ತದೆ. ನಾಯಕ-ನಾಯಕಿ ಅನಾಥರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿ,‌ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿರುವ ಈ ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರುವ ತಯಾರಿ‌ ನಡೆಯುತ್ತಿದೆ ಎಂದರು.

ನಾನು‌ ಮೂಲತಃ ಬೀದರ್ ನವನು. ಅಲ್ಲೇ ವಕೀಲನಾಗಿ ಕಾರ್ಯ ನಿರ್ವಿಸುತ್ತಿದ್ದೇನೆ. ರಾಜಕೀಯದಲ್ಲೂ ಇದ್ದೀನಿ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ನನ್ನ ಮಗ ಕ್ರಿಸ್ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ ಎಂದರು ನಿರ್ಮಾಪಕ ಸುದರ್ಶನ್ ಸುಂದರರಾಜ್.

ಮೊದಲ ಬಾರಿಗೆ ಖಳನಟನಾಗಿ ಅಭಿನಯಿಸಿದ್ದೇನೆ. ಎಲ್ಲರ ಪ್ರೋತ್ಸಾಹವಿರಲಿ ಎಂದರು ನಟ ಕ್ರಿಸ್.

ಚಿತ್ರದ ನಾಯಕಿ ಸುರೇಖ ಹಾಗೂ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ತನೀಶಾ ಕುಪ್ಪಂಡ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಕಿಟ್ಟಿ ಕೌಶಿಕ್ ಛಾಯಾಗ್ರಹಣದ ಬಗ್ಗೆ ಮಾಹಿತಿ ನೀಡಿದರು.

Related Posts

error: Content is protected !!