ಉಪೇಂದ್ರ ನಿರ್ದೇಶನದ ಯುಐ ವಾರ್ನರ್ ರಿಲೀಸ್ ಆಗಿದೆ. ವಾರ್ನರ್ ಅಂದಾಕ್ಷಣ ಒಬ್ಬೊಬ್ಬರಿಗೆ ಒಂದೊಂದು ಕುತೂಹಲ ಇತ್ತು. ಟೀಸರ್ ಓಕೆ, ಟ್ರೇಲರ್ ಓಕೆ ಇದೆಂಥದ್ದು ವಾರ್ನರ್ ಎಂಬ ಪ್ರಶ್ನೆ ಕಾಡಿದ್ದು ಸುಳ್ಳಲ್ಲ. ಅವರ ಅನೇಕ ಅಭಿಮಾನಿಗಳ ಪ್ರಶ್ನೆಗೆ ವಾರ್ನರ್ ಉತ್ತರ ಕೊಟ್ಟಿದೆ. ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಸಾವಿರಾರು ವೀಕ್ಷಣೆ ಪಡೆದು ಮುನ್ನುಗ್ಗುತ್ತಿರುವ ವಾರ್ನರ್ ಭರ್ಜರಿ ಚರ್ಚೆಗೆ ಕಾರಣವಾಗಿದೆ. ಉಪೇಂದ್ರ ಈ ವಾರ್ನರ್ ಮೂಲಕ ಯುಐ ಮೇಲಿನ ಕುತೂಹಲವನ್ನು ದುಪ್ಪಟ್ಟು ಮಾಡಿರೋದು ಸುಳ್ಳಲ್ಲ.
ಇಷ್ಟಕ್ಕೂ ಈ ವಾರ್ನರ್ ನೋಡದವರಿಗೆ ಒಂದಷ್ಟು ವಿಷಯ ಅರ್ಥವಾಗಿರಲೇಬೇಕು. ನೋಡದವರು ವಾರ್ನರ್ ಒಮ್ಮೆ ನೋಡಬೇಕು. ಯಾಕೆ ನೋಡಬೇಕು ಅನ್ನುವುದಾದರೆ, ಉಪೇಂದ್ರ ಅವರು ಮಾಡುವ ಯಾವುದೇ ಸಿನಿಮಾ ಇರಲಿ, ಅಲ್ಲೊಂದಷ್ಟು ವಿಷಯಗಳಿರುತ್ತವೆ. ಆ ವಿಷಯ ಕಾಡುತ್ತವೆ, ಪ್ರಶ್ನೆಗೂ ನೂಕೂತ್ತವೆ. ಇಲ್ಲೂ ಕೂಡ ಅಂಥದ್ದೇ ಒಂದು ಗಂಭೀರ ವಿಷಯ ಇಟ್ಟುಕೊಂಡು ಉಪೇಂದ್ರ ವಾರ್ನರ್ ರಿಲೀಸ್ ಮಾಡಿದ್ದಾರೆ.
ಅಷ್ಟಕ್ಕೂ ವಾರ್ನರ್ ಹೇಗಿದೆ ಅನ್ನುವುದಾದರೆ, ಎಲ್ಲರಿಗೂ ತಿಳಿದಂತೆ ವಿಶ್ವದಲ್ಲಿ ಅದೆಷ್ಟೋ ಸಮಸ್ಯೆಗಳು ಹಾಸಿ ಮಲಗಿವೆ. ಅಂತಹ ಸಮಸ್ಯೆಗಳ ಪೈಕಿ ಬೆರಳೆಣಿಕೆಯಷ್ಟು ಇರುವ ಪ್ರಮುಖವಾದ ವಿಚಾರಗಳನ್ನು ಇಟ್ಟುಕೊಂಡು ಯುಐ ಸಿನಿಮಾದಲ್ಲಿ ಹೇಳಲಾಗಿದೆ. ಜಗತ್ತು ಮುಂದಿನ ದಿನಗಳಲ್ಲಿ ಹೇಗಾಗುತ್ತೆ ಎಂಬ ಕಲ್ಪನೆಯಲ್ಲೇ ಕಥೆ ಕಟ್ಟಿಕೊಂಡು ಸಿನಿಮಾ ಮಾಡಿದ್ದಾರೆ. ಅವರು ಹರಿಬಿಟ್ಟಿರುವ ವಾರ್ನರ್ ಅಲ್ಲಿ, ಜಾಗತಿಕ ತಾಪಮಾನ ಏರಿಕೆ, ಕೋವಿಡ್ 19, ಹಣದುಬ್ಬರ, ಐಟಿ ಬಿಟಿ ಸಮಸ್ಯೆ, ನಿರುದ್ಯೋಗ, ವಾಸ್ತವ ಜಗತ್ತು ಹೇಗಿರುತ್ತೆ ಇದೆಲ್ಲದರ ಜೊತೆ ಯುದ್ಧಗಳ ಬಗ್ಗೆಯೂ ಸಿನಿಮಾದಲ್ಲಿ ಹೇಳಲಾಗಿದೆ.
ವಾರ್ನರ್ ನೋಡಿದವರಿಗೆ ನಿಜಕ್ಕೂ ಅದೊಂದು ಕುತೂಹಲ ಕೆರಳಿಸುವ ಸಿನಿಮಾ ಅನ್ನದೇ ಇರಲಾಗದೆಉ. ಹಾಗೆ ನೋಡಿದರೆ, ಉಪೇಂದ್ರ ಅವರು 2040 ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ. ಆಗ ದೇಶವಷ್ಟೇ ಅಲ್ಲ, ಜಗತ್ತು ಹೇಗಿರಬಹುದು, ಹೇಗಾಗಬಹುದು ಎಂಬ ಅವರ ಕಲ್ಪನಾಲೋಕದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.
ಸದ್ಯ ಉಪೇಂದ್ರ ಅವರ ಬಹು ನಿರೀಕ್ಷೆಯ ಈ ಸಿನಿಮಾ ಹೇಗೆ ಮೂಡಿಬಂದಿರಬಹುದು ಎಂಬ ಸಣ್ಣ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತೆ. ಇಷ್ಟಕ್ಕೂ ಯಾವ ಕಾಲಘಟ್ಟದ ಕಥೆ ಹೇಳುತ್ತಾರೆ ಎಂಬ ಪ್ರಶ್ನೆಯೂ ಇದೆ. ಅದಕ್ಕೆ ಉತ್ತರವಾಗಿ ಯುಐ ವಾರ್ನರ್ ಬಂದಿದೆ. ಅವರ ಪ್ರಕಾರ ‘ವಾರ್ನರ್’ ಅಂದರೆ ಎಚ್ಚರಿಕೆ. ಈಗಾಗಲೇ ಆ ಎಚ್ಚರಿಕೆ ವಿಡಿಯೋ ರಿಲೀಸ್ ಆಗಿದೆ ಕೂಡ. ಅದನ್ನು ನೋಡಿದವರಿಗೆ, ಸಿನಿಮಾದ ಸ್ಟೋರಿ 2040ರಲ್ಲಿ ಶುರುವಾಗುವಂತೆ ತೋರಿಸಿದ್ದಾರೆ.
ಆರಂಭದ ಶಾಟ್ ನೋಡುತ್ತಲೇ ಕುತೂಹಲ ಹುಟ್ಟಿಸುವ ವಾರ್ನರ್ ನಲ್ಲಿ, ಒಂದು ಬಾಳೆ ಹಣ್ಣಿಗಾಗಿ ಕಿತ್ತಾಟ ನಡೆಯುತ್ತದೆ. ‘ನಂಗೆ ಬಾಳೆ ಹಣ್ಣು’ ಎಂದು ಮೈಗೆ ಸರಿಯಾಗಿ ಹೊದಿಕೆ ಇರದ, ಹಸಿವಿನಿಂದ ಒದ್ದಾಡುವ ಸಾಕಷ್ಟು ಜನ ಕಿತ್ತಾಟ ನಡೆಸುವ ಸೀನ್ ಅದು. ಕ್ಯಾಮೆರಾ ಪ್ಯಾನ್ ಆಗುತ್ತಿದ್ದಂತೆಯೇ, ಸುತ್ತಲೂ ಇಡೀ ಜಗತ್ತೇ ನಾಶ ಆಗುವ ಹಂತಕ್ಕೆ ಬಂದಿರುವ ಭಾವ. ಅಲ್ಲಿ, ಹಸಿವಿದೆ, ಜಾತಿಯ ತಾರತಮ್ಯವಿದೆ. 2040ರಲ್ಲೂ ಜಾತಿ ವ್ಯವಸ್ಥೆ ಹೇಗಿರುತ್ತೆ ಅನ್ನುವ ಉದಾಹರಣೆ ಕಾಣಸಿಗುತ್ತೆ. ಅಷ್ಟೇ ಅಲ್ಲ,‘ಜಾತಿ ಮುದ್ರೆ ಕಡ್ಡಾಯ’ ಎಂಬುದು ವಾರ್ತೆಯಲ್ಲೂ ಕೇಳಿಬರುವ ಧ್ವನಿ ಒಂದು ಕಡೆಯಾದರೆ, ಎಲ್ಲೋ ಒಂದು ಕಡೆ ಜನ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ, ಮೊಬೈಲ್ ಎಂಬ ಶೋಕಿಗೆ ಬೀಳುವ ದೃಶ್ಯ ಕೂಡ ವಾಸ್ತವಕ್ಕೆ ಹತ್ತಿರವೆನಿಸುತ್ತೆ. ಇದರ ನಡುವೆ, ವ್ಯವಸ್ಥೆಯ ವಿರುದ್ಧ ಧಿಕ್ಕಾರ ಕೂಗುವ ವರ್ಗದ ಮೇಲೆ ಹಾರುವ ಬುಲೆಟ್ ಸದ್ದು. ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎನ್ನುವ ವ್ಯವಸ್ಥೆಯೇ ಮೇಲುಗೈ ಸಾದಿಸುತ್ತೆ ಎಂಬ ಲೆಕ್ಕಾಚಾರ ಇಟ್ಟುಕೊಂಡೇ ಕಥೆ ಹೆಣೆದಿರುವ ಉಪೇಂದ್ರ, ನಿಜವಾಗಲೂ ದೂರದೃಷ್ಠಿಯ ಕಥಾಹಂದರ ಹೊಂದಿರುವ ಯುಐ ಡಿ.20ಕ್ಕೆ ರಿಲೀಸ್ ಆಗುತ್ತಿದೆ.
ಸದ್ಯ ವಾರ್ನರ್ ಅರ್ಥಾಥ್ ಎಚ್ಚರಿಕೆ ವಿಡಿಯೋ ನೋಡಿದವರಿಗೆ ಖಂಡಿತ ಜಗತ್ತು 2040ರಲ್ಲಿ ಹೀಗಿರುತ್ತಾ? ಹೀಗಾಗುತ್ತಾ? ಆಗಲೂ ಜಾತಿ ವ್ಯವಸ್ಥೆ ಇರುತ್ತಾ? ತಿನ್ನಲು ಅನ್ನಕ್ಕೂ ಪರದಾಡುವ ಜನ, ಬಿಟ್ಟಿ ಹಂಚುವ ಮೊಬೈಲ್ ಹಿಡಿದು ಜಗತ್ತನ್ನು ಅಂಗೈಲಿಟ್ಟುಕೊಂಡು ನೋಡುತ್ತಾರಾ? ಆಗಲೂ ಜಗತ್ತಲ್ಲಿ ಅನ್ನಕ್ಕಿಂತ ಮೊಬೈಲ್ ಹಾವಳಿಯೇ ಹೆ್ಚ್ಚಾಗುತ್ತಾ? ಜಾತಿ ವ್ಯವಸ್ಥೆ ಕೊನೆ ಆಗುವುದೇ ಇಲ್ಲ ಅನ್ನುವ ಸೂಕ್ಷ್ಮ ಒಳ ಅರ್ಥವನ್ನು ಉಪೇಂದ್ರ ಇಲ್ಲಿ ಬಿಡಿಸಿಟ್ಟಿದ್ದಾರೆ. ಅಂದಹಾಗೆ, ಉಪೇಂದ್ರ ಜೊತೆ ಇಲ್ಲಿ ರೀಶ್ಮಾ ನಾಣಯ್ಯ, ಇಂದ್ರಜಿತ್ ಲಂಕೇಶ್ ಇತರರು ನಟಿಸಿದ್ದಾರೆ. ಜಿ.ಮನೋಹರನ್, ಕೆಪಿ ಶ್ರೀಕಾಂತ್ ನಿರ್ಮಾಣದ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ. ಈಗಾಗಲೇ ಟ್ರೋಲ್ ಆಗುತ್ತೆ, ಟ್ರೆಂಡ್ ಆಗುತ್ತೆ ಸಾಂಗ್ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಈಗ ವಾರ್ನರ್ ಕೂಡ ಅದೇ ಹಾದಿಯಲ್ಲಿದೆ. ಅದಕ್ಕೆ ಹೇಳೋದು ಉಪ್ಪಿ ಗ್ಲೋಬಲ್ ನಿರ್ದೇಶಕ ಅಂತ. ಜಾಗತಿಕ ವ್ಯವಸ್ಥೆಯ ದೂರದೃಷ್ಟಿ ಇಲ್ಲಿ ಕಾಣುತ್ತೆ. ಅದೇನೆ ಇರಲಿ, ಸದ್ಯ ಅವರ ಫ್ಯಾನ್ಸ್ ಸೇರಿದಂತೆ ಬಹುತೇಕ ಸಿನಿಮಾ ಮಂದಿಗೆ ಯುಐ ನೋಡುವ ಕಾತರವಷ್ಠೇ ಇದೆ.