ವಿಜಯ್ ಭರಮಸಾಗರ
ರೇಟಿಂಗ್: 3/5
ಚಿತ್ರ: ಮೂಕಜೀವ
ನಿರ್ದೇಶಕ: ಶ್ರೀನಾಥ್ ವಸಿಷ್ಠ
ನಿರ್ಮಾಣ: ಎಂ ವೆಂಕಟೇಶ, ಮಂಜುಳ
ತಾರಾಗಣ: ಕಾರ್ತಿಕ್ ಮಹೇಶ್, ಶ್ರೀಹರ್ಷ, ಅಪೂರ್ವಶ್ರೀ, ಮೇಘಶ್ರೀ, ಗಿರೀಶ್ ವೈದ್ಯನಾಥನ್, ರಮೇಶ್ ಪಂಡಿತ್, ವೆಂಕಟಾಚಲ, ಶ್ರೀನಾಥ್ ವಸಿಷ್ಠ ಇತರರು.
ಕೆಲವು ನೋಡುವ ಸಿನಿಮಾಗಳಿದ್ದರೆ, ಇನ್ನು ಕೆಲವು ಕಾಡುವ ಸಿನಿಮಾಗಳಿರುತ್ತವೆ. ಇದು ಆಪ್ತವಾಗಿ ‘ಕಾಡುವ ‘ ಸಿನಿಮಾಗಳ ಸಾಲಿಗೆ ಸೇರುವ ಚಿತ್ರ. ಹೊಡಿ ಬಡಿ ಕಡಿ ಚಿತ್ರಗಳ ಆರ್ಭಟದ ಮಧ್ಯೆ ಭಾವುಕತೆ ಹೆಚ್ಚಿಸುವ ಮೂಲಕ ಆತ್ಮ ಸ್ಥೈರ್ಯ ಇದ್ದರೆ ಬದುಕು ಕಷ್ಟ ಅಲ್ಲ ಎಂಬ ಸಂದೇಶ ಈ ಸಿನಿಮಾದಲ್ಲಿದೆ.
ಕಥೆಯಲ್ಲಿರುವ ಗಟ್ಟಿತನ, ನಿರ್ದೇಶಕರ ನಿರೂಪಣಾ ಶೈಲಿ ಸಿನಿಮಾದ ಜೀವಾಳ. ಪ್ರತಿ ಸನ್ನಿವೇಶ ಕೂಡ ಮನಸ್ಸಿಗೆ ನಾಟುತ್ತದೆ. ವಾಸ್ತವತೆಗೆ ಹತ್ತಿರ ಎನಿಸುವ , ಕಣ್ಮುಂದಿನ ನೈಜತೆಯನ್ನು ತೋರಿಸುವ ಕಥಾಹಂದರದ ಸಿನಿಮಾದಲ್ಲಿ ಭಾವನಾತ್ಮಕ ಅಂಶಗಳೇ ಕೊನೆಯವರೆಗು ಕಾಡುತ್ತ ಹೋಗುತ್ತವೆ.
ಮೊದಲರ್ಧ ಸಾಧಾರಣ ಕಥೆ ಎನಿಸಿಕೊಳ್ಳುವ ಈ ಚಿತ್ರ, ದ್ವಿತಿಯಾರ್ಧ ಒಂದಷ್ಟು ನಿರೀಕ್ಷಿಸದ ತಿರುವುಗಳನ್ನು ಪಡೆದುಕೊಂಡು ನೋಡುಗನಲ್ಲಿ ಕುತೂಹಲದ ಜೊತೆಗೆ ಮೂಕವಿಸ್ಮಿತರನ್ನಾಗಿಸುತ್ತೆ. ಮುಗ್ಧತನಕ್ಕೆ, ಒಳ್ಳೆಯ ತನಕ್ಕೆ ಬೆಲೆಯೇ ಇಲ್ಲದ ಮನುಷ್ಯತ್ವದ ಕ್ರೂರತೆ ತೆರೆದುಕೊಳ್ಳುತ್ತೆ.
ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಸಿನಿಮಾಗೆ ಚಿತ್ರಕತೆಯ ಬಿಗಿ ಹಿಡಿತವೇ ಆಧಾರ. ಎಲ್ಲೋ ಒಂದು ಕಡೆ ಸಿನಿಮಾ ನಿಧಾನ ಎನಿಸಿತು ಅಂದುಕೊಳ್ಳುವಷ್ಟರಲ್ಲಿ ತಾಯಿ ಮಗನ ವಾತ್ಸಲ್ಯ, ಮಮಕಾರ, ಕರುಣೆ, ಅವರಿಬ್ಬರ ಬಾಂಧವ್ಯ ನೋಡುಗರನ್ನು ತದೇಕಚಿತ್ತದಿಂದ ನೋಡುವಂತೆ ಮಾಡುತ್ತೆ.
ಇದೊಂದು ಮೂಕ ಜೀವಿಯ ಭಾವುಕ ಪಯಣ. ಇಲ್ಲಿ ಬಡತನವಿದೆ, ಪ್ರಾಮಾಣಿಕತೆ ಇದೆ, ಸಣ್ಣದ್ದೊಂದು ಪ್ರೀತಿ ಇದೆ, ಭಾವನಾತ್ಮಕದ ಬೆಸುಗೆ ಇದೆ. ಅಸೂಯೆ, ಮೋಸ, ಒಳ್ಳೇತನ, ಕೆಡುಕುತನ ಎಲ್ಲವೂ ಮೇಳೈಸಿದೆ. ಒಟ್ಟಲ್ಲಿ ಒಂದು ಪರಿಪೂರ್ಣತೆಯ ಸಿನಿಮಾ ಎಂಬ ಭಾವ ಮೂಡದೇ ಇರದು.
ಕಥೆ ಏನು?
ಇದು ಜೆ.ಎಂ.ಪ್ರಹ್ಲಾದ್ ಅವರ ಕಾದಂಬರಿ ಆಧಾರಿತ ಚಿತ್ರ.
ಅದೊಂದು ಹಳ್ಳಿ. ಅಲ್ಲೊಂದು ಕಡುಬಡತನದ ಕುಟುಂಬ. ತಾಯಿ ಮಗಳು ಮತ್ತು ಮಗನ ಸುತ್ತ ಸಾಗುವ ಕಥೆ. ಮಗನಿಗೆ ಮಾತು ಬರಲ್ಲ, ಕಿವಿ ಕೇಳಲ್ಲ. ಅವನನ್ನು ಸಲಹುವ ತಾಯಿಗೆ ಆತನದ್ದೇ ಚಿಂತೆ. ಮದ್ವೆ ವಯಸ್ಸಿಗೆ ಬಂದ ಮಗಳು ಆಸರೆ ಆಗ್ತಾಳೆ ಅಂದುಕೊಂಡರೆ ಅಲ್ಲೊಂದು ಘಟನೆ ನಡೆಯುತ್ತೆ.
ಹಳ್ಳಿಯಲ್ಲಿ ಜೀವಿಸುವ ಆ ಬಡ ಕುಟುಂಬದ ಯಾತನಾಮಯ ಬದುಕೇ ವಿಚಿತ್ರ. ಊರಲ್ಲಿ ನಿರೀಕ್ಷಿಸದ ಘಟನೆಗಳು ನಡೆದು ಹೋಗುತ್ತವೆ. ಸನ್ನಿವೇಶವೊಂದರಲ್ಲಿ ಮಾತು ಬಾರದ, ಕಿವಿ ಕೇಳದ ಆ ಹುಡುಗ ಬೆಂಗಳೂರು ಸೇರುತ್ತಾನೆ. ಅಲ್ಲಿ ನಡೆಯುವ ಘಟನೆಗಳೇ ಚಿತ್ರದ ಹೈಲೆಟ್. ವಿಕಲಚೇತನ ತನ್ನ ಬದುಕು ಕಟ್ಟಿಕೊಳ್ಳಲು ಪರದಾಡುವ ಸನ್ನಿವೇಶ ಕಾಡುತ್ತದೆ. ಕ್ಲೈಮ್ಯಾಕ್ಸ್ ವಿಶೇವೆನಿಸುತ್ತೆ. ಕುತೂಹಲ ಇದ್ದರೆ ಒಮ್ಮೆ ನೋಡಬಹುದು.
ಯಾರು ಹೇಗೆ?
ಇಲ್ಲಿ ತಾಯಿ ಪಾತ್ರ ಹೈಲೆಟ್. ಅಪೂರ್ವಶ್ರೀ ಅವರದು ಅಪರೂಪದ ನಟನೆ. ತಾಯಿ ಆಗಿ ಅವರು ಇಷ್ಟವಾಗುತ್ತಾರೆ. ಆ ಪಾತ್ರದಲ್ಲಿ ಜೀವಿಸಿದ್ದಾರೆ. ಶ್ರೀಹರ್ಷ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ. ವಿಕಲಚೇತನ ಪಾತ್ರದ ಮೂಲಕ ಇಷ್ಟವಾಗುತ್ತಾರೆ. ಕಾರ್ತಿಕ್ ಪಾತ್ರಕ್ಕೆ ಇನ್ನಷ್ಟು ಎಫರ್ಟ್ ಹಾಕಬೇಕಿತ್ತು. ಮೇಘಶ್ರೀ ಪಾತ್ರಕ್ಕೆ ಮೋಸ ಮಾಡಿಲ್ಲ. ಗಿರೀಶ್ ವೈದ್ಯನಾಥನ್, ರಮೇಶ್ ಪಂಡಿತ್, ವೆಂಕಟಾಚಲ, ಶ್ರೀನಾಥ್ ವಸಿಷ್ಠ ಇರುವಷ್ಟು ಕಾಲ ಇಷ್ಟವಾಗುತ್ತಾರೆ.
ಮನೋಹರ್ ಸಂಗೀತ ಕಥೆಗೆ ಪೂರಕವಾಗಿದೆ.