ಚಿತ್ರ ವಿಮರ್ಶೆ: ಭೈರಾದೇವಿ ಅವತಾರದಲ್ಲಿ ರಾಧಿಕಾ ಕುಮಾರಸ್ವಾಮಿ ಅಬ್ಬರ!

ವಿಜಯ್ ಭರಮಸಾಗರ
ರೇಟಿಂಗ್ : 3.5/5

ಚಿತ್ರ: ಭೈರಾದೇವಿ
ನಿರ್ದೇಶನ: ಶ್ರೀಜೈ
ನಿರ್ಮಾಣ : ರಾಧಿಕಾ ಕುಮಾರಸ್ವಾಮಿ
ತಾರಾಗಣ: ರಾಧಿಕಾ ಕುಮಾರಸ್ವಾಮಿ, ರಮೇಶ್ ಅರವಿಂದ್, ರಂಗಾಯಣ ರಘು, ಅನು ಮುಖರ್ಜಿ, ರವಿಶಂಕರ್ ಇತರರು
.

ದೇವ್ರು ಇದ್ದಾನೆ ಅನ್ನುವುದಾದರೆ ದೆವ್ವ ಕೂಡ ಇದೆ! ದೇವರನ್ನು ನಂಬುವುದಾದರೆ ದೆವ್ವ ಇರುವಿಕೆಯನ್ನೂ ನಂಬಲೇಬೇಕು. ಅದೇನೆ ಇರಲಿ, ಸಿನಿಮಾಗಳಲ್ಲಂತೂ ದೆವ್ವ ಮತ್ತು ದೇವ್ರು ಇರುವಿಕೆ ಸಹಜ. ಹಾಗಾಗಿ ಈ ಎರಡನ್ನೂ ಬಲವಾಗಿ ನಂಬಲೇಬೇಕು. ಅಂಥದ್ದೊಂದು ನಂಬಿಕೆ ಮೂಡಿಸುವ ಅನೇಕ ಸಿನಿಮಾಗಳು ಕನ್ನಡದಲ್ಲಿ ಈಗಾಗಲೇ ಬಂದು ಹೋಗಿವೆ. ಈಗ ಅಂಥದ್ದೇ ಸಾಲಿಗೆ ಸೇರುವ ಸಿನಿಮಾ ಭೈರಾದೇವಿ. ಸಿನಿಮಾದ ಶೀರ್ಷಿಕೆಯಲ್ಲೇ ಫೋರ್ಸ್ ಇದೆ. ಅಂಥದ್ದೇ ಫೋರ್ಸ್ ಕಥೆಯಲ್ಲೂ ಇದೆ. ಸಿನಿಮಾ ನೋಡುಗರಿಗೆ ಒಂದೊಳ್ಳೆಯ ಫೀಲ್ ಕಟ್ಟಿಕೊಡುವ ಚಿತ್ರ ಅಂತ ಮುಲಾಜಿಲ್ಲದೆ ಹೇಳಬಹುದು. ಆದರೆ, ಕೆಲವು ಸಣ್ಣಪುಟ್ಟ ಮಿಸ್ಟೇಕ್ ಇವೆಯಾದರೂ, ಅವೆಲ್ಲವನ್ನು ಬದಿಗೊತ್ತಿ ನೋಡುವುದಾದರೆ, ಭೈರಾದೇವಿ ಮೇಲೆ ತಕ್ಕಮಟ್ಟಿಗೆ ಭಕ್ತಿ ಉಕ್ಕಿಬರುವುದಂತೂ ದಿಟ!

ನಿರ್ದೇಶಕ ಶ್ರೀಜೈ ಅವರು ಆಯ್ಕೆ ಮಾಡಿಕೊಂಡ ಕಥೆಯ ಎಳೆ ಚೆನ್ನಾಗಿದೆ. ನಿರೂಪಣೆಯಲ್ಲಿ ಇನ್ನೂ ಒಂದಷ್ಟು ಧಮ್ ಕಟ್ಟಬೇಕಿತ್ತು. ಮೊದಲರ್ಧ ಅತ್ತಿತ್ತ ಅಲ್ಲಾಡದಂತೆ ತದೇಕಚಿತ್ತದಿಂದ ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ಭಯ ಹುಟ್ಟಿಸುವ ದೃಶ್ಯಗಳಿಂದಲೇ ಶುರುವಾಗುವ ಚಿತ್ರದ ಮೊದಲರ್ಧದಲ್ಲಿ ಯಾವ ತಪ್ಪುಗಳೂ ಕಾಣಸಿಗಲ್ಲ. ದ್ವಿತಿಯಾರ್ಧ ಒಂಚೂರು ಸಣ್ಣಪುಟ್ಟ ತಪ್ಪುಗಳು ಕಾಣಸಿಗುತ್ತವೆ. ಆದರೆ, ಸಿನಿಮಾದ ಮೇಕಿಂಗ್, ಅದಕ್ಕೊಪ್ಪುವ ಲೊಕೇಷನ್ಸ್, ದೃಶ್ಯಕ್ಕೆ ಸರಿಹೊಂದುವ ಹಿನ್ನೆಲೆ ಸಂಗೀತ ಮತ್ತು ಅದ್ಭುತ ಎನಿಸುವ ಕ್ಯಾಮೆರಾ ಕೈಚಳಕ ಆ ತಪ್ಪುಗಳೆಲ್ಲವನ್ನೂ ಪಕ್ಕಕ್ಕೆ ಸರಿಸಿ ನೋಡುವಂತೆ ಮಾಡಿದೆ.

ಸಿನಿಮಾ ರೆಡಿಯಾಗಲು ತಡವಾಗಿದೆ ಅನ್ನೋದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ಸಿಗುತ್ತವೆ. ಹಾಗಾಗಿ ಇಲ್ಲಿ ಒಂದಷ್ಟು ಕಂಟಿನ್ಯುಟಿ ಕೂಡ ಮಿಸ್ ಆಗಿದೆ. ಸೂಕ್ಷ್ಮವಾಗಿ ಗಮನಿಸಿದರೆ, ಸಿನಿಮಾದಲ್ಲಿ ಒಂದಷ್ಟು ಕೊರತೆ ಕಾಣುವುದುಂಟು. ಆದರೆ, ತೆರೆಮೇಲೆ ಅಬ್ಬರಿಸಿರುವ ಭೈರಾದೇವಿ ಪಾತ್ರ, ಅಘೋರಿಯ ಗುರು ಅಬ್ಬರ ಎಲ್ಲವೂ ಆ ಕೊರತೆಯನ್ನು ನೀಗಿಸಿರುವುದು ಸುಳ್ಳಲ್ಲ. ಕಥೆಯಲ್ಲಿ ಗಟ್ಟಿತನವಿದೆ. ಹಾಗಾಗಿ ಕೊನೆಯವರೆಗೂ ಕುತೂಹಲ ಕಾಯ್ದಿರಿಸಿಕೊಂಡು ಹೋಗುತ್ತೆ. ಎಲ್ಲೋ ಒಂದು ಕಡೆ ಚಿತ್ರಕಥೆ ಬಿಗಿಹಿಡಿತ ತಪ್ಪುತ್ತಿದ್ದಂತೆಯೇ, ಭಯಾನಕ ದೃಶ್ಯಗಳು ಭೀತಿ ಹುಟ್ಟಿಸುವ ಮೂಲಕ ಮತ್ತೆ ಕುತೂಹಲಕ್ಕೆ ಕಾರಣವಾಗುತ್ತೆ. ಮೊದಲರ್ಧ ಸಿನಿಮಾ ಪೂರ್ತಿ ನೋಡಲೇಬೇಕೆನಿಸೋದು ನಿಜ. ಆದರೆ, ದ್ವಿತಿಯಾರ್ಧದಲ್ಲಿ ಕೆಲ ಅನಗತ್ಯ ದೃಶ್ಯ, ಹಾಡೊಂದು ಕಾಣಿಸಿಕೊಂಡು ನೋಡುಗನ ಬೇಸರಕ್ಕೆ ದೂಡುತ್ತದೆ. ಇನ್ನು, ಕ್ಲೈಮ್ಯಾಕ್ಸ್ ಇನ್ನಷ್ಟು ಬಿಗಿಯಾಗಿರಬೇಕಿತ್ತು. ಮೊದಲರ್ಧ ಇದ್ದ ಫೋರ್ಸ್ ಕ್ಲ್ಯೆಮ್ಯಾಕ್ಸ್ ನಲ್ಲಿ ಕಡಿಮೆ ಆಯ್ತಾ ಎನಿಸುತ್ತೆ. ಆದರೂ, ಭೈರಾದೇವಿಯ ಆರ್ಭಟ ಎಲ್ಲವನ್ನೂ ಮರೆಸುತ್ತೆ. ಒಂದೊಳ್ಳೆಯ ಫೀಲ್ ಕಟ್ಟಿಕೊಡುತ್ತೆ ಅನ್ನೋದೇ ಸಮಾಧಾನ.

ದುಷ್ಠ ಶಕ್ತಿ ಓಡಿಸಲು ದೈವ ಶಕ್ತಿಯೇ ಬೇಕು ಅನ್ನುವ ಮಾತು ಈ ಸಿನಿಮಾ ಕಥೆಗೆ ಅನ್ವಯಿಸುತ್ತೆ. ಫೈನಲಿ ಇಲ್ಲೂ ಕೂಡ ಪ್ರೇತಾತ್ಮ ಮತ್ತು ದೈವದ ಗುದ್ದಾಟವಿದೆ. ಆ ಗುದ್ದಾಟ ಯಾಕೆ, ಏನು, ಎತ್ತ ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಒಂದೊಮ್ಮೆ ಭೈರಾದೇವಿಯ ದರ್ಶನ ಪಡೆಯಲು ಅಡ್ಡಿಯಿಲ್ಲ.

ಕಥೆ ಏನು?

ನಾಯಕ ಅರವಿಂದ್ ಒಬ್ಬ ಪೊಲೀಸ್ ಅಧಿಕಾರಿ. ಪತ್ನಿ ಸಾವನ್ನಪ್ಪಿದ್ದಾಳೆ. ಅವನಿಗೆ ಮಗಳೇ ಪ್ರಪಂಚ. ಆದರೆ, ಕಾಣದ ದುಷ್ಠ ಶಕ್ತಿಯೊಂದು ಅವನನ್ನು ಭೀತಿಗೊಳಪಡಿಸುತ್ತೆ. ಅಷ್ಟೇ ಅಲ್ಲ, ಕುಂತರೂ, ನಿಂತರೂ, ಮಲಗಿದರೂ ಆ ಪ್ರೇತಾತ್ಮದ ಕಾಟ ತಪ್ಪಲ್ಲ. ದೈವ ಮೊರೆ ಹೋದರೂ ಪ್ರೇತಾತ್ಮ ಕಾಡುವುದು ಬಿಡಲ್ಲ. ಆಗ ಮೊರೆ ಹೋಗೋದೇ ಘೋರ ತಪಸ್ಸು ಮಾಡುವ ಅಘೋರಿಗಳ ಮೊರೆ. ಅಲ್ಲಿಗೆ ಅಸಲಿ ಆಟ ಶುರು. ದೂರದ ವಾರಣಾಸಿಯ ಕಾಡೊಂದರಲ್ಲಿ ಯಾರಿಗೂ ಸಿಗದ ಸ್ಥಳದಲ್ಲಿ ಶಿವನ ಧ್ಯಾನ ಮಾಡುವ ಅಘೋರಿಗಳ ಹುಡುಕಿ ಹೊರಡುವ ಅರವಿಂದ್, ಅಘೋರಿಗಳ ಎದುರಾಗುತ್ತಾನೆ. ಅಲ್ಲಿ ತನಗಾಗುವ ಸಮಸ್ಯೆ ಹೇಳಿಕೊಳ್ತಾನೆ. ಅಘೋರಿಗಳ ಬಾಬಾ ಗುರು ಭೈರಾದೇವಿ ಎಂಬ ಅಘೋರಿಗೆ ಸೂಚಿಸುತ್ತಾನೆ. ನಂತರ ನಡೆಯೋದೆಲ್ಲಾ ಭಯಾನಕ ಆಟೋಟಾಪ! ಇಲ್ಲೊಂದು ಟ್ವಿಸ್ಟ್ ಇದೆ. ಅದೇ ಸಿನಿಮಾದ ಸಸ್ಪೆನ್ಸ್. ಅದನ್ನು ನೋಡುವ ನಿರೀಕ್ಷೆ ಇದ್ದರೆ ಮಿಸ್ ಮಾಡ್ಕೋಬೇಡಿ.

ಕಥೆಯಲ್ಲಿ ಚೂರು ಏರುಪೇರಿಲ್ಲ. ಪಾತ್ರಗಳ ಆಯ್ಕೆಯಲ್ಲೂ ನಿರ್ದೇಶಕರು ಎಡವಿಲ್ಲ. ಹಾಗಾಗಿ ಸಿನಿಮಾ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ಇಲ್ಲಿ ಮೇಕಿಂಗ್ ವಿಷಯ ಹೇಳಲೇಬೇಕು. ಇಂತಹ ಕಥೆಗೆ ಬೇಕಾಗಿರೋದು ತಾಂತ್ರಿಕತೆ. ಅದಿಲ್ಲಿ ಅದ್ಭುತವಾಗಿ ಮೂಡಿಬಂದೆ. ಇನ್ನು, ಅಘೋರಿಗಳ ವಾಸದ ಗುಹೆಯ ಸೆಟ್ ಕೂಡ ಥೇಟ್ ಅಘೋರಿಗಳ ತಾಣವೆಂಬಂತೆ ಮಾಡಲಾಗಿದೆ. ಕಾಸ್ಟ್ಯೂಮ್ಸ್ ಮತ್ತು ಮೇಕಪ್ ಚಿತ್ರದ ಆಕರ್ಷಣೆ. ಜೊತೆಗೆ ಯಥೇ್ಚ್ಛವಾಗಿ ಬಳಕೆಯಾಗಿರುವ ಗ್ರಾಫಿಕ್ಸ್ ಕೂಡ ಹೈಲೆಟ್ ಆಗಿದೆ.

ಯಾರು ಹೇಗೆ?

ತುಂಬಾ ದಿನಗಳ ಬಳಿಕ ರಾಧಿಕಾ ಕುಮಾರಸ್ವಾಮಿ ಒಂದೊಳ್ಳೆಯ ಪಾತ್ರದ ಮೂಲಕ ಕಮ್ ಬ್ಯಾಕ್ ಆಗಿ ರಂಜಿಸಿದ್ದಾರೆ. ಅವರಿಲ್ಲಿ ಅಘೋರಿಯಾಗಿ ಅಬ್ಬರಿಸಿದ್ದಾರೆ. ಪ್ರೇತಾತ್ಮ ಓಡಿಸುವ ಭೈರಾದೇವಿಯಾಗಿ ಇಷ್ಟವಾಗುತ್ತಾರೆ. ಹಿಂದಿನ ಸಿನಿಮಾಗಳಿಗಿಂತಲೂ ಅವರ ಈ ಭೈರಾದೇವಿ ಪಾತ್ರ ನಿಜಕ್ಕೂ ನೆನಪಲ್ಲುಳಿಯುವಂಥದ್ದು. ಅಘೋರಿಯಾಗಿ ಕಾಣುವ ಆ ರೂಪ ವಿರಾಟ ದರ್ಶನದಂತಿದೆ. ಇನ್ನು, ಮೇಕಪ್ ಕೂಡ ಭಯಾನಕವೆನಿಸಿದರೂ, ಅಂತ್ಯದಲ್ಲಿ ಪೂಜಿಸೋ ಭಾವನೆ ಮೂಡಿಸುತ್ತಾರೆ. ಇನ್ನು ಅವರ ಗ್ಲಾಮರ್ ಕೂಡ ಮಾಸಿಲ್ಲ. ಅದೇ ಜೋಶ್ ಉಳಿಸಿಕೊಂಡು ತೆರೆಮೇಲೆ ಚಂದ ಕಾಣುತ್ತಾರೆ. ಜೊತೆಗೆ ಎದುರಾಳಿಗಳನ್ನು ಹಿಗ್ಗಾಮುಗ್ಗ ಥಳಿಸುವಲ್ಲೂ ಅವರು ಹಿಂದೆ ಬಿದ್ದಿಲ್ಲ.


ರಮೇಶ್ ಅರವಿಂದ್ ಅವರು ಇಲ್ಲಿ ಪ್ರಮುಖ ಆಕರ್ಷಣೆ. ನಾವು ನೋಡದ ರಮೇಶ್ ಅರವಿಂದ್ ಇಲ್ಲಿ ಕಾಣಸಿಗುತ್ತಾರೆ. ರಮೇಶ್ ಅರವಿಂದ್ ಹೀಗಾ? ಎಂಬ ಪ್ರಶ್ನೆ ಕಾಡುವಷ್ಟರ ಮಟ್ಟಿಗೆ ಅವರ ಅಭಿನಯವಿದೆ. ಪಾತ್ರ ಕೂಡ ಸರಿಹೊಂದಿದೆ. ಅವರ ಪಾತ್ರದಲ್ಲೂ ಟ್ವಿಸ್ಟ್ ಇದೆ. ಇನ್ನುಳಿದಂತೆ, ರಂಗಾಯಣ ರಘು ಅವರ ಸಮಯೋಚಿತ ಹಾಸ್ಯ ವರ್ಕೌಟ್ ಆಗಿದೆ. ರವಿಶಂಕರ್ ತೆರೆಮೇಲೆ ಇರುವಷ್ಟು ಕಾಲ ಭಯಾನಕ ಎನಿಸುತ್ತಾರೆ. ಅನು ಮುಖರ್ಜಿ ಅಮ್ಮನ ಪಾತ್ರದಲ್ಲಿ ಗಮನಸೆಳೆದರೆ, ಶಿವರಾಮಣ್ಣ ಹಾಗು ಇತರೆ ಪಾತ್ರಗಳು ಕೂಡ ಪಾತ್ರಕ್ಕೆ ಮೋಸ ಮಾಡಿಲ್ಲ. ಜಗದೀಶ್ ವಾಲಿ ಅವರ ಕ್ಯಾಮೆರಾ ಕೈಚಳಕ ಸಿನಿಮಾದ ಅಂದ ಹೆಚ್ಚಿಸಿದೆ. ಕೆ.ಕೆ. ಸೆಂಥಿಲ್ ಸಂಗೀತದ ಎರಡು ಹಾಡು ಇಷ್ಟವಾಗುತ್ತದೆ. ಹಿನ್ನೆಲೆ ಸಂಗೀತದ ಸೌಂಡಿಂಗ್ ಚೆನ್ನಾಗಿದೆ. ಸಿನಿಮಾದ ಸಂಕಲನ ಕೂಡ ಚಿತ್ರದ ವೇಗ ಹೆಚ್ಚಿಸಿದೆ. ರವಿವರ್ಮ ಅವರ ಸ್ಟಂಟ್ ಕೂಡ ಇಲ್ಲಿ ಮಾತಾಡುತ್ತೆ.

Related Posts

error: Content is protected !!