ಚಿತ್ರ ವಿಮರ್ಶೆ : ಇಬ್ಬನಿ ತಬ್ಬಿದ ಇಳೆಯಲಿ : ಇಬ್ಬನಿಯ ದೃಶ್ಯ ಪ್ರೇಮ ಕಾವ್ಯ

ವಿಜಯ್‌ ಭರಮಸಾಗರ
ರೇಟಿಂಗ್: 3.5/5

ನಿರ್ದೇಶಕ : ಚಂದ್ರಜಿತ್ ಬೆಳ್ಳಿಯಪ್ಪ
ನಿರ್ಮಾಣ: ಪರಂವ ಸ್ಟುಡಿಯೋಸ್‌
ತಾರಾಗಣ: ವಿಹಾನ್‌, ಅಂಕಿತಾ ಅಮರ್‌, ಮಯೂರಿ ನಟರಾಜ, ಗಿರಿಜಾ ಶೆಟ್ಟರ್‌ ಇತರರು.

ಅವಳು ಈಗಲೂ ಟಚ್‌ನಲ್ಲಿದ್ದಾಳಾ?
ಇಲ್ಲ, ಏಳು ವರ್ಷ ಆಗಿದೆ. ಟಚ್‌ ಇಲ್ಲ.
ನೀನು ಇಷ್ಟಪಡ್ತಾ ಇದ್ಯಾ?
ಇಲ್ಲ..
ಅವಳೂ ನಿನ್ನನ್ನು ಇಷ್ಟಪಡ್ತಾ ಇದ್ದಾಳಾ?
ಗೊತ್ತಿಲ್ಲ…?
ಆಕೆಯ ಹೆಸರೇನು?
ಗೊತ್ತಿಲ್ಲ…
ಎಲ್ಲಿದ್ದಾಳೆ?
ಗೊತ್ತಿಲ್ಲ….

ಇದು ಮದ್ವೆ ಆಗುವ ಹುಡುಗಿಯ ಮುಂದೆ ಕುಳಿತು ಅವನು ತನ್ನ ಹಳೆಯ ಹುಡುಗಿಯ ಬಗೆಗಿನ ಮಾತುಕತೆ…
“ಇಬ್ಬನಿ ತಬ್ಬಿದ ಇಳೆಯಲಿ” ಸಿನಿಮಾ ಬಗ್ಗೆ ಒಂದೇ ಮಾತಲ್ಲಿ ಹೇಳುವುದಾದರೆ, ಇದೊಂದು ಫೀಲ್‌ ಗುಡ್‌ ಮೂವಿ. ಬರವಣಿಗೆಯ ಚಿತ್ರ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ ಸಿನಿಮಾವಿದು. ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳ ಬರವಿಲ್ಲ ಎಂಬುದಕ್ಕೆ ಇದೂ ಸಾಕ್ಷಿ. ಇದೊಂದು ದೃಶ್ಯ ಪ್ರೇಮ ಕಾವ್ಯ. ಮೊದಲರ್ಧ ನೋಡುಗರಿಗೆ ಒಳ್ಳೆಯ ಮುದ ನೀಡುವ ಸಿನಿಮಾ ದ್ವಿತಿಯಾರ್ಧ ಒಂದಷ್ಟು ತಿರುವುಗಳನ್ನು ಕೊಡುವುದರ ಜೊತೆಗೆ ಭಾವುಕತೆಯನ್ನು ಹೆಚ್ಚಿಸುತ್ತಾ ಹೋಗುತ್ತೆ. ಒಂದರ್ಥದಲ್ಲಿ ಸಿನಿಮಾ ಸಲೀಸಾಗಿ ನೋಡಿಸಿಕೊಂಡು ಹೋಗುವುದಲ್ಲದೆ, ಹಳೆಯ ನೆನಪಿಗೂ ಜಾರುವಂತೆ ಮಾಡುತ್ತೆ. ಎಲ್ಲೂ ಅತ್ತಿತ್ತ ಅಲುಗಾಡದಂತೆ ತದೇಕಚಿತ್ತದಿಂದಲೇ ಸಿನಿಮಾ ನೋಡುವಂತಹ ನಿರೂಪಣೆ ಇಲ್ಲಿ ಗಮನಸೆಳೆಯುತ್ತೆ.

ಎಲ್ಲಿಯೂ ಅಸಂಬದ್ಧ ಮಾತಾಗಲಿ, ಅಸಹ್ಯ ಎನಿಸುವ ದೃಶ್ಯಗಳಾಗಲಿ ಇಲ್ಲಿಲ್ಲ. ಮಳೆ ಸುರಿದು ನಿಂತಾಗ, ಆ ವಾತಾವರಣ ಎಷ್ಟೊಂದು ಕೂಲ್‌ ಆಗಿರುತ್ತೋ, ಕಣ್ಣಿಗೆ ಹೇಗೆ ಮುದ ನೀಡುತ್ತೋ ಅಂಥದ್ದೊಂದು ಫೀಲ್‌ ಇಲ್ಲಿ ಸಿಗುತ್ತೆ. ಬಹುತೇಕ ಸಿನಿಮಾ ಫ್ಲ್ಯಾಶ್‌ ಬ್ಯಾಕ್‌ ಕಥೆಗಳ ಮೂಲಕವೇ ನೋಡುಗರಿಗೆ ಅರ್ಥ ಮಾಡಿಸುತ್ತಾ ಹೋಗುತ್ತದೆ. ಸಿನಿಮಾದಲ್ಲಿ ಅನೇಕ ಕಾಡುವ ಅಂಶಗಳಿವೆ. ನೋಡುಗನಿಗೆ, ಹಳೆಯ ಹುಡುಗಿ ನೆನಪಾದರೂ ಅಚ್ಚರಿಯಿಲ್ಲ. ಅಷ್ಟರಮಟ್ಟಿಗೆ ಲವ್‌ ಬಾಂಡಿಂಗ್‌ ಸ್ಟೋರಿಯನ್ನು ಈಗಿನ ಟ್ರೆಂಡ್‌ಗೆ ಬ್ಲೆಂಡ್‌ ಮಾಡಿ ಕಟ್ಟುಕೊಡುವ ಪ್ರಯತ್ನ ಮಾಡಿದ್ದಾರೆ.

ಕಥೆ ಇಷ್ಟು…
ಅವರಿಬ್ಬರೂ ಹಸೆಮಣೆ ಏರಿದ್ದಾರೆ. ಆದರೆ, ಅವನಿಗೇಕೋ ಆ ಮದುವೆ ಇಷ್ಟವಿಲ್ಲ. ಆಕೆಗೂ ಮದ್ವೆ ಇಷ್ಟವಿರದಿದ್ದರೂ ಮನೆಯವರ ಬಲವಂತಕ್ಕೆ ಒಪ್ಪಿದ್ದಾಳೆ. ಅವನಿಗೆ ಹಳೆಯ ನೆನಪಿನ ಗಾಯವಿನ್ನೂ ಮಾದಿಲ್ಲ. ಒಳಗೆ ಹಿಡಿದಿಟ್ಟ ನೋವುಗಳೂ ಕಾಡುತ್ತಿವೆ. ಈ ಮಧ್ಯೆ ಅವರಿಬ್ಬರ ಮದುವೆಗೆ ಬ್ರೇಕ್‌ ಬೀಳುತ್ತೆ. ಅವನು ಆ ಹಳೆಯ ಹುಡುಗಿಯನ್ನು ಹುಡುಕಿ ಹೊರಡುತ್ತಾನೆ. ಹಳೆಯ ಹುಡುಗಿ ಯಾರು, ಎಲ್ಲಿದ್ದಾಳೆ, ಹೆಸರೇನು? ಇದ್ಯಾವುದೂ ಅವನಿಗೆ ಗೊತ್ತಿಲ್ಲ. ಆದರೂ, ಹುಡುಕಿ ಹೊರಟ ಅವನಿಗೆ ಆಕಸ್ಮಿಕವಾಗಿ ಆ ಹುಡುಗಿ ಎದುರಾಗುತ್ತಾಳೆ. ಇನ್ನೇನು ಇಬ್ಬರ ಲವ್‌ ಸ್ಟೋರಿ ಮುಂದುವರೆಯುತ್ತೆ ಅನ್ನುವಷ್ಟರಲ್ಲಿ ನಿರ್ದಶಕರು ನೋಡುಗರಿಗೊಂದು ಟ್ವಿಸ್ಟ್‌ ಕೊಡುತ್ತಾರೆ. ಅದೇ ಸಿನಿಮಾದ ಹೈಲೆಟ್.‌ ಆ ಟ್ವಿಸ್ಟ್‌ ಏನೆಂಬುದರ ಕುತೂಹಲವೇನಾದರೂ ಇದ್ದರೆ ಒಂದೊಮ್ಮೆ ಮಿಸ್‌ ಮಾಡದೆ ಸಿನಿಮಾ ನೋಡಬಹುದು.

ಆರಂಭದಿಂದ ಅಂತ್ಯದವರೆಗೂ ಸಿನಿಮಾ ಎಲ್ಲೂ ಬೋರ್‌ ಎನಿಸದೆ ನೋಡಿಸಿಕೊಂಡು ಹೋಗುವುದರ ಜೊತೆಗೆ ಒಂದೊಳ್ಳೆಯ ಭಾವನಾತ್ಮಕ ಸಂಬಂಧಕ್ಕೆ ಸಾಕ್ಷಿಯಾಗುತ್ತೆ. ಅಷ್ಟೇ ಅಲ್ಲ, ಕ್ಲೈಮ್ಯಾಕ್ಸ್‌ ದೃಶ್ಯ ನೋಡುವಾಗ ಒಂದಷ್ಟು ಕಣ್ಣು ಒದ್ದೆಗಳಾಗುವಂತಹ ಸನ್ನಿವೇಶಗಳೂ ಇವೆ. ಎಲ್ಲಾ ವರ್ಗ ಕೂಡ ಯಾವುದೇ ಅನುಮಾನವಿಲ್ಲದೆ ಸಿನಿಮಾವನ್ನು ಬಿಗಿದಪ್ಪಿಕೊಳ್ಳಲ್ಲಡ್ಡಿಯಿಲ್ಲ.

ಯಾರು ಹೇಗೆ?
ಸಿನಿಮಾದಲ್ಲಿ ಕಾಣುವ ಪ್ರತಿ ಪಾತ್ರಗಳೂ ಕಥೆ ಹಾಗು ದೃಶ್ಯಗಳಿಗೆ ಪೂರಕವಾಗಿವೆ. ವಿಹಾನ್‌ ಇಲ್ಲಿ ಎಂದಿಗಿಂತಲೂ ಇಲ್ಲಿ ಸೊಗಸಾಗಿ ನಟಿಸಿದ್ದಾರೆ. ನೋಡುಗರಿಗೆ ಮನೆಯ ಹುಡುಗನಂತೆಯೇ ಕಾಣುತ್ತಾರೆ. ಅದಷ್ಟೇ ಅಲ್ಲ, ಪ್ರೀತಿಯ ಕಳಕೊಂಡು ಪರಿತಪಿಸೋ ಪಾಪದ ಹುಡುಗನಾಗಿ, ಅದೇ ಪ್ರೀತಿಸಿದ ಹುಡುಗಿ ಸಿಕ್ಕಾಗ ಸಂಭ್ರಮಿಸೋ ಹುಡುಗನಾಗಿ ಇಷ್ಟವಾಗುತ್ತಾರೆ. ಇನ್ನು, ನಾಯಕಿಯಾಗಿ ನಟಿಸಿರುವ ಅಂಕಿತಾ ಇಲ್ಲಿ ಒಳ್ಳೆಯ ಮಾರ್ಕ್ಸ್‌ ಪಡೆದಿದ್ದಾರೆ. ಮುಗ್ಧ ಹುಡುಗಿಯಾಗಿ, ನೋವಿದ್ದರೂ, ಹೇಳಲಾಗದೆ ಒದ್ದಾಡುವ ಅಮ್ಮನ ಮಗಳಾಗಿ ಗಮನಸೆಳೆಯುತ್ತಾರೆ. ಇನ್ನು, ಮಯೂರಿ ಕೂಡ ತೆರೆ ಮೇಲೆ ಇರುವಷ್ಟು ಕಾಲ ಇಷ್ಟವಾಗುತ್ತಾರೆ.

ಗಿರಿಜಾ ಶೆಟ್ಟರ್‌ ಕೂಡ ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ತೆರೆ ಮೇಲೆ ಕಾಣುವ ಪ್ರತಿ ಪಾತ್ರಗಳೂ ನೋಡುಗರನ್ನು ರಂಜಿಸುತ್ತವೆ.
ಇನ್ನು ಇಡೀ ಚಿತ್ರದ ಹೈಲೆಟ್‌ ಅಂದರೆ, ಛಾಯಾಗ್ರಾಹಣ. ಶ್ರೀವತ್ಸನ್‌ ಸೆಲ್ವರಾಜನ್‌ ಅವರ ಕ್ಯಾಮೆರಾ ಕೈಚಳಕ ಕೂಡ ಇಬ್ಬನಿಯಷ್ಟೇ ಮುದ್ದಾಗಿದೆ. ಗಗನ್ ಬಡೇರಿಯಾ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಮತ್ತೊಂದು ಪ್ಲಸ್.‌ ಹಾಡುಗಳು ಇಲ್ಲಿ ಸಿನಿಮಾದ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ.

Related Posts

error: Content is protected !!