ಪೆಪೆ ವಿಮರ್ಶೆ: ಉಳ್ಳವರ ವಿರುದ್ಧ ವಿನಯಾಕ್ರೋಶ

ವಿಜಯ್‌ ಭರಮಸಾಗರ
ರೇಟಿಂಗ್:‌ 3/5

ನಿರ್ದೇಶಕ: ಶ್ರೀಲೇಶ್ ಎಸ್. ನಾಯರ್
ನಿರ್ಮಾಣ: ಉದಯ್‌ಶಂಕರ್‌, ಶ್ರೀರಾಮ್
ತಾರಾಗಣ: ವಿನಯ್‌ ರಾಜ್‌ಕುಮಾರ್‌, ಕಾಜಲ್‌ ಕುಂದರ್‌, ಮಯೂರ್‌ ಪಟೇಲ್‌, ಅರುಣ ಬಾಲರಾಜ್‌, ಬಲರಾಜವಾಡಿ, ಯಶ ಶೆಟ್ಟಿ ಇತರರು.

“ದ್ವೇಷ, ಅಸೂಯೆ, ಪ್ರೀತಿ ಮತ್ತು ಎಮೋಷನಲ್…‌ ಇದು ಪೆಪೆ ಸಿನಿಮಾದೊಳಗಿನ ಹೂರಣ. ಇದೊಂದು ಪಕ್ಕಾ ಮಾಸ್‌ ಫೀಲ್‌ ಇರುವ ಚಿತ್ರ. ಇಡೀ ಚಿತ್ರದಲ್ಲಿ ಮಚ್ಚು ಝಳಪಳಿಸಿದೆ. ರಕ್ತ ಚಿಮ್ಮಿದೆ. ಆಕ್ರೋಶ ಆಗಸದೆತ್ತರವಿದೆ. ಮೌನದ ಆಕ್ರಂದನವಿದೆ. ಇಲ್ಲಿ ನಾಲ್ಕು ಕುಟುಂಬದ ಮಧ್ಯೆ ನಡೆಯುವ ದ್ವೇಷ, ಅಸೂಯೆ ಒಳಗೊಂಡ ಕಥೆ ಹೈಲೆಟ್.‌ ಚಿತ್ರದಲ್ಲಿ ನೆನಪಲ್ಲುಳಿಯುವ ಕೆಲವು ದೃಶ್ಯಗಳನ್ನು ಹೊರತುಪಡಿಸಿದರೆ, ಕಾಡುವ ಕಥೆಯೇನೂ ಇಲ್ಲ. ದುರ್ಬಲ ಕಥೆಯೇ ಚಿತ್ರದ ಹಿನ್ನೆಡೆ. ಈ ಹಿಂದೆ ಹಲವು ಸಿನಿಮಾಗಳಲ್ಲಿ ಇಂತಹ ಕಥೆಯ ಎಳೆ ಬಂದಿದೆ. ಹಾಗಾಗಿ ಕಥೆಯಲ್ಲಿ ಗಟ್ಟಿತನವಿದೆ ಎಂದೆನಿಸೋದಿಲ್ಲ. ಆದರೆ, ಒಂದೊಳ್ಳೆಯ ನಿರೂಪಣೆಯ ಸಿನಿಮಾ ಆಗಿ ಹೊರಹೊಮ್ಮಿದೆ ಅನ್ನುವುದು ತಕ್ಕಮಟ್ಟಿಗಿನ ಸಮಾಧಾನ.

ಮೊದಲರ್ಧ ಸಿನಿಮಾ ನಿಧಾನಗತಿಯಲ್ಲಿ ಸಾಗುತ್ತದೆ ಎಂಬ ಭಾಸ. ಕಾರಣ, ನಿರ್ದೇಶಕರು ಕಥೆ ಹೇಳುವ ಮತ್ತು ತೋರಿಸುವ ವಿಧಾನ. ದ್ವಿತಿಯಾರ್ಧ ಕೂಡ ಇದಕ್ಕೆ ಹೊರತಲ್ಲ. ಕಥೆ ತುಂಬಾ ಸ್ಟ್ರಾಂಗ್‌ ಆಗಿದ್ದರೂ, ಅದನ್ನು ಬಿಗಿಹಿಡಿತದಲ್ಲಿ ಇಟ್ಟುಕೊಳ್ಳಲು ನಿರ್ದೇಶಕರು ಕೊಂಚ ಹಿಂದೆ ಉಳಿದಿದ್ದಾರೆ. ಆದರೆ, ಮೇಕಿಂಗ್‌ ವಿಷಯಕ್ಕೆ ಬಂದರೆ, ಆ ಬಗ್ಗೆ ಮಾತಾಡುವಂತಿಲ್ಲ. ಮೇಕಿಂಗ್‌ ಸಿನಿಮಾದ ಅಂದವನ್ನು ಹೆಚ್ಚಿಸಿದರೆ, ಚಿತ್ರದ ಸಂಕಲನ ಕೆಲಸ ವೇಗವನ್ನು ಹೆಚ್ಚಿಸಿದೆ. ಸಿನಿಮಾದ ಹೈಲೆಟ್‌ ಅಂದರೆ, ಕಟ್ಟಿಕೊಟ್ಟಿರುವ ಕಾಡಿನ ಪರಿಸರ ಹಾಗು ನೈಜತೆಗೆ ಹತ್ತಿರ ಎನಿಸುವ ದೃಶ್ಯಗಳು. ಉಳಿದಂತೆ, ತೆರೆಮೇಲೆ ಕಾಣುವ ಪಾತ್ರಗಳು. ಅಲ್ಲಿ ಸರಾಗವಾಗಿ ಆಡುವ ಸಂಭಾಷಣೆ ಮನಸ್ಸಿಗೆ ಹತ್ತಿರವೆನಿಸುತ್ತದೆ. ಎಲ್ಲೋ ಒಂದು ಕಡೆ ಕಥೆಯ ಆಶಯ ಮರೆತು ಮಚ್ಚಿಗೆ ಹೆಚ್ಚು ಜಾಗ ಕೊಟ್ಟುಬಿಟ್ಟರಾ ಅನ್ನೋ ಅಂಶ ಅತಿಯಾಗಿ ಕಾಡುತ್ತದೆ. ವ್ಯವಸ್ಥೆಗೆ ರಕ್ತಕ್ರಾಂತಿಯೊಂದೇ ಆಧಾರ ಅನ್ನುವಷ್ಟರ ಮಟ್ಟಿಗೆ ರಕ್ತದೋಕುಳಿ ಮೆರೆದಿದೆ.

ಕಥೆ ಇಷ್ಟು…

ಕಾಡಿನ ಪರಿಸರದೊಳಗಿರುವ ಬದನಾಳು ಎಂಬ ಕಾಲ್ಪನಿಕ ಕುಗ್ರಾಮ. ಅಲ್ಲಿ ನಾಲ್ಕು ಬೇರೆ, ಬೇರೆ ಜಾತಿ ಇರುವಂತಹ ಕುಟುಂಬಗಳ ವಾಸ. ಮೇಲ್ವರ್ಗ ಮತ್ತು ಕೆಳವರ್ಗ ಎಂಬ ಅಸೂಯೆ. ಆಚಾರ, ವಿಚಾರ ಪಾಲಿಸುವ ಸಂಪ್ರದಾಯಸ್ಥ ಕುಟುಂಬ ಒಂದು ಕಡೆಯಾದರೆ, ಕಟ್ಟ ಕಡೆಯ ಜನರಾಗಿ ಬದುಕುವ ಅಸಹಾಯಕ ಕುಟುಂಬ ಮತ್ತೊಂದು ಕಡೆ. ಅಲ್ಲಿ ನೀರಿನ ತೊರೆಗಾಗಿ ನಡೆಯುವ ಸಂಘರ್ಷವೇ ಚಿತ್ರದ ಆಕರ್ಷಣೆ. ಮೇಲ್ಜಾತಿ ಮತ್ತು ಕೆಳಜಾತಿಗಳ ಮಧ್ಯೆ ನಡೆಯುವ ಸಂಘರ್ಷ ಇಲ್ಲಿ ಸಿನಿಮಾದ ಕಥಾವಸ್ತು. ಮೇಲ್ವರ್ಗದ ಜನ ಒಂದು ವಿಷಯಕ್ಕೆ ಕೆಳವರ್ಗದವರನ್ನು ಅನಾದಿಕಾಲದಿಂದಲೂ ತುಳಿಯುತ್ತಲೇ ಬಂದಿರುತ್ತೆ. ಅಂತಹ ತುಳಿತಕ್ಕೊಳಗಾದ ಕುಟುಂಬದಲ್ಲಿ ಜನಿಸಿದ ಪ್ರದೀಪ್‌ ಅಲಿಯಾಸ್‌ ಪೆಪೆ ಆ ತಾರತಮ್ಯ ಮತ್ತು ಜಾತಿ ಸಂಘರ್ಷಕ್ಕೆ ಕಾರಣವಾದ ಕುಟುಂಬಗಳ ಮೇಲೆ ಹೇಗೆ ಎಗರಿ ಬೀಳುತ್ತಾನೆ ಅನ್ನೋದು ಕಥೆ. ಕೊನೆಗೆ ಆ ನೀರಿನ ತೊರೆ ಯಾರ ಪಾಲಾಗುತ್ತೆ ಅನ್ನೋದು ಚಿತ್ರದ ಕಥಾಹಂದರ. ಆ ಕುತೂಹಲವಿದ್ದರೆ ಒಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ.

ಇನ್ನು, ಕಥೆಯ ಒನ್‌ಲೈನ್‌ ಚೆನ್ನಾಗಿದೆ. ನಿರ್ದೇಶಕರ ಆಶಯವೂ ಕೂಡ ಸೊಗಸಾಗಿದೆ. ಇಲ್ಲಿ ಮೂಢನಂಬಿಕೆ ಇದೆ. ಪುರುಷನ ಪೌರುಷವಿದೆ. ಮಹಿಳೆ ಮೇಲೆ ನಡೆಯೋ ದೌರ್ಜನ್ಯವಿದೆ. ಈ ಎಲ್ಲವನ್ನೂ ಅಷ್ಟೇ ಅಂದವಾಗಿ ಅರ್ಥೈಸಲು ನಿರ್ದೇಶಕರು ಸವೆಸಿರುವ ಶ್ರಮ ಮೆಚ್ಚಬೇಕು. ಆದರೂ, ಕಥೆಗೆ ಇನ್ನಷ್ಟು ಬಲ ತುಂಬುವ ಕೆಲಸ ಮಾಡಬೇಕಿತ್ತು. ಕೆಲ ದೃಶ್ಯಗಳು ನೈಜತೆಗೆ ಹತ್ತಿರ ಎನಿಸಿದರೆ, ಕೆಲವು ದೃಶ್ಯಗಳು ಬೇಕಿತ್ತಾ ಎನಿಸುವುದುಂಟು. ಈ ಎಲ್ಲದರ ನಡುವೆ, ನಿರ್ದೇಶಕರು ಕೆಲ ದೃಶ್ಯಗಳ ಮೂಲಕ ಸಾಮಾಜಿಕ ವ್ಯವಸ್ಥೆಯೊಳಗಿನ ಕಲ್ಮಶವನ್ನು ಎತ್ತಿತೋರಿಸಿದ್ದಾರೆ. ಒಂದೊಂದು ಕಡೆ ಬರುವ ದೃಶ್ಯಗಳು ಮಲಯಾಳಂ ಸಿನಿಮಾಗಳನ್ನು ನೆನಪಿಸುತ್ತವೆ.

ಯಾರು ಹೇಗೆ?

ವಿನಯ್‌ ರಾಜಕುಮಾರ್‌ ಅವರಿಲ್ಲಿ ಪಕ್ಕಾ ಮಾಸ್‌ ಹೀರೋ ಆಗಿ ಹೊರಹೊಮ್ಮಿದ್ದಾರೆ. ಅವರ ಪಾತ್ರ ಸರಿಹೊಂದಿದೆ. ಇಡೀ ಸಿನಿಮಾದಲ್ಲಿ ಅವರು ಪಂಚೆ ಮತ್ತು ಶರ್ಟ್‌, ಕೈಯಲ್ಲೊಂದು ಸಿಗರೇಟ್‌ ಹಿಡಿದು ಓಡಾಡಿದ್ದಾರೆ. ಅವರು ಹಿಡಿದಿರುವ ಮಚ್ಚು, ಹೊಡೆದಾಡುವ ದೃಶ್ಯಗಳೆಲ್ಲವೂ ನೈಜವೆನಿಸುತ್ತದೆ. ಹೊರಬಂದರೂ ವಿನಯ್‌ ಅವರ ಪಾತ್ರ ಹಾಗೊಮ್ಮೆ ಕಾಡದೇ ಇರದು. ಇನ್ನು, ಕಾಜಲ್‌ ಕುಂದರ್‌ ಕೂಡ ಇಲ್ಲಿ ಸಾಮಾಜಿಕ ಪಿಡುಗು ಎನಿಸಿರುವ ಆಚಾರ-ವಿಚಾರವನ್ನು ಧಿಕ್ಕರಿಸುವ ಹೆಣ್ಣಾಗಿ ಗಮನಸೆಳೆದಿದ್ದಾರೆ. ಉಳಿದಂತೆ ಅರುಣ ಬಾಲರಾಜ್‌ ತಾಯಿಯಾಗಿ ಕಾಡುತ್ತಾರೆ. ಬಲರಾಜವಾಡಿ, ಕಿಟ್ಟಿ, ಯಶ್‌ ಶೆಟ್ಟಿ ಸೇರಿದಂತೆ ಬರುವ ಪ್ರತಿ ಪಾತ್ರಗಳೂ ಕೂಡ ನಿರ್ದೇಶಕರ ಅಣತಿಯಂತೆ ನಟಿಸಿವೆ.
ಇನ್ನು, ಇಲ್ಲಿ ಅಭಿಷೇಕ್‌ ಕಾಸರಗೋಡು ಅವರ ಛಾಯಾಗ್ರಹಣ ಇಷ್ಟವಾಗುತ್ತದೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತಕ್ಕಿನ್ನೂ ಧಮ್‌ ಬೇಕಿತ್ತು. ಬರುವ ಒಂದು ಹಾಡು ಗುನುಗುವಂತಿದೆ. ಸ್ಟಂಟ್‌ ಬಗ್ಗೆ ಹೇಳಲೇಬೇಕು. ಆಡಂಬರವಿಲ್ಲದ ನೈಜ ಹೊಡೆದಾಟಕ್ಕೆ ಸಾಕ್ಷಿಯಂಬಂತಿದೆ.

Related Posts

error: Content is protected !!