ಹಿರಣ್ಯನ ಕಾರುಣ್ಯ ಮನಸು!

ಚಿತ್ರ ವಿಮರ್ಶೆ

ರೇಟಿಂಗ್: 3/5

ವಿಜಯ್ ಭರಮಸಾಗರ

ಚಿತ್ರ : ಹಿರಣ್ಯ
ನಿರ್ದೇಶನ: ಪ್ರವೀಣ್ ಅವ್ಯುಕ್ತ
ನಿರ್ಮಾಣ: ವಿಘ್ನೇಶ್ವರ, ವಿಜಯ್‌ ಕುಮಾರ್‌
ತಾರಾಗಣ: ರಾಜವರ್ಧನ್, ದಿವ್ಯಾ,ಅರವಿಂದ್, ರಿಹಾನ, ದಿಲೀಪ್, ಹುಲಿ ಕಾರ್ತಿಕ್ ಇತರರು.

ಅವನೊಬ್ಬ ಅನಾಥ. ಡಾನ್ ಜೊತೆ ದುಷ್ಟ ಕೆಲಸ. ಸುಪಾರಿ ಕೊಟ್ಟರೆ ಏನ್ ಬೇಕಾದರೂ ಮಾಡೋ ಕ್ರಿಮಿನಲ್. ದಯೆ, ಕರುಣೆ, ಮಾನವೀಯತೆ ಇರದ ಕಲ್ಲು ಹೃದಯದವನು. ಅಂಥ ಕ್ರಿಮಿನಲ್ ಒಂದು ಡೀಲ್ ಒಪ್ಪುತ್ತಾನೆ. ಮಗುವೊಂದನ್ನು ಕಿಡ್ನಾಪ್ ಮಾಡಿ ಡಾನ್ ಕೈಗೆ ಕೊಡಬೇಕು. ಇದೇ ಸಿನಿಮಾದ ಟ್ವಿಸ್ಟು ಮತ್ತು ಟೆಸ್ಟು.

ರಾಜವರ್ಧನ್ ಮೊದಲ ಸಲ ಇಲ್ಲಿ ವಿಭಿನ್ನ ಪಾತ್ರದ ಮೂಲಕ ಎಂಟ್ರಿಯಾಗಿದ್ದಾರೆ. ಒಂದು ಸರಳ ಕಥೆಗೆ ನಿರೂಪಣೆ ಇನ್ನಷ್ಟು ಗಟ್ಟಿಯಾಗಿರಬೇಕಿತ್ತು. ಆರಂಭದಲ್ಲಿ ಅಷ್ಟೇನೂ ಕುತೂಹಲ ಎನಿಸಲ್ಲ.ಮಧ್ಯಂತರ ಬಳಿಕ ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ಇಡೀ ಸಿನಿಮಾ ಮಗು ಮತ್ತು ಹೀರೋ ಮೇಲೆ ಸಾಗುತ್ತೆ. ಮೊದಲರ್ಧ ಚಿತ್ರಕಥೆಯ ವೇಗ ಕೊಂಚ ಹೆಚ್ಚಬೇಕಿತ್ತು. ದ್ವಿತಿಯಾರ್ಧ ಸಿನಿಮಾ ಬೇರೇನೆ ಆಯಾಮ ಪಡೆದುಕೊಳ್ಳುತ್ತೆ. ಈ ರೀತಿಯ ಕಥೆ ಬಂದಿವೆಯಾದರೂ, ಇಲ್ಲಿ ಮಗು ಮತ್ತೊಂದು ಹೈಲೆಟ್. ಆ ಮಗು ಯಾರದ್ದು, ಯಾಕೆ ಅ ಮಗುನ ಕೊಲೆ ಮಾಡಲು ವಿಲನ್ ಸಂಚು ಹಾಕ್ತಾನೆ, ಆ ಮಗು ಹೀರೋ ಕೈಯಲ್ಲಿ ಸಿಕ್ಕ ಬಳಿಕ ಏನೆಲ್ಲಾ ಆಗುತ್ತೆ, ಅಷ್ಟಕ್ಕೂ ಕಲ್ಲು ಹೃದಯದ ಹೀರೋ ಮನಸ್ಸು ಕರಗುತ್ತಾ? ಇವಿಷ್ಟು ಪ್ರಶ್ನೆಯಲ್ಲೇ ಸಿನಿಮಾ ಅರ್ಧ ಮುಗಿದಿರುತ್ತೆ.

ಇಲ್ಲಿ ಕಥೆಯ ಎಳೆ ಚೆನ್ನಾಗಿದೆ. ಇನ್ನಷ್ಟು ಬಿಗಿ ಹಿಡಿತ ಬೇಕಿತ್ತು. ವೇಗ ಹೆಚ್ಚಿಸಬೇಕಿತ್ತು. ಮುಖ್ಯವಾಗಿ ಇಂತಹ ಸಿನಿಮಾಗಳಿಗೆ ಸಂಕಲನ ಮುಖ್ಯ. ಅದಿಲ್ಲಿ ಮತ್ತಷ್ಟು ಚುರುಕಾಗುವ ಅಗತ್ಯವಿತ್ತು. ಆದರೂ ಸಿನಿಮಾ ಥ್ರಿಲ್ ಕೊಡುವ ಅಂಶಗಳೊಂದಿಗೆ ಸಾಗುತ್ತೆ. ಎಲ್ಲೋ ಒಂದು ಕಡೆ ಟ್ರಾಕ್ ಬದಲಾಗ್ತ ಇದೆಯೇ ಎನ್ನುವಷ್ಟರಲ್ಲಿ ಹಾಡು ಬಂದು ಮತ್ತದೇ ಟ್ರಾಕ್ ಗೆ ಕರೆದೊಯ್ಯುತ್ತೆ. ಒಂದರ್ಥದಲ್ಲಿ ಮಗು ಕಿಡ್ನಾಪ್ ದೃಶ್ಯ ಮತ್ತು ಆ ಮಗುವನ್ನು ಕಾಪಾಡುವ ಸೀನ್ ಸಿನಿಮಾದ ಹೈಲೆಟ್. ಇಡೀ ಸಿನಿಮಾದ ಕೇಂದ್ರಬಿಂದು ಆ ಮಗು. ಆ ಬಗ್ಗೆ ಕುತೂಹಲ ಇದ್ದರೆ ಸಿನಿಮಾ ನೋಡಬಹುದು.

ಕಥೆ ಎಳೆ ಇದು..

ಅವನ ಹೆಸರು ರಾಣ. (ರಾಜವರ್ಧನ) ದುಡ್ಡು ಕೊಟ್ಟರೆ ಕೊಲೆ ಮಾಡೋಕೂ ಹಿಂದೆ ಮುಂದೆ ನೋಡಲ್ಲ. ಒಂದು ಸಮಯದಲ್ಲಿ ಮಗುವೊಂದರ ಕಿಡ್ನಾಪ್‌ಡೀಲ್ ಸಿಗುತ್ತೆ. ಆ ಮಗುವನ್ನು ಕಿಡ್ನಾಪ್‌ಮಾಡ್ತಾನೆ. ಇನ್ನೇನು ಆ ಡಾನ್ ಮಗುನ ಕೊಲೆ ಮಾಡಬೇಕು ಅನ್ನುವಷ್ಟರಲ್ಲಿ ಆ ರಾಣನಿಗೆ ಒಂದು ಘಟನೆ ನೆನಪಾಗುತ್ತೆ. ಆಮೇಲೆ ಏನಾಗುತ್ತೆ ಎಂಬುದು ಟ್ವಿಸ್ಟ್.

ಇಲ್ಲಿ ಮಗು ಕೊಲೆ ನಡೆಯುತ್ತಾ? ಅದರ ಸುತ್ತವೇ ಕಥೆ ಸಾಗುತ್ತೆ. ಬಹುಶಃ ಮಗುವೇ ಕಥೆಯ ಮೂಲ. ಇಲ್ಲಿ ಎರಡು ಟ್ವಿಸ್ಟ್ ಗಳಿವೆ. ಊಹೆ ಮಾಡದ ಕಥೆಯ ಎಳೆ ಅದು. ಅದನ್ನು ನೀವು ಸಿನಿಮಾದಲ್ಲೇ ನೋಡಬೇಕು.

ಯಾರು ಹೇಗೆ?

ರಾಜವರ್ಧನ್ ಇಲ್ಲಿ ಎಂದಿಗಿಂತ ಚೆನ್ನಾಗಿ, ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಬಾಡಿ ಲಾಂಗ್ವೇಜ್, ಡೈಲಾಗ್ ಡಿಲವರಿ ಜೊತೆಗೆ ಸ್ಟಂಟ್ ನಲ್ಲಿ ಚಪ್ಪಾಳೆ ಗಿಟ್ಟಿಸುತ್ತಾರೆ. ಆರಡಿ ಹೈಟಿಗೆ ಜಬರ್ದಸ್ತ್ ಫೈಟು ಹೈಲೆಟ್. ಮಾಸ್ ಹೀರೋ ಗೆ ಇರಬೇಕಾದ ಎಲ್ಲಾ ಲಕ್ಷಣ ಅವರಲ್ಲಿದೆ. ಕಥೆಗೆ ಪೂರಕವಾಗಿ ಅವರ ಹಾವಭಾವವೂ ಇದೆ. ಕೋಪಿಷ್ಟನಾಗಿ ಕಷ್ಟ ಎನಿಸಿದರೂ, ಮಗು ಕಾಪಾಡುವ ಕರುಣಾಮಯಿ ಆಗಿ ಇಷ್ಟವಾಗುತ್ತಾರೆ.

ದಿವ್ಯಾ ಅವರ ಪಾತ್ರ ಇಲ್ಲಿ ಸ್ಪೆಷಲ್ ಎನಿಸುತ್ತೆ. ಅವರಿಲ್ಲಿ ಸಖತ್ ಗ್ಲಾಮರ್ ಆಗಿದ್ದರೂ, ನಮ್ಮ ನಡುವೆ ಕಾಣುವ ಪಾತ್ರದ ಮೂಲಕ ಗಮನಸೆಳೆಯುತ್ತಾರೆ. ಹಾಡೊಂದರಲ್ಲಿ ಪಡ್ಡೆಗಳ ನಿದ್ದೆಗೆಡಿಸುವಂತಹ ಸ್ಟೆಪ್ ಹಾಕಿದ್ದಾರೆ.
ರಿಹಾನಾ ತಾಯಿಯಾಗಿ ಇಷ್ಟವಾಗುತ್ತಾರೆ. ಪೊಲೀಸ್ ಅಧಿಕಾರಿಯಾಗಿ ದಿಲೀಪ್ ಇಷ್ಟವಾಗುತ್ತಾರೆ. ತೆರೆ ಮೇಲೆ ಇರುವಷ್ಟು ಕಾಲ ಹುಲಿ ಕಾರ್ತಿಕ್ ಗಮನ ಸೆಳೆಯುತ್ತಾರೆ. ಅರವಿಂದ ಸಿಕ್ಕ ಪಾತ್ರ ಚೆನ್ನಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಬರುವ ಪಾತ್ರಗಳೂ ಸೈ ಎನಿಸಿಕೊಂಡಿವೆ.

ಇನ್ನು, ಜೂಡಾ ಸ್ಯಾಂಡಿ ಸಂಗೀತದ ಎರಡು ಹಾಡುಗಳು ಪರವಾಗಿಲ್ಲ. ಹಿನ್ನೆಲೆ ಸಂಗೀತಕ್ಕಿನ್ನು ಧಮ್ ಬೇಕಿತ್ತು. ಯೋಗೇಶ್ವರನ್‌ ಕ್ಯಾಮೆರಾ ಕೈ ಚಳಕ ಸೊಗಸಾಗಿದೆ. ಸ್ಟಂಟ್ಸ್ ಸಿನಿಮಾದ ಹೈಲೆಟ್, ಕಾರು ಚೇಸ್ ಇಲ್ಲಿನ ಆಕರ್ಷಣೆ. ಎನ್ನಬಹುದು.

Related Posts

error: Content is protected !!