ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ (51) ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಬನಶಂಕರಿಯಲ್ಲಿನ ಮನೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ.
ಅಪರ್ಣಾ ಅವರು 1984ರಲ್ಲಿ ತೆರೆಕಂಡ ‘ಮಸಣದ ಹೂವು’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದರು. ಕನ್ನಡದ ಹಲವು ಸಿನಿಮಾಗಳಲ್ಲೂ ನಟಿಸುವ ಮೂಲಕ ಜನಪ್ರಿಯಗೊಂಡಿದ್ದರು.
80-90 ರ ದಶಕದಲ್ಲಿ ಬೆಳ್ಳಿತೆರೆಯಲ್ಲಿ ಮಿಂಚಿದ್ದ ಅಪರ್ಣಾ ಅವರು, ನಿರೂಪಕಿಯಾಗಿಯೂ ಗಮನಸೆಳೆದಿದ್ದರು.
ಅಪರ್ಣಾ ಅವರು ಚಿಕ್ಕಮಂಗಳೂರಿನ ಪಂಚನಹಳ್ಳಿಯಲ್ಲಿ ಜನಿಸಿದ್ದರು. ಆರಂಭದಲ್ಲಿ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕನ್ನಡಿಗರ ಮನ ಗೆದ್ದಿದ್ದರು.
ನಂತರದ ದಿನಗಳಲ್ಲಿ ಅವರು ಕಿರುತೆರೆಯಲ್ಲೂ ಮಿಂಚಿದ್ದರು. ಅಪ್ಪಟ ಕನ್ನಡತಿಯಾಗಿ ಸ್ಪಷ್ಟ ಕನ್ನಡದಲ್ಲೇ ಮಾತಿಗಿಳಿದು, ಮನೆಮಾತಾಗಿದ್ದರು. ಮೂಡಲಮನೆ, ಮುಕ್ತ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು.
ತಮ್ಮ ಅಮೋಘ ಅಭಿನಯ ಮೂಲಕ ಎಲ್ಲರನ್ನೂ ರಂಜಿಸಿದ್ದರು.
ಆಕಾಶವಾಣಿಯಲ್ಲೂ ನಿರೂಪಕಿಯಾಗಿದ್ದರು. ಮಜಾ ಟಾಕೀಸ್ ರಿಯಾಲಿಟಿ ಶೋ ನಲ್ಲಿ ವರಲಕ್ಷ್ಮಿಯಾಗಿ ಜನಪ್ರಿಯಗೊಂಡಿದ್ದರು. 2013ರ ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಅಪರ್ಣಾ ಇನ್ನು ನೆನಪು ಮಾತ್ರ….