ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಚಿತ್ರಗಳು ಹೆಚ್ಚು ಬರುತ್ತಿದೆ. ಅಂತಹುದೇ ಉತ್ತಮ ಕಂಟೆಂಟ್ ಹೊಂದಿರುವ “ನಸಾಬ್” ಕನ್ನಡ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚಿಗೆ ಅದ್ದೂರಿಯಾಗಿ ನಡೆಯಿತು. ಟ್ರೇಲರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಂಜಾರ ಶಕ್ತಿಪೀಠದ ಶ್ರೀ ಕುಮಾರ ಮಹಾರಾಜರು, ಮಾಜಿ ಉಪ ಸಭಾಪತಿ ರುದ್ರಪ್ಪ ಎಂ ಲಮ್ಮಾಣಿ, ಐ ಎ ಎಸ್ ಅಧಿಕಾರಿ ಜಗದೀಶ್ ಜಿ, ಮಾಜಿ ಶಾಸಕ ಪಿ.ರಾಜೀವ್, ಶೋಭ ಜಿ , ಶೋಭಾ ಟಿ.ಆರ್ , ಹರೀಶ್ ಮುಂತಾದವರು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.
ಇದು ನನ್ನ ಜೀವನದ ಕಥೆ ಎಂದು ಮಾತಮಾಡಿದ ಕಿಶೋರ್ ಕುಮಾರ್ ನಾಯ್ಕ್, ನಮ್ಮ ತಂದೆ ತಾಯಿಗೆ ಹದಿನಾಲ್ಕು ಜನ ಮಕ್ಕಳು. ಬಡತನ ಬೇರೆ. ಅಂತಹ ಬಡ ಕುಟುಂಬದಲ್ಲಿ ಹುಟ್ಟಿದ ಬಂಜಾರ ಸಮುದಾಯದ ಹುಡುಗನೊಬ್ಬ ಚೆನ್ನಾಗಿ ಓದಿ ವಿದ್ಯಾವಂತನಾಗಿ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾನೆ. ಇದೇ ಚಿತ್ರದ ಕಥಾಹಂದರ. ನಾನು, ನನ್ನ ಜೀವನದ ಕಥೆಯನ್ನು “ನಸಾಬ್” ಎಂದು ಪುಸ್ತಕ ರೂಪದಲ್ಲಿ ಹೊರ ತಂದೆ. ಇದನ್ನು ಓದಿದ್ದ ಮಿತ್ರ ಹರೀಶ್, ಈ ಕೃತಿಯನ್ನು ಸಿನಿಮಾ ಮಾಡೋಣ ಎಂದರು. ಈ ಸಿನಿಮಾ ಆಗಲು ಹರೀಶ್ ಅವರೆ ಮುಖ್ಯ ಕಾರಣ. ನನ್ನ ಮಗ ಕೀರ್ತಿ ಕುಮಾರ್ ನಾಯ್ಕ್ ಈ ಚಿತ್ರವನ್ನು ನಿರ್ದೇಶಿಸುವುದರೊಂದಿಗೆ ನಾಯಕನಾಗೂ ಅಭಿನಯಿಸಿದ್ದಾರೆ. ಶೆಫಾಲಿ ಸಿಂಗ್ ಸೋನಿ ಈ ಚಿತ್ರದ ನಾಯಕಿ. ಬಿ.ಜಯಶ್ರೀ, ಪದ್ಮಾ ವಾಸಂತಿ, ವಿಜಯ ಕಾಶಿ, ತಬಲ ನಾಣಿ, ನಾಗೇಂದ್ರ ಅರಸ್, ಶೋಭ್ ರಾಜ್, ಪ್ರಕಾಶ್, ಹನುಮಂತೇ ಗೌಡ ಮುಂತಾದವರು ಚಿತ್ರದಲ್ಲಿದ್ದಾರೆ. “ನಸಾಬ್” ಎಂದರೆ ಲಮ್ಮಾಣಿ ಭಾಷೆಯಲ್ಲಿ ನ್ಯಾಯ ಎಂದು ಅರ್ಥ. ಇಂದು ಸಾಕಷ್ಟು ಗಣ್ಯರು ಹಾಗೂ ನಮ್ಮ ಊರಿನವರು ಆಗಮಿಸಿ ನಮ್ಮ ಚಿತ್ರಕ್ಕೆ ಶುಭ ಕೋರಿದ್ದೀರಿ. ನಿಮಗೆ ಅನಂತ ಧನ್ಯವಾದಗಳು. ಸದ್ಯದಲ್ಲೇ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದರು.
ನನ್ನ ಮೇಲೆ ನಂಬಿಕೆಯಿಟ್ಟು ಜವಾಬ್ದಾರಿ ನೀಡಿದ ನನ್ನ ತಂದೆ ಕಿಶೋರ್ ಕುಮಾರ್ ನಾಯ್ಕ್ ಅವರಿಗೆ ಹಾಗೂ ಸಮಾರಂಭಕ್ಕೆ ಆಗಮಿಸಿರುವ ಗಣ್ಯರಿಗೆ ಧನ್ಯವಾದ. ಇದು ನನ್ಮ ಮೊದಲ ಚಿತ್ರ. ನಟನೆಗೆ ಸಹಕಾರ ನೀಡಿದ ಹಿರಿಯ ಕಲಾವಿದರು ಹಾಗೂ ತಂತ್ರಜ್ಞರನ್ನು ಈ ಸಮಯದಲ್ಲಿ ನೆನೆಯುತ್ತೇನೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಹಾಗೂ ನಾಯಕ ಕೀರ್ತಿ ಕುಮಾರ್ ನಾಯ್ಕ್.
ನಾಯಕಿ ಶೆಫಾಲಿ ಸಿಂಗ್ ಸೋನಿ, ನಟರಾದ ವಿಜಯ ಕಾಶಿ, ತಬಲನಾಣಿ, ನಾಗೇಂದ್ರ ಅರಸ್, ಪ್ರಕಾಶ್ ಮುಂತಾದವರು “ನಸಾಬ್” ಚಿತ್ರದ ತಮ್ಮ ಪಾತ್ರಗಳ ಕುರಿತು ಮಾಹಿತಿ ನೀಡಿದರು. ಕೀರ್ತಿ ಕ್ರಿಯೇಷನ್ಸ್ ಲಾಂಛನದಲ್ಲಿ ಸುಜಾತ ಕಿಶೋರ್ ನಾಯ್ಕ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಗಂ ಸಂಗೀತ ಸಂಯೋಜಿಸಿದ್ದಾರೆ.